ಅಂದು ದ್ರಾವಿಡ್ ಮತ್ತು ಲಕ್ಷ್ಮಣ್ ಮೈಯಲ್ಲಿ ಆವೇಶ ಬಂದಿತ್ತು | ಆಸೀಸ್ ವಿರುದ್ಧ ಫಾಲೋ ಆನ್ ಪಡೆದೂ ಭಾರತ ಆ ಟೆಸ್ಟ್ ಪಂದ್ಯವನ್ನು ಗೆದ್ದಿತ್ತು
ಮಂಗಳವಾರ ಮುಗಿದು ಹೋದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯ ಎರಡು ಪ್ರಮುಖವಾದ ಕಾರಣಗಳಿಗೆ ದಾಖಲೆಯನ್ನು ಬರೆಯಿತು. ಮೊದಲನೇ ದಾಖಲೆ ಎಂದರೆ ನ್ಯೂಜಿಲೆಂಡ್ ಒಂದು ರನ್ ಅಂತರದಲ್ಲಿ ಆ ಟೆಸ್ಟ್ ಪಂದ್ಯವನ್ನು ಗೆದ್ದದ್ದು. ಇತಿಹಾಸದಲ್ಲಿ ಇದು ಅಂತಹ ಕೇವಲ ಎರಡನೇ ದೃಷ್ಟಾಂತ ಆಗಿತ್ತು!
ಅದೇ ರೀತಿ ಫಾಲೋ ಆನ್ ಪಡೆದ ನಂತರವೂ ನ್ಯೂಜಿಲೆಂಡ್ ಈ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದ್ದು. ಇದು ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ಕನೆಯ ದೃಷ್ಟಾಂತ ಆಗಿತ್ತು.
ಅದರಲ್ಲಿ ಒಂದು ದೃಷ್ಟಾಂತ ಭಾರತಕ್ಕೆ ಸಂಬಂಧಪಟ್ಟದ್ದು ಅನ್ನುವಾಗ ನಾವು ನಿಜವಾಗಿ ರೋಮಾಂಚಕತೆಯ ಪರಾಕಾಷ್ಠೆ ತಲುಪುತ್ತೇವೆ. ಅದರಲ್ಲೂ ಎದುರಾಳಿಯು ಆಗಿನ ಟೆಸ್ಟ್ ರ್ಯಾಂಕಿಂಗ್ ನಂಬರ್ ಒನ್ ಟೀಮ್ ಆಸ್ಟ್ರೇಲಿಯ ಅಂದರೆ ಭಾರತದ ಗೆಲುವಿನ ತೂಕ ಇನ್ನೂ ಹೆಚ್ಚುತ್ತದೆ.
ಓವರ್ ಟು ಈಡನ್ ಗಾರ್ಡನ್ಸ್
2001ರ ಮಾರ್ಚ್ 11-15.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣ.
ಎದುರಾಳಿ ತಂಡಗಳು ಆಸ್ಟ್ರೇಲಿಯ ಮತ್ತು ಭಾರತ.
ವಿಶೇಷವಾಗಿ ಉಲ್ಲೇಖ ಮಾಡಬೇಕಾದರೆ ಆಸ್ಟ್ರೇಲಿಯ ಸ್ಟೀವ್ ವಾ ನಾಯಕತ್ವದಲ್ಲಿ ಆಗ ವಿಶ್ವದ ನಂಬರ್ ಒನ್ ಕ್ರಿಕೆಟ್ ತಂಡ ಆಗಿತ್ತು. ಅವರು ಆಗಲೇ 16 ಟೆಸ್ಟ್ ಪಂದ್ಯಗಳನ್ನು ಸತತವಾಗಿ ಗೆದ್ದು ವಿಶ್ವದಾಖಲೆ ಮಾಡಿಯಾಗಿತ್ತು. ಕೊಲ್ಕತ್ತ ಪಂದ್ಯವನ್ನು ಗೆದ್ದರೆ ಅದು ಅವರ ಸತತ 17ನೇ ಟೆಸ್ಟ್ ಗೆಲುವು ಆಗುತ್ತಿತ್ತು.
ಇನ್ನು ಭಾರತದ್ದು ಸೌರವ್ ಗಂಗೂಲಿ ನಾಯಕತ್ವದಲ್ಲಿ ನಿಧಾನಕ್ಕೆ ಅರಳುತ್ತಿದ್ದ ಕ್ರಿಕೆಟ್ ತಂಡ ಆಗಿತ್ತು. ಸಚಿನ್, ದ್ರಾವಿಡ್, ಲಕ್ಷ್ಮಣ್, ಗಂಗೂಲಿ ತಂಡದ ಬಲಿಷ್ಠ ಆಟಗಾರರು. ಆದರೆ ಸ್ಥಿರವಾದ ಪ್ರದರ್ಶನದಲ್ಲಿ ಭಾರತವು ತುಂಬ ಹಿಂದೆ ಇತ್ತು.
