ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘಧ ಅಶ್ರಯದಲ್ಲಿ ನೆಹರುನಗರ ವಿವೇಕಾನಂದ ಕಾಲೇಜಿನ ಆವರಣದಲ್ಲಿ ವಿವೇಕಾನಂದ ಜಯಂತಿ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ವಾಗ್ಮಿ, ಅಂಕಣಗಾರ ಪ್ರಕಾಶ್ ಮಲ್ಪೆ ಮಾತನಾಡಿ, ನಿರ್ವಿಕಲ್ಪ ಸಮಾಧಿ ಸ್ಥಿತಿಗೆ ತಲುಪಿದ ಬಳಿಕ ವಿವೇಕಾನಂದರು ಪರಮಹಂಸರ ಬಳಿ ಬರುತ್ತಾರೆ. ವಿವೇಕಾನಂದರ ಸ್ಥಿತಿಯನ್ನು ಅರಿತ ಪರಮಹಂಸರು, ನಿರ್ವಿಕಲ್ಪ ಸಮಾಧೀಗೆ ತಲುಪುದೆಯಾ. ಹಾಗೆಂದು ನಿನಂದುಕೊಂಡಂತೆ ಪದೇ ಪದೇ ಅಲ್ಲಿಗೆ ಹೋಗಿ ಬರುತ್ತೇನೆ ಎಂದರೆ ನಾನದಕ್ಕೆ ಬಿಡುವುದಿಲ್ಲ. ಯಾಕೆಂದರೆ ನೀನು ಬಂದಿರುವ ಉದ್ದೇಶವೇ, ಸಮಾಜ ಕಾರ್ಯಕ್ಕೆ ಎಂದು. ಮುಂದೆ ಸಮಾಜದ ಸುಖ – ದುಃಖಗಳಲ್ಲಿ ಭಾಗಿಯಾಗಿ ನಿಜವಾದ ಸನ್ಯಾಸಿ ಎಂದು ಇಡೀಯ ವಿಶ್ವಕ್ಕೆ ತೋರಿಸಿಕೊಟ್ಟರು. ಪ್ರತ್ಯೇಕ ಆಸನ, ಪ್ರತ್ಯೇಕ ವಾಸ, ಪ್ರತ್ಯೇಕ ಊಟ ಮಾಡುವ ಸನ್ಯಾಸಿಗಳ ನಡುವೆ ವಿವೇಕಾನಂದರು ವಿಭಿನ್ನವಾಗಿ ನಿಲ್ಲುತ್ತಾರೆ. ವಿಶಿಷ್ಟ ಸನ್ಯಾಸಿ ಪರಂಪರೆಯನ್ನು ತೋರಿಸಿಕೊಟ್ಟವರು ಅವರು. ಆ ಕಾರಣಕ್ಕೆ ಅವರು ನಿಜವಾದ ಸನ್ಯಾಸಿ ಎಂದು ವ್ಯಾಖ್ಯಾನಿಸಿದರು.
ವಿದೇಶಿ ಸಂಸ್ಕೃತಿ ಬಹಿರ್ ದೃಷ್ಟಿ, ಪೌರಾತ್ಯ ಸಂಸ್ಕೃತಿ ಅಂತರ್ ದೃಷ್ಟಿ, ಆನಂದ, ಸಂತೋಷ. ಇದು ವಿವೇಕಾನಂದರ ವ್ಯಾಖ್ಯಾನ. ಹಾಗೆಂದು ಇದನ್ನು ಹೇಳುವ ಮೊದಲು, ಅವರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡಿದ್ದರು. ಮಾತೃವಲ್ಲ ಪ್ರತಿಯೋರ್ವರ ಒಳಗಡೆಯ ಅದ್ಭುತ ಶಕ್ತಿಯನ್ನು ತೋರಿಸಿಕೊಟ್ಟವರು. ಅದರಲ್ಲೂ ಮಹಿಳೆಯರ ಶಕ್ತಿಯನ್ನು ಅವರಿಗೆ ತಿಳಿಸಿಕೊಟ್ಟ ಅನೇಕ ದೃಷ್ಟಾಂತಗಳು ನಮ್ಮ ಮುಂದಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಶಕ್ತಿಯ ಪುಂಜ ವಿವೇಕಾನಂದರು. ಇಂತಹ ವಿವೇಕಾನಂದರು ಧರ್ಮದ ಸರಿಯಾದ ದಾರಿಯನ್ನು ತೋರಿಸಿಕೊಟ್ಟರು. ಭಾರತ ಎಂದೆಂದೂ ಸೋಲದೇ ಇರುವುದಕ್ಕೆ ಅಂತಹ ಧರ್ಮವೇ ಕಾರಣ. ಧರ್ಮವನ್ನು ಬಿಟ್ಟು ಇಲ್ಲಿನ ಜನರು ಬದುಕಲು ಸಾಧ್ಯವಿಲ್ಲ. ಆದ್ದರಿಂದ ರಾಮನ ಪ್ರಾಣ ಪ್ರತಿಷ್ಠೆಯ ಸಂಭ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಇದನ್ನು ಮರೆತರೆ ಬದುಕಿಲ್ಲ ಎಂದರು.
ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಲಾಂಗ್ ಜಂಪ್ ನಲ್ಲಿ ಚಿನ್ನದ ಪದಕ ಪಡೆದ ಜಿ.ಎಂ. ಕೀರ್ತಿ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿನಿಯರು ಪ್ರಾರ್ಥಿಸಿ, ರಾಮ ತಾರಕ ಮಂತ್ರ ಪಠಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಅಚ್ಯುತ ನಾಯಕ್ ವಂದಿಸಿದರು. ಉಪನ್ಯಾಸಕರಾದ ಡಾ. ವಿಜಯ ಸರಸ್ವತಿ ಹಾಗೂ ವಿದ್ಯಾ ಎಸ್. ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಬೆಂಗಳೂರು ರಂಗ ಪುತ್ಥಳಿ ತಂಡದಿಂದ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಆಧಾರಿತ ಬೊಂಬೆಯಾಟ ಪ್ರಸ್ತುತಗೊಂಡಿತು.