ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವ್ಯಾಕರಣಿ, ಮಹಾ ಮೇಧಾವಿ ಹನುಮಂತ
ಯತ್ರ ಯತ್ರ ರಘುನಾಥ ಕೀರ್ತನಂ
ತತ್ರ ತತ್ರ ಕೃತಮಸ್ತಕಾಂಜಲಿಮ್|
ಭಾಷ್ಪವಾರಿ ಪರಿಪೂರ್ಣ ಲೋಚನಂ
ಮಾರುತಿಂ ನಮತ ರಾಕ್ಷಸಾಂತಕಮ್||
ಹನುಮಂತ ಸಪ್ತ ಚಿರಂಜೀವಿಗಳಲ್ಲಿ ಒಬ್ಬ, ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವ್ಯಾಕರಣಿ, ಮಹಾ ಮೇಧಾವಿ, ಸಂಗೀತ ತಿಳಿದವ, ವಾಸ್ಕೋವಿದ, ಕುಶಲಮತಿ, ಕವಿಕುಲಯೋಗಿ, ನೀತಿಕೋವಿದ, ಇಚ್ಛಾರೂಪಿ. ಎಂಥ ಕೆಲಸವನ್ನೂ ಮಾಡಬಲ್ಲ ಪರಾಕ್ರಮಿ. ಇಂಥ ಸಾಮರ್ಥ್ಯಗಳೆಲ್ಲ ಇದ್ದುದರಿಂದಲೇ ರಾಮನ ಪರಮಭಕ್ತನಾದ. ಇಂದಿಗೂ ಚಿರಂಜೀವಿಯೆಂದೇ ಪ್ರಸಿದ್ಧನಾಗಿರುವ ಆಂಜನೇಯ, ಎಲ್ಲಿ ರಾಮಕಥೆ, ರಾಮಕೀರ್ತನ ಜರುಗುತ್ತಿದೆಯೋ ಅಲ್ಲಿ ಭಕ್ತಿಯಿಂದ ಕೈಮುಗಿದು ಸಹೃದಯನಾಗಿ ಕೇಳುತ್ತಾನೆಂದೇ ಜನರ ನಂಬಿಕೆ ಇದೆ. ಆದ್ದರಿಂದ ವೇದಿಕೆಯಲ್ಲಿ ಒಂದು ಮಣೆ ಹಾಕಿ ಅವನನ್ನು ಆಹ್ವಾನಿಸುತ್ತಾರೆ.
ಹನುಮಂತ ಪರಶಿವನ 11ನೇ ಅವತಾರ. ರಾಮನ ಅವತಾರದಲ್ಲಿದ್ದ ಶ್ರೀ ವಿಷ್ಣುವಿನ ಸೇವೆ ಮಾಡುವುದಕ್ಕಾಗಿ ಶಿವ ದೇವರು ಹನುಮಂತ ಅವತಾರವನ್ನು ತಾಳಿದರೆಂದು ಹೇಳುತ್ತಾರೆ.
ಏಕಾದಶ ರುದ್ರನ ವಿವಿಧ ರೂಪಗಳು…
ಪ್ರತಾಪ ಮಾರುತಿ : ಒಂದು ಕೈಯಲ್ಲಿ ದ್ರೋಣಗಿರಿ ಪರ್ವತ ಹಾಗೂ ಇನ್ನೊಂದು ಕೈಯಲ್ಲಿ ಗದೆಯನ್ನು ಹಿಡಿದಿರುವ ರೂಪವಿರುತ್ತದೆ. ಇದು ಆಂಜನೇಯನ ಶಕ್ತಿಯನ್ನು ದರ್ಶಿಸುತ್ತದೆ.
ದಾಸಮಾರುತಿ : ಶ್ರೀರಾಮನ ಎದುರು ಕೈಮುಗಿದು ನಿಂತಿರುವ, ತಲೆಬಾಗಿರುವ ಹಾಗೂ ನೆಲದ ಮೇಲೆ ಬಾಲವನ್ನು ಇಟ್ಟಿರುವ ರೂಪವಿರುತ್ತದೆ. ಇದರಿಂದ ಆಂಜನೇಯನಲ್ಲಿ ಎಷ್ಟು ವಿನಮ್ರತೆ ಇದೆ ಎಂಬುದನ್ನು ಕಲಿಯಬಹುದು.
