ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮಗಳ ಸಾರಾಸಗಟು ಉಲ್ಲಂಘನೆ
ಬೆಂಗಳೂರು : ರಾಜ್ಯದಲ್ಲಿ 1,316 ಖಾಸಗಿ ಶಾಲೆಗಳು ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಪತ್ತೆಯಾಗಿದೆ. ಅನಧಿಕೃತ ಖಾಸಗಿ ಶಾಲೆಗಳನ್ನು ಗುರುತಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಮೀಕ್ಷೆಗೆ ಆದೇಶಿಸಿತ್ತು. ಈ ಸಮೀಕ್ಷೆಯಲ್ಲಿ ಇಷ್ಟು ಶಾಲೆಗಳು ಅನಧಿಕೃತ ಎಂದು ಪತ್ತೆಯಾಗಿದೆ.
ಶಿಕ್ಷಣ ಕಾಯ್ದೆ ನಿಯಮ ಉಲ್ಲಂಘನೆಗಳಲ್ಲಿ ನೋಂದಣಿ ಇಲ್ಲದೆ ಶಾಲೆಗಳನ್ನು ನಡೆಸುವುದು, ಅನಧಿಕೃತ ಪಠ್ಯಕ್ರಮವನ್ನು ಬೋಧಿಸುವುದು, ಅನುಮೋದನೆಯಿಲ್ಲದೆ ಹೆಚ್ಚುವರಿ ವಿಭಾಗಗಳನ್ನು ಸೇರಿಸಿರುವುದು ಸೇರಿದೆ.
ಬೆಂಗಳೂರಿನ ಖಾಸಗಿ ಶಾಲೆಯೊಂದು ಸಿಬಿಎಸ್‌ಇ ಬೋರ್ಡ್‌ಗೆ ಸಂಬಂಧಿಸಿವೆ ಎಂದು ಸುಳ್ಳು ಹೇಳಿ ಪೋಷಕರ ಬಳಿ ಲಕ್ಷಾಂತರ ರೂಪಾಯಿ ಶುಲ್ಕ ವಸೂಲಿ ಮಾಡಿ ರಾಜ್ಯ ಮಂಡಳಿಯ ಪಠ್ಯಗಳನ್ನು ಬೋಧಿಸುತ್ತಿರುವುದು ಬೆಳಕಿಗೆ ಬಂದಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿ ವಿದ್ಯಾರ್ಥಿಗಳ ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವಿವಾದದ ಹಿನ್ನೆಲೆಯಲ್ಲಿ ಬ್ಲಾಕ್ ಮಟ್ಟದ ಶಿಕ್ಷಣ ಅಧಿಕಾರಿಗಳು ರಾಜ್ಯಾದ್ಯಂತ ಸಮೀಕ್ಷೆ ನಡೆಸಿದ್ದಾರೆ.
ಕರ್ನಾಟಕದಲ್ಲಿ ನೋಂದಣಿ ಇಲ್ಲದೆ ಒಟ್ಟು 63 ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಅಕ್ರಮವಾಗಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿರುವ ವರದಿಯಲ್ಲಿ ಬಹಿರಂಗವಾಗಿದೆ. ಒಟ್ಟು 74 ಶಾಲೆಗಳು ಅನುಮೋದನೆಯಿಲ್ಲದೆ ವಿದ್ಯಾರ್ಥಿಗಳನ್ನು ಪ್ರೌಢಶಾಲೆಗೆ ಸೇರಿಸಿಕೊಂಡಿವೆ. 95 ಶಾಲೆಗಳು ವಿದ್ಯಾರ್ಥಿಗಳಿಗೆ ಕಾನೂನುಬಾಹಿರವಾಗಿ ಸಿಬಿಎಸ್‌ಇ ಅಥವಾ ಐಸಿಎಸ್‌ಇ ಪಠ್ಯಕ್ರಮವನ್ನು ಕಲಿಸುತ್ತಿದ್ದು, ಈ ಶಾಲೆಗಳಿಗೆ ರಾಜ್ಯ ಮಂಡಳಿಯ ಪಠ್ಯಕ್ರಮವನ್ನು ಬೋಧಿಸಲು ಮಾತ್ರ ಅನುಮೋದನೆ ನೀಡಲಾಗಿದೆ.
ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮವನ್ನು ಕಲಿಸುವ ಮೂಲಕ ಬೋಧನಾ ಮಾಧ್ಯಮದ ನಿಯಮವನ್ನು ಉಲ್ಲಂಘಿಸಿರುವ 294 ಶಾಲೆಗಳನ್ನು ಗುರುತಿಸಲಾಗಿದೆ. 620 ಶಾಲೆಗಳು ಅನುಮೋದನೆ ಇಲ್ಲದೆ ಹೆಚ್ಚು ವಿಭಾಗಗಳನ್ನು ಅಕ್ರಮವಾಗಿ ಸೇರಿಸಿಕೊಂಡಿವೆ.
ಅನೇಕ ಖಾಸಗಿ ಶಾಲೆಗಳು ಒಂದು ವಿಭಾಗಕ್ಕೆ ಅನುಮತಿ ಕೋರಿದ್ದು, ಬಳಿಕ ರಾಜ್ಯ ಸರ್ಕಾರದ ಅನುಮೋದನೆಯಿಲ್ಲದೆ ಎರಡು ಅಥವಾ ಹೆಚ್ಚಿನ ವಿಭಾಗಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದು ವರದಿ ತಿಳಿಸಿದೆ. ಒಂದೇ ಕಟ್ಟಡದಲ್ಲಿ ಹಲವು ವಿಭಾಗಗಲೀರುವ 21 ಶಾಲೆಗಳನ್ನು ಗುರುತಿಸಲಾಗಿದೆ. ಶಿಕ್ಷಣಾಧಿಕಾರಿಗಳ ಅನುಮತಿಯಿಲ್ಲದೆ ಸ್ಥಳಾಂತರಗೊಂಡ 141 ಖಾಸಗಿ ಶಾಲೆಗಳನ್ನು ರಾಜ್ಯ ಸರ್ಕಾರ ಗುರುತಿಸಿದೆ.