ಭಾವೈಕ್ಯ, ಭಕ್ತಿಭಾವಕ್ಕೆ ಜೀವಕಳೆ ತುಂಬುವ ಗಣೇಶೋತ್ಸವ

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ

ಹಬ್ಬಗಳು ನಮ್ಮ ದೇಶದ ಸಂಸ್ಕೃತಿಯ ಅಸ್ಮಿತೆ. ಹಬ್ಬ ಎಂದರೆ ಪರ್ವ. ಪರ್ವ ಎಂದರೆ ನಮ್ಮ ಜೀವನದಲ್ಲಿ ಪ್ರಧಾನ ಪಾತ್ರ ವಹಿಸುವಂಥದ್ದು ಎಂದರ್ಥ. ತುಳುವಿನಲ್ಲಿ ಪರ್ಬ ಎನ್ನುತ್ತೇವೆ. ನಾವು ಆಚರಿಸುವ ಹಬ್ಬಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಲ್ಲ, ಅಲ್ಲಿ ಜೀವನ ಮೌಲ್ಯವಿರುತ್ತದೆ. ಅವು ವೈವಿಧ್ಯತೆ, ಸಮಗ್ರತೆ ಮತ್ತು ಏಕತೆಯ ಸಂಕೇತವಾಗಿಯೂ ಇರುತ್ತವೆ. ನಮ್ಮ ಕಲೆ, ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ, ಸಾಮಾಜಿಕ ಜೀವನ, ಪರಸ್ಪರ ಒಡನಾಟ, ದೈವ-ದೇವರ ಮೇಲಿನ ಭಕ್ತಿ ಎಲ್ಲದಕ್ಕೂ ಹೊಸ ಜೀವಕಳೆ ಬರುವುದೇ ಹಬ್ಬಗಳಿಂದ. ಇಂತಹ ಭಾವಸ್ಫುರಣಗೊಳಿಸುವ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು.

ವಕ್ರತುಂಡ ಮಹಾಕಾಯ, ಸುಮುಖ, ಉಮಾಪುತ್ರ, ಏಕದಂತ, ಸರ್ವೇಶ್ವರ, ಮಹಾಗಣಪತಿ, ಗಜಾನನ, ಲಂಬೋಧರ, ವಿನಾಯಕ, ವಿಘ್ನವಿನಾಶಕ ಹೀಗೆ ಕರೆದಷ್ಟೂ ಅಕ್ಷಯವಾಗುತ್ತಾ ಹೋಗುವ ಹೆಸರಿನೊಡೆಯ ನಮ್ಮ ಗಣಪ. ನಮ್ಮ ಜೀವನದಲ್ಲಿ ಬರುವ ಕಷ್ಟಕಾರ್ಪಣ್ಯಗಳನ್ನು ತೊಡೆವ ದೇವನೆಂಬ ನಂಬಿಕೆಯಿಂದ ಹಿಡಿದು ವಿಘ್ನಹರ್ತನ ಪ್ರತಿಯೊಂದು ಹೆಸರಿಗೂ ಒಂದು ದೈವಿಕವಾದ ಹಿನ್ನೆಲೆ, ಅರ್ಥ ಮತ್ತು ಪ್ರತೀಕವಿದೆ. ಚೌತಿ ಹಬ್ಬ ಎಂದರೆ ಎಲ್ಲೆಲೂ ಸಡಗರ, ಸಂಭ್ರಮ. ಅವರವರ ಶಕ್ತಾನುಸಾರ ಆಚರಿಸುವ ಈ ಹಬ್ಬಕ್ಕೆ ಸಾಂಸ್ಕೃತಿಕ, ಧಾರ್ಮಿಕ ಮಹತ್ವವೂ ಇದೆ. ಸಂಸ್ಕೃತ ಸುಭಾಷಿತವೊಂದರಲ್ಲಿ ʼಮೇರುಪರ್ವತವನ್ನೇ ಲೇಖನಿಯನ್ನಾಗಿ ಮಾಡಿಕೊಂಡು, ಸಮುದ್ರವನ್ನೇ ಮಸಿ ಕುಡಿಕೆಯನ್ನಾಗಿಸಿ, ಭೂಮಂಡಲವನ್ನೇ ಪುಸ್ತಕವನ್ನಾಗಿಸಿ ಅದರಲ್ಲಿ ಶ್ರೀ ಗಣೇಶನ ಮಹಿಮೆಗಳನ್ನು ಬರೆದರೂ ಇನ್ನೂ ಅನಂತವಾಗಿ ಉಳಿಯುವುದುʼ ಎಂದಿರುವುದು ಲಂಬೋಧರನ ಮೇಲಿನ ಭಕ್ತಿ ಹಾಗೂ ಆತನ ಶಕ್ತಿಯನ್ನು ನಿರೂಪಿಸುತ್ತದೆ.





























