ಪ್ರಧಾನಿ ಹುದ್ದೆಯೇ ಅರಸಿ ಬಂದರೂ ಬೇಡ ಎಂದವರು

ಹುದ್ದೆ, ಪದವಿ, ಪ್ರಶಸ್ತಿಗಿಂತಲೂ ವ್ಯಕ್ತಿತ್ವ ದೊಡ್ಡದು ಎಂದು ಸಾಧಿಸಿ ತೋರಿಸಿದವರು

ಕ್ರಿಕೆಟ್ ಲೆಜೆಂಡ್ ಆಟಗಾರ ರಾಹುಲ್ ದ್ರಾವಿಡ್ ಅವರಿಗೆ ಎರಡು ವರ್ಷಗಳ ಹಿಂದೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ಆದರೆ ಎಲ್ಲರೂ ಆಶ್ಚರ್ಯ ಪಡುವಂತೆ ರಾಹುಲ್ ದ್ರಾವಿಡ್ ಈ ಗೌರವವನ್ನು ನಿರಾಕರಣೆ ಮಾಡಿದರು. ಅದಕ್ಕೆ ಅವರು ಕೊಟ್ಟ ಕಾರಣ ಕೂಡ ಸರಿಯಾಗಿಯೇ ಇತ್ತು.

ನನ್ನ ಹೆಂಡತಿ ಡಾಕ್ಟರ್. ಆ ಉನ್ನತ ಪದವಿ ಪಡೆಯಲು ಅವರು ವರ್ಷಾನುಗಟ್ಟಲೆ ಹಗಲು ರಾತ್ರಿ ಅಭ್ಯಾಸವನ್ನು ಮಾಡಿದ್ದಾರೆ. ನನ್ನ ಅಮ್ಮ ಓರ್ವ ಕಲಾ ಶಿಕ್ಷಕಿ. ಅವರು ಡಾಕ್ಟರೇಟ್ ಪಡೆಯಲು 50 ವರ್ಷಗಳ ಸಾಧನೆ ಮಾಡಿದ್ದಾರೆ. ನಾನು ಓರ್ವ ಕ್ರಿಕೆಟರ್. ನನ್ನ ರಾಷ್ಟ್ರಕ್ಕಾಗಿ ಒಂದಷ್ಟು ಹೊತ್ತು ಕ್ರಿಕೆಟ್ ಆಟವನ್ನು ಆಡಿದ್ದೇನೆ. ಅದಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಕೂಡ ಪಡೆದಿದ್ದೇನೆ. ಕ್ರಿಕೆಟಲ್ಲಿ ಅಂತಹ ದೊಡ್ಡದಾದ ಅಧ್ಯಯನ ನಾನೇನೂ ಮಾಡಿಲ್ಲ. ಆದ್ದರಿಂದ ನನಗೆ ಈ ಗೌರವ ಡಾಕ್ಟರೇಟ್ ಬೇಡ. ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಮಾತು ಮುಗಿಸಿದರು.































 
 

ವಿಜ್ಞಾನಿ ಐನಸ್ಟೀನ್ ಇಸ್ರೇಲ್ ಪ್ರಧಾನಿ ಹುದ್ದೆಗೆ ನೋ ಅಂದಿದ್ದರು

ಜಗತ್ತಿನ ಮಹಾವಿಜ್ಞಾನಿ ಆಗಿದ್ದ ಆಲ್ಬರ್ಟ್ ಐನಸ್ಟೀನ್ 1951ರಲ್ಲಿ ಇಸ್ರೇಲ್ ದೇಶದ ಪ್ರಧಾನಮಂತ್ರಿ ಆಗುವ ಆಮಂತ್ರಣವನ್ನು ಪಡೆದಿದ್ದರು. ನಾನೊಬ್ಬ ಸಾಮಾನ್ಯ ಭೌತ ವಿಜ್ಞಾನಿ. ನನಗೆ ಆಡಳಿತ ಏನೇನೂ ಗೊತ್ತಿಲ್ಲ ಎಂದು ಹೇಳಿ ಅವರು ಇಸ್ರೇಲ್ ಪ್ರಧಾನಿಯ ಹುದ್ದೆಯನ್ನು ನಯವಾಗಿ ನಿರಾಕರಣೆ ಮಾಡಿದ್ದರು.

