ಪುತ್ತೂರು: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ನನ್ನನ್ನು ಭೇಟಿಯಾಗಿರುವುದು ನಿಜ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.
ಮೈಸೂರಿನಲ್ಲಿ ಹೇಳಿಕೆಯೊಂದರಲ್ಲಿ ಅವರು ಈ ವಿಷಯ ತಿಳಿಸಿದ್ದು, ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ಹಾಗೂ ಪುತ್ತಿಲರ ನಡುವೆ ಮಾತುಕತೆ ನಡೆದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ವಿಚಾರವನ್ನು ಇದೀಗ ವಿಜಯೇಂದ್ರ ಅವರೇ ಒಪ್ಪಿಕೊಂಡಿದ್ದಾರೆ. ಬಿಜೆಪಿ-ಪುತ್ತಿಲ ನಡುವೆ ಮಾತುಕತೆ ನಡೆಸಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದಾರೆ.
ಆದರೆ ಬೇಷರತ್ ಆಗಿ ಬಿಜೆಪಿ ಸೇರ್ಪಡೆಯಾಗಿ ಎಂದು ಅವರಿಗೆ ಸೂಚನೆ ನೀಡಿದ್ದೇನೆ. ಯಾವುದೇ ಷರತ್ತು ಬೇಡ. ಕಾರಣ ಮೋದಿ ನಾಯಕತ್ವಕ್ಕಾಗಿ ಎಲ್ಲರೂ ಒಂದಾಗಬೇಕು ಎಂದು ತಿಳಿಸಿದ್ದು, ಯಾವುದೇ ಹುದ್ದೆ ನೀಡಿ ಪಕ್ಷಕ್ಕೆ ಸೇರ್ಪಡೆಗೊಳಿಸುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಮುಖಂಡರೊಂದಿಗೆ ಈ ಕುರಿತು ಚರ್ಚಿಸುತ್ತೇನೆ. ಈ ನಡುವೆ ಪುತ್ತಿಲರಿಗೆ ಸ್ಥಾನಮಾನ ನೀಡುವುದಕ್ಕೆ ಸ್ಥಳೀಯ ಬಿಜೆಪಿ ಹಾಗೂ ಸಂಘ ಪರಿವಾರ ನಾಯಕರ ವಿರೋಧ ವ್ಯಕ್ತಪಡಿಸಿದ್ದರು.
ಪುತ್ತಿಲ ಪರಿವಾರವನ್ನು ಬಿಜೆಪಿ ಜತೆ ವಿಲೀನಗೊಳಿಸಿ ಪಕ್ಷ ಸೇರ್ಪಡೆಯಾಗುವುದಾದರೆ ಸ್ವಾಗತ ಎಂದು ಬಿಜೆಪಿ ನಾಯಕರು ಹೇಳಿದ ಬೆನ್ನಲ್ಲೇ, ಪುತ್ತಿಲ ಪರಿವಾರ ಕಾರ್ಯಕರ್ತರ ಸಮಾಲೋಚನಾ ಸಭೆ ನಡೆಸಿ ಮುಂದಿನ ಲೋಕಸಭಾ ಚುನಾವಣೆ ಮೊದಲು ಬಿಜೆಪಿ ಮಂಡಲ ಅಧ್ಯಕ್ಷ ನೀಡಿದರೆ ಮಾತ್ರ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಹೇಳಿದ್ದರು. ಈ ಕುರಿತು ಮೂರು ದಿನಗಳ ಒಳಗೆ ನಿರ್ಧಾರ ತಿಳಿಸಬೇಕು ಎಂದು ಗಡುವು ನೀಡಿದ್ದರು. ಆದರೆ ಈ ವಿಚಾರವಾಗಿ ಯಾವುದೇ ಬೆಳವಣಿಗೆ ನಡೆದಿಲ್ಲ ಎಂಬುದು ಇಲ್ಲಿ ಗಮನಾರ್ಹವಾಗಿದೆ.