ಪುತ್ತೂರು: ಗ್ರಾಮೀಣ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೇಲ್ದರ್ಜೆಯ ಭಾಗ್ಯ ಒದಗಿ ಬಂದಿದೆ. ಇನ್ನು ಪಾಣಾಜೆ ಸಮುದಾಯ ಆರೋಗ್ಯ ಕೇಂದ್ರವಾಗಿ ಆಸ್ಪತ್ರೆಯ ಕೆಲಸವನ್ನು ನಿರ್ವಹಿಸಲಿದೆ.
ಪುತ್ತೂರು ತಾಲೂಕು ಸರಕಾರಿ ಆಸ್ಪತ್ರೆ 300 ಬೆಡ್‍ಗಳಿಗೆ ಏರಬೇಕು ಎನ್ನುವ ನಿಟ್ಟಿನಲ್ಲಿ ಶಾಸಕ ಸಂಜೀವ ಮಠಂದೂರು ಪ್ರಯತ್ನ ಮುಂದುವರಿಸುತ್ತಿದ್ದಾರೆ. ಇದರ ನಡುವೆ ಪಾಣಾಜೆಗೆ ಸಮುದಾಯ ಆರೋಗ್ಯ ಕೇಂದ್ರದ ಮಾನ್ಯತೆ ನೀಡುವಲ್ಲಿಯೂ ಯಶಸ್ವಿಯಾಗಿದ್ದಾರೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ ಇಲ್ಲ ಎನ್ನುವ ಕೊರಗನ್ನು ಸಮುದಾಯ ಆಸ್ಪತ್ರೆ ನೀಗಲಿದೆ.
ಸದ್ಯ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಓರ್ವ ವೈದ್ಯರಿದ್ದಾರೆ. ಸಣ್ಣ ಪುಟ್ಟ ರೋಗಗಳಿಗೆ ಅವರೇ ಚಿಕಿತ್ಸೆ ನೀಡುತ್ತಾರೆ. ಆದರೆ ಇಲ್ಲಿ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸುತ್ತಾರೆ. ಮುಂದೆ ಇಂತಹ ಸಮಸ್ಯೆ ಎದುರಾಗಲ್ಲ. ಪಾಣಾಜೆ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ ವೈದ್ಯಾಧಿಕಾರಿ, ಅರಿವಳಿಕೆ ತಜ್ಞರು, ಸ್ತ್ರೀರೋಗ ತಜ್ಞರು, ದಂತ ವೈದ್ಯರು, ಮಕ್ಕಳ ತಜ್ಞರು ಮೊದಲಾದ ವೈದ್ಯರು ಸೇವೆಗೆ ಲಭ್ಯವಾಗಲಿದ್ದಾರೆ.
ಪಾಣಾಜೆ, ನಿಡ್ಪಳ್ಳಿ, ಬೆಟ್ಟಂಪಾಡಿ, ಇರ್ದೆ, ಬಲ್ನಾಡು, ಸಾಜಾ, ಕೊಡಿಪ್ಪಾಡಿ, ಕಬಕ ಉಪಕೇಂದ್ರಗಳು ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ ವ್ಯಾಪ್ತಿಗೆ ಬರುತ್ತವೆ. ಒಟ್ಟು 28 ಸಾವಿರ ಜನಸಂಖ್ಯೆ ಇರುವ ಈ ಪ್ರದೇಶಕ್ಕೆ 30 ಬೆಡ್‍ಗಳ ಸಮುದಾಯ ಆರೋಗ್ಯ ಕೇಂದ್ರ ಮಂಜೂರಾಗಿದ್ದು, ಸದ್ಯದಲ್ಲೇ ಕಾಮಗಾರಿ ನಡೆಯುವ ಸೂಚನೆ ಇದೆ.
12.40 ಕೋಟಿ ರೂ. ಮಂಜೂರು:
ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇದೀಗ 5 ಎಕರೆಯಷ್ಟು ಜಾಗವಿದೆ. ಆದ್ದರಿಂದ ಈ ಜಾಗ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಕಾಗುವಷ್ಟು ಇದೆ. ಅಗತ್ಯ ಇರುವುದು ಅನುದಾನ. ಹಾಗಾಗಿ 12.40 ಕೋಟಿ ರೂ. ಅನುದಾನ ಮಂಜೂರಾಗಿದೆ. ಇದರಲ್ಲಿ ಹೊಸ ಕಟ್ಟಡ ನಿರ್ಮಿಸಿ, ಈಗ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಅದೇ ರೀತಿ ಉಳಿಸಿಕೊಳ್ಳಲಾಗುವುದು.
