ಕಲಾವಿದರ ಹಠಾತ್‌ ಸಾವು ಎಚ್ಚರಿಕೆ ಕರೆಗಂಟೆ

ಯಕ್ಷಗಾನ ಸಮ್ಮೇಳನದಲ್ಲಿ ನಡೆಯಲಿ ಕಲಾವಿದರ ಅಕಾಲಿಕ ಸಾವಿನ ಬಗ್ಗೆ ಮಂಥನ

ಯಕ್ಷಗಾನ ಕಲಾವಿದರು ವೇದಿಕೆಯಲ್ಲೆ ಕುಸಿದು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ನಾವು ಹರಿಪಾದ ಸೇರಿದರು, ಸ್ವಾಯುಜ್ಯ ಹೊಂದಿದರು, ಯಕ್ಷ ಸರಸ್ವತಿಯ ಪಾದ ಸೇರಿದರು ಎಂದೆಲ್ಲ ಷರಾ ಬರೆದು ಈ ಪ್ರಕರಣಗಳನ್ನು ಮುಗಿಸುತ್ತಿದ್ದೇವೆ.
ಯಕ್ಷಗಾನ ಕಲಾವಿದರು ಇಂದು ಒತ್ತಡದಲ್ಲಿ ಇದ್ದಾರೆ ಅನ್ನುವುದು ಗೋಡೆ ಬರಹದಷ್ಟೆ ಸತ್ಯ. ರಾತ್ರಿ ದೇವೇಂದ್ರ, ಕುಬೇರ ಮೊದಲಾದ ಪಾತ್ರಗಳನ್ನು ಮಾಡುವ ಮಹಾನ್‌ ಕಲಾವಿದರು ಬೇರೆ ವೃತ್ತಿಗಳಿಗೆ ಮತ್ತು ಕಲಾವಿದರಿಗೆ ಹೋಲಿಕೆ ಮಾಡಿದರೆ ಇನ್ನೂ ಬಡತನದಲ್ಲಿ ಇದ್ದಾರೆ. ಯಕ್ಷಗಾನ ಕಲಾವಿದರಲ್ಲಿ ಪ್ರತಿಭೆ ಇದೆ, ಆದರೆ ವೃತ್ತಿಪರತೆ ಕಡಿಮೆ. ರಾತ್ರಿಯ ಹೊತ್ತು ಎರಡು ಮೂರು ತಾಸು ವೇದಿಕೆಯಲ್ಲಿ ಕುಣಿಯುವುದು ಮತ್ತು ಅದರ ಬೆನ್ನಿಗೆ ಒಂದೇ ಉಸಿರಲ್ಲಿ ಅರ್ಥ ಹೇಳುವುದು ಸುಲಭ ಅಲ್ಲ. ಎದುರು ಕೂತ ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆ ಪಡೆಯುವ ಉಮೇದು ಹೆಚ್ಚಿದೆ ಅಂದರೆ ಕಲಾವಿದರು ಇನ್ನಷ್ಟು ಹುರುಪು ಪಡೆಯುತ್ತಾರೆ. ಒಂದೇ ಪದ್ಯಕ್ಕೆ ಅರ್ಧರ್ಧ ಗಂಟೆ ಕುಣಿದು ಬೆವರು ಬಸಿಯುವ ಕಲಾವಿದರು ಇಂದು ಹೆಚ್ಚಾಗಿದ್ದಾರೆ. ಸ್ಟಾರ್ ಪಟ್ಟ ಬಂತು ಅಂತಾದರೆ ಅಭಿಮಾನಿಗಳನ್ನು ಖುಷಿಪಡಿಸುವ ದರ್ದು. ಯಜಮಾನರ ಒತ್ತಾಯಕ್ಕೆ ಒಂದೇ ರಾತ್ರಿ ಹಲವು ಪಾತ್ರ ಮಾಡುವ ಕಲಾವಿದರು ಇದ್ದಾರೆ! ಮೇಳದ ವ್ಯವಸ್ಥೆಯಲ್ಲಿ ಅದು ಅನಿವಾರ್ಯ.