ನೊಬೆಲ್ ನಗದು ಬಹುಮಾನ ಬೇಡ ಅಂದವರು

ಅದೇ ರೀತಿ ಪೇರಲ್ಮನ್ ಎಂಬ ಮೇಧಾವಿ ಗಣಿತಜ್ಞ ತನಗೆ ನೊಬೆಲ್ ಪ್ರಶಸ್ತಿ ದೊರೆತಾಗ ಅದರ ಜೊತೆಗೆ ದೊರೆತ ಅಪಾರ ಮೊತ್ತದ ಹಣವನ್ನು ನಿರಾಕರಣೆ ಮಾಡಿದ್ದರು. ನನಗೆ ದುಡ್ಡಿನ ಆವಶ್ಯಕತೆಯೇ ಇಲ್ಲ ಅನ್ನುವುದು ಅವರ ಅಭಿಪ್ರಾಯ ಆಗಿತ್ತು.

ಬಹುಮತ ಇದ್ದರೂ ಪಟೇಲರು ಪ್ರಧಾನಿ ಆಗಲಿಲ್ಲ

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಸರ್ದಾರ್ ಪಟೇಲರು ಭಾರತದ ಮೊದಲ ಪ್ರಧಾನಿ ಆಗುವ ಎಲ್ಲ ಅವಕಾಶ ಪಡೆದಿದ್ದರು. ಕಾಂಗ್ರೆಸ್ ಕಾರ್ಯಕಾರಿಣಿಯು ಅವರಿಗೆ ಭಾರಿ ಬಹುಮತವನ್ನು ಕೊಟ್ಟಿತ್ತು. ಆದರೆ ಗಾಂಧೀಜಿ, ನೆಹರೂ ಪ್ರಧಾನಿ ಆಗಲಿ ಎಂದರು. ಅದಕ್ಕೆ ಅವರದ್ದೇ ಆದ ಕಾರಣಗಳು ಇದ್ದವು. ಅದ್ಯಾವುದನ್ನೂ ಪಟೇಲರು ಪ್ರಶ್ನೆ ಮಾಡಲು ಹೋಗಲಿಲ್ಲ. ಗಾಂಧೀಜಿ ಮಾತಿಗೆ ಒಪ್ಪಿಕೊಂಡು ಪ್ರಧಾನಿಯ ಹುದ್ದೆಯ ಗೌರವವನ್ನು ನೆಹರೂ ಅವರಿಗೆ ಕೊಟ್ಟು ತೆರೆಯ ಮರೆಯಲ್ಲಿ ನಿಂತರು.

ಕಲಾಂ ಅವರಿಗೆ ಭಾರತ ರತ್ನ ಪ್ರಶಸ್ತಿ ಖುಷಿ ತರಲಿಲ್ಲ

ಅಬ್ದುಲ್ ಕಲಾಂ ಅವರಿಗೆ ಭಾರತರತ್ನ ಪ್ರಶಸ್ತಿ ಬಂದಾಗ ಅವರು ಪ್ರಶಸ್ತಿ ಸ್ವೀಕಾರ ಮಾಡಿ ಹೇಳಿದ ಮಾತು ನನಗೆ ವಿಸ್ಮಯ ಮೂಡಿಸಿದೆ- ನನಗೆ ಏನೂ ಸಂತೋಷ ಆಗ್ತಾ ಇಲ್ಲ. ಏಕೆಂದರೆ ನನ್ನ ಗುರುಗಳಾದ ವಿಕ್ರಮ ಸಾರಾಭಾಯಿ ಅವರಿಗೆ ನನಗಿಂತ ಮೊದಲು ಭಾರತ ರತ್ನ ಪ್ರಶಸ್ತಿ ದೊರೆಯಬೇಕಿತ್ತು. ಆಗ ನನಗೆ ನಿಜವಾಗಿಯೂ ಸಂತೋಷ ಆಗುತ್ತಿತ್ತು.

