ಏನುಂಟು ಏನಿಲ್ಲ ಮೂಡಬಿದ್ರೆಯ ಸೋನ್ಸ್ ಫಾರ್ಮನಲ್ಲಿ!
ಮೂಡಬಿದಿರೆಯಿಂದ ಕಾರ್ಕಳಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ತೆಕ್ಕೆಯಲ್ಲಿ ಬೆಳುವಾಯಿ ಎಂಬಲ್ಲಿ ಮೈಚಾಚಿ ಮಲಗಿರುವ ನೂರು ಎಕರೆ ವಿಸ್ತಾರದ ಸೋನ್ಸ್ ಫಾರ್ಮ್ ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಲು ಕಾರಣವಾದ ವ್ಯಕ್ತಿ ಅವರು. ತಾನು ನೆಟ್ಟಿರುವ ಸಾವಿರಾರು ಹಣ್ಣಿನ ಮರಗಳಷ್ಟೇ ಎತ್ತರದ ವ್ಯಕ್ತಿತ್ವ ಹೊಂದಿರುವ ಡಾಕ್ಟರ್ ಎಲ್. ಸಿ. ಸೋನ್ಸ್ ಈ ಬುಧವಾರ ನಮ್ಮನ್ನು ಆಗಲಿದ್ದಾರೆ. ಅವರು ನಮ್ಮ ನಡುವಿನ ಅತಿ ದೊಡ್ಡ ಕೃಷಿ ವಿಜ್ಞಾನಿ ಅಂದರೆ ಅದರಲ್ಲಿ ಉತ್ಪ್ರೇಕ್ಷೆ ಇಲ್ಲ. ಅವರಿಗೆ 89 ವರ್ಷ ವಯಸ್ಸಾಗಿತ್ತು
ಸೋನ್ಸ್ ಹೆಸರು ಅಜರಾಮರ
ತಮ್ಮ ತಂದೆ ಡಾಕ್ಟರ್ ಆಲ್ಫ್ರೆಡ್ ಜಿ. ಸೋನ್ಸ್ ಅವರು 1920ರ ದಶಕದಲ್ಲಿ ಸ್ಥಾಪನೆ ಮಾಡಿದ್ದ ಸೋನ್ಸ್ ಫಾರ್ಮನ್ನು ಇಂದು ಜಾಗತಿಕ ಮಟ್ಟಕ್ಕೆ ಅಭಿವೃದ್ಧಿ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು. ಡಾಕ್ಟರ್ ಲಿವಿಂಗಸ್ಟನ್ ಚಂದ್ರಮೋಹನ್ ಸೋನ್ಸ್ ಅನ್ನುವುದು ಅವರ ಪೂರ್ಣ ಹೆಸರು. ಬೆಳುವಾಯಿಯ ಮಿಷನ್ ಶಾಲೆ, ಮೂಡಬಿದ್ರೆಯ ಜೈನ್ ಹೈಸ್ಕೂಲ್, ಮಂಗಳೂರಿನ ಅಲೋಶಿಯಸ್ ಕಾಲೇಜುಗಳಲ್ಲಿ ಓದಿದವರು. ಸಸ್ಯಶಾಸ್ತ್ರ ಅವರ ಆಸಕ್ತಿಯ ಕ್ಷೇತ್ರ. ಮುಂದೆ ಅಮೆರಿಕಾದ ಮೊಂಟಾನಾ ವಿವಿಯಿಂದ ಸಸ್ಯಶಾಸ್ತ್ರದಲ್ಲಿ ಸಂಶೋಧನಾ ಡಾಕ್ಟರೇಟ್ ಪಡೆದು ಅವರು ತಮ್ಮ ಕರ್ಮಭೂಮಿಯಾದ ಬೆಳುವಾಯಿಗೆ ಬಂದರು. ಮುಂದಿನ 50 ವರ್ಷ ಅಪ್ಪನ ಸೋನ್ಸ್ ಫಾರ್ಮನ್ನು ಭಾರಿ ವಿಸ್ತಾರವಾಗಿ ಬೆಳೆಸಿದರು. ಕೃಷಿಯಲ್ಲಿ ನೂರಾರು ಸಂಶೋಧನೆಗಳನ್ನು ಮಾಡಿದರು. ಬೆಳುವಾಯಿಯನ್ನು ಸಸ್ಯಕಾಶಿಯನ್ನಾಗಿ ಮಾಡಿದರು.
