ಸೆ.6ರಂದು ಎತ್ತಿನಹೊಳೆ ಯೋಜನೆ ಲೋಕಾರ್ಪಣೆ

ನೇತ್ರಾವತಿ ನದಿ ತಿರುಗಿಸುವ ಬೃಹತ್‌ ಯೋಜನೆಗೆ ಕರಾವಳಿಯಲ್ಲಿ ಈಗಲೂ ಇದೆ ವಿರೋಧ

ಬೆಂಗಳೂರು: ಏಳು ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳು ಕೊನೆಗೂ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರಿ ಹಬ್ಬದ ದಿನವಾದ ಸೆ.6ರಂದು ಏಳು ವಿಯರ್‌ಗಳ ಮೂಲಕ ನೀರು ಮೇಲೆತ್ತುವ ಯೋಜನೆಯ ಮೊದಲ ಹಂತವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಮೊದಲ ಹಂತವಾದ 8 ವಿಯರ್‌ಗಳ ಮೂಲಕ 28 ಟಿಎಂಸಿ ನೀರನ್ನು ಮೇಲೆತ್ತುವ ಲಿಫ್ಟ್‌ ಕಾಂಪೋನೆಂಟ್‌ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. 3ನೇ ಸಂಖ್ಯೆಯ ವಿಯರ್‌ ಹೊರತುಪಡಿಸಿ ಉಳಿದೆಲ್ಲವೂ ಸಿದ್ಧವಾಗಿದ್ದು, ಸೆ.6ರಂದು ಶುಕ್ರವಾರ 7 ವಿಯರ್‌ಗಳಿಂದ ನೀರು ಮೇಲೆತ್ತುವ ಮೂಲಕ ಎತ್ತಿನಹೊಳೆ ಮೊದಲ ಹಂತಕ್ಕೆ ಚಾಲನೆ ದೊರೆಯಲಿದೆ. ಶುಕ್ರವಾರ 3,000 ಕ್ಯೂಸೆಕ್‌ ಲಿಫ್ಟ್‌ ಸಾಮರ್ಥ್ಯದಲ್ಲಿ 1,500 ಕ್ಯೂಸೆಕ್‌ ನೀರನ್ನು ಲಿಫ್ಟ್‌ ಮಾಡಲಾಗುವುದು. ಬಳಿಕ 48 ಕಿ.ಮೀ. ತೆರೆದ ಕಾಲುವೆ ಮೂಲಕ ಸಾಗಿ ವೇದವ್ಯಾಲಿ ಮೂಲಕ ವಾಣಿವಿಲಾಸ ಅಣೆಕಟ್ಟಿಗೆ ನೀರು ಹರಿಸಲಾಗುವುದು.
ರಾಜ್ಯದ 7 ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳನ್ನು ಸೆ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಮೊನ್ನೆಯಷ್ಟೇ ಯೋಜನೆಯ ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಿದ್ದೆವು. ಈ ಯೋಜನೆಗಳ ವಿಚಾರವಾಗಿ ಅನೇಕ ಟೀಕೆಗಳು ಬರುತ್ತಿದ್ದವು. ಇದೀಗ ಯೋಜನೆಯಲ್ಲಿ ನೀರನ್ನು ಪಂಪ್ ಮಾಡುವ ಮೂಲಕ ಕಾಲುವೆಗಳಿಗೆ ಹರಿಸುತ್ತಿದ್ದೇವೆ. ಈ ಯೋಜನೆ ಮಾರ್ಗದ ಮಧ್ಯೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗಗಳಲ್ಲಿ ಸ್ವಲ್ಪ ಸಮಸ್ಯೆ ಇದ್ದು, ಅವುಗಳನ್ನು ಬಗೆಹರಿಸಿದ್ದೇವೆ. ಈಗ ತಾತ್ಕಾಲಿಕವಾಗಿ ವಾಣಿವಿಲಾಸ ಅಣೆಕಟ್ಟಿಗೆ ನೀರು ಹರಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ಬರಪೀಡಿತ ಜಿಲ್ಲೆಗಳಿಗೆ ನೀರು ತರುವ ಯೋಜನೆಯಿದು. ಮುಂಗಾರು ಅವಧಿಯಲ್ಲಿ (139 ದಿನಗಳು) 24.01 ಟಿಎಂಸಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿಗೆ ತರಲಾಗುತ್ತದೆ. ಇಲ್ಲಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ 14.05 ಟಿಎಂಸಿ ನೀರು ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ವ್ಯಾಪ್ತಿಯಲ್ಲಿ ಬರುವ 527 ಕೆರೆಗಳಿಗೆ 9.95 ಟಿಎಂಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ ಶೇ.50ರಷ್ಟು ತುಂಬಿಸಿ ಅಂತರ್ಜಲ ಮರುಪೂರಣ ಮಾಡಲು ಉದ್ದೇಶಿಸಲಾಗಿದೆ. 23,252 ಕೋಟಿ ರೂ. ಮೊತ್ತದ ಈ ಯೋಜನೆಗೆ ಆಗಸ್ಟ್‌ ವೇಳೆಗೆ 16,152 ಕೋಟಿ ರೂ. ವೆಚ್ಚವಾಗಿದೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು 2026-27ನೇ ಸಾಲಿನಲ್ಲಿ ಅಂದರೆ 2027ರ ಮಾ.31ಕ್ಕೆ ಪೂರ್ಣಗೊಳಿಸಲು ಸರ್ಕಾರ ಉದ್ದೇಶಿಸಿದೆ.

2014ರಲ್ಲಿ ಆರಂಭಗೊಂಡ ಈ ಯೋಜನೆಗೆ ಈಗಲೂ ಕರಾವಳಿ ಭಾಗದಲ್ಲಿ ತೀವ್ರ ವಿರೋಧವಿದೆ. ನೇತ್ರಾವತಿ ನದಿಯ ಒಡಲನ್ನು ಬರಿದುಗೊಳಿಸುವ ಈ ಯೋಜನೆಯಿಂದಾಗಿ ಮುಂದಿನ ದಿನಗಳಲ್ಲಿ ನೇತ್ರಾವತಿ ನದಿಯ ಪಾತ್ರದುದ್ದಕ್ಕೂ ಜಲಕ್ಷಾಮ ಉಂಟಾಗಬಹುದು ಎಂದು ಕರಾವಳಿ ಭಾಗದಲ್ಲಿ ಅನೇಕ ಹೋರಾಟಗಳು ನಡೆದಿದ್ದರೂ ಸರಕಾರ ಲೆಕ್ಕಿಸದೆ ಯೋಜನೆಯನ್ನು ಮುಂದುವರಿಸಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top