ಉಡುಪಿಯ ಶಾನುಭೋಗರು ಹಾಗೇ ಮಾಡಿದರು

ಬಹಳ ವರ್ಷಗಳ ಹಿಂದೆ ಬಳಕೆದಾರರ ವೇದಿಕೆಯ ಸಂಚಾಲಕರಾದ ಉಡುಪಿಯ ಡಾ. ರವೀಂದ್ರನಾಥ್ ಶಾನುಭೋಗ ಅವರಿಗೆ ಅತ್ಯಂತ ಪ್ರತಿಷ್ಠಿತ ಶಿವರಾಮ ಕಾರಂತರ ಹುಟ್ಟೂರ ಪ್ರಶಸ್ತಿಯನ್ನು ನೀಡಬೇಕು ಎಂದು ಸಮಿತಿಯವರು ತೀರ್ಮಾನಿಸಿ ಆಗಿತ್ತು. ಅವರನ್ನು ಒಪ್ಪಿಸಲು ಸಮಿತಿಯ ಪದಾಧಿಕಾರಿಗಳ ಜೊತೆ ನಾನು ಅವರ ಆಫೀಸಿಗೆ ಹೋಗಿದ್ದೆ. ಆ ಪ್ರಶಸ್ತಿಯು ಅತ್ಯಂತ ಪ್ರತಿಷ್ಠಿತ ಆಗಿತ್ತು ಮತ್ತು ಆ ಪ್ರಶಸ್ತಿಗೆ ಅವರು ಅತ್ಯಂತ ಅರ್ಹರಾಗಿದ್ದರು. ಆದರೆ ಶಾನುಭೋಗರು ಆ ಗೌರವ ಪ್ರಶಸ್ತಿಯನ್ನು ಬಹಳ ಸ್ಪಷ್ಟವಾದ ಮಾತಲ್ಲಿ ನಿರಾಕರಣೆ ಮಾಡಿದ್ದರು. ಅದಕ್ಕೆ ಅವರು ನೀಡಿದ ಕಾರಣವೂ ಅದ್ಭುತ ಆಗಿತ್ತು.

ನಾನು ಯಾವುದೇ ಖಾಸಗಿ ರಂಗದ ಮತ್ತು ಸರಕಾರಿ ವಲಯದ ಪ್ರಶಸ್ತಿ ಪಡೆಯುವುದಿಲ್ಲ ಎಂದು ಸಂಕಲ್ಪ ಮಾಡಿದ್ದೇನೆ. ನಾನು ಯಾರದಾದರೂ ಹಂಗಲ್ಲಿ ಬಿದ್ದರೆ ನನ್ನ ಹೋರಾಟಕ್ಕೆ ಮುಂದೆ ತೊಂದರೆ ಆಗಬಹುದು.

ಮುಂದೆ ಇನ್ನೊಂದು ಶ್ರೇಷ್ಠವಾದ ಖಾಸಗಿ ರಂಗದ ದೊಡ್ಡ ಪ್ರಶಸ್ತಿ ಅವರ ಕಾಲ ಬುಡಕ್ಕೆ ಬಂದಾಗ, ಸ್ವೀಕಾರ ಮಾಡಲು ಒತ್ತಾಯ ಹೆಚ್ಚಿದಾಗ ಅವರು ಮತ್ತೆ ಅದನ್ನು ನಿರಾಕರಿಸಿ ತನ್ನ ಬಳಕೆದಾರರ ಹೋರಾಟದ ದೊಡ್ಡ ಫಲಾನುಭವಿಗಳಾದ ಮತ್ತು ದಲಿತ ಮಹಿಳೆಯರಾದ ಅಕ್ಕು ಮತ್ತು ಲೀಲಾ ಅವರಿಗೆ ಆ ಪ್ರಶಸ್ತಿಯನ್ನು ಕೊಡಿಸಿ ತಾವು ಕೆಳಗೆ ಕೂತು ಸಂಭ್ರಮಪಟ್ಟಿದ್ದರು.