ಕೃಷಿಯಲ್ಲಿ ಅತ್ಯಂತ ವಿನೂತನ ಆವಿಷ್ಕಾರಗಳು
ಕೃಷಿಯಲ್ಲಿ ದೇಸಿತನ, ವಿಜ್ಞಾನ, ತಂತ್ರಜ್ಞಾನ, ಆಧುನಿಕತೆ, ಸಾವಯವ ಕೃಷಿ, ಮಾರ್ಕೆಟಿಂಗ್ ಮೊದಲಾದ ಎಲ್ಲವನ್ನೂ ಆಳವಾಗಿ ಅಧ್ಯಯನ ಮಾಡಿ ತನ್ನ ಫಾರ್ಮಲ್ಲಿ ಅಳವಡಿಸಿಕೊಂಡ ಕೀರ್ತಿ ಅವರಿಗೆ ಸಲ್ಲಬೇಕು. ಭೂಮಿಯ ಸತ್ವ ಬರಿದಾಗದಂತೆ ನೋಡಿಕೊಂಡು, ಮಣ್ಣು, ನೀರಿನಾಶ್ರಯ, ಹವಾಮಾನ, ಮಾರುಕಟ್ಟೆ ಎಲ್ಲವನ್ನೂ ಅಧ್ಯಯನ ಮಾಡಿ ಕೃಷಿಯಿಂದಲೂ ಕೋಟಿ ಕೋಟಿ ಆದಾಯ ಪಡೆಯಲು ಸಾಧ್ಯ ಎಂದು ತೋರಿಸಿಕೊಟ್ಟವರು ಅವರು. ಹದಿನೆಂಟು ತಿಂಗಳಿಗೆ ಫಲ ಕೊಡುವ ತೆಂಗಿನ ಮರ, ಹತ್ತಾರು ತಳಿಗಳ ಬಾಳೆ ಹಣ್ಣು, ಹಸಿರು ಅಡಿಕೆಯ ಮರಗಳು, ಎತ್ತರದ ಮರಗಳನ್ನು ತಬ್ಬಿಕೊಂಡು ನಿಲ್ಲುವ ಕಾಳುಮೆಣಸಿನ ಬಳ್ಳಿಗಳು, ಹಿಂಡಿದಷ್ಟೂ ರಸ ಕೊಡುವ ಮತ್ತು ದೀರ್ಘಕಾಲ ಉಳಿಯುವ ರುಚಿಯಾದ ಅನಾನಸು, ಪೋಷಕಾಂಶಗಳ ಸಮೃದ್ಧಿಯ ಔಷಧೀಯ ಸಸ್ಯಗಳು, ಹಣ್ಣುಗಳ ಭಾರದಿಂದ ತಗ್ಗಿ ನಿಂತಿರುವ ಮಾವಿನ ಮರಗಳು, ನೂರಾರು ತಳಿಯ ಪೇರಳೆ, ಪಪ್ಪಾಯ, ನೇರಳೆ, ಚಿಕ್ಕೂ…. ಹೀಗೆ ಸೋನ್ಸ್ ಫಾರ್ಮನಲ್ಲಿ ಎಲ್ಲವೂ ಇರುವ ಹಾಗೆ ನೋಡಿಕೊಂಡರು.