 
 

ಎಲ್ಲೆಲ್ಲೂ ಭಕ್ತಿಭಾವದ ಸಡಗರ

ಗಣೇಶ ಚತುರ್ಥಿಯ ಸಿದ್ಧತೆಗಳು ತಿಂಗಳುಗಟ್ಟಲೆ ನಡೆಯುತ್ತಿರುತ್ತದೆ. ಮನೆಯಲ್ಲಿ ಇಡುವ ಗಣಪ ಪುಟ್ಟದಾಗಿದ್ದರೆ ಸಾರ್ವಜನಿಕ ಗಣೇಶೋತ್ಸವದ ಗಣಪನ ಮೂರ್ತಿ ಕಲಾತ್ಮಕವಾಗಿದ್ದು ಬೃಹದಾಗಿರುತ್ತದೆ. ಗಣೇಶನ ವಿವಿಧ ಸ್ವರೂಪಗಳ ಭವ್ಯ ದಿವ್ಯ ಮೂರ್ತಿಗಳನ್ನು ನೋಡುವುದೇ ಒಂದು ಹಬ್ಬ. ಮೊದಲೆಲ್ಲಾ ಮಣ್ಣಿನಿಂದ ಮೂರ್ತಿಯನ್ನು ತಯಾರಿಸಲಾಗುತ್ತಿದ್ದರೆ ಈಗ ಪರಿಸರ ಸ್ನೇಹಿ ಗಣಪನಿಗೆ ಹೆಚ್ಚು ಪ್ರಾಶಸ್ತ್ಯ. ಕಲಾವಿದನ ಕೈಯಲ್ಲಿ ಗಣಪ ವಿವಿಧ ಭಂಗಿಗಳಲ್ಲಿ, ವಿವಿಧ ರೂಪಗಳಲ್ಲಿ ಗಣೇಶ ಚಂದ ಅರಳುವುದೇ. ಗಣೇಶನ ಹಬ್ಬದ ಮುಂಚಿನ ದಿನ ಗೌರಿಹಬ್ಬವನ್ನು ಅಷ್ಟೇ ಭಕ್ತಿಯಿಂದ ಆಚರಿಸಲಾಗುತ್ತದೆ. ಗಣೇಶ ಮಂಡಳಿಗಳಲ್ಲಿ ತಳಿರು ತೋರಣಗಳಿಂದ ಆಕರ್ಷಿತ ಪೆಂಡಾಲ್‌ಗಳು ಸ್ಪರ್ಧಾತ್ಮಕವಾಗಿ ಸಿದ್ಧಗೊಂಡಿವೆ.

ಹತ್ತು ದಿನಗಳ ಕಾಲ ಭಕ್ತಿ ಶ್ರದ್ಧೆಯಿಂದ ಪೂಜಿಸಿ, ಆರಾಧಿಸಿ ಹನ್ನೊಂದನೆಯ ದಿನದಂದು ವಿಸರ್ಜಿಸುವುದು ವಾಡಿಕೆ. ಕೆಲವು ಕಡೆ ಒಂದು ದಿನ, ಮೂರು, ಐದು, ಒಂಬತ್ತು ದಿನಗಳಲ್ಲಿ ವಿಸರ್ಜಿಸಲಾಗುತ್ತದೆ. ಕರಾವಳಿಯಲ್ಲಿ ಚೌತಿ ಎಂದೇ ಹೆಸರಾಗಿರುವ ಈ ಹಬ್ಬದಲ್ಲಿ ಮೂಷಿಕ ವಾಹನ ಕಬ್ಬು, ಕಡುಬು, ಪಂಚಕಜ್ಜಾಯಗಳಿಂದ ವಿಶೇಷವಾಗಿ ಪೂಜಿಸಲ್ಪಡುತ್ತಾನೆ. ಅವನಿಗೆ ಯಾವ ಆಡಂಬರವೂ ಬೇಕಿಲ್ಲ. ಒಂದಷ್ಟು ಭಕ್ತಿ, ಶ್ರದ್ಧೆಯಿಂದ ಪೂಜಿಸಿದರೆ ಬೆಟ್ಟದಂತಹ ಕಷ್ಟಗಳನ್ನೆಲ್ಲ ಹುಲ್ಲುಗರಿಕೆಯಷ್ಟು ಹಗುರವಾಗಿಸಬಲ್ಲ ಶಕ್ತಿ ಆತನಲ್ಲಿದೆ ಎನ್ನುವುದು ಭಕ್ತರ ನಂಬಿಕೆ.