ಟಾಸ್ ಗೆದ್ದು ಆಸೀಸ್ ಬ್ಯಾಟಿಂಗ್ ಆಯ್ಕೆ ಮಾಡಿತ್ತು
ಮೊದಲು ಬ್ಯಾಟಿಂಗ್ ಆರಿಸಿಕೊಂಡಿದ್ದ ಆಸೀಸ್ ನಾಯಕ ಸ್ಟೀವ್ ವಾ ಅವರ ಶತಕ ಮತ್ತು ಮಾಥ್ಯೂ ಹೇಡನ್ ಅವರ 97 ರನ್ ಬೆಂಬಲದಿಂದ ಒಟ್ಟು 445 ರನ್ ಗಳಿಸಿತ್ತು. ಸ್ಪಿನ್ನರ್ ಹರ್‌ಭಜನ್ ಸಿಂಗ್ ಅವರು ಆರು ವಿಕೆಟ್ ಪಡೆದರು. ನಂತರ ಬ್ಯಾಟಿಂಗ್ ಮಾಡಲು ಇಳಿದ ಭಾರತೀಯ ಕ್ರಿಕೆಟ್ ತಂಡವು ಇಸ್ಪೀಟಿನ ಎಲೆಗಳ ಹಾಗೆ ಉದುರುತ್ತ ಹೋಗಿ 171ಕ್ಕೆ ಆಲೌಟ್ ಆಯಿತು. ಸಹಜವಾಗಿ ಭಾರತ ತಂಡ ಫಾಲೋ ಆನ್ ಪಡೆಯಿತು. ಮೊದಲ ಇನ್ನಿಂಗ್ಸನ 274 ರನ್ ದೊಡ್ಡ ಹಿನ್ನಡೆಯನ್ನು ಭಾರತ ದಾಟಬೇಕಾಗಿತ್ತು.
ಮೂರನೇ ದಿನದ ಅಂತ್ಯಕ್ಕೆ ಭಾರತದ ಸೋಲು ಖಚಿತವಾಗಿತ್ತು
ಇನ್ನಿಂಗ್ಸ್ ಕೊರತೆಯಿಂದ ದ್ವಿತೀಯ ಇನ್ನಿಂಗ್ಸ್ ಆರಂಭ ಮಾಡಿದ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಚೇತರಿಕೆ ಕಾಣಲಿಲ್ಲ. ಆರಂಭಿಕ ದಾಂಡಿಗರು, ಸಚಿನ್, ಗಂಗೂಲಿ ಹೀಗೆ ನಾಲ್ಕು ಪ್ರಮುಖ ವಿಕೆಟಗಳ ಪತನ ಆದಾಗ ಭಾರತ ಮಾಡಿದ್ದ ಒಟ್ಟು ಸ್ಕೋರ್ 232/4.
ಮೊದಲ ಇನ್ನಿಂಗ್ಸನ ಕೊರತೆಯನ್ನು ನೀಗಿಸಲು ಇನ್ನೂ 42 ರನ್ ಉಳಿದು ಹೋಗಿತ್ತು.
ಆಗ ಐದನೇ ವಿಕೇಟಿಗೆ ಜೊತೆ ಆದವರು ಸ್ಟೈಲಿಶ್ ಆಟಗಾರ ವಿ ವಿ ಎಸ್ ಲಕ್ಷ್ಮಣ್ ಮತ್ತು ಭಾರತೀಯ ಕ್ರಿಕೆಟಿನ ಗೋಡೆ ಎಂದೇ ಕೀರ್ತಿಯನ್ನು ಪಡೆದ ರಾಹುಲ್ ದ್ರಾವಿಡ್. ಮುಂದೆ ನಡೆದದ್ದು ಎಲ್ಲವೂ ಇತಿಹಾಸ!
ಮೂರನೇ ದಿನದ ಅಂತ್ಯಕ್ಕೆ ಲಕ್ಷ್ಮಣ್ ಶತಕ ಪೂರ್ತಿ ಮಾಡಿದ್ದರು. (ಅಜೇಯ 109). ದ್ರಾವಿಡ್ ತಾಳ್ಮೆಯ ಪರ್ವತವೇ ಆಗಿ ಕ್ರೀಸಲ್ಲಿ ಇದ್ದರು (ಅಜೇಯ 7).