ಕಸಿಕಟ್ಟುವ ವಿಸ್ಮಯ ಅವರಿಂದ ಕಲಿಯಬೇಕು
ಯಾವ್ಯಾವುದೋ ಸಸಿಗೆ ಯಾವ್ಯಾವುದೋ ಸಸಿಯನ್ನು ಕಸಿ ಕಟ್ಟಿ ಹೊಸ ತಳಿಯನ್ನು ಅಭಿವೃದ್ದಿ ಪಡಿಸುವ ಅವರ ಆಸಕ್ತಿ, ಅವರ ವೈಜ್ಞಾನಿಕ ದೃಷ್ಟಿಕೋನ ಎಲ್ಲವೂ ಅದ್ಭುತ! ಅನಾನಸು ಕೃಷಿಯಲ್ಲಿ ಅವರದ್ದು ರಾಷ್ಟ್ರೀಯ ದಾಖಲೆ. ಅಷ್ಟು ರುಚಿಯಾದ ತಿರುಳು ಇರುವ ಅನಾನಸು ಕೇವಲ ಸೋನ್ಸ್ ಫಾರ್ಮನಲ್ಲಿ ಮಾತ್ರ ದೊರೆಯುತ್ತದೆ ಎನ್ನುವ ನಂಬಿಕೆ ಎಲ್ಲೆಡೆ ಹರಡಲು ಕಾರಣವಾದದ್ದು ಡಾಕ್ಟರ್ ಸೋನ್ಸ್ ಅವರ ಪರಿಶ್ರಮ ಮತ್ತು ಬೆವರಿನ ಹನಿಗಳು.
ವಿದೇಶದ ಅಪರೂಪದ ಹಣ್ಣುಗಳು ಮತ್ತು ಮಾರ್ಕೆಟಿಂಗ್
ಭಾರತದಲ್ಲಿಯೇ ಮೊದಲ ಬಾರಿಗೆ ವಿಮಾನದ ಮೂಲಕ ವಿದೇಶದ ಹಣ್ಣಿನ ಗಿಡಗಳನ್ನು ತರಿಸಿ ಅವುಗಳನ್ನು ನೆಟ್ಟು ಬೆಳೆಸಿದ ಕೀರ್ತಿ ಸೋನ್ಸ್ ಅವರಿಗೆ ಸಲ್ಲುತ್ತದೆ. ಒಂದು ಕಾಲದಲ್ಲಿ ಭಾರತದ ಮಣ್ಣಿನಲ್ಲಿ ಬೆಳೆಯಲು ಸಾಧ್ಯವೇ ಇಲ್ಲ ಎಂದು ನಂಬಿದ್ದ ರಂಬುಟಾನ್, ವೆನಿಲ್ಲ, ಲಾಂಗ್ ಸಾಟ್, ಎಗ್ ಫ್ರುಟ್, ಡುರಿಯನ್, ಲೊಂಗಾನ್, ಮಲಯ ಸೇಬು, ರಾಂಬಿ, ಅಬಿಯು ಮೊದಲಾದವುಗಳನ್ನು ಬೆಳುವಾಯಿಗೆ ತರಿಸಿ ಅಭಿವೃದ್ದಿ ಮಾಡಿದವರು ಅವರು. ಜಾಬೋಟಿ ಕಾಬಾ ಎಂಬ ರುಚಿಕರವಾದ ದ್ರಾಕ್ಷಿ, ಗಂಡು ಮತ್ತು ಹೆಣ್ಣುಗಳಲ್ಲಿ ಫಲವತ್ತತೆಯನ್ನು ಹೆಚ್ಚಿಸುವ ಡುರಿಯನ್ ಹಣ್ಣುಗಳು ಅವರ ತೋಟದಲ್ಲಿ ಸಮೃದ್ಧವಾಗಿ ಬೆಳೆದವು. ಡೀಸೆಲ್ ಮರ, ಅತಿ ಎತ್ತರವಾಗಿ ಬೆಳೆಯುವ ಬಿದಿರು, ಮಕಾಡಾಮಿಯ ನಟ್, ನೂರಾರು ಜಾತಿಯ ಸಿಟ್ರಸ್ ಹಣ್ಣುಗಳು ಸೋನ್ಸ್ ಫಾರ್ಮನಲ್ಲಿ ಸಮೃದ್ಧವಾಗಿ ಬೆಳೆದವು. ಆ ಹಣ್ಣುಗಳ ತಿರುಳನ್ನು ಸಂಸ್ಕರಣೆ ಮಾಡಿ ಅವುಗಳ ಪಲ್ಪ್, ಜ್ಯೂಸ್, ಜಾಮ್ ಮೊದಲಾದವುಗಳನ್ನು ತಯಾರಿಸಿ ಕೃಷಿ ಉತ್ಪನ್ನಗಳಿಗೆ ಬಹುದೊಡ್ಡ ಮಾರ್ಕೆಟ್ ಹುಡುಕಿದ ಅವರ ಬುದ್ಧಿವಂತಿಕೆಗೆ ನೀವು ಸೆಲ್ಯೂಟ್ ಹೊಡೆಯಲೆಬೇಕು. ಎಲ್ಲ ಕಡೆಗಳಲ್ಲಿ ಸೀಸನಲ್ ಆಗಿದ್ದ ಹಣ್ಣುಗಳು ಸೋನ್ಸ್ ಫಾರ್ಮನಲ್ಲಿ ಇಡೀ ವರ್ಷ ಬೆಳೆದವು ಅಂದರೆ ನಾವು ನಂಬಲೇ ಬೇಕು. ಬಿದಿರಿನ ವೈವಿಧ್ಯತೆ ನೀವು ಸೋನ್ಸ್ ಫಾರ್ಮಗೆ ಬಂದೇ ನೋಡಬೇಕು.
