ಹಾಸನ ಮಿಕ್ಸಿ ಬ್ಲಾಸ್ಟ್‌ ಭಗ್ನಪ್ರೇಮಿಯ ಕೃತ್ಯ

ಪ್ರೀತಿ ನಿರಾಕರಿಸಿದ ಮಹಿಳೆಗೆ ಮಿಕ್ಸಿಯಲ್ಲಿ ಬಾಂಬಿಟ್ಟು ಕಳುಹಿಸಿದ್ದ ಯುವಕ

ಹಾಸನ: ಇಲ್ಲಿನ ಕೊರಿಯರ್ ಅಂಗಡಿಯಲ್ಲಿ ಸಂಭವಿಸಿದ ಮಿಕ್ಸಿ ಬ್ಲಾಸ್ಟ್ ಭಗ್ನ ಪ್ರೇಮಿಯೊಬ್ಬನ ಹುಚ್ಚಾಟ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ವಿಚ್ಛೇದಿತ ಮಹಿಳೆಯೊಬ್ಬಳ ಹಿಂದೆ ಬಿದ್ದಿದ್ದ ಯುವಕ ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಮಹಿಳೆಯನ್ನು ಮುಗಿಸಲು ಸ್ಕೆಚ್ ಹಾಕಿ ಮಿಕ್ಸಿ ಬಾಂಬ್ ಕಳುಹಿಸಿದ್ದ ಸಂಗತಿ ತನಿಖೆಯಿಂದ ಬಯಲಾಗಿದೆ.
ನಗರದ ಕೆ.ಆರ್. ಪುರಂ ಸಬ್ ರಿಜಿಸ್ಟ್ರಾರ್ ಕಚೇರಿ ರಸ್ತೆಯ ಅಂಗಡಿಯಲ್ಲಿ ಸೋಮವಾರ ಸಂಜೆ ಮಿಕ್ಸಿ ಸ್ಫೋಟಗೊಂಡು ಆತಂಕಕ್ಕೆ ಕಾರಣವಾಗಿತ್ತು. ಇದು ಉಗ್ರ ಕೃತ್ಯ ಎಂಬ ಶಂಕೆಯೂ ವ್ಯಕ್ತವಾಗಿತ್ತು. ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುದ್ದಿಗೋಷ್ಠಿ ನಡೆಸಿ ಉಗ್ರ ಕೃತ್ಯವಲ್ಲ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆಸಿರುವ ಸ್ಫೋಟ ಎಂಬ ಮಾಹಿತಿ ನೀಡಿದ್ದಾರೆ.ಸಂಪೂರ್ಣ ತನಿಖೆ ನಡೆಸಿರುವ ಪೊಲೀಸರು ಇದು ಪಾಗಲ್ ಪ್ರೇಮಿಯೊಬ್ಬನ ಕೃತ್ಯ ಎಂಬುದನ್ನು ಬಯಲಿಗೆಳೆದಿದ್ದಾರೆ.
ಬೆಂಗಳೂರಿನ ಯುವಕನೊಬ್ಬ ಹಾಸನದ ವಿಚ್ಛೇದಿತ ಮಹಿಳೆಯೊಬ್ಬಳ ಹಿಂದೆ ಬಿದ್ದಿದ್ದ. ಆದರೆ, ಆತನ ಪ್ರೀತಿಯನ್ನು ಆಕೆ ನಿರಾಕರಿಸಿದ್ದಳು. ಈ ಕುರಿತಾಗಿ ಇಬ್ಬರ ನಡುವೆ ಗಲಾಟೆಯೂ ಆಗಿತ್ತು. ಎರಡು ಬಾರಿ ತನ್ನ ವಿಳಾಸ ಬರೆಯದೆ ಆತ ಆ ಮಹಿಳೆಯ ವಿಳಾಸಕ್ಕೆ ಕೊರಿಯರ್ ಮೂಲಕ ಕೆಲವು ವಸ್ತುಗಳನ್ನು ಕಳುಹಿಸಿದ್ದ. ಆಕೆ ಅದನ್ನು ಕಸದ ಬುಟ್ಟಿಗೆ ಹಾಕಿದ್ದಳು. ಈ ಹಿನ್ನೆಲೆಯಲ್ಲಿ ವ್ಯಗ್ರನಾದ ಆತ ಉಗ್ರ ರೀತಿಯಲ್ಲಿ ಪ್ಲಾನ್‌ ಮಾಡಿ ಆಕೆಯನ್ನು ಕೊಂದು ಹಾಕಲು ಮಿಕ್ಸರ್‌ನಲ್ಲಿ ಸ್ಫೋಟಕವನ್ನು ಇಟ್ಟು ಕಳುಹಿಸಿದ್ದ. ಆದರೆ, ಈ ಬಾರಿ ಫ್ರಂ ಅಡ್ರೆಸ್ ಇಲ್ಲದೆ ಬಂದ ಕೊರಿಯರ್ ಅನ್ನು ಮಹಿಳೆ ಎಸೆಯದೆ ಪುನಃ ಕೊರಿಯರ್ ಶಾಪ್‌ಗೆ ತಂದುಕೊಟ್ಟು ಅದನ್ನು ವಾಪಸ್ ಮಾಡುವಂತೆ ಹೇಳಿದ್ದಳು. ಶಾಪ್ ಮಾಲೀಕ ಶಶಿ ವಾಪಸ್ ಕಳುಹಿಸಲು 350 ರೂಪಾಯಿ ಶುಲ್ಕ ಕೇಳಿದ್ದ. ಹಣ ಕೊಡಲು ನಿರಾಕರಿಸಿದ ಮಹಿಳೆ, ಇದು ನನಗೆ ಸಂಬಂಧಪಟ್ಟಿದ್ದಲ್ಲ, ನೀವು ಏನಾದರೂ ಮಾಡಿ ಎಂದು ಹೊರ ನಡೆದಿದ್ದಳು.
ಮಾಲೀಕ ಆ ಪಾರ್ಸೆಲ್ ಬಾಕ್ಸ್‌ನಲ್ಲಿ ಏನಿದೆ ಎಂದು ಕುತೂಹಲದಿಂದ ತೆರೆದು ನೋಡಿದಾಗ ಮಿಕ್ಸಿ ಇತ್ತು. ಅದನ್ನು ಪರಿಶೀಲನೆ ಮಾಡಲು ಸ್ವಿಚ್‌ ಹಾಕಿದಾಗ ಮಿಕ್ಸಿ ಬ್ಲಾಸ್ಟ್ ಆಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top