???????????????????????????????????????????????????????

ಸಮಾನ ಸತ್ವ ತತ್ವ ಸಾರುವ ಉತ್ಸವ

ಗಣಪತಿ ದೇವರ ಮೂರ್ತಿಯ ಪ್ರತಿಷ್ಠಾಪನೆ, ಆರಾಧನೆ, ಮೆರವಣಿಗೆ ನಂತರ ವಿಸರ್ಜನೆ ಇವೆಲ್ಲವುಗಳಲ್ಲಿ ಆಕರ್ಷಣೆ ಹೆಚ್ಚಿರುತ್ತದೆ. ಇದೇ ಸಂದರ್ಭದಲ್ಲಿ ರೈತಾಪಿ ವರ್ಗದವರು ತಾವು ಕಷ್ಟಪಟ್ಟು ಬೆಳೆಸಿದ ಬೆಳೆ ಕೈಸೇರುವ ಸುಸಂದರ್ಭವೂ ಆಗಿರುತ್ತದೆ. ತುಳುನಾಡಿನಲ್ಲಿ ಹೆಚ್ಚಿನ ಕಡೆಗಳಲ್ಲಿ ಕದಿರು ಕಟ್ಟುವ ಕ್ರಮವೂ ಇರುತ್ತದೆ. ತೆನೆಯನ್ನು ಭಕ್ತಿಯಿಂದ ಮನೆ ತುಂಬಿಸಿಕೊಳ್ಳುತ್ತಾರೆ. ಇದು ಸಮೃದ್ಧಿಯ ಸಂಕೇತವೂ ಹೌದು. ಹೀಗೆ ಯಾವುದೇ ಹಬ್ಬ ಹರಿದಿನದ ಮಹತ್ವವನ್ನು ನಾವು ತಿಳಿದುಕೊಂಡು ಆಚರಿಸಬೇಕು. ನಮ್ಮ ಮಕ್ಕಳಿಗೂ ಅವುಗಳ ಬಗ್ಗೆ ಸರಿಯಾಗಿ ತಿಳಿಸಬೇಕು. ಹಬ್ಬ ಒಂದೇ ಆದರೂ ಆಚರಣೆಯಲ್ಲಿ ವೈವಿಧ್ಯತೆಯಿರುತ್ತದೆ. ಆಯಾಯ ಸಂಪ್ರದಾಯ, ಪದ್ಧತಿಗನುಗುಣವಾಗಿ ಗಣೇಶನನ್ನು ಪೂಜಿಸಲಾಗುತ್ತದೆ. ಆದರೆ ಸತ್ವ ಮತ್ತು ತತ್ವ ಒಂದೇ ಆಗಿರುತ್ತದೆ. ಎಲ್ಲರನ್ನೂ ಒಂದುಗೂಡಿಸುವ ಪ್ರೀತಿಯಿಂದ ಹಂಚಿ ತಿನ್ನುವ ಸ್ವರಮೇಳದಂತಿರುತ್ತವೆ ನಮ್ಮ ಹಬ್ಬಗಳು. ಈ ವೈಶಿಷ್ಟ್ಯವನ್ನು ನಾವು ನಮ್ಮ ಮಕ್ಕಳಿಗೆ ತಿಳಿಸಬೇಕಾಗಿದೆ.

