ಪುತ್ತೂರು: ಪ್ರಸ್ತುತ ಗಂಭೀರವಾಗಿ ಪರಿಣಮಿಸಿರುವ ಡೆಂಗ್ಯೂ ಜ್ವರದ ಬಾಧೆಗೆ ಮುಂಜಾಗ್ರತೆಯೇ ಪ್ರಮುಖ ಔಷಧ. ಮಹಾತ್ಮ ಗಾಂಧೀಜಿಯವ ಆಶಯದಂತೆ ಸ್ವಚ್ಛತೆಯೇ ದೇವರು ಎಂಬ ಮಾತು ಕಡ್ಡಾಯವಾಗಿ ಪಾಲನೆಯಾದರೆ ಮಾತ್ರ ಡೆಂಗ್ಯೂನಂತಹ ಜ್ವರ ಬಾಧೆಯನ್ನು ಶೇ.90 ನಿಯಂತ್ರಣ ಮಾಡಬಹುದು ಎಂದು ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಹೇಳಿದರು.
ಪುತ್ತೂರು ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ನಗರಸಭೆಯ ಸಹಯೋಗದಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ರೋಗಗಳ ನಿಯಂತ್ರಣ ಕುರಿತು ಬುಧವಾರ ತಾ.ಪಂ. ಸಭಾಂಗಣದಲ್ಲಿ ಆಯೋಜಿಸಲಾದ ಮುಂಜಾಗ್ರತಾ ಸಭೆ ಹಾಗೂ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕ ಸುರಕ್ಷತೆ ಸರಕಾರದ ಪ್ರಥಮ ಆದ್ಯತೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮಾತ್ರವಲ್ಲದೆ ಎಲ್ಲಾ ಇಲಾಖೆಗಳಿಗೂ ಜವಾಬ್ದಾರಿ ಇದ್ದು, ನಿಯಂತ್ರಣದ ಕ್ರಮದಲ್ಲಿ ಕೈಜೋಡಿಬೇಕು ಎಂದು ಹೇಳಿದರು.
ಜಿಲ್ಲಾ ಮಲೇರಿಯಾ ಹಾಗೂ ಡೆಂಗ್ಯೂ ನಿಯಂತ್ರಣಾಧಿಕಾರಿ ನವೀನ್‌ಚಂದ್ರ ಕುಲಾಲ್ ಪಿಪಿಟಿ ಮೂಲಕ ಡೆಂಗ್ಯೂ ಜಾಗೃತಿ ಕುರಿತು ಕಾರ್ಯಾಗಾರ ನಡೆಸಿ, ಡೆಂಗ್ಯೂ ಜ್ವರ ಒಂದು ಬಾರಿ ಬಂದರೆ ಜೀವನ ಪರ್ಯಂತ ನೆನಪಿನಲ್ಲಿಟ್ಟುಕೊಳ್ಳುವಂತಹ ಬಾಧೆ ಕೊಡುತ್ತಿದೆ. ಶಂಕಿತ ಹಾಗೂ ದೃಢಪಟ್ಟ ಎರಡೂ ಪ್ರಕರಣಗಳನ್ನು ಒಂದೇ ಕಣ್ಣಲ್ಲಿ ನೋಡಬೇಕು. ಒಂದು ವಾರ್ಡ್ ಅಥವಾ ಗ್ರಾಮಗಳಲ್ಲಿ 5 ಕ್ಕಿಂತ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡುಬಂದರೆ ಅದನ್ನು ಡೆಂಗ್ಯೂ ಪೀಡಿತ ಗ್ರಾಮವಾಗಿ ಘೋಷಿಸಬೇಕೆಂಬ ನಿಯಮವಿದೆ ಎಂದು ಹೇಳಿದರು.
ಡೆಂಗ್ಯೂನಲ್ಲಿ ಡೆನ್ 1 ರಿಂದ 4 ರ ತನಕ ಹಂತಗಳಿವೆ. ಪ್ರಥಮ ಹಂತದ ಜ್ವರ 1-3 ದಿನಗಳಲ್ಲಿ ಗುಣಮುಖವಾಗಿ ನಂತರ ಸುಸ್ತು ಮಾತ್ರ ಇರುತ್ತದೆ. 5-7 ದಿನಗಳಲ್ಲಿ ಮತ್ತೆ ಜ್ವರ ಬಂದರೆ ಸ್ವಲ್ಪ ಗಂಭೀರವಿದೆ ಎಂದರ್ಥ. ಒಂದು ಸಲ ಜ್ವರ ಬಂದು ತಿಂಗಳಲ್ಲಿ ಮತ್ತೆ ಬಂದರೆ ಹೆಚ್ಚು ಅಪಾಯವಿದೆ ಎಂದು ಅವರು ವಿವರಿಸಿದರು.