ಡಾ.ರಾಜಕುಮಾರ್ ಅಂತಾರಾಷ್ಟ್ರೀಯ ಮನ್ನಣೆ ನಿರಾಕರಿಸಿದ್ದರು

1980ರ ದಶಕದಲ್ಲಿ ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ತನ್ನ ಕಾರ್ಪೊರೇಟ್ ಕಂಪನಿಯ ಬ್ಯಾನರಿನಲ್ಲಿ ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ಧೆ ಏರ್ಪಡಿಸಿದ್ದರು. ಆದರೆ ಕರ್ನಾಟಕದ ರೈತರು ಬರಗಾಲ ಇದೆ, ಈ ಹೊತ್ತಿನಲ್ಲಿ ಆಡಂಬರದ ಸ್ಪರ್ಧೆ ಬೇಡ ಎಂದು ಪ್ರತಿಭಟನೆಗೆ ಇಳಿದರು. ಆಗ ಬೇರೆ ಉಪಾಯ ಇಲ್ಲದೆ ಅಮಿತಾಬ್ ರಾಜಕುಮಾರ್ ಮನೆಗೆ ಬಂದು ನೀವೇ ಉದ್ಘಾಟನೆಗೆ ಬರಬೇಕು ಸರ್ ಎಂದರು. ಈ ಕಾರ್ಯಕ್ರಮ ಜಗತ್ತಿನ 130 ರಾಷ್ಟ್ರಗಳಲ್ಲಿ ಟಿವಿ ಪ್ರಸಾರ ಆಗುತ್ತದೆ ಎಂದು ಆಮಿಷ ಒಡ್ಡಿದರು. ರಾಜಕುಮಾರ್ ಮಕ್ಕಳು ಕೂಡ ನೀವು ಹೋಗಿ ಅಪ್ಪ ಎಂದಿದ್ದರು. ಆದರೆ ರಾಜಕುಮಾರ್ ಈ ಆಮಂತ್ರಣ ನಿರಾಕರಿಸಿದರು. ಅದಕ್ಕೆ ಅವರು ಕೊಟ್ಟ ಕಾರಣ ಅದ್ಭುತ ಇತ್ತು – ಕರ್ನಾಟಕದ ರೈತರು ಬವಣೆ ಪಡುತ್ತಿರುವಾಗ ನನಗೆ ಯಾವ ಗೌರವ ಕೂಡ ಬೇಡ.

ಅವರೆಲ್ಲರೂ ಸುಮ್ಮನೆ ಲೆಜೆಂಡ್ ಆದದ್ದಲ್ಲ

ಹೀಗೆ ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ನಿರಾಕರಣೆ ಮಾಡಿ ದೊಡ್ಡವರಾದ ಇನ್ನೂ ಅನೇಕ ಶ್ರೇಷ್ಠ ಮಹನೀಯರು ಇದ್ದಾರೆ. ಆ ಪ್ರಶಸ್ತಿಗಿಂತಲೂ ಅವರ ವ್ಯಕ್ತಿತ್ವ ದೊಡ್ಡದು ಅನ್ನುವುದು ನನ್ನ ಅಭಿಪ್ರಾಯ. ಸಣ್ಣ ಸಣ್ಣ ಪ್ರಶಸ್ತಿಗಳಿಗೂ ಲಾಬಿ ಮಾಡುವ, ಶಿಫಾರಸ್ಸು ಮಾಡಿಸುವ ಕೆಲವು ಮಂದಿಯನ್ನು ನೋಡಿದಾಗ ಈ ಮೇಲಿನವರು ನಿಜವಾಗಿಯೂ ಗ್ರೇಟ್ ಎಂದು ನನಗೆ ಅನ್ನಿಸಿದೆ. ಅವರಿಗೆ ನಮ್ಮ ಅಭಿನಂದನೆಗಳು ಮೀಸಲಾಗಿರಲಿ.

ರಾಜೇಂದ್ರ ಭಟ್ ಕೆ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top