ಮುಂಬಯಿಯ ಸಿರಿವಂತ ಗಣಪ

ಮಹಾರಾಷ್ಟ್ರದಲ್ಲಿ ಗಣೇಶನ ಹಬ್ಬಕ್ಕೆ ಐತಿಹಾಸಿಕ ಮಹತ್ವವಿದೆ. ಮರಾಠರಿಂದ ಆರಂಭವಾಗಿ ದೇಶಪ್ರೇಮಿಗಳಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಲು ಮಹಾರಾಷ್ಟ್ರದಲ್ಲಿ ಹೂಸ ರೂಪವನ್ನು ನೀಡಿ, ಜಾತಿ ಮತ ಭೇದವಿಲ್ಲದೆ ಸಾರ್ವಜನಿಕವಾಗಿ ಗಣೇಶೋತ್ಸವನ್ನು ಆಚರಣೆ ಮಾಡಿರುವುದು ಈಗ ಇತಿಹಾಸ. ದೇವರು ಸರ್ವರಿಗೂ ಸೇರಿದವನು ಎಂಬ ಅಂದಿನ ತಿಲಕರ ಕರೆಗೆ ಓಗೊಟ್ಟು ಎಲ್ಲ ಜಾತಿ ಮತ ಪಂಥದವರನ್ನು ಒಂದು ಮಾಡುವಲ್ಲಿ ಗಣೇಶೋತ್ಸವ ಯಶಸ್ಸಾಗಿತ್ತು. ಸ್ವಾತಂತ್ರ್ಯಾ ನಂತರದಲ್ಲಿ ಆಚರಣೆ ಮೂಲಸ್ವರೂಪವನ್ನು ಕಳೆದುಕೊಂಡು ಹಲವಾರು ಬದಲಾವಣೆಗಳಾದವು. ಗಲ್ಲಿಗಲ್ಲಿಗಳಲ್ಲಿ, ಬೀದಿಬೀದಿಗಳಲ್ಲಿ ಉತ್ಸವ ಆರಂಭವಾಯಿತು. ಇದಕ್ಕಾಗಿ ಒಂದು ತಿಂಗಳ ಮೊದಲೇ ತಯಾರಿ ಆರಂಭವಾಗುತ್ತದೆ. ಭಾದ್ರಪದ ಶುದ್ಧ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ಪೂಜೆ, ಭಜನೆ, ಹೋಮಗಳ ಮೂಲಕ ಗಣಪನನ್ನು ಸ್ತುತಿಸಿ ಪೂಜಿಸಲಾಗುತ್ತದೆ. ಶ್ರೀಕೃಷ್ಣಾಷ್ಟಮಿಯಂದು ಬಾಲಗೋಪಾಲನನ್ನು ಪೂಜಿಸಿ ಸಂತೋಷ ಪಟ್ಟ ಕೆಲವೇ ದಿನದಲ್ಲಿ ಸುಮುಖನ ಸ್ವಾಗತದ ತಯಾರಿ ನಡೆಯುತ್ತದೆ. ಭಕ್ತರು ಚೌತಿಯಂದು ಗಣೇಶನನ್ನು ಮನೆಗೆ/ಪೆಂಡಾಲ್‌ಗೆ ಭಕ್ತಿಯಿಂದ ಸ್ವಾಗತಿಸಿ, ಹೂವುಗಳಿಂದ ಅಲಂಕರಿಸಿ, ಗರಿಕೆಯಿಂದ ಅರ್ಚಿಸಿ ಮೋದಕಪ್ರಿಯನಿಗೆ ಮೋದಕದ ಅರ್ಪಣೆ ಮಾಡಿ ಪೂಜಿಸಿದರೆ ವಿಶೇಷ ಅನುಗ್ರಹಕ್ಕೆ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಲ್ಲಿ ಖುಷಿ ಪಡುತ್ತಾರೆ. ಭಕ್ತರ ಮೆಚ್ಚಿನ ದೇವ ಗಣಪ.

