ಪುತ್ತೂರು: ಕಳೆದ 40 ವರ್ಷಗಳಿಂದ ಹಲವಾರು ಯೋಜನೆಗಳನ್ನು ರೂಪಿಸಿಕೊಂಡು ಜನರ ಬದುಕನ್ನು ಸಮೃದ್ಧಿಯ ಕಡೆಗೆ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ ಧರ್ಮಸ್ಥಳದ ಖಾವಂದರು. ಸರ್ಕಾರ ಮಾಡದ ಕೆಲಸವನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಯೋಜನೆಯ ಮೂಲಕ ಮಾಡಿ ತೋರಿಸಿದ್ದಾರೆ ಎಂದು ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ಮತ್ತು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಪುತ್ತೂರು ಇವುಗಳ ಸಹಯೋಗದಲ್ಲಿ ಶುಕ್ರವಾರ ಪುತ್ತೂರಿನ ಪುರಭವನದಲ್ಲಿ ನಡೆದ ನವಜೀವನ ಸದಸ್ಯರ ಸಮಾವೇಶ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಿಗೆ ಜವಾಬ್ದಾರಿ ಹಸ್ತಾಂತರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪಾರಂಪರಿಕ ಭಾರತ ಮತ್ತು ಆಧುನಿಕ ಭಾರತವನ್ನು ಯೋಜನೆಗಳ ಮೂಲಕ ಒಟ್ಟುಗೂಡಿಸಿದ ಖಾವಂದರು ನವಭಾರತ ನಿರ್ಮಾಣ ಮಾಡುವುದರ ಜತೆಗೆ ಮನುಷ್ಯ ಜೀವನವನ್ನು ಎತ್ತರಕ್ಕೇರಿಸಿದ್ದಾರೆ ಎಂದ ಅವರು, ಐಟಿ, ಬಿಟಿಗಳು ಜನರಿಗೆ ಬದುಕು ನೀಡಬಹುದು ಆದರೆ ಸಂಸ್ಕಾರ ನೀಡಲು ಸಾಧ್ಯವಿಲ್ಲ. ಇವೆರಡು ಒಟ್ಟಾದಾಗ ಭಾರತ ಜಗದ್ಗುರು ಆಗಲಿದೆ. ಜನರಿಗೆ ಉಚಿತ ಖಚಿತ ಯೋಜನೆಗಳನ್ನು ನೀಡಿ ಅವರನ್ನು ಸೋಮಾರಿಗಳನ್ನು ಮಾಡುವ ಬದಲು ದುಡಿದು ಸ್ವಾವಲಂಭಿ ಬದುಕು ಸ್ಥಾಪಿಸಲು ಯೋಜನೆ ರೂಪಿಸಬೇಕು ಎಂದು ಹೇಳಿದರು.
ಜನಜಾಗೃತಿ ವೇದಿಕೆ ಅಧ್ಯಕ್ಷ ಮಹಾಬಲ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ ನವಜೀವನ ಸದಸ್ಯರಿಗೆ ಅಭಿನಂದನೆ ಮತುತ ಗೌರವಾರ್ಪಣೆ ಮಾಡಿದರು. ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ ಪಾಯಸ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ಜನಜಾಗೃತಿ ವೇದಿಕೆಯ ನಿಯೋಜಿತ ಅಧ್ಯಕ್ಷ ಲೋಕೇಶ್ ಹೆಗ್ಡೆ ಉರ್ಲಾಂಡಿ, ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜನಜಾಗೃತಿ ವೇದಿಯ ಉಪಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಮಾಜಿ ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಶಶಿಕುಮಾರ್ ರೈ ಬಾಲ್ಯೊಟ್ಟು, ಪ್ರಗತಿ ಬಂಧು_ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್, ಸುಳ್ಯ ತಾಲೂಕು ಅಧ್ಯಕ್ಷ ಲೋಕನಾಥ ಅಮೆಚೂರ್, ಜನಜಾಗೃತಿ ವೇದಿಕೆಯ ಖಜಾಂಜಿ ಪ್ರವೀಣ್ ಚಂದ್ರ ಆಳ್ವ, ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಗಣೇಶ್, ವಿಪತ್ತು ನಿರ್ವಹಣೆಯ ಯೋಜನಾಧಿಕಾರಿ ಜಯವಂತ್ ಪಟೇಕರ್ ಜಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ ಸವಣೂರು, ವಿಪತ್ತು ನಿರ್ವಹಣೆಯ ನಾಯಕರಾದ ಮನೋಜ್ ಮತ್ತು ಸುರೇಶ್, ವಿವಿಧ ವಲಯಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಸ್ವಾಗತಿಸಿದರು. ತಾಲೂಕು ಯೋಜನಾಧಿಕಾರಿ ಶಶಿಧರ್ ವರದಿ ಮಂಡಿಸಿದರು. ಕೃಷಿ ಅಧಿಕಾರಿ ಉಮೇಶ್ ನಿರೂಪಿಸಿದರು.
























