ಪುತ್ತೂರು: ನಗರದ ಬೊಳುವಾರು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ 8ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಚಂಡಿಕಾಯಾಗ ಜ.24 ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕ್ಷೇತ್ರದ ಪವಿತ್ರಪಾಣಿ ಬಾಲಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಷ್ಟಮಂಗಲ ಪ್ರಶ್ನೆಯಂತೆ 2016 ರಲ್ಲಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆದು ಸ್ಥಳೀಯರು ಸಹಿತ ಊರ, ಪರವೂರ ಭಕ್ತಾದಿಗಳ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಪೂಜಾಧಿ ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ. ವಿಶೇಷವೆಂದರೆ ಶ್ರೀ ದುರ್ಗಾ ಉಳ್ಳಾಳ್ತಿ ಯಕ್ಷಕಲಾ ಸಂಘದ ವತಿಯಿಂದ ಇಲ್ಲಿ ತಿಂಗಳಿಗೊಮ್ಮೆ ನಡೆಯುವ ತಾಳಮದ್ದಳೆ ಕಾರ್ಯಕ್ರಮ ಕ್ಷೇತ್ರದಲ್ಲಿ ಒಂದು ರೀತಿಯ ಚೈತನ್ಯವನ್ನುಂಟು ಮಾಡಿರುವುದು. ಅಲ್ಲದೆ ಕ್ಷೇತ್ರದಲ್ಲಿ ಮೂರು ವರ್ಷಗಳಿಗೊಮ್ಮೆ ಸಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಹೇಳಿದರು.
ಅಂದು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 8 ರಿಂದ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ಮಹಾಗಣಪತಿ ಹೋಮ ನಡೆದು ಬಳಿಕ ಚಂಡಿಕಾಯಾಗ ಆರಂಭಗೊಳ್ಳಲಿದೆ. ಬಳಿಕ ನಾಗದೇವರಿಗೆ ತಂಬಿಲ, ಸಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ. 11 ಗಂಟೆಗೆ ಚಂಡಿಕಾ ಯಾಗದ ಪೂರ್ಣಾಹುತಿ, ಸುವಾಸಿನಿ ಪೂಜೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಸಂಜೆ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಳ್ತಿ) ಭಜನಾ ಮಂಡಳಿಯಿಂದ ಭಜನೆ, 6.15 ಕ್ಕೆ ಲಲಿತಾ ಸಹಸ್ರನಾಮಾರ್ಚನೆ ಜರಗಲಿದೆ. ಸಂಜೆ 5.30 ರಿಂದ ವಿದುಷಿ ಮಂಜುಲಾ ಸುಬ್ರಹ್ಮಣ್ಯ ಮತ್ತು ಶಿಷ್ಯ ವೃಂದದಿಂದ ‘ನಾಟ್ಯಾರ್ಚನಂ’ ಪ್ರಸ್ತುತಿಗೊಳ್ಳಲಿದೆ. ರಾತ್ರಿ 7 ರಿಂದ ಶ್ರೀ ದೇವರಿಗೆ ಸರ್ವಾಲಂಕಾರ ಸಹಿತ ಕಲ್ಪೋಕ್ತ ದುರ್ಗಾಪೂಜೆ, ರಂಗಪೂಜೆ ನಡೆಯಲಿದೆ. ರಾತ್ರಿ 7.30 ರಿಂದ ಶ್ರೀ ದುರ್ಗಾ ಉಳ್ಳಾಳ್ತಿ ಯಕ್ಷಕಲಾ ಪ್ರತಿಷ್ಠಾನದ ಯಕ್ಷಗಾನ ತರಬೇತಿ ಶಿಷ್ಯರಿಂದ “ಏಕಾದಶಿ ದೇವಿ ಮಹಾತ್ಮೆ ಹಾಗೂ ಜಾಂಬವತಿ ಕಲ್ಯಾಣ ಯಕ್ಷಗಾನ ಬಯಲಾಟ ಜರಗಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯಕ್ಷಕಲಾ ಸಂಘದ ಪದಾಧಿಕಾರಿಗಳಾದ ಗೋವಿಂದ ನಾಯಕ್, ಶಂಕರ ಭಟ್, ಪದ್ಯಾಣ ಶಂಕರ ನಾರಾಯಣ ಭಟ್, ವಿಶ್ವಸ್ಥ ಮಂಡಳಿ ಖಜಾಂಚಿ ಪ್ರಸನ್ನ ಬಲ್ಲಾಳ್ ಉಪಸ್ಥಿತರಿದ್ದರು.