ನಾರಾಯಣ ಮೂರ್ತಿ ಇನ್ಫೋಸಿಸ್ ಕಂಪನಿ ಕಟ್ಟಿದ ರೋಚಕ ಕಥೆ
ಇನ್ಫೋಸಿಸ್ ನಾರಾಯಣ ಮೂರ್ತಿ ಯಾರಿಗೆ ಗೊತ್ತಿಲ್ಲ ಹೇಳಿ? ಭಾರತದ ‘ಐಟಿ ಸಾಮ್ರಾಜ್ಯದ ಪಿತಾಮಹ’ ಎಂದು ಕರೆಸಿಕೊಂಡ ಅವರು ತನ್ನ ಕನಸಿನ ಐಟಿ ಕಂಪನಿಯಾದ ಇನ್ಫೋಸಿಸ್‌ನ್ನು ಇಷ್ಟೊಂದು ಎತ್ತರಕ್ಕೆ ತೆಗೆದುಕೊಂಡು ಹೋದದ್ದು ಹೇಗೆ? ಇಲ್ಲಿದೆ ರೋಚಕ ಕಥೆ.
ಮಧ್ಯಮವರ್ಗದ ಕುಟುಂಬದ ಯುವಕ
ಶಿಡ್ಲಘಟ್ಟದ ಮಧ್ಯಮ ವರ್ಗದ ಒಂದು ಸಂಪ್ರದಾಯಸ್ಥ ಕುಟುಂಬದಿಂದ ಬಂದ ನಾರಾಯಣಮೂರ್ತಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರಾಂಕ್ ಪಡೆದವರು. ಮೈಸೂರಿನ NIE ಇಂಜಿನಿಯರಿಂಗ್ ಕಾಲೇಜಿನಲ್ಲಿ BE ಪದವಿ ಪಡೆದ ಅವರು ಮುಂದೆ ಸ್ವಂತ ಪ್ರತಿಭೆಯಿಂದ ಕಾನ್‌ಪುರ ಐಐಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕಂಪ್ಯೂಟರ್ ಇಂಜಿನಿಯರಿಂಗ್ ಅವರ ಆಸಕ್ತಿಯ ಕ್ಷೇತ್ರವಾಗಿತ್ತು.
ವಿಪ್ರೋ ಸಂದರ್ಶನದಲ್ಲಿ ಮೂರ್ತಿ ರಿಜೆಕ್ಟ್ ಆದರು
ಆಗ ಭಾರತದ ಐಟಿ ರಂಗದಲ್ಲಿ ಅತಿ ದೊಡ್ಡ ಕಂಪನಿಯಾದ ವಿಪ್ರೋದಲ್ಲಿ ಕೆಲಸ ಮಾಡಬೇಕು ಎಂದು ಮೂರ್ತಿ ಆಸೆಪಟ್ಟರು. ವಿಪ್ರೋ ಮುಖ್ಯಸ್ಥರಾದ ಅಜೀಂ ಪ್ರೇಂಜಿ ಅವರ ಬದುಕಿನಿಂದ ಪ್ರಭಾವಿತರಾಗಿದ್ದ ಮೂರ್ತಿ ಕೆಲವು ವರ್ಷ ಆದರೂ ಅವರ ಜೊತೆ ಕೆಲಸ ಮಾಡಿ ಅನುಭವ ಪಡೆಯಬೇಕು ಎಂದಾಸೆ ಪಟ್ಟಿದ್ದರು. ಸ್ವತಃ ಅಜೀಂ ಪ್ರೇಂಜಿ ಸಂದರ್ಶನ ಮಾಡಿದ್ದರು. ಅವರ ಮನಸಿನಲ್ಲಿ ಏನಿತ್ತೋ ಗೊತ್ತಿಲ್ಲ, ನಾರಾಯಣ ಮೂರ್ತಿ ಆ ಸಂದರ್ಶನದಲ್ಲಿ ರಿಜೆಕ್ಟ್ ಆದರು.