ಅದರ ಜೊತೆಗೆ ಹಗಲು ಯಕ್ಷಗಾನ, ತಾಳಮದ್ದಳೆ, ಯಕ್ಷಗಾನ ನಾಟ್ಯ ವೈಭವ ಅಂತ ಓಡಾಡುವ ಮಂದಿ ಇದ್ದಾರೆ. ಅರ್ಧ ರಾತ್ರಿಯ
ಅರೆ ನಿದ್ದೆಯಲ್ಲಿ ಬೈಕ್ ಅಥವಾ ಕಾರ್ ಓಡಿಸಿಕೊಂಡು ಮನೆಗೆ ಧಾವಂತದಲ್ಲಿ ಓಡುವ ಕಲಾವಿದರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಅನೇಕ ಪ್ರಕರಣಗಳು ಆಗಿವೆ. ಈ ಅಪಘಾತಗಳು ಇಂದಿಗೂ ನಡೆಯುತ್ತಿವೆ.
ಇಂತಹ ಘಟನೆಗಳು ನಡೆದಾಗ ಒಂದಷ್ಟು ಸಂಸ್ಥೆಗಳು ನಿಧಿ ಸಂಗ್ರಹ ಮಾಡಿ ಕಲಾವಿದರ ಕುಟುಂಬಕ್ಕೆ ಸಮರ್ಪಣೆ ಮಾಡಿತು ಎಂಬಲ್ಲಿಗೆ ಇಂತಹ ಪ್ರಕರಣಗಳು ಮತ್ತೆ ನಡೆಯುತ್ತವೆ. ಹಲವು ಶ್ರೀಮಂತ ಮೇಳಗಳ ಯಜಮಾನರು ಕಲಾವಿದರ ಕಷ್ಟಕ್ಕೆ ಸ್ಪಂದಿಸುತ್ತಾರೆ. ಗ್ರಾಚ್ಯುಟಿ, ಪ್ರಾವಿಡೆಂಟ್ ಫಂಡ್, ಇನ್ಶೂರೆನ್ಸ್ ಮೇಳದ ಕಡೆಯಿಂದ ಮಾಡಿದ ಹೃದಯವಂತ ಧಣಿಗಳು ಇದ್ದಾರೆ. ಆದರೆ ಯಕ್ಷಗಾನ ಒಂದು ಉದ್ಯಮ ಎಂದು ಭಾವಿಸಿಕೊಂಡ ಉದ್ಯಮಿಗಳು ಯಾವಾಗ ಮೇಳ ನಡೆಸುವ ವ್ಯವಸ್ಥೆಗೆ ಬಂದರೋ ಅಲ್ಲಿಗೆ ಎಲ್ಲವೂ ಅಧ್ವಾನ ಆಯಿತು. ಯಕ್ಷಗಾನ ಉದ್ಯಮ ಆದದ್ದು ಅತಿ ದೊಡ್ಡ ದುರಂತ.
ಇಂದಿಗೂ ಯಕ್ಷಗಾನ ಮೇಳಗಳಲ್ಲಿ ಅರುವತ್ತು ವರ್ಷ ಮೀರಿದ ಕಲಾವಿದರು ಇದ್ದಾರೆ. ಅವರಿಗೆ ನಿವೃತ್ತಿ ಎಂಬುದೇ ಇಲ್ಲ. ನಿವೃತ್ತಿ ಪಡೆಯಲು ಅವರು ಮನಸು ಮಾಡಿದರೆ ಧಣಿಗಳು ಬಿಡುವುದಿಲ್ಲ. ಧಣಿಗಳು ಬಿಟ್ಟರೂ ಅಭಿಮಾನಿಗಳು ಬಿಡುವುದಿಲ್ಲ! ಕಾಲಕಾಲಕ್ಕೆ ಅವರ ಹೆಲ್ತ್ ಪರೀಕ್ಷೆ ಮಾಡುವ ವ್ಯವಸ್ಥೆ ಇಲ್ಲ. ನಿವೃತ್ತಿ ಆದರೂ ಅವರಿಗೆ ನಿವೃತ್ತಿ ವೇತನ ಇಲ್ಲ. ಅಂದರೆ ಅವರು ದುಡಿಯುತ್ತ ಇರಬೇಕು ಅನುತ್ತದೆ ಯಕ್ಷಗಾನ ಉದ್ಯಮ!
