ಸಂಗೀತವೂ ಶ್ರೀಮಂತ, ವ್ಯಕ್ತಿತ್ವವೂ ಶ್ರೀಮಂತ

ಪಿ. ಬಿ. ಶ್ರೀನಿವಾಸ್ ಬದುಕಿದ್ದೇ ಹಾಗೆ!

ಪ್ರತಿವಾದಿ ಭಯಂಕರ ಶ್ರೀನಿವಾಸ್ ಎಂದರೆ ಯಾರಿಗಾದರೂ ಅವರ್ಯಾರು ಎಂದು ಗೊತ್ತಾಗದೆ ಹೋಗಬಹುದು. ಆದರೆ ಪಿ.ಬಿ. ಶ್ರೀನಿವಾಸ್ ಅಂದರೆ ಥಟ್ಟನೆ ಮಾಧುರ್ಯದ ಅಲೆಯೊಂದು ನಮ್ಮನ್ನು ಆವರಿಸಿಬಿಡುತ್ತದೆ. ಅವರು ಹಾಡಿದ ಹಾಡುಗಳು ಎಷ್ಟು ಶ್ರೀಮಂತವೋ ಅವರು ಬದುಕಿದ ರೀತಿಯು ಇನ್ನೂ ಹೆಚ್ಚು ಶ್ರೀಮಂತ ಆಗಿತ್ತು. ಇಂದವರ ಬದುಕಿನ ಕೆಲವು ನಿದರ್ಶನಗಳನ್ನು ತಮ್ಮ ಮುಂದೆ ಇಡಲು ಹೆಮ್ಮೆಪಡುತ್ತೇನೆ.

ಹುಟ್ಟಿದ್ದು ಆಂಧ್ರದಲ್ಲಿ, ಅಧಿಕ ಹಾಡು ಹಾಡಿದ್ದು ಕನ್ನಡದಲ್ಲಿ































 
 

ಪಿಬಿ ಹುಟ್ಟಿದ್ದು ಆಂಧ್ರದಲ್ಲಿ. ಮಾತೃಭಾಷೆ ತೆಲುಗು. ಆದರೆ ಕನ್ನಡ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಮೊದಲಾದ ಎಂಟು ಭಾಷೆಗಳನ್ನು ಸುಲಲಿತವಾಗಿ ಕಲಿತರು. ಅಷ್ಟೂ ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿದರು. ಅಷ್ಟೂ ಭಾಷೆಯಲ್ಲಿ ಹಾಡಿದರು. ಕನ್ನಡದಲ್ಲಿ ಇಪ್ಪತ್ತೇಳು ವರ್ಷಗಳ ಕಾಲ ಸಂಗೀತ ಸಾರ್ವಭೌಮನಾಗಿ ಮೆರೆದರು. ಅವರು ಎಂಟು ಭಾಷೆಗಳಲ್ಲಿ ಹಾಡಿದ ಮೂರೂವರೆ ಸಾವಿರ ಹಾಡುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹಾಡುಗಳು ಕನ್ನಡದ ಹಾಡುಗಳು ಎಂಬಲ್ಲಿಗೆ ಅವರು ಕನ್ನಡವನ್ನು, ಕರ್ನಾಟಕವನ್ನು, ಕನ್ನಡಿಗರನ್ನು ಪ್ರೀತಿಸಿದ್ದರು. ಅದರಲ್ಲಿ ಕೂಡ ಅವರು ಹಾಡಿದ ಹೆಚ್ಚು ಹಾಡುಗಳು ರಾಜಕುಮಾರ್ ಅವರಿಗೆ ಬಹು ದೊಡ್ಡ ಕೀರ್ತಿಯನ್ನು ತಂದವು. ಬಂಗಾರದ ಮನುಷ್ಯ, ಸೊಸೆ ತಂದ ಸೌಭಾಗ್ಯ, ಸಂತ ತುಕಾರಾಮ, ಗಂಧದ ಗುಡಿ, ಪ್ರೇಮದ ಕಾಣಿಕೆ, ಕಸ್ತೂರಿ ನಿವಾಸ ಮೊದಲಾದ ಸಿನೆಮಾಗಳ ಹಾಡುಗಳು ಈಗಲೂ ಸಾವೇ ಇಲ್ಲದ ಹಾಡುಗಳು. ಅವರ ಗಡಸು ಕಂಠವು ಹೊರಡಿಸುತ್ತಿದ್ದ ಮಾಧುರ್ಯದ ಅಲೆಗಳು ಕಿವಿಯಿಂದ ಹೊರಗೇ ಹೋಗುತ್ತಿರಲಿಲ್ಲ. ಅದು ಪಿಬಿ ಸರ್ ಅವರ ದೈವಿಕವಾದ ಧ್ವನಿಯ ತಾಕತ್ತು.