ಮೂರ್ತಿಗಳ ಅಲಂಕಾರವನ್ನು ನೋಡುವುದಕ್ಕಾಗಿಯೇ ಜನರು ಬೇರೆ ಬೇರೆ ಕಡೆಗಳಿಂದ ಬರುತ್ತಾರೆ. ಬಹಳ ಭಿನ್ನ ಮಾದರಿಯಲ್ಲಿ ಆಕರ್ಷಕವಾಗಿ ಗಣೇಶೋತ್ಸವ ನಡೆಯುತ್ತದೆ. ಮುಂಬಯಿಯಲ್ಲಿ ಲೆಕ್ಕ ಹಾಕಿದರೆ ಲಕ್ಷಕ್ಕೂ ಹೆಚ್ಚು ಮೂರ್ತಿಗಳಿರಬಹುದು. ಆದರೆ ಲಾಲ್‌ಭಾಗಿನ ರಾಜಾ ಎಂದೇ ಪ್ರಸಿದ್ಧವಾಗಿರುವ ಗಣಪತಿಯ ದರ್ಶನಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಬರುತ್ತಾರೆ. ಸುಮಾರು 9 ದಶಕಕ್ಕಿಂತಲೂ ಹೆಚ್ಚು ವರ್ಷಗಳಿಂದ ಅದ್ದೂರಿಯಾಗಿ ಆಚರಿಸುತ್ತಿರುವ ಗಣೇಶೋತ್ಸವ ಅದು ಲಾಲ್‌ಬಾಗ್‌ನ ಒಡೆಯನಾದ ಗಣಪ. ಅತ್ಯಂತ ದೊಡ್ಡದಾದ ಭವ್ಯವಾದ ಮೂರ್ತಿ ಇಲ್ಲಿನ ಆಕರ್ಷಣೆ. ಹನ್ನೊಂದು ದಿನಗಳ ಕಾಲ ಇಲ್ಲಿ ಲಕ್ಷಾಂತರ ಭಕ್ತರು ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಬರುತ್ತಾರೆ. ಇಲ್ಲಿ ಸಂಗ್ರಹವಾದ ದೊಡ್ಡ ಮೊತ್ತವನ್ನು ಸಮಾಜ ಸೇವೆಗಾಗಿ, ಶೈಕ್ಷಣಿಕ, ಧಾರ್ಮಿಕ ಸೇವೆಗಾಗಿ ಬಳಸಲಾಗುತ್ತದೆ.

ಕರ್ನಾಟಕದ ಕರಾವಳಿ ಭಾಗದವರಾದ ಜಿ.ಎಸ್.ಬಿ ಸಮುದಾಯದವರು ಮುಂಬಯಿಯಲ್ಲಿ ಆಚರಿಸುವ ಗಣೇಶೋತ್ಸವ ವಿಶೇಷ. ಈ ಚಿನ್ನದ ಗಣಪತಿಗೆ ಅದರದ್ದೇ ಆದ ಮಹತ್ವವಿದೆ. ಇಲ್ಲಿ ಜಾತಿ, ಮತ, ಮೇಲು, ಕೀಳೆಂಬ ಭೇದವಿಲ್ಲದೆ ದರ್ಶನ ಪಡೆಯುತ್ತಾರೆ. ಭಕ್ತಿ ಶ್ರದ್ಧೆಯಿಂದ ಭಕ್ತಾದಿಗಳು ತಮ್ಮ ಇಷ್ಟಾರ್ಥ ಪೂರ್ತಿಗೊಳಿಸುವ ಇಷ್ಟದೇವನ ಪೂಜೆಯನ್ನು ಮಾಡುತ್ತಾರೆ. ಲಕ್ಷ ಲಕ್ಷ ಭಕ್ತರು ಸಾಲಾಗಿ ಬಂದು ಗಣಪನನ್ನು ಕಣ್ಣುಂಬಿಸಿಕೊಳ್ಳುತ್ತಾರೆ. ಇಲ್ಲಿನ ಶಿಸ್ತು, ಆದರಾತಿಥ್ಯವೂ ಭಕ್ತಾದಿಗಳ ಗಮನ ಸೆಳೆದಿರುವುದೂ ಅಷ್ಟೇ ಸತ್ಯ. ಐದು ದಿನವೂ ಭಕ್ತಾದಿಗಳಿಂದ ತುಂಬಿ ತುಳುಕುವ ಈ ವಿಶಾಲ ಪೆಂಡಾಲ್‌ನಲ್ಲಿ ಸಾವಿರಾರು ಸ್ವಯಂಸೇವಕರು ಬಹಳ ಪ್ರೀತಿಯಿಂದ, ನಿಷ್ಠೆಯಿಂದ ತಮ್ಮ ಸೇವೆಯನ್ನು ಸಲ್ಲಿಸಲೆಂದೇ ದೇಶ ವಿದೇಶಗಳಿಂದ ಬರುತ್ತಾರೆ. ಸಂಗೀತ, ಸಾಹಿತ್ಯ, ಭಜನೆ, ಯಕ್ಷಗಾನದಂತಹ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡಾ ಇಲ್ಲಿ ನಡೆಯುತ್ತವೆ. ಈ ಉತ್ಸವಮೂರ್ತಿಗೆ ಭಕ್ತರು ಅರ್ಪಿಸಿದ ಧನಕನಕಗಳನ್ನು ಸಮಾಜಸೇವೆಗಾಗಿ ವಿನಿಯೋಗಿಸಲಾಗುತ್ತದೆ. ಬಡಮಕ್ಕಳ ಶಾಲಾ ಶುಲ್ಕ ಭರಿಸುವುದು, ಅಶಕ್ತ ರೋಗಿಗಳಿಗೆ ಆಸ್ಪತ್ರೆಯ ಖರ್ಚುವೆಚ್ಚ ನೋಡಿಕೊಳ್ಳುವುದಕ್ಕೆ ಪ್ರೇರಣೆ ನೀಡುತ್ತಿರುವ ಈ ಗಣನಾಯಕನ ಮಹಿಮೆ ಅಪಾರ.

