ಪುತ್ತೂರು: ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ 12ನೇ ವರ್ಷದ ಸ್ಥಾಪಕರ ದಿನಾಚರಣೆ : ಶೀಂಟೂರು ಸ್ಮೃತಿ-2023” ಆ.14 ಸೋಮವಾರ ಬೆಳಿಗ್ಗೆ 10 ಗಂಟೆಗೆ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ ಹೇಳಿದರು.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ವತಃ ಸೇನಾನಿ, ಶಿಕ್ಷಕರೂ ಆಗಿದ್ದ ದಿ.ಶೀಂಟೂರು ಆದರ್ಶ ಕೃಷಿಕರೂ ಆಗಿದ್ದರು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಅವರು ಕಂಡಿದ್ದ ಕನಸ್ಸಾಗಿತ್ತು.ಈ ನಿಟ್ಟಿನಲ್ಲಿ ಅವರ ಸ್ಮೃತಿಯನ್ನು ಪ್ರತೀ ವರ್ಷ ಹಮ್ಮಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದು, ಭಾರತೀಯ ನೌಕಾದಳದ ನಿವೃತ್ತ ಸೇನಾಧಿಕಾರಿ ವಿಕ್ರಂ ದತ್ತಾ ಅವರನ್ನು ಮುಂಬಯಿ ಹೇರಂಭ ಇಂಡಸ್ಟ್ರೀಸ್ ಅಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಸನ್ಮಾನಿಸುವರು. ಮಂಗಳೂರು ಕಾಲೇಜ್ ಆಫ್ ಫಿಷರೀಸ್ ನ ನಿವೃತ್ತ ಡೈರೆಕ್ಟರ್ ಆಫ್ ಇನ್ ಸ್ಟ್ರಕ್ಷನ್ ಪ್ರೊ.ಡಾ.ಡಿ.ಎಸ್.ಶೇಷಪ್ಪ ಶೀಂಟೂರು ಸ್ಮರಣೆ ಮಾಡುವರು. ಅತಿಥಿಗಳಾಗಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಗುಜರಾತ್ ಗ್ರೀನ್ ಹೀರೋ ಆಪ್ ಇಂಡಿಯಾದ ಸಹಸಂಸ್ಥಾಪಕ ಡಾ.ಆರ್.ಕೆ.ನಾಯರ್, ದುಬೈ ಉದ್ಯಮಿ ಅಶ್ರಫ್ ಶಾ ಮಾಂತೂರು ದುಬೈ ಪಾಲ್ಗೊಳ್ಳಲಿದ್ದಾರೆ. ಸವಣೂರು ಎಸ್ಎನ್ ಆರ್ ರೂರಲ್ ಎಜ್ಯುಕೇಶನ್ ಟ್ರಸ್ಟ್ ವಿಶ್ವಸ್ಥ ಎನ್.ಸುಂದರ ರೈ ಸವಣೂರು, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಗೌರವ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ಶೀಂಟೂರು ಸ್ಮೃತಿ ಕಾರ್ಯಕ್ರಮದ ಅಂಗವಾಗಿ ವಿದ್ಯಾರಶ್ಮಿ ವಿದ್ಯಾಲಯದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಪ್ರತಿಭಾನ್ವಿತ 10 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ. ಶೀಂಟೂರು ಶಿಷ್ಯ ವೇತನ ವಿತರಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಸವಣೂರು ಎಸ್ ಎನ್ ಆರ್ ರೂರಲ್ ಎಜ್ಯುಕೇಶನ್ ಟ್ರಸ್ಟ್ ಟ್ರಸ್ಟಿ ಎನ್.ಸುಂದರ ರೈ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ಸವಣೂರು ಪ್ರಥಮದರ್ಜೆ ಕಾಲೇಜು ಉಪಪ್ರಾಂಶುಪಾಲ ಎಂ.ಶೇಷಗಿರಿ ಉಪಸ್ಥಿತರಿದ್ದರು.