7 ದಿನಗಳಲ್ಲಿ ಭೂ ಪರಿವರ್ತನೆ ಆಗದಿದ್ದರೆ ತನ್ನಿಂದ ತಾನೇ ಡೀಮ್ಡ್
ಬೆಳಗಾವಿ: ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿ ವಿಳಂಬ ತಪ್ಪಿಸುವ ಉದ್ದೇಶದ ಕರ್ನಾಟಕ ಭೂಕಂದಾಯ (2ನೇ ತಿದ್ದುಪಡಿ) ಮಸೂದೆ -2022ಕ್ಕೆ ವಿಧಾನಸಭೆಯಲ್ಲಿ ಗುರುವಾರ ಅಂಗೀಕಾರ ನೀಡಲಾಯಿತು.
ಕಂದಾಯ ಸಚಿವ ಆರ್.ಆಶೋಕ್ ಮಾತನಾಡಿ, ಕೃಷಿ ಭೂಮಿಯನ್ನು ಕೈಗಾರಿಕೆ, ವಾಣಿಜ್ಯ ಮತ್ತಿತರ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಕೋರಿ ಅರ್ಜಿ ಸಲ್ಲಿಸಿದ 7 ದಿನಗಳ ಒಳಗೆ ಅನುಮೋದನೆ ನೀಡುವುದನ್ನು ಮಸೂದೆಯಲ್ಲಿ ಕಡ್ಡಾಯ ಮಾಡಲಾಗಿದೆ ಎಂದು ಹೇಳಿದರು.
ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳಿಗೆ ಅರ್ಹ ದಾಖಲೆ ಸಮೇತ ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ಭೂ ಪರಿವರ್ತನಾ ಆದೇಶವಾಗದಿದ್ದರೆ ಅದು ತನ್ನಿಂದ ತಾನೇ (ಡೀಮ್ಡ್)ಭೂ ಪರಿವರ್ತನೆ ಆಗಿದೆ ಎಂದು ಭಾವಿಸಬೇಕಾಗುತ್ತದೆ ಅದಕ್ಕೆ ಈ ವಿಧೇಯಕ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಅಶೋಕ ವಿವರಿಸಿದರು.
ಇದು ಕೇವಲ ಯೋಜನಾ ಪ್ರಾಧಿಕಾರ ಹೊಂದಿರುವ ಪ್ರದೇಶಗಳಿಗೆ ಅನ್ವಯವಾಗಲಿದ್ದು, ಉಳಿದಂತೆ ಗ್ರಾಮೀಣ ಪ್ರದೇಶದಲ್ಲಿ ಒಂದು ತಿಂಗಳಿನ ಅವಧಿ ಮುಂದುವರೆಯಲಿದೆ ಎಂದು ಹೇಳಿದರು. ಭೂಪರಿವರ್ತನೆಗೆ ಯೋಜನಾ ಪ್ರದೇಶಗಳ ವ್ಯಾಪ್ತಿಯಲ್ಲಿ 7 ದಿನಗಳ ಕಾಲಾವಕಾಶ ಹಾಗೂ ಗ್ರಾಮೀಣ ಭಾಗದಲ್ಲಿ 30 ದಿನಗಳ ಕಾಲಾವಕಾಶ ನಿಗದಿ ಮಾಡಲಾಗಿದೆ. ಮಸೂದೆಯನ್ನು ಪಕ್ಷಭೇದವಿಲ್ಲದೆ ಸದಸ್ಯರು ಸ್ವಾಗತಿಸಿದರು. ಜತೆಗೆ ಕೆಲವು ಸಲಹೆಗಳನ್ನೂ ನೀಡಿದರು. ಕಾಯಿದೆಗೆ ನಿಯಮಾವಳಿಗಳ ರಚನೆ ಸಂದರ್ಭದಲ್ಲಿ ಈ ಸಲಹೆಗಳನ್ನು ಪರಿಗಣಿಸುವುದಾಗಿ ಸಚಿವರು ಭರವಸೆ ನೀಡಿದರು.