ನೆಲ ಅಂತಸ್ತು ಹಾಗೂ ಮೊದಲ ಅಂತಸ್ತಿನ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಇದರಲ್ಲಿ ಕೋಲ್ಡ್ ಸ್ಟೋರೇಜ್ ಮೋರ್ಚರಿ (ಶೀತಲೀಕರಣ ಶವಾಗಾರ), ಮೆಡಿಕಲ್ ಎಕ್ವಿಪ್‍ಮೆಂಟ್ಸ್ (ವೈದ್ಯಕೀಯ ಸಲಕರಣೆಗಳು), ಫರ್ನಿಚರ್ಸ್, ಮಾಡ್ಯೂಲರ್ ಓಟಿ (ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿ) ಮೊದಲಾದ ಆಧುನಿಕ ವ್ಯವಸ್ಥೆಗಳು ಇರಲಿವೆ. ಈ ಕಟ್ಟಡದ ಸುತ್ತ ರಸ್ತೆ, ಸಿಸಿ ಕ್ಯಾಮರಾ, ಫೈಯರ್ ಫೈಟಿಂಗ್ ವರ್ಕ್ಸ್, ಮೆಡಿಕಲ್ ಆಕ್ಸಿಜನ್ ಲೈನ್ ಮೊದಲಾದ ವ್ಯವಸ್ಥೆಗಳು ಇವೆ. ಪಾರ್ಕಿಂಗ್ ವ್ಯವಸ್ಥೆಯೂ ಇರಲಿದೆ.
ಮಾಡ್ಯೂಲರ್ ಓಟಿ:
ಸರಕಾರಿ ವ್ಯವಸ್ಥೆಯಲ್ಲಿ ಪುತ್ತೂರು ತಾಲೂಕಿಗೇ ಪ್ರಥಮ ಬಾರಿಗೆ ಮಾಡ್ಯೂಲರ್ ಓಟಿಯನ್ನು ಪರಿಚಯಿಸಲಾಗುತ್ತಿದೆ. ಆಪರೇಷನ್ ಥಿಯೇಟರ್ ಅನ್ನು ಆಧುನಿಕಗೊಳಿಸಿರುವುದೇ ಇದರ ವಿಶೇಷತೆ. ಮಾಡ್ಯೂಲರ್ ಓಟಿಯಲ್ಲಿ ಶಸ್ತ್ರಚಿಕಿತ್ಸೆಗೆ ಬಳಸಲಾಗುವ ಯಂತ್ರಗಳು ಆಧುನಿಕಗೊಂಡಿದ್ದು, ವೈದ್ಯರ ಕೆಲಸ ಸುಲಭವಾಗಲಿದೆ. ರೋಗಿಗಳಿಗೆ ಸುಲಭವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು.
ವೈದ್ಯರು, ಸಿಬ್ಬಂದಿಗಳು:
ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರನ್ನು ಹೊರತುಪಡಿಸಿ 25 ಹುದ್ದೆಗಳು ಸೃಷ್ಟಿಯಾಗಲಿದೆ. ಪ್ರಸೂತಿ, ಮಕ್ಕಳ ತಜ್ಞರು, ಅರಿವಳಿಕೆ, ಆಡಳಿತ ವೈದ್ಯಾಧಿಕಾರಿ, ದಂತ ವೈದ್ಯರು ಹಾಗೂ ಆಯುಷ್ ಅಧಿಕಾರಿ ಇರಲಿದ್ದಾರೆ. ಉಳಿದಂತೆ 12 ಡಿ ಗ್ರೂಪ್ ನೌಕರರು, ಲ್ಯಾಬ್ ಟೆಕ್ನಿಷಿಯನ್, 6 ಸ್ಟಾಫ್ ನರ್ಸ್, 2 ಔಷಧ ವಿತರಕರು ಇರಲಿದ್ದಾರೆ.
ಪ್ರಯೋಜನಗಳು:
- ಎಂಡೋ ಸಲ್ಫಾನ್ ಕೇಂದ್ರ ನಿರ್ಮಾಣಕ್ಕೂ ಯೋಜನೆ ಸಿದ್ಧವಾಗಿದ್ದು, ಫಿಸಿಯೋಥೆರಪಿಗೆ ಸಮುದಾಯ ಆರೋಗ್ಯ ಕೇಂದ್ರ ಪೂರಕವಾಗಿದೆ.
- ದಿನದ 24 ಗಂಟೆಯೂ ತೆರೆದಿರಲಿದೆ.
- ಆಯುಷ್ ಅಧಿಕಾರಿ ಸೇರಿದಂತೆ 5 ತಜ್ಞ ವೈದ್ಯರು ಲಭ್ಯ.
