ಬೆಂಗಳೂರು: ಕ್ರಿಸ್‌ಮಸ್, ಹೊಸ ವರ್ಷ ಸೇರಿದಂತೆ ಹಬ್ಬದ ಸಾಲು ಸಾಲು ರಜೆಗಳಲ್ಲಿ ಪ್ರವಾಸಕ್ಕೆ ತೆರಳುವ ಯೋಚನೆಯಲ್ಲಿ ಇರುವವರಿಗೆ ಖಾಸಗಿ ಬಸ್ ಪ್ರಯಾಣ ದರ ಏರಿಕೆ ಬಿಸಿ ತಟ್ಟಿದೆ. ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಲಾಗಿದ್ದು, ವಿಮಾನ ಪ್ರಯಾಣದಷ್ಟೇ ದುಬಾರಿಯಾಗಿದೆ.
ಕ್ರಿಸ್‌ಮಸ್ ಪ್ರಯುಕ್ತ ಮುಂದಿನ ವಾರ ಬಹುತೇಕ ಖಾಸಗಿ ಶಾಲೆಗಳಿಗೆ ರಜೆ ಇದ್ದು, ಹೊರ ಊರುಗಳಿಗೆ ತೆರಳಲು ಖಾಸಗಿ ಬಸ್‌ಗಳನ್ನು ಹತ್ತಲು ಮುಂದಾದವರು ಪ್ರಯಾಣ ದರ ನೋಡಿ ಗಾಬರಿಗೊಳ್ಳುತ್ತಿದ್ದಾರೆ. ಹಬ್ಬ ಮತ್ತು ಸರ್ಕಾರಿ ರಜೆಗಳ ಸಂದರ್ಭದಲ್ಲಿ ಪ್ರಯಾಣ ದರ ಹೆಚ್ಚಳವಾಗದಂತೆ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದ್ದರು. ಈ ಸಂಬಂಧ ಬಸ್ ಮಾಲೀಕರ ಸಭೆಗಳನ್ನೂ ನಡೆಸಿ ಸಾರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಅದ್ಯಾವುದಕ್ಕೂ ಬೆಲೆ ನೀಡಿದಂತೆ ಕಾಣುತ್ತಿಲ್ಲ.
ಕ್ರಿಸ್‌ಮಸ್ ರಜೆಗೆ ಕೇರಳ, ಗೋವಾ, ಆಂಧ್ರಪ್ರದೇಶ ಸೇರಿ ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಿದೆ. ಇದನ್ನೇ ನೋಡಿಕೊಂಡು ಬೇಡಿಕೆ ಇರುವ ಮಾರ್ಗಗಳಲ್ಲೇ ಪ್ರಯಾಣ ದರ ಹೆಚ್ಚಿಸಲಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ರೂ. 3,500, ಮಡಿಕೇರಿಗೆ ರೂ. 1,600 ದರ ನಿಗದಿಯಾಗಿರುವುದು ವೆಬ್‌ಸೈಟ್‌ಗಳಲ್ಲಿ ಗೋಚರಿಸುತ್ತಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಾತ್ರ ಪ್ರಯಾಣ ದರ ಸಾಮಾನ್ಯ ದಿನಗಳಷ್ಟೇ ಇದೆ. ಹೊರ ರಾಜ್ಯಗಳಿಗೆ ವಿಶೇಷ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದು ಕೆಎಸ್‌ಆರ್‌ಟಿಸಿಗೆ ಕಷ್ಟದ ಕೆಲಸ. ಬೇಡಿಕೆ ಆಧರಿಸಿ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಿದರೆ ಅಂತರರಾಜ್ಯ ಒಪ್ಪಂದ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡುವುದು ಕಷ್ಟ. ಇದರ ನಡುವೆಯೂ ಕ್ರಿಸ್‌ಮಸ್ ರಜೆಯಲ್ಲಿ ಪ್ರಯಾಣಿಕರಿಗೆ ಅನುಕೂಲ ಮಾಡಲು ಹೆಚ್ಚುವರಿ 300 ವಿಶೇಷ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.