ಬೇರೆ ಯಾರಾದ್ರೂ ಆಗಿದ್ದರೆ ನಿರಾಸೆಯಿಂದ ಕುಸಿದು ಹೋಗುತ್ತಿದ್ದರು. ಆದರೆ ಮೂರ್ತಿ ಹಾಗೆ ಯೋಚನೆಯನ್ನೇ ಮಾಡಲಿಲ್ಲ. ದೇವರ ಮನಸಿನಲ್ಲಿ ಏನುಂಟೋ ಹಾಗೇ ಆಗಲಿ ಎಂದು ಅಧ್ಯಯನಕ್ಕಾಗಿ ವಿದೇಶಕ್ಕೆ ಹೋದರು. ಇನ್ನಷ್ಟು ಗಟ್ಟಿಯಾಗಿ ಅನುಭವ ಪಡೆದುಕೊಂಡು ಭಾರತಕ್ಕೆ ಬಂದು 1978ರಲ್ಲಿ ಸುಧಾಮೂರ್ತಿ ಅವರನ್ನು ಮದುವೆ ಆದರು. ತನ್ನ ಗೆಳೆಯರ ಜೊತೆಗೆ ವಿಸ್ತಾರವಾಗಿ ಚರ್ಚೆ ಮಾಡಿದರು. ಭಾರತದಲ್ಲಿ ಒಂದು ಬೃಹತ್ ಐಟಿ ಕಂಪನಿ ಸ್ಥಾಪಿಸುವ ಅವರ ವಿಶನ್ ಸ್ಟ್ರಾಂಗ್ ಆಗಿತ್ತು. 1981ರಲ್ಲಿ ಕೇವಲ 250 ಡಾಲರ್ ಬಂಡವಾಳದ ಜೊತೆಗೆ ಇನ್ಫೋಸಿಸ್ ಕಂಪನಿ ಆರಂಭ ಆಗಿಯೇ ಬಿಟ್ಟಿತು.
ಇತಿಹಾಸ ನಿರ್ಮಾಣ ಮಾಡಿತು ಇನ್ಫೋಸಿಸ್
ನಾರಾಯಣಮೂರ್ತಿ ಅವರ ಪ್ರಾಮಾಣಿಕತೆ, ಕಠಿಣ ದುಡಿಮೆ, ಅಪಾರವಾದ ಜ್ಞಾನ ಮತ್ತು ಸೇವಾ ಮನೋಭಾವಗಳ ಬಲದಿಂದ ಇನ್ಫೋಸಿಸ್ ಬಹಳ ಬೇಗ ಹೊಸ ಎತ್ತರವನ್ನು ಕಂಡಿತು. ಜಾಗತಿಕವಾದ ಐಟಿ ಗ್ರಾಹಕರು ಇನ್ಫೋಸಿಸ್ ಸಂಸ್ಥೆಯ ಮೇಲೆ ಇಟ್ಟ ನಂಬಿಕೆ ಬೆಳೆಯುತ್ತಾ ಹೋಯಿತು. 30 ವರ್ಷ ಇನ್ಫೋಸಿಸ್ ಸಂಸ್ಥೆಯ ಸಹಸಂಸ್ಥಾಪಕ ಮತ್ತು ಸಿಇಒ ಆಗಿ ಸೇವೆ ಸಲ್ಲಿಸಿದ ನಾರಾಯಣ ಮೂರ್ತಿ ಅವರು 2011ರಲ್ಲಿ ನಿವೃತ್ತಿ ಆದರು. ಮುಂದೆ ಕೂಡ ಇನ್ಫೋಸಿಸ್ ಅವರ ಪ್ರತಿಭೆ, ಅನುಭವ ಮತ್ತು ಸೇವೆಯನ್ನು ಪಡೆದುಕೊಂಡಿತು.
ನನ್ನನ್ನು ಕ್ಷಮಿಸಿಬಿಡು ಅಂದರು ಅಜೀಂ ಪ್ರೇಂಜಿ
ಇನ್ಫೋಸಿಸ್ ಮುಂದೆ ಅಜೀಂ ಪ್ರೇಂಜಿ ಅವರ ವಿಪ್ರೋ ಸಂಸ್ಥೆಯನ್ನು ಹಿಂದಿಕ್ಕಿ ದಾಪುಗಾಲು ಹಾಕಿ ಮುನ್ನುಗ್ಗಿತು. ಮುಂದೊಮ್ಮೆ ಅಜೀಂ ಪ್ರೇಂಜಿ ಅವರು ನಾರಾಯಣಮೂರ್ತಿ ಅವರನ್ನು ಭೇಟಿ ಮಾಡಿ ‘ಅಂದು ನಿನ್ನನ್ನು ಸಂದರ್ಶನದಲ್ಲಿ ರಿಜೆಕ್ಟ್ ಮಾಡಿದ್ದೆ ಕಣೋ ಹುಡುಗ! ನನ್ನನ್ನು ಕ್ಷಮಿಸಿಬಿಡು’ ಅಂದರಂತೆ.
