ಪುತ್ತೂರು: ನಳ್ಳಿ ನೀರಿನ ಸರಬರಾಜು ವಿಷಯಕ್ಕೆ ಸಂಬಂಧಿಸಿದ ಹಾಗೆ ಹಲ್ಲೆ ನಡೆದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಶಾಂತಿಗೋಡು ಗ್ರಾಮದ ಉಮೇಶ್ ಖಂಡಿಗ ಅವರು ದೂರು ನೀಡಿರುವುದಾಗಿದೆ.
ಉಮೇಶ್ ಅವರು ನರಿಮೊಗರು ಪಂಚಾಯತ್‌ನಿಂದ ನಳ್ಳಿ ನೀರಿನ ಸೌಲಭ್ಯ ಪಡೆದಿದ್ದು, ಅವರ ಮನೆಗೆ ನೀರು ಸರಬರಾಜು ಸ್ಥಗಿತವಾಗಿತ್ತು. ಈ ಬಗ್ಗೆ ನೀರು ಬಿಡುವ ಕೆಲಸ ಮಾಡುತ್ತಿದ್ದ ಶೇಖರ್ ಎಂಬವರಿಗೆ ಕರೆ ಮಾಡಿ ನೀರು ಬಿಡುವಂತೆ ಹೇಳಿದ್ದರು.
ಆದರೆ ಶೇಖರ್ ಮತ್ತು ಅವರ ಮಗ ಇದೇ ವಿಚಾರವಾಗಿ ತಗಾದೆ ತೆಗೆದು ಎ. 26 ರಂದು ಉಮೇಶ್ ಅವರ ಮನೆಗೆ ಬಂದು ಜಗಳವಾಡಿದ್ದಾರೆ. ಮಾತಿಗೆ ಮಾತು ಬೆಳೆದು ಹಲ್ಲೆ ಮಾಡುವ ಮಟ್ಟಕ್ಕೆ ಜಗಳ ತಲುಪಿದೆ. ಈ ವೇಳೆ ಜಗಳ ತಡೆಯಲು ಬಂದ ಉಮೇಶ್ ಅವರ ಪತ್ನಿ ಮತ್ತು ಮಗಳಿಗೂ ಅವಾಚ್ಯ ಪದಗಳಿಂದ ಶೇಖರ್ ನಿಂದನೆ ಮಾಡಿದ್ದಾಗಿ ದೂರಿನಲ್ಲಿ ಹೇಳಲಾಗಿದೆ.
ಹಲ್ಲೆಗೊಳಗಾದ ಉಮೇಶ್ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

























