ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದಿಂದ ಪ್ರಶಸ್ತಿ ಪ್ರದಾನ ಸಮಾರಂಭ | ಕವಿ ಸುಬ್ರಾಯ ಚೊಕ್ಕಾಡಿಯವರಿಗೆ “ಸ್ವರ್ಣ ಸಾಧನಾ ಪ್ರಶಸ್ತಿ” ಪ್ರದಾನ, ಸಾಧಕರಾದ ಎಸ್‍ ಆರ್ ಕೆ ಲ್ಯಾಡರ್ಸ್ ನ ಕೇಶವ ಅಮೈ, ವಿದ್ಯಾರ್ಥಿನಿಯರಾದ ತೇಜಸ್ವಿನಿ ವಿ. ಶೆಟ್ಟಿ, ಸ್ವಾತಿ ಎನ್. ವಿ., ಶಮಾ ಚಂದುಕೊಡ್ಲುರವರಿಗೆ ಅಭಿನಂದನೆ | ಆಪ್ತ ಚಂದ್ರಮತಿ ಮುಳಿಯರಿಗೆ ಗೌರವಾರ್ಪಣೆ

ಪುತ್ತೂರು: ಕವಿತೆ ಎಂಬುದು ಮಾತಿಗೆ ಮೀರಿದ ಅನುಭವ ಕೊಡುವಂತದ್ದು. ಈ ನಿಟ್ಟಿನಲ್ಲಿ ಕವಿ ಮಾತನಾಡಬಾರದು. ಬದಲಾಗಿ ಮಾಡಿ ತೋರಿಸಬೇಕು. ತನ್ನ ಮನಸ್ಸಿನ ಹಂಬಲ ಇತರರ ಹಂಬಲ ಆಗಿರುವುದೇ ನಿಜವಾದ ಬರವಣಿಗೆಯ ಯಶಸ್ಸು. ಹೀಗೆಂದು ಹೇಳಿದರು ಕವಿ, ಲೇಖಕ ಸುಬ್ರಾಯ ಚೊಕ್ಕಾಡಿ.

ಅವರು ಶನಿವಾರ ನಗರದ ಜೈನ ಭವನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಮೂರನೇ ವರ್ಷದ “ಸ್ವರ್ಣ ಸಾಧನಾ ಪ್ರಶಸ್ತಿ” ಪ್ರದಾನ, ಸಾಧಕರಿಗೆ ಅಭಿನಂದನೆ ಹಾಗೂ ಹಿರಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಪ್ರಸ್ತುತ ಪ್ರಶಸ್ತಿಗಳು ಅಪಮೌಲ್ಯಕ್ಕೆ ಒಳಗಾಗುತ್ತಿರುವುದು ಬೇಸರದ ಸಂಗತಿ. ಜೀವಮಾನ ಸಾಧನೆ ಗುರುತಿಸಿ ನೀಡುವುದೇ ನಿಜವಾದ ಪ್ರಶಸ್ತಿ ಎಂದ ಅವರು, ನಿವೃತ್ತ ನೌಕರರ ಸಂಘ ಇಷ್ಟೊಂದು ಬೆಳೆದಿರುವುದು ಪುತ್ತೂರಿನಲ್ಲಿ ಹೊರತು ಬೇರೆಲ್ಲೂ ಇಲ್ಲ. ಇಂತಹಾ ಸಂಘದಿಂದ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಚೊಕ್ಕಾಡಿಯವರ ಪತ್ನಿ ಲಕ್ಷ್ಮೀ ಉಪಸ್ಥಿತರಿದ್ದರು.





























 
 

ಕ್ಯಾಂಪ್ಕೋ ಸಂಸ್ಥೆಯ ನಿವೃತ್ತ ಆಡಳಿತ ನಿರ್ದೇಶಕ ಕೆ.ಪ್ರಮೋದ್ ಕುಮಾರ್ ರೈ ಸಮಾರಂಭ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ, ನಿವೃತ್ತ ಜೀವನದ ಸಮಯವನ್ನು ಹೇಗೆ ಕಳೆಯಬಹುದು ಎಂಬುದಕ್ಕೆ ಇಂತಹಾ ಸಂಘಟನೆಗಳಿಂದ ಉತ್ತರ ಸಿಗುತ್ತದೆ. ಸಂಘ ಕಟ್ಟಿ ಉತ್ತಮವಾಗಿ ಬೆಳೆಸಿದ್ದೀರಿ. ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ ಎಂದ ಅವರು, ಈಗಾಗಲೇ ದರ್ಬೆಯಲ್ಲಿರುವ ಆಫಿಸರ್ಸ್‍ ಕ್ಲಬ್ ನ್ನು ಬಳಕೆ ಮಾಡುವಂತೆ ಸಂಘದ ಅಧ್ಯಕ್ಷರಲ್ಲಿ ಮನವಿ ಮಾಡಿದರು.

