ಕಟ್ಟಿ ನೇಮೊಡು ಜೀವ ಪೊ೦ಡ ಅರ್ದಲ ದೆಪ್ಪರೆ ಇಜ್ಜಿ | ಪರತಿ ಮಾಂಗಣೆ ಪಾಡ್ದನದಲ್ಲೂ ಉಲ್ಲೇಖ

ಪುತ್ತೂರು: ದೈವಾರಾಧನೆ ಕಲೆಯಲ್ಲ ಬದುಕು, ಆರಾಧನಾ ಪ್ರಾಕಾರ. ಇಲ್ಲಿನ ಪ್ರತಿಯೊಂದು ಆಚರಣೆಗೂ ಒಂದೊಂದು ಹಿನ್ನೆಲೆ ಇದೆ. ದೈವಾರಾಧನೆಯ ನಡೆಯಲ್ಲೇ ದೈವ ನರ್ತಕ ಮೃತಪಟ್ಟರೆ, ಅದಕ್ಕೂ ಒಂದು ಕ್ರಮವಿದೆ.

ದೈವಾರಾಧನೆ ನಡೆಯುತ್ತಿರುವಾಗಲೇ ದೈವ ನರ್ತಕ ಕುಸಿದು ಬಿದ್ದು ಮೃತಪಟ್ಟ ಘಟನೆ ಇತ್ತೀಚೆಗೆ ದೋಳ್ಪಾಡಿಯಲ್ಲಿ ನಡೆದಿತ್ತು. ಕೆಲ ವರ್ಷಗಳ ಹಿಂದೆ ಉಡುಪಿಯಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಅಲ್ಲಿ ಬೈದರ್ಕಳ ನೇಮೋತ್ಸವದಲ್ಲಿ ಕೋಟಿ ದೈವದ ನರ್ತಕ ಕುಸಿದು ಬಿದ್ದು ಮೃತಪಟ್ಟಿದ್ದರು. ಇಂತಹ ಘಟನೆ ನಡೆದಾಗ ಮುಖದ ಬಣ್ಣ ತೆಗೆಯದೇ ಅಂತ್ಯಕ್ರಿಯೆ ನಡೆಸಲಾಗುತ್ತದೆ. ದೋಳ್ಪಾಡಿಯಲ್ಲೂ ದೈವನರ್ತಕರ ಅಂತ್ಯಕ್ರಿಯೆಯನ್ನು ಬಣ್ಣದೊಂದಿಗೆ ನಡೆಸಿದ ನಿದರ್ಶನ ನಮ್ಮ ಕಣ್ಣ ಮುಂದಿದೆ. ಇದು ದೈವಾರಾಧನೆಯ ಪದ್ಧತಿ.

ಬಣ್ಣದೊಂದಿಗೆ ಬದುಕು ಮುಗಿಸುವ ದೈವನರ್ತಕರನ್ನು ಬಣ್ಣದೊಂದಿಗೆ ಕಳುಹಿಸಿಕೊಡುವ ಪದ್ಧತಿ ಪರಂಪರೆಯಿಂದಲೇ ಬಂದಿರುವಂತಹದು. ಬದುಕಿಗೆ ಬಣ್ಣವನ್ನೇ ಆಶ್ರಯಿಸಿ, ಅದೇ ಬಣ್ಣದೊಂದಿಗೆ ಬದುಕು ಮುಗಿಸುವುದನ್ನು ಕೆಲವರು ಸಾರ್ಥಕದ ಸಾವು ಎಂದು ಕರೆದರೆ, ಇನ್ನೂ ಕೆಲವರು ದೈವದೊಂದಿಗೇ ಲೀನವಾದರು ಎಂದು ಭಾವಿಸುತ್ತಾರೆ. ಅದು ಅವರವರ ಭಾವನೆಗೆ, ನಂಬಿಕೆಗೆ ಬಿಟ್ಟ ವಿಚಾರ. ಆದರೆ ಬದುಕಿಗೆ ಬಣ್ಣವನ್ನೇ ಅಧಾರವಾಗಿ ಜೀವನ ನಡೆಸಿ, ಅದೇ ಬಣ್ಣದೊಂದಿಗೆ ಈ ಲೋಕ ಬಿಟ್ಟು ತೆರಳುವುದು ವಿಸ್ಮಯವೇ ಸರಿ.



































 
 

ಪರತಿ ಮಾಂಗಣೆ ಎಂಬ ಪಾಡ್ದನದಲ್ಲೂ ಇಂತಹದ್ದೇ ಘಟನೆಯ ಉಲ್ಲೇಖವಿದೆ. ಅಲ್ಲಿ ದೈವ ನರ್ತಕ ಬಲ್ಲಾಳನಿಂದ ಕೊಲ್ಲಲ್ಪಡುತ್ತಾನೆ. ಈ ಸೇಡನ್ನು ತೀರಿಸಿಕೊಳ್ಳಲು ಆ ದೈವ ನರ್ತಕನ ಪತ್ನಿ ಪರತಿ ಇಡುವ ಬೇಡಿಕೆಗಳು ಪ್ರಾರಂಭವಾಗುವುದೇ – ಅತನನ್ನು ಬಣ್ಣದೊಂದಿಗೆ ಕಳುಹಿಸಿಕೊಡಬೇಕೆಂಬುದರಿಂದ. ಒಂದೊಂದೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು, ಕೊನೆಗೆ ಬಲ್ಲಾಳನ ಸರ್ವಸ್ವವನ್ನು ಚಿತೆಗೆ ಅರ್ಪಿಸುವಲ್ಲಿಯೂ ಆಕೆ ಯಶಸ್ವಿಯಾಗುತ್ತಾಳೆ. ತನ್ನ ಸೇಡನ್ನು ತೀರಿಸಿಕೊಂಡ ಬಳಿಕ ತಾನೂ ಆ ಚಿತೆಗೆ ಹಾರಿ ಪ್ರಾಣ ಬಿಡುತ್ತಾಳೆ.

ದೈವಾರಾಧನೆಯಲ್ಲಿ ಪರತಿ ಮಾಂಗಣೆ ಪಾಡ್ದನಕ್ಕೆ ಮಹತ್ವವಿದೆ. ಬೊಟ್ಟಿಂಬಾಡಿ ಎನ್ನುವ ಪ್ರದೇಶದಲ್ಲಿ ನಡೆದ ಘಟನೆ ಇದೆಂದು ಪಾಡ್ದನದಿಂದ ತಿಳಿದುಬರುತ್ತದೆ. ದೈವನರ್ತಕನನ್ನು ಬಣ್ಣದೊಂದಿಗೆ ಕಳುಹಿಸಿಕೊಡಬೇಕು ಎನ್ನುವುದು ಪರತಿಯ ಅಪೇಕ್ಷೆಯಾಗಿತ್ತೇ ಅಥವಾ ಅದಕ್ಕೂ ಮೊದಲು ಇದೇ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತೇ ಎನ್ನುವ ಮಾಹಿತಿ ಇಲ್ಲ. ಆದರೆ ಇಂತಹದೊಂದು ಪದ್ಧತಿಗೆ ಬಹಳ ಇತಿಹಾಸವಿದೆ ಎನ್ನುವುದು ಮಾತ್ರ ಸತ್ಯ.

  • ಗಣೇಶ್ ಎನ್. ಕಲ್ಲರ್ಪೆ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top