ಮಂಗಳೂರು : ಜೈವಿಕ ಘಟಕಗಳನ್ನು ಪುನಶ್ಚೇತನಗೊಳಿಸಬೇಕಿದ್ದು, ಮಣ್ಣು ಕೊಚ್ಚಿಹೋಗದಂತೆ ತಡೆಯಲು ಗಿಡಗಳನ್ನು ನೆಡಬೇಕು. ಹಸಿರೆಲೆ ಗೊಬ್ಬರ, ಒಂದೇ ತೆರನಾದ ಬೆಳೆಯ ಬದಲು ಬಹು ಬೆಳೆ ಸೇರಿದಂತೆ ವಿವಿಧ ಉಪಕ್ರಮಗಳ ಮೂಲಕ ಈ ಜೀವಾಣುಗಳ ಸಂಖ್ಯೆ ಯನ್ನು ಹೆಚ್ಚಿಸಬಹುದು. ಭೂಮಿಯನ್ನು ಮೊದಲು ಶ್ರೀಮಂತಗೊಳಿಸಿ ಬಳಿಕ ಕೃಷಿ ಕೈಗೊಳ್ಳಬೇಕು ಎಂದು ಸಾವಯವ ಕೃಷಿ ಸಾಧಕ, ಕೊಲ್ಲಾಪುರದ ಶ್ರೀ ಕನೇರಿ ಮಠದ, ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನುಡಿದರು.
ಅವರು ಸಾವಯವ ಕೃಷಿಕ ಗ್ರಾಹಕ ಬಳಗದ ನೇತೃತ್ವದಲ್ಲಿ ಬ್ಯಾಂಕ್ ಆಫ್ ಬರೋಡಾದ, ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಪ್ರಾಯೋಜಕತ್ವ ‘ಉದಯ ವಾಣಿ ಮಾಧ್ಯಮ ಸಹಯೋಗ ಹಾಗೂ ವಿವಿಧ ಸಂಸ್ಥೆಗಳ ಸಹಕಾರದಡಿ ಆಯೋ ಜಿಸಲಾದ ‘ಗೋ ಆಧಾರಿತ ಸಾವಯವ ಕೃಷಿ ರೈತರ ಜತೆಗೆ ಸಂವಾದದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಮಣ್ಣನ್ನು ಚೆನ್ನಾಗಿ ಇಟ್ಟುಕೊಂಡರೆ ಬೆಳೆ ಚೆನ್ನಾಗಿ ಬರುತ್ತದೆ. ಬೆಳೆಗಳಲ್ಲಿ ಪ್ರೊಟೀನ್ ಅಂಶ ಚೆನ್ನಾಗಿದ್ದರೆ ಹುಳಗಳು ಅಲ್ಲಿಗೆ ಬಾರವು, ಯಾಕೆಂದರೆ ಅದಕ್ಕೆ ಪಚನ ಆಗುವುದಿಲ್ಲ ಎಂದು ಅವರು ಹೇಳಿದರು.
ಜಗತ್ತಿನ ಒಟ್ಟು ನೀರಿನಲ್ಲಿ 2ರಿಂದ 3 ಪ್ರತಿಶತದಷ್ಟು ಮಾತ್ರ ಮನುಷ್ಯ ಬಳಸುತ್ತಿದ್ದಾನೆ. ಅದರಲ್ಲಿ ಶೇ 1 ಮಾತ್ರ ಮಳೆಯಿಂದ ಬಂದರೆ, ಉಳಿದದ್ದು ಅಂತರ್ಜಲ, ಗಿಡಗಳು ನೀರನ್ನು ಭೂಮಿಯ ಒಳಗೆ ಕೊಂಡೊಯ್ಯುತ್ತವೆ. ಆದರೆ ಇಂದು ನಾವು ರಾಸಾಯನಿಕವನ್ನು ಬಳಸುತ್ತಿರುವುದರಿಂದ ಮಣ್ಣಿನಲ್ಲಿನ ಜೀವಾಣುಗಳು ನಷ್ಟವಾಗಿ ಭೂಮಿ ಸಂಕುಚಿತ ಗೊಳ್ಳುತ್ತಿದೆ. ಹೀಗಾಗಿ ಎಷ್ಟೇ ಮಳೆ ಬಂದರೂ ನೀರು ಭೂಮಿಯ ಒಳಗೆ ಇಳಿಯುತ್ತಿಲ್ಲ. ಮಣ್ಣು, ನೀರು ಸರಿಯಾಗಿ ಬಳಕೆಯಾಗದೆ ಗಾಳಿಯೂ ಹಾಳಾಗು ತ್ತಿದೆ. ಎಸಿ, ಫ್ರಿಜ್, ವಾಹನಗಳ ಹೊಗೆ, ಅಡುಗೆ ಅನಿಲ, ಮಿಥೇನ್ ಗ್ಯಾಸ್, ಡಂಪಿಂಗ್ ಯಾರ್ಡ್ ನಿಂದ ಹೊರಬರುವ ಗ್ಯಾಸ್, ಕಾರ್ಖಾನೆ ಹೊಗೆ ಸಹಿತ ವಿವಿಧ ಕಾರಣಗಳಿಂದಾಗಿ ಕಾರ್ಬನ್ ಅನ್ನು ಹವೆಯಲ್ಲಿ ಬಿಡುತ್ತಿದ್ದೇವೆ. ಹೀಗಾಗಿ ವಾಯುವಿನಲ್ಲಿ ಆಮ್ಲಜನಕದ ಪ್ರಮಾಣದ ಬದಲು ಕಾರ್ಬನ್ ಡೈ ಆಕ್ಸೆಡ್ 3-4 ಪಟ್ಟು ಹೆಚ್ಚಾಗಿದೆ ಎಂದರು.
ಬದುಗಳ ಮೇಲೆ ಇರುವ ನೈಸರ್ಗಿಕ ಗಿಡಗಳನ್ನು ಅಥವಾ ಕಳೆಗಳನ್ನು ತೆಗೆಯದೇ, ಕೇವಲ ಪಾರ್ಥೇನಿ ಯಂ/ಕಾಂಗ್ರೆಸ್ ಅನ್ನು ಮಾತ್ರಕಿತ್ತು ಹಾಕಬೇಕು. ಆಗ ಹೊಲದ ಯಾವುದೇ ಬೆಳೆಗಳಿಗೆ ಯಾವ ರೋಗವೂ ಬಾರದು. ಸಣ್ಣ ಕೀಟ ಕಾಣಿಸಿಕೊಂಡರೂ ಬದುವಿಲ್ಲಿರುವ ಕೀಟಗಳು ಇದನ್ನು ತಿನ್ನುತ್ತವೆ. ಪ್ರತಿ ಮನೆಯಲ್ಲಿ ಒಂದು ಗೋವು ಇದ್ದರೆ ಒಬ್ಬವೈದ್ಯ ಇದ್ದಂತೆ. ಯಾಕೆಂದರೆ ಮನುಷ್ಯನ ಆರೋಗ್ಯದ ಎಲ್ಲ ವಿಷಯಕ್ಕೂ ಗೋವಿನಿಂದ ಔಷಧ ಸಿಗುತ್ತದೆ ಎಂದರು.