ಪುಡ್ಚಾ ವರ್ಷಿ ಲೌಕರ್‌ ಯಾ

ಗಣೇಶನನ್ನು ಪೂಜಿಸಿ ಕಳುಹಿಸಿ ಕೊಡುವಾಗ ಬಪ್ಪಾ ಮೋರಿಯಾ ಎನ್ನುತ್ತಾರೆ. ಇದು ಅವನಿಗೆ ಭಕ್ತಿಯಿಂದ ಕೃತಜ್ಞತೆಯನ್ನು ಸಲ್ಲಿಸುವ ಪರಿಯಾಗಿದೆ. ಮುಂದಿನ ವರ್ಷ ಮತ್ತೆ ಬೇಗ ಬಾ… (ಪುಡ್ಚಿ ವರ್ಷಿ ಲೌಕರ್‌ ಯಾ) ಎನ್ನುತ್ತಾ ಪ್ರೀತಿಯಿಂದ ಗಣೇಶನನ್ನು ಕಳುಹಿಸಿಕೊಡುವ ಆ ಕ್ಷಣ ಭಾವುಕರಾಗುತ್ತೇವೆ.
ಭಕ್ತರು ಸಂಭ್ರಮದಿಂದ ಬರಮಾಡಿ ಕೊಂಡ ಶ್ರೀ ಗಣೇಶ ಬಂದ ಈ ಗಳಿಗೆಯಿಂದ ಮನುಷ್ಯನಲ್ಲಿರುವ ಕೌರ್ಯ, ರಾಕ್ಷಸಿ ಪ್ರವೃತ್ತಿಯನ್ನು ತೊಲಗಿಸಿ ಶಾಂತಿ, ಸೌಹಾರ್ದ ಮೂಡುವಂತಾಗಲಿ. ಹೃದಯದಲ್ಲಿ ಪ್ರೀತಿಯ ಬೀಜವನ್ನು ಬಿತ್ತಿ, ಅಂತರಂಗವನ್ನು ಬೆಳಗುವ ಮಾನವೀಯತೆಯ ಪ್ರತಿರೂಪವಾಗಲಿ. ಬುದ್ಧಿಯ ಅಧಿಪತಿ, ಸಮೃದ್ಧಿ, ಭದ್ರತೆ, ಸಂತೋಷ, ಯಶಸ್ಸು, ಅದೃಷ್ಟಗಳನ್ನು ಕರುಣಿಸುವ ಅಧಿಪತಿ ವಿನಾಯಕನು ನಂಬಿದ ಭಕ್ತರಿಗೆ ಸನ್ಮಂಗಳವನ್ನುಂಟು ಮಾಡಲಿ. ಸರ್ವರಿಗೂ ಆರೋಗ್ಯ, ಸಂತೋಷ, ಸಮೃದ್ಧಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸೋಣ. ಸರ್ವೇಜನೋ ಸುಖಿನೋ ಭವಂತು.

ಡಾ.ಪೂರ್ಣಿಮಾ ಶೆಟ್ಟಿ, ಮುಂಬಯಿ

ಸಹಪ್ರಾಧ್ಯಾಪಕಿ, ಕನ್ನಡ ವಿಭಾಗ, ಮುಂಬಯಿ ವಿವಿ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top