ವೀರಮಾರುತಿ : ಯಾವಾಗಲೂ ಹೋರಾಡುವ ಸ್ಥಿತಿಯಲ್ಲಿ ನಿಂತಿರುತ್ತಾನೆ. ನಾವೂ ಇವನಂತೆ ಅನ್ಯಾಯದ ವಿರುದ್ಧ ಹೋರಾಡಬೇಕು. ನಾವು ಹನುಮಾನ ಜಯಂತಿಯ ಪ್ರಯುಕ್ತ ಆಂಜನೇಯನಂತೆ ಅನ್ಯಾಯದ ವಿರುದ್ಧ ಹೋರಾಡಲು ನಿಶ್ಚಯಿಸೋಣ.
ಪಂಚಮುಖಿ ಮಾರುತಿ : ನಾವು ಬಹಳಷ್ಟು ಕಡೆಗಳಲ್ಲಿ ಪಂಚಮುಖಿ ಮಾರುತಿಯನ್ನು ನೋಡುತ್ತೇವೆ. ಈ ಮೂರ್ತಿಯಲ್ಲಿ ಗರುಢ, ವರಾಹ, ಹಯಗ್ರೀವ, ಸಿಂಹ ಹಾಗೂ ಕಪಿಯ ಮುಖಗಳಿರುತ್ತದೆ. ಪಂಚಮುಖಿ ಎಂದರೆ ಐದು ದಿಕ್ಕುಗಳ ರಕ್ಷಕ. ಆಂಜನೇಯನು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಊರ್ಧ್ವ ಈ ಐದು ದಿಕ್ಕುಗಳನ್ನು ರಕ್ಷಿಸುತ್ತಾನೆ.
(ಸತ್ಸಂಗ ಸಂಗ್ರಹ)
ಹನುಮಾನ್ ಜಯಂತಿ ಪ್ರಯುಕ್ತ ಸಂಗ್ರಹಿಸಿದ ಕಥೆ
ಹನುಮಂತನ ಹಸಿವು
ಒಮ್ಮೆ ಸೀತೆ ವನವಾಸದ ಸಮಯದಲ್ಲಿ ಹನುಮಂತನು ವಾಲ್ಮೀಕಿಯ ಪುರೋಹಿತರ ಕುಟೀರಕ್ಕೆ ಅವಳನ್ನು ಭೇಟಿಯಾಗಲು ಹೋದನು.
ಸೀತೆ ಅವನನ್ನು ನೋಡಿ ಸಂತೋಷದಿಂದ ಅನೇಕ ಭಕ್ಷ್ಯಗಳ ಅಡುಗೆ ಮಾಡಿದಳು. ಊಟಕ್ಕೆ ಕುಳಿತು ಹನುಮಂತ ತಿನ್ನಲು ಪ್ರಾರಂಭಿಸಿದ, ಆದರೆ, ನಿಲ್ಲಿಸಲಿಲ್ಲ. ಸೀತೆ ಎಷ್ಟು ಅಡುಗೆ ತಂದರೂ ಕೂಡ ತಿನ್ನುತ್ತಲೇ ಇದ್ದ. ಇದರಿಂದ ದಿಕ್ಕು ಕಾಣದಾದ ಸೀತೆ ಕಡೆಗೆ ಇದಕ್ಕೆ ರಾಮನಲ್ಲಿ ಪರಿಹಾರ ಕೇಳುತ್ತಾಳೆ. ಆಗ ರಾಮ ತುಳಸಿ ಎಲೆಯನ್ನು ಹನುಮಂತನಿಗೆ ಬಡಿಸಲು ಸಲಹೆ ನೀಡುತ್ತಾನೆ. ಅದರಂತೆ ಸೀತೆ ಊಟದ ಎಲೆಗೆ ತುಳಸಿ ಎಲೆಯನ್ನು ಹಾಕುತ್ತಾಳೆ. ಆಗ ಆಂಜನೇಯನ ಹಸಿವು ನೀಗಿ, ಊಟದಿಂದ ಸಂತುಷ್ಟನಾಗುತ್ತಾನೆ.
ಇದೇ ಕಾರಣಕ್ಕೆ ಭಕ್ತರು ಹನುಮಂತನ ದೇಗುಲಕ್ಕೆ ತುಳಸಿ ಎಲೆಯನ್ನು ಅರ್ಪಿಸಿದರೆ ಆಂಜನೇಯ ಪ್ರಸನ್ನನಾಗುತ್ತಾನೆ. ಭಕ್ತರ ಇಷ್ಟಾರ್ಥ ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ.