ಆಗ ನಾರಾಯಣ ಮೂರ್ತಿ ಅವರು ನಕ್ಕು ‘ಹಾಗೆ ಹೇಳಬೇಡಿ ಸರ್. ಅದು ನೀವು ನನಗೆ ಮಾಡಿದ ನಿಜವಾದ ಆಶೀರ್ವಾದ. ನೀವು ರಿಜೆಕ್ಟ್ ಮಾಡಿದ ಕಾರಣ ನಾನು ಹೊಸ ಐಟಿ ಸಂಸ್ಥೆಯನ್ನೇ ಕಟ್ಟಲು ಸಾಧ್ಯವಾಯ್ತು. ನಮ್ಮದೇನಿದೆ? ಎಲ್ಲವೂ ವಿಧಿಲಿಖಿತ’ ಅಂದರಂತೆ.
ಭಾರತದ ಐಟಿ ಕ್ಷೇತ್ರದ ಪಿತಾಮಹ ಆದರು ಮೂರ್ತಿ
ಇಂದು ಇನ್ಫೋಸಿಸ್ ಜಗತ್ತಿನ 56 ದೇಶಗಳಲ್ಲಿ ತನ್ನ ವ್ಯವಹಾರವನ್ನು ಹೊಂದಿದೆ. ಜಗತ್ತಿನ ಅತ್ಯಂತ ನಂಬಿಕಸ್ತ 20 ಕಂಪನಿಗಳಲ್ಲಿ ಒಂದು ಎಂಬ ಪ್ರಶಸ್ತಿಯನ್ನು ನಿರಂತರವಾಗಿ ಪಡೆಯುತ್ತಿದೆ. ಕೇವಲ 250 ಡಾಲರ್‌ನಿಂದ ಶುರುವಾದ ಇನ್ಫೋಸಿಸ್ ಇಂದು 18.7 ಬಿಲಿಯನ್ ಡಾಲರ್ ಬಂಡವಾಳದ ಕಂಪನಿ ಆಗಿದೆ. ಸ್ವತಃ ಮೂರ್ತಿ ಅವರ ಬ್ರಾಂಡ್ ವ್ಯಾಲ್ಯೂ 44,460 ಕೋಟಿ ತಲುಪಿದೆ. 3,15,000 ಅತ್ಯಂತ ನಂಬಿಕಸ್ತ ಉದ್ಯೋಗಿಗಳು ಇದ್ದಾರೆ. ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಯ ಪ್ರಾಮಾಣಿಕತೆ, ಹೃದಯ ಶ್ರೀಮಂತಿಕೆ ಮತ್ತು ಸೇವಾ ಪರಂಪರೆಗಳ ವಿಶಾಲ ಪಂಚಾಂಗದ ಮೇಲೆ ಇನ್ಫೋಸಿಸ್ ಇಂದು ಯಾರೂ ಊಹೆ ಮಾಡಲು ಆಗದ ಎತ್ತರವನ್ನು ತಲುಪಿದೆ.
ನಾರಾಯಣಮೂರ್ತಿ ಅವರಿಗೆ ಪದ್ಮಶ್ರೀ, ಪದ್ಮವಿಭೂಷಣ ಮೊದಲಾದ ಎಲ್ಲಾ ಪ್ರಶಸ್ತಿಗಳು ದೊರೆತಿವೆ. ಭಾರತ ರತ್ನ ಮಾತ್ರ ಬಾಕಿ ಇದೆ. ಅದಕ್ಕೂ ಅವರು ಅತ್ಯಂತ ಅರ್ಹರಾಗಿದ್ದಾರೆ.
ರಾಜೇಂದ್ರ ಭಟ್ ಕೆ.