ನಾಲ್ಕನೆಯ ದಿನ ಒಂದೇ ಒಂದು ವಿಕೆಟ್ ಪತನ ಆಗಲೇ ಇಲ್ಲ
ಈಡನ್ ಗಾರ್ಡನ್ಸನಲ್ಲಿ ನಾಲ್ಕನೇ ದಿನ ಅವರಿಬ್ಬರ ಜತೆಯಾಟವನ್ನು ಮುರಿಯಲು ಆಸೀಸ್ ಎಲ್ಲ ಪ್ರಯತ್ನ ಮಾಡಿತು. ಬೆವರು ಹರಿಸಿ ಜಪ್ಪಯ್ಯ ಅಂದರೂ ವಿಕೆಟ್ ಕೀಳಲು ಆಗಲೇ ಇಲ್ಲ. ಆಸೀಸ್ ಒಂಬತ್ತು ಬೌಲರ್ಸ್ ಪ್ರಯೋಗ ಮಾಡಿದರೂ ಫಲಿತಾಂಶ ಮಾತ್ರ ಸೊನ್ನೆ. ಗ್ಲೆನ್ ಮ್ಯಾಕಗ್ರಾಥ್, ಶೇನ್ ವಾರ್ನ್, ಗಿಲ್ಲೆಪ್ಸಿ, ಕ್ಯಾಸ್ಪರೋವಿಚ್ ಮೊದಲಾದ ವಿಶ್ವಮಟ್ಟದ ಬೌಲರ್ಸ್ ಎಷ್ಟೇ ಪ್ರಯತ್ನಪಟ್ಟರೂ ಅವರಿಬ್ಬರನ್ನು 608 ರವರೆಗೂ ಪ್ರತ್ಯೇಕ ಮಾಡಲು ಆಗಲಿಲ್ಲ. ಅಂದರೆ ಲಕ್ಷ್ಮಣ್ ಮತ್ತು ದ್ರಾವಿಡ್ ಸೇರಿಕೊಂಡು 376 ರನಗಳ ವಿಶ್ವದಾಖಲೆಯ ಜೊತೆಯಾಟವನ್ನು ಅಂದು ಪೂರ್ತಿ ಮಾಡಿದ್ದರು.
ಲಕ್ಷ್ಮಣ್ ಮತ್ತು ದ್ರಾವಿಡ್ ಮೈಯಲ್ಲಿ ಅಂದು ಆವೇಶ ಬಂದಿತ್ತು
ಲಕ್ಷ್ಮಣ್ ಅವರ ಕೊಡುಗೆ 452 ಎಸೆತಗಳಲ್ಲಿ 281 ರನ್, ಆದರೆ ದ್ರಾವಿಡ್ ಅವರ ಕೊಡುಗೆ 353 ಎಸೆತಗಳಲ್ಲಿ 180 ರನ್. ಇವರಿಬ್ಬರ 376 ರನ್ ಜೊತೆಯಾಟದಿಂದ ಭಾರತವು ತನ್ನ ಫಾಲೋ ಆನ್ ಇನ್ನಿಂಗ್ಸನ್ನು 657/7ರವರೆಗೆ ವಿಸ್ತರಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ಆಸೀಸ್ ಎರಡನೇ ಇನ್ನಿಂಗ್ಸ್‌ನಲ್ಲಿ 212 ರನ್ನಿಗೆ ಆಲೌಟ್ ಆಗಿ 171 ರನ್ ಅಂತರದಲ್ಲಿ ಸೋತಿತು.
ಹರಭಜನ್ ಸಿಂಗ್ ಎರಡೂ ಇನ್ನಿಂಗ್ಸಲ್ಲಿ ಒಟ್ಟು 13 ವಿಕೆಟ್ ಪಡೆದರು. ಸಚಿನ್ ತೆಂಡೂಲ್ಕರ್ ಎರಡನೇ ಇನಿಂಗ್ಸ್‌ನ ಮೂರು ಅಮೂಲ್ಯ ವಿಕೆಟ್ ಪಡೆದರು.
ಆ ಟೆಸ್ಟ್ ಪಂದ್ಯವನ್ನು ಭಾರತವು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಲಕ್ಷ್ಮಣ್ ಮತ್ತು ದ್ರಾವಿಡ್ ಅವರ ಆ ಸ್ಫೂರ್ತಿದಾಯಕ ಇನ್ನಿಂಗ್ಸ್‌ನ ಮೂಲಕ ಭಾರತವನ್ನು ಗೆಲ್ಲಿಸಿದ್ದು ನಿಜಕ್ಕೂ ಸ್ಮರಣೀಯವಾದ ಸಾಧನೆ. ಆಸೀಸ್ ತಂಡದ ಸತತ ಗೆಲುವಿನ ನಾಗಾಲೋಟಕ್ಕೆ ಪೂರ್ಣ ವಿರಾಮ ಹಾಕಿದ ಸಾಧನೆಯನ್ನು ಕೂಡ ಭಾರತ ಅಂದು ಮಾಡಿತ್ತು. 2001ರ ಆ ಕೋಲ್ಕತ್ತ ಟೆಸ್ಟ್ ಪಂದ್ಯವನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ.
– ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.