ಹನುಮಂತನ ಚೇಷ್ಟೆಯೇ ಶಾಪಕ್ಕೆ ಗುರಿಯಾಯಿತು
ಹನುಮಂತ ಬಾಲ್ಯದಲ್ಲಿ ಚೇಷ್ಟೆ ಮಾಡುತ್ತಿದ್ದನಂತೆ. ಕೆಲವೊಮ್ಮೆ ಕಾಡಿನಲ್ಲಿ ಋಷಿಗಳು ಧ್ಯಾನ ಮಾಡುವಾಗಲೂ ಕೂಡ ಈತನ ಕೀಟಲೆ ಮುಂದುವರಿಯುತ್ತತ್ತು. ಆಂಜನೇಯನ ಈ ಕಪಿಚೇಷ್ಟೆಯಿಂದ ಕೆಲವು ಋಷಿಗಳು ಸಿಟ್ಟಾಗಿದ್ದರು. ಆದರೆ, ಹನುಮಂತ ಬಾಲಕನಾಗಿದ್ದ ಕಾರಣ ಅವರು ಆತನಿಗೆ ಸಣ್ಣ ಶಾಪವನ್ನು ನೀಡಿದರಂತೆ.
ಅಗಾಧ ಶಕ್ತಿ ಹೊಂದಿದ್ದ ಹನುಮಂತನಿಗೆ ಆತನ ಸಾಮರ್ಥ್ಯ ಬೇರೆಯವರು ನೆನಪಿಸದ ಹೊರತು ನೆನಪಿಗೆ ಬಾರದಿರಲಿ ಎಂಬುದು ಆ ಋಷಿಗಳ ಶಾಪವಾಗಿತ್ತಂತೆ.
ಇದೇ ಕಾರಣಕ್ಕೆ ಶಕ್ತಿಶಾಲಿಯಾಗಿದ್ದ ಆಂಜನೇಯನಿಗೆ ಆತನ ಶಕ್ತಿ, ಸಾಮರ್ಥ್ಯಗಳು ಪದೇ ಪದೆ ಯಾರಾದರೂ ನೆನಪಿಸಬೇಕಿತಂತೆ. ಈ ಬಗ್ಗೆ ಪುರಾಣದಲ್ಲೂ ಉಲ್ಲೇಖಿಸಲಾಗಿದೆ.
ಕಿಷ್ಕಿಂಧಾ ಕಾಂಡ ಮತ್ತು ಸುಂದರ ಕಾಂಡದಲ್ಲಿ ಜಾಂಬವಂತನು ಹನುಮಂತನಿಗೆ ಅವನ ಸಾಮರ್ಥ್ಯಗಳನ್ನು ನೆನಪಿಸಿದ್ದ. ಅಲ್ಲದೇ ಸೀತೆಯನ್ನು ಹುಡುಕಲು ಆತ ತಿಳಿಸಿದಾಗ ಮಾತ್ರ ಆತ ತನ್ನ ಪವನ ಶಕ್ತಿ ಅರಿತ ಎಂಬುದನ್ನು ಉಲ್ಲೇಖಿಸಲಾಗಿದೆ.
ಮಕರದ್ವಾಜನ ಜನನ
ಬ್ರಹ್ಮಚಾರಿಯಾದ ಹನುಮಂತನಿಗೆ ಮಕರದ್ವಾಜ ಎಂಬ ಮಗ ಇದ್ದಾನೆ ಎಂಬುದುನ್ನು ಹಿಂದೂ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಮಕರದ್ವಾಜನ ಹುಟ್ಟಿದ ಕಥೆ ತುಂಬ ಆಸಕ್ತಿದಾಯಕವಾಗಿದೆ. ಹನುಮಂತ, ಸೀತಾಮಾತೆಗೆ ರಾಮನ ಉಂಗುರ ಕೊಟ್ಟು ಲಂಕಾ ದಹನ ಮಾಡುತ್ತಾನೆ. ಇದಾದ ಬಳಿಕ ಮತ್ತೆ ರಾಮನ ಹತ್ತಿರ ಹಿಂದಿರುಗುತ್ತಾನೆ.
ಈ ವೇಳೆ ಲಂಕೆಯಿಂದ ಸಾಗರದ ಮೇಲೆ ಹಾರುತ್ತಾ ಹಿಂದಿರುಗುತ್ತಿರುತ್ತಾನೆ. ಈ ವೇಳೆ ಹನುಮಂತನ ತುಂಬ ಬೆವರುತ್ತಾನೆ. ಆತನ ಬೆವರಿನ ಒಂದು ಹನಿ ನೀರಿನಲ್ಲಿ ಬೀಳುತ್ತದೆ. ಹನುಮಂತನ ಬೆವರಿನ ಹನಿಯನ್ನು ಮೊಸಳೆಯೊಂದು ನುಂಗಿತಂತೆ. ಆ ಮೊಸಳೆಯಿಂದ ಹುಟ್ಟಿದವನೇ ಈ ಮಕರದ್ವಾಜ ಎಂಬ ಕಥೆ ಇದೆ.