ವಿವೇಕಾನಂದ ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಎಚ್. ಜಿ. ಅಭಿನಂದನಾ ಭಾಷಣ ಮಾಡಿ, ಸುಬ್ರಾಯ ಚೊಕ್ಕಾಡಿಯವರದ್ದು ಕಾವ್ಯ, ಕಾದಂಬರಿ, ವಿಮರ್ಶೆ, ಕವಿತೆಯೇ ಜೀವನ ಉತ್ಸಾಹ. ಕಾವ್ಯ ಪರಂಪರೆ ಮೂಲಕ ನವ್ಯ ಸಾಹಿತ್ಯ ಪರಂಪರೆ ಕಟ್ಟಿ ಬೆಳೆಸಿ ಮುನ್ನಡೆಸುತ್ತಿರುವವರಲ್ಲಿ ಸುಬ್ರಾಯ ಚೊಕ್ಕಾಡಿ ಒಬ್ಬರಾಗಿದ್ದಾರೆ. ತಾನು ರಚಿಸಿದ ಸುಮನಸ ವೇದಿಕೆ ಮೂಲಕ ವಿಚಾರ ವಿಮರ್ಶೆ‍ಗೆ ವೇದಿಕೆ ಒದಗಿಸಿಕೊಟ್ಟಿರುವ ಸುಬ್ರಾಯ ಚೊಕ್ಕಾಡಿಯವರು ಸಮಚಿತ್ತದ, ಸಹೃದಯಿ ಶಿಕ್ಷಕರಾಗಿದ್ದರು ಎಂದು ಹೇಳಿದರು.

ಎಸ್‍ ಆರ್‍ ಕೆ ಲ್ಯಾಡರ್ಸ್‍ ಸಂಸ್ಥೆಯ ಮಾಲಕ ಕೇಶವ ಅಮೈ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಿವೃತ್ತ ನೌಕರರು ಸಂಘ ಕಟ್ಟಿ, ಬೆಳೆಸಿ ಹಿರಿಯ ಜೀವಗಳು ನನ್ನನ್ನು ಗುರುತಿಸಿ ಸನ್ಮಾನಿಸಿರುವುದು ನನ್ನ ಪಾಲಿಗೆ ಬಂದ ಸೌಭಾಗ್ಯ. ಅತ್ಯಂತ ಲವಲವಿಕೆಯಿಂದ ಸಂಘದ ಸದಸ್ಯರು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದರು.

ಸಮಾರಂಭದಲ್ಲಿ ಸಾಧನೆ ಮಾಡಿದ ಎಸ್. ಆರ್. ಕೆ. ಲ್ಯಾಡರ್ ನ ಕೇಶವ ಅಮೈ, ದೆಹಲಿಯಲ್ಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ (ಎನ್.ಸಿ.ಸಿ.) ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ತೇಜಸ್ವಿನಿ ವಿ. ಶೆಟ್ಟಿ, ಸಾಂಸ್ಕೃತಿಕದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಸ್ವಾತಿ ಎನ್. ವಿ., ಶಮಾ ಚಂದುಕೊಡ್ಲು ಅವರಿಗೆ ಅಭಿನಂದನೆ ನಡೆಯಿತು. ದಕ್ಷಿಣ ಆಫ್ರಿಕಾದ ಟುನಿಷಿಯ ಅಂತಾರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ವಿಜೇತೆ, ವಿವೇಕಾನಂದ ಸಿ.ಬಿ.ಎಸ್.ಇ. ಶಾಲೆಯ ಆಪ್ತ ಚಂದ್ರಮತಿ ಮುಳಿಯ ಅವರಿಗೆ ಗೌರವಾರ್ಪಣೆ ನಡೆಯಿತು. ಸಂಘದ ಹಿರಿಯ 48 ಜನ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ತಿರುಮಲೇಶ್ವರ ಭಟ್‍ ಪಿ., ಕೋಶಾಧಿಕಾರಿ ಶಾಂತಿ ಟಿ.ಹೆಗಡೆ, ಉಪಾಧ್ಯಕ್ಷ ರಾಮದಾಸ್ ಗೌಡ ಎಸ್., ಜೊತೆ ಕಾರ್ಯದರ್ಶಿ ಎನ್.ಶಶಿಕಲಾ, ಸಾಂಸ್ಕೃತಿಕ ಕಾರ್ಯದರ್ಶಿ ಲೀನಾ ಪುಡ್ತಾದೋ, ಸಂಘಟನಾ ಕಾರ್ಯದರ್ಶಿ ಬಿ. ಜಗನ್ನಾಥ ರೈ ಉಪಸ್ಥಿತರಿದ್ದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಪಾಧ್ಯಕ್ಷೆ ಪ್ರೊ.ಎಂ.ವತ್ಸಲಾರಾಜ್ಞಿ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top