- 30 ಬೆಡ್‍ಗಳ ಆಸ್ಪತ್ರೆಯಾಗಿ ಜನರಿಗೆ ಸೇವೆ.
ದಿನದ 24 ಗಂಟೆ ಸೇವೆ:
ಗ್ರಾಮೀಣ ಭಾಗದ ಬೇಡಿಕೆಯನ್ನು ಮನಗಂಡು ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಪ್ರಯೋಜನವಾದರೆ, ವೈದ್ಯರಿಗೆ ಬೇಕಾದ ಅವಶ್ಯಕ ಉಪಕರಣಗಳು ಇಲ್ಲಿರಲಿದೆ. ವೈದ್ಯರ ಸಂಖ್ಯೆಯೂ ಜಾಸ್ತಿಯಾಗಲಿದ್ದು, ದಿನದ 24 ಗಂಟೆಯೂ ಜನರ ಸೇವೆಗೆ ಲಭ್ಯವಾಗಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಈಗಾಗಲೇ 12.4 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕೆ.ಎಚ್.ಎಸ್.ಆರ್.ಡಿ. ಅನುಷ್ಠಾನ ಮಾಡಲಿದೆ.
ಸಂಜೀವ ಮಠಂದೂರು, ಶಾಸಕರು, ಪುತ್ತೂರು
ಸಾಂಕ್ರಾಮಿಕ ರೋಗ ತಡೆಗೆ ಉಪಕಾರಿ:
ಕೇರಳ – ಕರ್ನಾಟಕದ ಗಡಿಭಾಗ ಪಾಣಾಜೆ. ನಿಫಾ, ಕೋವಿಡ್ ಮೊದಲಾದ ಸಾಂಕ್ರಾಮಿಕ ರೋಗಗಳು ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸಿದ್ದೇ ಇಲ್ಲಿಂದ. ಹಾಗಾಗಿ, ಪಾಣಾಜೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರವಾದರೆ, ಕೇರಳ ಭಾಗದ ಜನರಿಗೆ ಪಾಣಾಜೆಯಲ್ಲೇ ಚಿಕಿತ್ಸೆ ನೀಡಬಹುದು. ಅವರು ತಾಲೂಕಿನ ಒಳಭಾಗಗಳಿಗೆ ಬರುವುದನ್ನು ತಪ್ಪಿಸಲು ಸಾಧ್ಯ. ಅಲ್ಲದೇ, ಸಮುದಾಯ ಆರೋಗ್ಯ ಕೇಂದ್ರ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವುದರಿಂದ, ಜನರಿಗೆ ಯಾವುದೇ ಸಂದರ್ಭದಲ್ಲಾದರೂ ಚಿಕಿತ್ಸೆ ಪಡೆದುಕೊಳ್ಳಬಹುದು. ಬಹುಮುಖ್ಯವಾಗಿ, ಮಗು ಮರಣ ಹಾಗೂ ತಾಯಿ ಮರಣವನ್ನು ತಪ್ಪಿಸಲು ಸಾಧ್ಯ.
ಡಾ. ದೀಪಕ್ ರೈ, ತಾಲೂಕು ಆರೋಗ್ಯಾಧಿಕಾರಿ, ಪುತ್ತೂರು
ಗ್ರಾಮೀಣ ಜನರಿಗೆ ಪ್ರಯೋಜನ:
ಪುತ್ತೂರು ತಾಲೂಕಿನಲ್ಲಿ ಸದ್ಯ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ಇದೆ. ಇದಕ್ಕಿಂತಲೂ ಚೆನ್ನಾಗಿರುವ, ಆಧುನಿಕ ವ್ಯವಸ್ಥೆಗಳನ್ನು ಹೊಂದಿರುವ ಸಮುದಾಯ ಕೇಂದ್ರ ಪಾಣಾಜೆಗೆ ಮಂಜೂರಾಗಿದೆ. ಸಾಕಷ್ಟು ವ್ಯವಸ್ಥೆಗಳಿದ್ದು, ಹೊಸ ಕಟ್ಟಡ ನಿರ್ಮಾಣವಾಗಲಿದೆ. ವೈದ್ಯರ ಸಂಖ್ಯೆಯೂ ಹೆಚ್ಚಿರುವುದರಿಂದ, ಗ್ರಾಮೀಣ ಜನರಿಗೆ ಬಹುಪ್ರಯೋಜನವಾಗಲಿದೆ.
ರಾಜೇಶ್ ರೈ, ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಹೆಲ್ತ್ ಡಿಪಾರ್ಟ್ ಮೆಂಟ್, ಮಂಗಳೂರು