ಹೊಸವರ್ಷಾಚರಣೆ ಸಂಭ್ರಮದಲ್ಲಿದ್ದ ಜನರ ಹತ್ಯಾಕಾಂಡ
ವಾಷಿಂಗ್ಟನ್ : ಹೊಸ ವರ್ಷದ ದಿನದಂದು ದಕ್ಷಿಣ ಅಮೆರಿಕದ ನ್ಯೂ ಓರ್ಲಿಯನ್ಸ್ ನಗರದಲ್ಲಿ ಜನಸಂದಣಿ ಮೇಲೆ ಪಿಕಪ್ ಟ್ರಕ್ ನುಗ್ಗಿಸಿ ಕನಿಷ್ಠ 15 ಮಂದಿಯನ್ನು ಸಾಯಿಸಲಾಗಿದೆ. ಈ ಘಟನೆಯಲ್ಲಿ 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇತ್ತೀಚೆಗಷ್ಟೇ ಜರ್ಮನಿಯ ಕ್ರಿಸ್‌ಮಸ್ ಮಾರುಕಟ್ಟೆಯಲ್ಲಿ ಜನರ ಗುಂಪಿನ ಮೇಲೆ ಕಾರು ಹರಿದು ಇಬ್ಬರು ಮೃತಪಟ್ಟಿದ್ದ ಘಟನೆ ನಡೆದಿತ್ತು. ಇದೀಗ ಅದೇ ಮಾದರಿಯ ಘಟನೆ ಅಮೆರಿಕದಲ್ಲೂ ನಡೆದಿದೆ. ಅತಿ ವೇಗವಾಗಿ ಪಿಕಪ್ ಟ್ರಕ್ ಚಲಾಯಿಸಿಕೊಂಡು ಬಂದು ಜನಜಂಗುಳಿಯ ಮೇಲೆ ನುಗ್ಗಿಸಲಾಗಿದೆ. ಬಳಿಕ ಚೆಲ್ಲಾಪಿಲ್ಲಿಯಾಗಿ ಓಡುತ್ತಿದ್ದ ಜನರ ಮೇಲೆ ಅದರ ಚಾಲಕ ಗುಂಡು ಹಾರಿಸಿದ್ದಾನೆ.
ಸಾವು, ಗಾಯಾಳುಗಳ ನಿಖರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ. ಸ್ಥಳದಲ್ಲೇ 15 ಮಂದಿ ಸಾವನ್ನಪ್ಪಿದ್ದಾರೆ. ಅನೇಕ ಮಂದಿಯನ್ನು ಸ್ಥಳೀಯ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ, ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ದೃಶ್ಯಾವಳಿಗಳನ್ನು ಪ್ರತ್ಯಕ್ಷದರ್ಶಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದೊಂದು ಭಯೋತ್ಪಾದಕ ಹತ್ಯಾಕಾಂಡ ಕೃತ್ಯ ಎಂದು ಕರೆದಿದ್ದಾರೆ. ಟ್ರಕ್ ಚಾಲಕ ಹತ್ಯಾಕಾಂಡ ನಡೆಸಲೆಂದೇ ಉದ್ದೇಶಪೂರ್ಕವಾಗಿ ದಾಳಿ ಮಾಡಿದ್ದಾನೆ. ಮಾರಣಾಂತಿಕ ಅಪಘಾತ ನಡೆದ ಸ್ಥಳದಲ್ಲಿ ಅನುಮಾನಾಸ್ಪದ ಸ್ಫೋಟಕ ಸಾಧನಗಳು ಕಂಡುಬಂದಿವೆ ಎಂದು ಎಫ್‌ಬಿಐ ಹೇಳಿದೆ.
ದಾಳಿಕೋರನನ್ನು ಅಮೆರಿಕದ ನಿವೃತ್ತ ಸೈನಿಕ ಶಮ್ಶುದ್ದೀನ್ ಜಬ್ಬಾರ್ ಎಂದು ಗುರುತಿಸಲಾಗಿದೆ. ಈತ ಈ ಹಿಂದೆ ಅಫಘಾನಿಸ್ಥಾನದ ಯುದ್ಧದಲ್ಲಿ ಭಾಗವಹಿಸಿದ್ದ. ಅವನ ಟ್ರಕ್‌ನಲ್ಲಿ ಐಸಿಸ್ ಭಯೋತ್ಪಾದಕ ಸಂಘಟನೆಯ ಧ್ವಜ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಚ್ಚೇದಿತನಾಗಿರುವ ಜಬ್ಬಾರ್ ಮೊದಲು ತನ್ನ ಹೆಂಡತಿ ಮಕ್ಕಳನ್ನು ಕೊಲ್ಲುವ ಯೋಜನೆ ಹಾಕಿಕೊಂಡಿದ್ದ. ಸೈನ್ಯದಿಂದ ನಿವೃತ್ತನಾದ ಬಳಿಕ ತಾನು ಐಸಿಸ್ ಸೇರಿದ್ದೇನೆ ಎಂದು ಅವನು ಹೇಳಿಕೊಂಡಿರುವ ವೀಡಿಯೊ ಸಿಕ್ಕಿದೆ.