ಹೊಸದಿಲ್ಲಿ : ಈ ವರ್ಷ ಮುಂಗಾರು ವಿಳಂಬವಾಗುತ್ತದೆ ಎಂಬ ಮುನ್ಸೂಚನೆಯಿಂದ ಕಂಗಾಲಾಗಿದ್ದ ರೈತಾಪಿ ಜನರಿಗೆ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ.
ಈ ಸಾಲಿನಲ್ಲೂ ಮುಂಗಾರು ವಾಡಿಕೆಯಂತೆ ಜೂನ್ 1ರಂದಲೇ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಹೊಸ ಮಾಹಿತಿ ಬಿಡುಗಡೆಗೊಳಿಸಿದೆ. ಕೆಲ ದಿನಗಳ ಹಿಂದೆ ಮುಂಗಾರು ಕರ್ನಾಟಕ ಪ್ರವೇಶ ಸುಮಾರು ಒಂದು ವಾರದಷ್ಟು ವಿಳಂಬವಾಗಬಹುದು ಎಂಬ ಮುನ್ಸೂಚನೆ ನೀಡಿದಾಗ ಬಿರು ಬೇಸಿಗೆಯಿಂದಾಗಿ ಜಲಮೂಲಗಳೆಲ್ಲ ಬತ್ತಿ ನೀರಿಗೆ ಹಾಹಾಕಾರ ಮಾಡುತ್ತಿದ್ದ ಜನರಿಗೆ ಚಿಂತೆಯಾಗಿತ್ತು.
ಮುಂಗಾರು ಮಳೆಗೆ ಕಾರಣವಾಗುವ ನೈಋತ್ಯ ಮಾರುತಗಳು ಬಂಗಾಲ ಕೊಲ್ಲಿಯ ಆಗ್ನೇಯ ಭಾಗ, ದಕ್ಷಿಣ ಅಂಡಮಾನ್ ಸಮುದ್ರದ ಭಾಗದಲ್ಲಿ ಏಳಲು ಶುರುವಾಗಿವೆ. ಇದರಿಂದಾಗಿ ಜೂನ್ 1ರಿಂದಲೇ ಮಳೆಗಾಲ ಶುರುವಾಗುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಮುಂದಿನ ಐದು ದಿನಗಳಲ್ಲಿ ಕೇರಳದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಮೂರರಿಂದ ನಾಲ್ಕು ದಿನಗಳ ಒಳಗಾಗಿ ಉಂಟಾಗುವ ಮುಂಗಾರು ಮಳೆಯ ಸೂಚನೆಗಳು ಮತ್ತಷ್ಟು ಪ್ರಬಲವಾಗುವ ಸಾಧ್ಯತೆಗಳು ಇವೆ ಎಂದು ಐಎಂಡಿ ಹೇಳಿದೆ. ಕಳೆದ ವರ್ಷ ಮೇ 29ರಂದು ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿತ್ತು.
























