ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವ ಏ.10 ರಿಂದ 20 ರ ತನಕಿ ಕ್ಷೇತ್ರದ ತಂತ್ರಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು, ಜಾತ್ರೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ತಿಳಿಸಿದ್ದಾರೆ.
ಅವರು ಶುಕ್ರವಾರ ದೇವಸ್ಥಾನದ ಕಚೇರಿಯಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಜಾತ್ರೋತ್ಸವದ ವಿಶೇಷತೆಗಳ ಕುರಿತು ಮಾಹಿತಿ ನೀಡಿ, ಈಗಾಗಲೇ ದೇವಸ್ಥಾನದ ಪುಷ್ಕರಣಿಯಲ್ಲಿರುವ ನೂತನ ಶಿಲಾಮಯ ಕಟ್ಟೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ಶನಿವಾರ ಸಂಪೂರ್ಣಗೊಳ್ಳಲಿದೆ. ಧ್ವಜಾರೋಹಣದ ಮೊದಲ ದಿನ ಅಂದರೆ ಏ.9 ಭಾನುವಾರ ಸಂಜೆ ವಾಸ್ತುಪೂಜೆ, ವಾಸ್ತುಬಲಿ, ರಾಕ್ಷೋಘ್ನ ಹೋಮ ನಡೆಯಲಿದೆ. ಏ.10 ರಂದು ನಡೆಯುವ ಧ್ವಜಾರೋಹಣದ ಬಳಿಕ ಶ್ರೀ ದೇವರ ಪುಷ್ಕರಣಿಯ ತಳಭಾಗದಲ್ಲಿರುವ ಶ್ರೀ ವರುಣ ದೇವರಿಗೆ ಸಾಮೂಹಿಕ ವರುಣ ಪೂಜೆ ನಡೆಯಲಿದೆ. ಬಳಿಕ ಭಕ್ತರಿಗೆ ವೀಕ್ಷಣೆಯೊಂದಿಗೆ ಸೇವಾ ಪೂಜೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು
ತಿಳಿಸಿದರು.
ಏ.17 ರ ರಥೋತ್ಸವದಂದು ರಥ ಎಳೆಯುವವರು ಪಂಚೆ, ಶಲ್ಯದೊಂದಿಗೆ ಸಾಂಪ್ರದಾಯಿಕ ಉಡುಗೆಯೊಂದಿಗೆ ಬರಬೇಕು. ಅಲ್ಲದೆ ವರುಣ ದೇವರಿಗೆ ಪೂಜೆ ಸಲ್ಲಿಸುವವರು ಶುಭ್ರ ಮನಸ್ಸಿನಿಂದ, ಸಾಂಪ್ರದಾಯಿಕ ರೀತಿಯಲ್ಲಿ ಬರಬೇಕು ಎಂದು ಅವರು ವಿನಂತಿಸಿದರು.
ಏ.8 ಶನಿವಾರ ಮಧ್ಯಾಹ್ನ 3.30 ಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ದರ್ಬೆ ವೃತ್ತ ಹಾಗೂ ಬೊಳುವಾರು ಸುಬ್ರಹ್ಮಣ್ಯ ನಗರದಿಂದ ಏಕಕಾಲದಲ್ಲಿ ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಬಳಿಕ ಕೊಂಬು, ಕಹ:ಳೆ, ಕುಣಿತ ಭಜನೆಯೊಂದಿಗೆ ಮೆರವಣಿಗೆ ಸಾಗಲಿದೆ. ಈಗಾಗಲೇ ಶ್ರೀ ದೇವರಸ್ಥಾನದ ವತಿಯಿಂದ ಧಾರ್ಮಿಕ ಶಿಕ್ಷಣ ಪಡೆಯುವ 15 ಕೇಂದ್ರಗಳ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದು ಈ ಬಾರಿಯ ವಿಶೇಷತೆಯಾಗಿದೆ. ಎಂದು ತಿಳಿಸಿದರು. ಈ ಬಾರಿ ಪಂಜುರ್ಲಿ ದೈವಕ್ಕೆ ಅಣಿಕಟ್ಟುವುದು ವಿಶೇಷತೆಯಾಗಿದೆ ಎಂದು ತಿಳಿಸಿದರು.
ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು ಮಾತನಾಡಿ, ಸುಮಾರು 10 ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳಿಗೆ ಮಧ್ಯಾಹ್ನದ ಪೂಜೆಯ ಬಳಿಕ 12.30 ರಿಮದ 3 ಗಂಟೆ ತನಕ ಅನ್ನಸಂತರ್ಪಣೆ ನಡೆಯಲಿದೆ. ಇದರ ವ್ಯವಸ್ಥೆಗಾಗಿ ಈಗಾಗಲೇ ಸುಮಾರು 500 ಮಂದಿ ಸ್ವಯಂ ಸೇವಕರು ಸಿದ್ಧರಾಗಿದ್ದಾರೆ. ದಿನನಿತ್ಯ ಅನ್ನಸಂತರ್ಪಣೆ ನಡೆಯಲಿದ್ದು, ಚುನಾವಣೆಯ ಯಾವುದೇ ನೀತಿ ಸಂಹಿತೆ ಅನ್ವಯಿಸುವುದಿಲ್ಲ ಎಂದು ತಿಳಿಸಿದ ಅವರು, ಜಾತ್ರೋತ್ಸವದ ಅಂಗವಾಗಿ ಈಗಾಗಲೇ ಹಲವಾರು ಭಜನಾ ತಂಡಗಳು ಭಜನೆ ನೆರವೇರಿಸಲಿದ್ದು, ಈ ಭಜನಾ ತಂಡದವರ ಕೂಡಾ ಅನ್ನಸಂತರ್ಪಣೆ ಸಂದರ್ಭ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲಿರುವುದು ವಿಶೇಷತೆಯಾಗಿದೆ ಎಂದು ಹೇಳಿದರು.
ಸದಸ್ಯ ಬಿ.ಐತ್ತಪ್ಪ ನಾಯ್ಕ್ ಮಾತನಾಡಿ, ಈ ಬಾರಿ ಒಂದೇ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಊಟದ ವ್ಯವಸ್ಥೆ ಒಂದೇ ಪೆಂಡಾಲ್‍ನಲ್ಲಿ ಏರ್ಪಡಿಸಲಾಗುವುದು. ಸಂಜೆ 5 ಗಂಟೆಯಿಂದ ರಾತ್ರಿ 11 ಗಂಟೆ ತನಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.
ಸದಸ್ಯ ರಾಮಚಂದ್ರ ಕಾಮತ್ ಮಾತನಾಡಿ, ಎರಡು ಜೈಂಟ್ ವ್ಹೀಲ್ ಸಹಿತ ಸುಮಾರು 250 ಸ್ಟಾಲ್‍ಗಳು ಕಾರ್ಯಾಚರಿಸಲಿದ್ದು, ಸ್ಟಾಲ್‍ಗಳನ್ನು ಕಡಿಮೆ ಬಿಡ್‍ಗೆ ನೀಡಲಾಗಿದೆ. ಜಾತ್ರೆಯ ಅಂಗವಾಗಿ ಏ.9 ಭಾನುವಾರ ಬೆಳಿಗ್ಗೆ 7 ರಿಂದ 10 ಗಂಟೆ ತನಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ೀ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವಂತೆ ಅವರು ವಿನಂತಿಸಿದರು.
ದೇವಸ್ಥಾನದ ವಠಾರ ಸಹಿತ ಒಟ್ಟು 157 ಕಟ್ಟೆಗಳಿದ್ದು, ಪ್ರತಿಯೊಂದು ಕಟ್ಟೆಯವರು ತಮ್ಮ ಕಟ್ಟೆಗಳಿಗೆ ಬಂಟಿಂಗ್ಸ್ ಅಳವಡಿಸಲು ಅನುಮತಿ ಕಡ್ಡಾಯ. ಅನುಮತಿ ಪತ್ರವನ್ನು ದೇವಸ್ಥಾನದ ವತಿಯಿಂದ ನೀಡಲಾಗುವುದು. ಆದ್ದರಿಂದ ಕಟ್ಟೆಯ ಪ್ರಮುಖರು ದೇವಸ್ಥಾನಕ್ಕೆ ಬಂದು ಅನುಮತಿ ಪತ್ರ ಪಡೆಯಬೇಕೆಂದು ಅವರು ತಿಳಿಸಿದರು.
ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ಸುಡುಮದ್ದು ಪ್ರದರ್ಶನ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಅಣಕು ಪ್ರದರ್ಶನದ ಮೂಲಕ ಸುಡುಮದ್ದುಗಾರರನ್ನು ಆಯ್ಕೆ ಆಯ್ಕೆಮಾಡಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮದಾಸ್ ಗೌಡ, ಶೇಖರ್ ನಾರಾವಿ, ವೀಣಾ ಬಿ.ಕೆ. ಉಪಸ್ಥಿತರಿದ್ದರು.