ಸುಬ್ರಹ್ಮಣ್ಯ : ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀದೇವರ ಹೊರಾಂಗಣ ಉತ್ಸವಾದಿಗಳು ಶ್ರೀ ದೇವರ ಪತ್ತನಾಜೆ ಬಲಿ ಉತ್ಸವ ನಡೆದ ಬಳಿಕ ಒಳಾಂಗಣ ಪ್ರವೇಶಿಸುವುದರೊಂದಿಗೆ ಗುರುವಾರ ಸಂಪನ್ನಗೊಂಡಿತು.
ಶುದ್ಧ ಷಷ್ಠಿಯ ದಿನವಾದ ಗುರುವಾರ ಹೊರಾಂಗಣದಲ್ಲಿ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿದ ಬಳಿಕ ಶ್ರೀ ದೇವರು ಒಳಾಂಗಣ ಪ್ರವೇಶಿಸಿದರು. ಕುಕ್ಕೆಯಲ್ಲಿ ಮಾತ್ರ ದೀಪಾವಳಿ ಅಮವಾಸ್ಯೆಯಂದು ಉತ್ಸವ ಆರಂಭವಾಗಿ ಜೇಷ್ಠ ಶುದ್ಧಷಷ್ಠಿಯಂದು ಕೊನೆಯ ಉತ್ಸವವು ನಡೆಯುತ್ತದೆ.
ಈ ಬಾರಿ ಜೇಷ್ಠ ಶುದ್ಧಷಷ್ಠಿಯ ದಿನವಾದ ಗುರುವಾರ ರಾತ್ರಿ ಮಹಾಪೂಜೆಯ ಬಳಿಕ ಹೊರಾಂಗಣದಲ್ಲಿ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವಗಳು ನೆರವೇರಿತು. ಆನೆ, ಬಿರುದಾವಳಿ, ಬ್ಯಾಂಡ್, ನಾದಸ್ವರ, ಸ್ಯಾಕ್ಸೋಪೋನ್‌ಗಳನ್ನೊಳಗೊಂಡ ಹೊರಾಂಗಣ ಉತ್ಸವ ನೆರವೇರಿತು. ಈ ನಂತರ ದೇವಾಲಯನಗರದಲ್ಲಿ ದೇವರು ಗರ್ಭಗೃಹ ಪ್ರವೇಶಿಸುವುದರೊಂದಿಗೆ ನಿತ್ಯೋತ್ಸವವಕ್ಕೆ ತೆರೆಯಾಯಿತು.ಸಹಸ್ರಾರು ಊರ ಮತ್ತು ಪರವೂರ ಭಕ್ತಾಧಿಗಳು ಪಾಲ್ಗೊಂಡಿದ್ದರು.
ಮುಂದಿನ ದೀಪಾವಳಿ ಅಮವಾಸ್ಯೆಯಂದು ಮತ್ತೆ ಶ್ರೀ ದೇವರು ಹೊರಾಂಗಣ ಪ್ರವೇಶಿಸುವುದರ ಮೂಲಕ ಉತ್ಸವಾದಿಗಳು ಮತ್ತು ಹರಕೆ ಉತ್ಸವಗಳು ಆರಂಭವಾಗುತ್ತದೆ. ಆದರೆ ರಥಬೀದಿಯಲ್ಲಿ ರಥೋತ್ಸವವು ಜಾತ್ರಾ ಸಮಯದ ನಂತರ ಆರಂಭವಾಗಲಿದ್ದು, ಆ ಬಳಿಕ ಹರಕೆಯ ರಥೋತ್ಸವಗಳು ನೆರವೇರಲಿದೆ.
ಹರಕೆ ಉತ್ಸವಗಳು ಮಾತ್ರ ದೇವಳದಲ್ಲಿ ದೀಪಾವಳಿ ಅಮವಾಸ್ಯೆಯ ತನಕ ನಡೆಯುವುದಿಲ್ಲ ಆದರೆ ದಿನನಿತ್ಯ ನಡೆಯುವ ಹರಕೆ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ತುಲಾಭಾರ ಇತ್ಯಾದಿ ಸೇವೆಗಳು ಏಕಾದಶಿ ಮತ್ತಿತರ ಉಪವಾಸ ದಿನಗಳನ್ನು ಹೊರತು ಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಎಂದಿನಂತೆ ನಡೆಯುತ್ತದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.