ಹೊಸದಿಲ್ಲಿ: ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯೊಂದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅನುಷ್ಠಾನಕ್ಕೆ ತರಲು ಹೊರಟಿದೆ. ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ಮುಂಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಸರ್ಕಾರ ಮಂಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮಾರ್ಚ್ನಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಒಂದು ದೇಶ ಒಂದು ಚುನಾವಣೆ ಕಾರ್ಯಸಾಧ್ಯತೆ ಬಗ್ಗೆ ವರದಿ ನೀಡಿತ್ತು. ಯಾವಾಗಿಂದ ಆರಂಭಿಸಬೇಕು ಎಂದು ತಿಳಿಸದೆ ಇದನ್ನು ಹೇಗೆ ಅನುಷ್ಠಾನಕ್ಕೆ ತರಬಹುದು ಎಂದು ವರದಿಯಲ್ಲಿ ವಿವರಿಸಿತ್ತು. ಸದ್ಯ ವರದಿಯನ್ನು ಅಧ್ಯಯನ ಮಾಡಿರುವ ಸರ್ಕಾರ ಇದನ್ನು ಮಸೂದೆ ಮೂಲಕ ಸಂಸತ್ನಲ್ಲಿ ಮಂಡಿಸಲು ಸಿದ್ಧತೆ ಆರಂಭಿಸಿದೆ ಎಂದು ತಿಳಿದು ಬಂದಿದೆ.
ಕಳೆದ ಆಗಸ್ಟ್ 15ರಂದು ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಒಂದು ದೇಶ ಒಂದು ಚುನಾವಣೆಯ ಅಗತ್ಯವನ್ನು ಒತ್ತಿ ಹೇಳಿದ್ದರು. ಒಂದು ದೇಶ ಒಂದು ಚುನಾವಣೆಯ ಜೊತೆಗೆ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವ ಮಸೂದೆ ಕೂಡಾ ಮಂಡನೆಯಾಗಲಿದೆ ಎನ್ನಲಾಗಿದೆ.