ಪಿಬಿ ಸರ್ ಅವರ ವ್ಯಕ್ತಿತ್ವವೂ ಶ್ರೀಮಂತ

ಅವರ ಸುಂದರ ವ್ಯಕ್ತಿತ್ವಕ್ಕೆ ಕೈಗನ್ನಡಿ ಹಿಡಿಯುವ ನೂರಾರು ಘಟನೆಗಳು ಅವರ ಆತ್ಮಚರಿತ್ರೆಯ ಪುಸ್ತಕವಾದ ‘ಮಾಧುರ್ಯ ಸಾಮ್ರಾಟ’ದಲ್ಲಿ ಇವೆ. ಅವುಗಳಲ್ಲಿ ಕೆಲವು ಘಟನೆಗಳು ಇಲ್ಲಿವೆ.

1) ಅವರು ತನ್ನ ಪ್ರತಿಭೆಯ ಶಿಖರದಲ್ಲಿ ಇರುವಾಗ ಒಂದು ರಸಮಂಜರಿಯ ಕಾರ್ಯಕ್ರಮಕ್ಕೆ ಬಂದಿದ್ದರು. ಅವರನ್ನು ದೊಡ್ಡದಾಗಿ ಪರಿಚಯ ಮಾಡುವ ಉತ್ಸಾಹದಲ್ಲಿ ಕಾರ್ಯಕ್ರಮ ನಿರೂಪಕರು ‘ಪಿಬಿಗಾರು ಹಾಡಲು ಶುರು ಮಾಡಿದ್ದೆ ಮಾಡಿದ್ದು ತಮಿಳು ಗಾಯಕ ಎ.ಆರ್. ರಾಜು ಅಡ್ರೆಸ್ ಇಲ್ಲದೆ ಮಾಯವಾದರು’ ಎಂದರು. ಆಗ ಸಿಡಿದ ಪಿಬಿಗಾರು ಎದ್ದು ನಿಂತು ‘ಹಾಗೆಲ್ಲ ಹೇಳಬಾರದು. ರಾಜು ನನ್ನ ಆತ್ಮೀಯ ಗೆಳೆಯ. ನನಗಿಂತ ಒಳ್ಳೆಯ ಗಾಯಕ. ಯಾರ ಕೀರ್ತಿಯನ್ನು ಯಾರೂ ಕಸಿದುಕೊಳ್ಳಲು ಆಗುವುದಿಲ್ಲ’ ಎಂದಿದ್ದರು.

2) ಪಿಬಿ ಸರ್ ಅವರಿಗೆ ಲತಾ ಮಂಗೇಷ್ಕರ್ ಅಂದರೆ ದೇವರು. ಅವರ ಜೊತೆ ಒಂದು ಹಾಡು ಹಾಡಬೇಕು ಎಂದು ಆಸೆ. ಅದಕ್ಕೆ ಪೂರಕವಾಗಿ ‘ಮೈ ಭೀ ಲಡಕಿ ಹೂಂ’ ಚಿತ್ರದಲ್ಲಿ ಒಂದು ಯುಗಳ ಗೀತೆಯನ್ನು ಲತಾ ಜೊತೆಗೆ ಹಾಡುವ ಅವಕಾಶ ದೊರೆಯಿತು. ಆ ಹಾಡನ್ನು ಹಾಡುವ ಮೊದಲು ಪಿಬಿ ಸರ್ ಅವರು ತನಗಿಂತ ಕಿರಿಯರಾದ ಲತಾ ಅವರ ಪಾದ ಮುಟ್ಟಿ ನಮಸ್ಕಾರ ಮಾಡಿದರು. ಲತಾ ಮುಜುಗರ ಪಟ್ಟುಕೊಂಡಾಗ “ನೀವು ಸಂಗೀತ ಸರಸ್ವತಿ ಲತಾಜೀ. ನೀವು ಸಂಗೀತದಲ್ಲಿ ನನಗಿಂತ ದೊಡ್ಡವರು” ಎಂದು ಸಮಜಾಯಿಷಿ ಕೊಟ್ಟರು. ಮುಂದೆ ಪಿಬಿ ಸರ್ ಅವರ ಧ್ವನಿಗೆ ಫಿದಾ ಆದ ಲತಾ ಅವರಿಗೆ ಹಿಂದಿಯಲ್ಲಿ ತುಂಬಾ ಅವಕಾಶಗಳನ್ನು ಮಾಡಿಕೊಟ್ಟರು.