ಡೆಂಗ್ಯೂ ಜ್ವರಕ್ಕೆ ಯಾವುದೇ ರೀತಿಯ ನಿಗದಿತ ಚಿಕಿತ್ಸೆ ಇಲ್ಲ. ಡೆಂಗ್ಯೂ 4 ವಿಧದ ವೈರಸ್ ಹೊಂದಿರುವುದರಿಂದ ಇದು ಬರದಂತೆ ವಾಕ್ಸಿನ್ ಕೂಡ ಇಲ್ಲ. ಸಿಂಟಮ್ಯಾಟಿಕ್ ಟ್ರೀಟ್ ಮೆಂಟ್ ಮಾತ್ರ ಇದೆ. ಯಾವುದೇ ಹೊಸ ರೀತಿಯ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವುದು ಬೇಡ. ಆದರೆ ಗರಿಷ್ಠ ಪ್ರಮಾಣದಲ್ಲಿ ನೀರು ಕುಡಿಯಬೇಕು. ನೀರಿನ ಅಂಶ ಹೆಚ್ಚು ಇರುವ ಆಹಾರ ಸೇವಿಸಬೇಕು. ಕಿವಿ ಫ್ರೂಟ್‌ಗೂ ಡೆಂಗ್ಯೂ ಜ್ವರ ನಿಯಂತ್ರಣಕ್ಕೂ ಯಾವುದೇ ಸಂಬಂಧವಿಲ್ಲ. ಪಪ್ಪಾಯ ಎಲೆಯ ರಸವನ್ನು ವಿಪರೀತ ಕುಡಿಯುವುದೂ ಅಪಾಯಕಾರಿ. ಡೆಂಗ್ಯೂ ಜ್ವರ ಬಂದ ಮೇಲೆ ಒಂದು ವಾರ ವಿಶ್ರಾಂತಿ ಅತಿ ಅಗತ್ಯ ಎಂದು ನವೀನ್ ಚಂದ್ರ ಅವರು ಸಲಹೆ ನೀಡಿದರು.
ಈಡೀಸ್ ಹೆಣ್ಣು ಸೊಳ್ಳೆಯ ಕಡಿತದಿಂದ ಬಾಧಿಸುವ ಡೆಂಗ್ಯೂ ಜ್ವರ ಬರುತ್ತದೆ. ಇದು ಹಗಲು ಹೊತ್ತಿನಲ್ಲಿ ಮಾತ್ರ ಕಡಿಯುತ್ತದೆ. ಈ ಸೊಳ್ಳೆ 1-2 ವರ್ಷ ಬದುಕಬಲ್ಲದು. ಒಂದು ಸೊಳ್ಳೆ 500 ಮೀ. ವ್ಯಾಪ್ತಿಯಲ್ಲಿ ಹಾರಾಡಬಲ್ಲದು. ಟಯರ್, ಸೀಯಾಳ, ನಿರ್ಮಾಣ ಹಂತದ ಕಟ್ಟಗಳಲ್ಲಿ ಪ್ರಮುಖವಾಗಿ ಸೊಳ್ಳೆ ಉತ್ಪತ್ತಿಯಾಗುತ್ತದೆ. ಡೆಂಗ್ಯೂ ಸೊಳ್ಳೆ ಉತ್ಪತ್ತಿಯಾಗುವ ತಾಣಗಳನ್ನು 100 ಶೇ. ಡ್ರೈ ಮಾಡುವುದು ಅತಿ ಅಗತ್ಯ. ಕಹಿಬೇವು ಎಣ್ಣೆ ಮೈಗೆ ಲೇಪನ ಮಾಡುವುದು, ಮೈತುಂಬಾ ಮುಚ್ಚುವ ವಸ್ತ್ರ ಧರಿಸುವುದು ರಕ್ಷಣೆಗೆ ಸಹಕಾರಿ ಎಂದು ಅವರು ಹೇಳಿದರು.
ಎಲ್ಲಾ ಗ್ರಾ.ಪಂ.ಗಳ ಪಿಡಿಒಗಳು, ನಗರ ಸ್ಥಳೀಯಾಡಳಿತದ ಅಧಿಕಾರಿಗಳಿಗೆ ಸರಕಾರ ಜವಾಬ್ದಾರಿ ನೀಡಿ ಅಧಿಕಾರ ನೀಡಿದೆ. ಪ್ರತಿ ಪಿಡಿಒಗಳು ದಿನಂಪ್ರತಿ ತಮ್ಮ ವ್ಯಾಪ್ತಿಯ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಡ್ರೈ ಮಾಡುವ ಕಾರ್ಯಗಳಿಗೆ ಸಂಬಂಧಿಸಿದ ಕನಿಷ್ಟ 5 ಫೊಟೋಗಳನ್ನು ತೆಗೆದು ಜಿಪಿಎಸ್ ಮಾಡಬೇಕು. ಈ ತಿಂಗಳ ಕೊನೆಯವರೆಗೆ ಈ ಕಾರ್ಯ ಕಡ್ಡಾಯವಾಗಿ ಮಾಡಬೇಕು. ನಿಯಮಗಳು ಉಲ್ಲಂಘನೆಯಾಗಿರುವುದನ್ನು ಕಂಡರೆ ದಂಡ ಹಾಕುವ ಅಧಿಕಾರ ಬಳಸಿಕೊಳ್ಳಬೇಕು. ಜನರಲ್ಲಿ ಅರಿವು ಮೂಡಿಸುವ, ಅಂಗನವಾಡಿ, ಶಾಲೆಗಳು, ಬಸ್ ನಿಲ್ದಾಣ, ಚರಂಡಿ ಬ್ಲಾಕ್ ವಿಚಾರಗಳಲ್ಲಿ ನಿಗಾ ವಹಿಸಬೇಕು ಎಂದು ಎಸಿ ಜುಬಿನ್ ಸೂಚನೆ ನೀಡಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಪುರಂದರ್, ಬಿಇಒ ಲೋಕೇಶ್ ಎಸ್.ಆರ್. ಉಪಸ್ಥಿತರಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಸ್ವಾಗತಿಸಿ, ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್ ವಂದಿಸಿದರು. ಪಿಡಿಒಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬಂದಿ ಸಭೆಯಲ್ಲಿ ಪಾಲ್ಗೊಂಡರು.