ಒಂದಾದರೂ ಪದ್ಮ ಪ್ರಶಸ್ತಿ ಸೋನ್ಸ್ ಅವರಿಗೆ ದೊರೆಯಬೇಕಿತ್ತು
ಈ ಕೃಷಿ ವಿಜ್ಞಾನಿಗೆ ಒಂದಾದರೂ ಪದ್ಮ ಪ್ರಶಸ್ತಿ ದೊರೆಯಬೇಕಿತ್ತು ಅನ್ನುವುದು ಅವರ ಅಭಿಮಾನಿಗಳ ಕೊರಗು. ಆದರೆ ತನ್ನಷ್ಟಕ್ಕೆ ತನ್ನ ಕೃಷಿ ಕಾಯಕದಲ್ಲಿ ಮುಳುಗಿದ್ದ ಸೋನ್ಸರಿಗೆ ಅದ್ಯಾವುದೂ ಮುಖ್ಯ ಅನ್ನಿಸಲೆ ಇಲ್ಲ. ಅವರಿಗೆ ಕರ್ಣಾಟಕ ಸರಕಾರದ ಅತ್ಯುತ್ತಮ ಕೃಷಿಕ ಪ್ರಶಸ್ತಿ ದೊರೆತಿದೆ. ಅವರು ಕಲಿತ ಅಮೆರಿಕದ ಮೊಂಟಾನಾ ವಿವಿಯಿಂದ ಅತ್ಯುತ್ತಮ ಆಲುಮ್ನಿ ಎಂಬ ಪ್ರಶಸ್ತಿಯು ಅವರಿಗೆ ದೊರೆತಿದ್ದು ಆ ಪ್ರಶಸ್ತಿಯನ್ನು ಪಡೆದ ಮೊಟ್ಟಮೊದಲ ಅಮೆರಿಕಾದ ಹೊರಗಿನವರು ನಮ್ಮ ಸೋನ್ಸ್.
ಡಾಕ್ಟರ್ ಎಲ್. ಸಿ. ಸೋನ್ಸ್ ಅವರ ಬಗ್ಗೆ ಸ್ವತಃ ಕೃಷಿ ವಿಜ್ಞಾನಿ ಆಗಿರುವ ನರೇಂದ್ರ ರೈ ದೇರ್ಲ ಅವರು ಬರೆದಿರುವ ಪುಸ್ತಕ ‘ಸೋನ್ಸ್ ಫಾರ್ಮ್’ ಬಿಡುಗಡೆಗೆ ಸಿದ್ಧವಾಗಿದ್ದು ಅದು ಅನಾವರಣ ಆಗುವ ಮೊದಲೇ ಅವರು ನಿರ್ಗಮಿಸಿದ್ದು ನಿಜಕ್ಕೂ ದುಃಖದ ಸಂಗತಿ.
ಸ್ವರ್ಗದಲ್ಲಿ ಎಲ್ಲೋ ಸೋನ್ಸರು ಹಣ್ಣಿನ ಗಿಡಗಳನ್ನು ನೆಡುತ್ತಿರಬಹುದು, ಯಾರಿಗೆ ಗೊತ್ತು?
✒️ರಾಜೇಂದ್ರ ಭಟ್ ಕೆ.
ಜೇಸಿರಾಷ್ಟ್ರೀಯ ತರಬೇತಿದಾರರು.