3) ಮುಂದೆ 1977ರಲ್ಲಿ ಒಂದು ಸ್ಮರಣೀಯ ಘಟನೆ ನಡೆಯಿತು.’ಸೊಸೆ ತಂದ ಸೌಭಾಗ್ಯ’ ಕನ್ನಡದ ಸಿನೆಮಾಕ್ಕೆ ಜಿ.ಕೆ. ವೆಂಕಟೇಶ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದರು. ಅವರು ಮಹಾ ಶಿಸ್ತಿನ ಮನುಷ್ಯ. ‘ ರವಿವರ್ಮನ ಕುಂಚದ ಕಲೆಯೇ ಬಲೆ ‘ ಎಂಬ ಹಾಡನ್ನು ಉದಯಶಂಕರ್ ಬರೆದಾಗಿತ್ತು. ಸ್ಟುಡಿಯೋ ಬುಕ್ ಆಗಿ ಎಲ್ಲ ಸಂಗೀತ ವಾದ್ಯಗಳ ಕಲಾವಿದರು ಬಂದು ರಿಹರ್ಸಲ್ ಕೂಡ ಆಗಿತ್ತು. ಪಿಬಿ ಸರ್ ಬಂದು ಹಾಡುವುದು ಮಾತ್ರ ಬಾಕಿ. ಅದೇ ಹೊತ್ತಿಗೆ ಪಿಬಿ ಸರ್ ಅವರ ಪ್ರೀತಿಯ ತಾಯಿ ತೀರಿಹೋಗಿ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಆಗುತ್ತಿತ್ತು. ಆಗ ಮನೆಯ ಲ್ಯಾಂಡ್ ಫೋನ್‌ಗೆ ಜಿ.ಕೆ. ವೆಂಕಟೇಶ್ ಅವರ ಕಾಲ್ ಬಂತು. ‘ಎಲ್ಲಿದ್ದೀರಿ ಪಿಬಿಗಾರು? ಎಲ್ಲವೂ ರೆಡಿ ಇದೆ. ನಿಮ್ಮನ್ನೇ ಕಾಯುತ್ತಿದ್ದೇವೆ. ಬಂದು ಹಾಡಿ ಹೋಗಿ’ ಎಂದು ಫೋನ್ ಇಟ್ಟರು. ಪೀಬಿ ಸರ್ ಅವರಿಗೆ ಏನು ಹೇಳಬೇಕು ಅಂತ ಗೊತ್ತಾಗಲಿಲ್ಲ. ಒಂದೆಡೆ ಪ್ರೀತಿಯ ಅಮ್ಮನ ಅಂತಿಮ ಸಂಸ್ಕಾರದ ಹೊಣೆ. ಇನ್ನೊಂದೆಡೆ ತನ್ನಿಂದ ಕಲಾವಿದರಿಗೆ ತೊಂದರೆ ಆಗ್ತಾ ಇದೆ ಎಂಬ ಕಾಳಜಿ. ಕೊನೆಗೆ ಅವರು ಎರಡನೆಯದನ್ನು ಆರಿಸಿಕೊಂಡರು. ಸ್ಟುಡಿಯೋಕ್ಕೆ ಬಂದು ಒಮ್ಮೆ ರಿಹರ್ಸಲ್ ಮಾಡಿ ಭಾವಪೂರ್ಣವಾಗಿ ಹಾಡಿದರು.

ಅದು ರೋಮಾನ್ಸ್ ಇರುವ ಗೀತೆ. ಪಿಬಿ ಸರ್ ಆ ಹಾಡನ್ನು ತುಂಬಾ ಪ್ರೀತಿಯಿಂದ ಹಾಡಿದರು. ಅದರ ಕೊನೆಯ ಸಾಲು ‘ಚಿರಯೌವ್ವನ ನಿನ್ನದೇ’ ಹಾಡುವಾಗ ಅಮ್ಮ ಕಣ್ಣ ಮುಂದೆ ಬಂದರು. ಧ್ವನಿ ಭಾರ ಆಯಿತು. ಆದರೂ ತನ್ನನ್ನು ನಿಯಂತ್ರಣ ಮಾಡಿ ಆ ಹಾಡನ್ನು ಹಾಡಿ ಯಾರಿಗೂ ಏನೂ ಹೇಳದೆ ಮನೆಗೆ ಹೋಗಿ ತಾಯಿಯ ಅಂತಿಮ ಸಂಸ್ಕಾರ ಪೂರ್ತಿ ಮಾಡಿದರು. ಆ ಹಾಡು ಸೂಪರ್ ಹಿಟ್ ಆಯ್ತು. ಈಗಲೂ ಆ ಹಾಡಿನ ಕೊನೆಯ ಸಾಲು ಕೇಳುವಾಗ ಪಿಬಿ ಸರ್ ಅವರ ಧ್ವನಿ ಭಾರವಾದದ್ದು ನಿಮ್ಮ ಗಮನಕ್ಕೆ ಬರುತ್ತದೆ. ಅದು ಅವರ ಬದ್ಧತೆ.

