ಚೀನಾದಲ್ಲಿ ಕೊರೊನಾ ಉಲ್ಬಣ ಹಿನ್ನೆಲೆಯಲ್ಲಿ ಪತ್ರ
ಹೊಸದಿಲ್ಲಿ : ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಮತ್ತೆ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಜ್ಯಗಳಿಗೆ ಎಚ್ಚರಿಕೆಯಿಂದಿರಲು ಸೂಚಿಸಿದೆ. ಚೀನಾ, ಜಪಾನ್, ದಕ್ಷಿಣ ಕೊರಿಯಾ, ಬ್ರೆಜಿಲ್, ಅಮೆರಿಕ ಸಹಿತ ಕೆಲವು ದೇಶಗಳಲ್ಲಿ ಮತ್ತೆ ಕೋವಿಡ್-19 ಹಠಾತ್ ಉಲ್ಬಣಗೊಂಡಿದೆ. ಈ ಹಿನ್ನೆಲೆಯಲ್ಲಿ ಹೊಸ ರೂಪಾಂತರಗಳ ಬಗ್ಗೆ ನಿಗಾ ವಹಿಸಲು ಪಾಸಿಟಿವ್ ಮಾದರಿಗಳ ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್ಗೆ ಸಜ್ಜಾಗುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.
ದೇಶದಲ್ಲಿ ಪತ್ತೆಯಾಗುವ ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ನಿಯಂತ್ರಿಸಲು ಮತ್ತು ಅಗತ್ಯ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು ಸಜ್ಜಾಗಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರದಲ್ಲಿ ಹೇಳಿದ್ದಾರೆ.
ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಷನ್ ಮತ್ತು ಕೋವಿಡ್-ಸೂಕ್ತ ನಡವಳಿಕೆ ಕಾರ್ಯತಂತ್ರದ ಮೇಲೆ ಭಾರತ ತನ್ನ ಗಮನವನ್ನು ಕೇಂದ್ರೀಕರಿಸಿದ್ದು, ವೈರಸ್ ಹರಡುವುದನ್ನು ನಿರ್ಬಂಧಿಸಲು ಸಮರ್ಥವಾಗಿದೆ. ದೇಶದಲ್ಲಿ ಪ್ರಸ್ತುತ ಸರಾಸರಿ 1,200 ಪ್ರಕರಣಗಳು ವರದಿಯಾಗುತ್ತಿವೆ ಎಂದು ತಿಳಿಸಲಾಗಿದೆ.