ಹಿರಿಯ ಕಲಾವಿದರಿಗೆ ಪೀಠಿಕೆಯ ಪಾತ್ರಗಳನ್ನು ಕೊಟ್ಟು ಹೆಚ್ಚು ಕುಣಿತ ಇಲ್ಲದ ಪಾತ್ರಗಳನ್ನು ಕೊಡಬೇಕು ಅನ್ನುವುದು ಎಲ್ಲರ ಅಭಿಪ್ರಾಯ. ಪರಂಪರೆಯಲ್ಲಿ ಅದೇ ಚಂಡ, ಅದೇ ಮುಂಡ, ಅದೇ ಮಹಿಷಾಸುರ ಮಾಡುವ ಕಲಾವಿದರಿಗೆ ತಮ್ಮ ದೇಹವನ್ನು ಮತ್ತು ಕಂಠವನ್ನು ದಣಿಸದಿದ್ದರೆ ತುತ್ತಿನ ಚೀಲ ತುಂಬುವುದಿಲ್ಲ. ಅಂತವರಿಗೆ ಬೇರೆ ಪಾತ್ರ ಮಾಡಿ ಗೊತ್ತಿಲ್ಲ. ಅವರು ತಮ್ಮ ಸ್ಟಾರ್ ಗಿರಿಯನ್ನು ಬಿಟ್ಟುಕೊಡಲು ರೆಡಿ ಇಲ್ಲ. ಬಹುತೇಕ ಕಲಾವಿದರೇ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಒಂದೇ ದಿನ ಮೂರು ಮೂರು ಕಡೆ ಪಾತ್ರ ಮಾಡುವ ಕಲಾವಿದರು ದಣಿವನ್ನೂ ಲೆಕ್ಕಿಸುವುದಿಲ್ಲ. ಸನ್ಮಾನ, ಹಾರ ತುರಾಯಿಯ ಆಮಿಷಕ್ಕೆ ಕಲಾವಿದರನ್ನು ಕೆಡವಿಕೊಂಡು ದುಡಿಸುವವರಿದ್ದಾರೆ. ಹಾಗೆಂದು ಎಲ್ಲ ಮೇಳಗಳ ಅಥವಾ ಕಲಾವಿದರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದ ಸರಿಯಾಗುವುದಿಲ್ಲ. ಟೆಂಟ್‌ ಮೇಳಗಳು ಮತ್ತು ಹರಕೆ ಆಟ ಆಡುವ ಮೇಳಗಳ ಕಲಾವಿದರ ಸಮಸ್ಯೆಗಳು ಭಿನ್ನವಾಗಿವೆ. ಆದರೆ ಈಗ ಸಿಗುತ್ತಿರುವ ವಿಪರೀತ ಪ್ರಚಾರ, ಪಾಳಿಗಳಲ್ಲಿ ದುಡಿಯುವ ಚಾಳಿ, ನಿರಂತರ ಓಡಾಟ ಈ ಮುಂತಾದ ಕಾರಣಗಳಿಂದ ಯಕ್ಷಗಾನಕ್ಕೆ ತೊಂದರೆಯಾಗುತ್ತಿದೆ ಎನ್ನುವುದು ನಿಜ.
ಈ ಬಾರಿ ಉಡುಪಿಯಲ್ಲಿ ರಾಜ್ಯಮಟ್ಟದ ಯಕ್ಷಗಾನದ ಸಮ್ಮೇಳನ ಮಾಡುವ ಒಳ್ಳೆಯ ನಿರ್ಧಾರವನ್ನು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು ತೆಗೆದುಕೊಂಡಿದ್ದಾರೆ. ಇದರ ಬಗ್ಗೆ ಖಂಡಿತ ಚರ್ಚೆ ಆಗಬೇಕು. ಪ್ರತಿಯೊಬ್ಬ ಕಲಾವಿದನ ಆರೋಗ್ಯ ಮತ್ತು ಜೀವ ತುಂಬಾ ಅಮೂಲ್ಯವಾದದ್ದು. ಅವರನ್ನು ನಂಬಿಕೊಂಡು ಒಂದು ಕುಟುಂಬ ಕೂಡ ಇದೆ ಎಂದು ನಾವು ಅರ್ಥ ಮಾಡಿಕೊಂಡಾಗ ಈ ಸಮಸ್ಯೆಗಳ ಬಗ್ಗೆ ನಾವೆಲ್ಲರೂ ಕೂತು ಪರಿಹಾರ ಕಂಡುಕೊಳ್ಳಬೇಕು. ಇನ್ನಷ್ಟು ಕಲಾವಿದರು ಬಲಿಯಾಗುವ ಮೊದಲು ನಾವು ಎಚ್ಚರ ಆಗಬೇಕು.
ರಾಜೇಂದ್ರ ಭಟ್‌ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top