4) ಡಾಕ್ಟರ್ ರಾಜಕುಮಾರ್ ‘ಸಂಪತ್ತಿಗೆ ಸವಾಲ್’ ಸಿನೆಮಾದಲ್ಲಿ ಹಾಡುವ ತನಕ ಅವರದೆಲ್ಲ ಹಾಡುಗಳನ್ನು ಹಾಡಿದವರು ಪಿಬಿ ಸರ್ ಅವರೇ. ಮುಂದೆ ರಾಜ್ ಹಾಡುತ್ತ ಜನಪ್ರಿಯ ಆದ ಹಾಗೆ ಕನ್ನಡದಲ್ಲಿ ಪಿಬಿ ಸರ್ ಅವರ ಅವಕಾಶ ಕಡಿಮೆ ಆಯಿತು. ಬಾಲು ಸರ್ ಬಂದ ನಂತರ ಪಿಬಿ ಸರ್ ಅವರಿಗೆ ಅವಕಾಶಗಳು ಪೂರ್ತಿ ಬತ್ತಿಹೋದವು. ಆದರೆ ಪಿಬಿ ಸರ್ ಅವರಿಬ್ಬರ ಬಗ್ಗೆ ಒಂದಿಷ್ಟು ಬೇಸರ ಮಾಡಿಕೊಳ್ಳಲಿಲ್ಲ. ಬಾಲು ಸರ್ ನನ್ನ ಮಗ ಎಂದೇ ಅವರು ಕರೆಯುತ್ತಿದ್ದರು. ರಾಜ್
ಕುಟುಂಬದ ಬಗ್ಗೆ ಕೂಡ ಅವರಿಗೆ ಕೊನೆಯವರೆಗೂ ಅತೀವ ಪ್ರೀತಿ ಹಾಗೇ ಉಳಿಯಿತು.
ರಾಜ್ ತೀರಿಹೋದಾಗ ಪಿಬಿ ಸರ್ ಅವರು ಮದ್ರಾಸಿನಲ್ಲಿ ಇದ್ದರು. ಸುದ್ದಿ ತಿಳಿದ ತಕ್ಷಣ ಬೆಂಗಳೂರಿಗೆ ವಿಮಾನ ಹತ್ತಿ ಓಡೋಡಿ ಬಂದರು. ಆಗ ಬೆಂಗಳೂರು ಪ್ರಕ್ಷುಬ್ಧ ಆಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಪಿಬಿ ಸರ್ ಅವರಿಗೆ ರಾಜ್ ಅಂತಿಮ ಸಂಸ್ಕಾರದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ಆಗಲೇ ಇಲ್ಲ. ಅವರು ಬಂದಾಗ ಎಲ್ಲವೂ ಮುಗಿದುಹೋಗಿತ್ತು.

“ನನಗೆ ಆ ಮಹಾಪುರುಷನ ಮುಖ ಕೊನೆಯ ಬಾರಿಗೆ ನೋಡಲು ಆಗಲೇ ಇಲ್ಲ. ಅದು ನನ್ನ ಜೀವಮಾನದ ಕೊರಗಾಗಿ ಉಳಿದು ಬಿಡುತ್ತದೆ” ಎನ್ನುವ ಪಿಬಿ ಸರ್ ಮಾತುಗಳು ಅವರ ವ್ಯಕ್ತಿತ್ವವನ್ನು ನಮಗೆ ಪರಿಚಯ ಮಾಡುತ್ತದೆ.
2013ರಲ್ಲಿ ಅವರು ನಿಧನರಾದಾಗ ಕನ್ನಡನಾಡು ಕಣ್ಣೀರು ಸುರಿಸಿದ್ದು ಸುಮ್ಮನೆ ಅಲ್ಲ!
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top