ನವದೆಹಲಿ: ಇಸ್ರೋ ಗಮನ ಈಗ ಶುಕ್ರನ ಮೇಲಿದೆ. ಈ ಕುರಿತು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಸ್. ಸೋಮನಾಥ್, “ಇಸ್ರೋ ಹಲವು ಮಿಷನ್‌ಗಳನ್ನು ಕೈಗೊಳ್ಳುತ್ತಿದೆ. ಈಗ ಸೌರವ್ಯೂಹದಲ್ಲಿ ಅತಿ ಹೆಚ್ಚು ಪ್ರಕಾಶಮಾನವಾದ ಗ್ರಹ ಎಂದೇ ಖ್ಯಾತಿಯಾದ ಶುಕ್ರ ಗ್ರಹದ ಅಧ್ಯಯನಕ್ಕೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ಶುಕ್ರಯಾನದ ಪೇಲೋಡ್‌ಗಳನ್ನೂ ಅಭಿವೃದ್ಧಿಪಡಿಸಲಾಗಿದೆ. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಶುಕ್ರ ಗ್ರಹ ನೆರವಾಗಿದೆ. ಹಾಗಾಗಿ ಶುಕ್ರಯಾನವು ತುಂಬ ಆಸಕ್ತಿದಾಯಕ ಮಿಷನ್ ಆಗಿರಲಿದೆ” ಎಂದು ತಿಳಿಸಿದರು.
ಶುಕ್ರಯಾನ ಮಿಷನ್ ಉಡಾವಣೆ ಕುರಿತು ಎಸ್. ಸೋಮನಾಥ್ ಅವರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, 2024ರ ಡಿಸೆಂಬರ್‌ನಲ್ಲಿ ಉಡಾವಣೆ ಮಾಡುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ. “ಶುಕ್ರ ಗ್ರಹದಲ್ಲಿ ಹವಾಮಾನ ಒತ್ತಡವು ಭೂಮಿಗಿಂತ 100 ಪಟ್ಟು ಜಾಸ್ತಿ ಇದೆ. ಆ್ಯಸಿಡ್‌ನಿಂದಲೇ ತುಂಬಿರುವ ಶುಕ್ರ ಗ್ರಹದ ಕುರಿತು ಹೆಚ್ಚಿನ ಅಧ್ಯಯನ ಮಾಡುವುದು ನಮ್ಮ ಉದ್ದೇಶವಾಗಿದೆ” ಎಂದು ಸೋಮನಾಥ್ ಮಾಹಿತಿ ನೀಡಿದ್ದಾರೆ.
ಜುಲೈ 14ರಂದು ಚಂದ್ರಯಾನ 3 ಮಿಷನ್ ಉಡಾವಣೆ ಮಾಡಲಾಯಿತು. ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಇದ್ದ ನೌಕೆಯು ಚಂದ್ರನ ಅಂಗಳದಲ್ಲಿ ಸಾಫ್ಟ್ ಲ್ಯಾಂಡ್ ಆಯಿತು. ಇದರೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆ ಇಳಿಸಿದ ಮೊದಲ ದೇಶ ಎಂಬ ಖ್ಯಾತಿಗೆ ಭಾರತ ಭಾಜನವಾಯಿತು. ಇದರ ಬೆನ್ನಲ್ಲೇ, ಸೆಪ್ಟೆಂಬರ್ 2ರಂದು ಇಸ್ರೋ ಸೂರ್ಯಯಾನ ಕೈಗೊಂಡಿತು. ಆದಿತ್ಯ ಎಲ್ 1 ಮಿಷನ್ ಹೊತ್ತುಕೊಂಡ ಪಿಎಸ್‌ಎಲ್‌ವಿ-ಸಿ 57 (PSLV-C57 ) ರಾಕೆಟ್ ಸೆಪ್ಟೆಂಬರ್ 2ರಂದು ನಭಕ್ಕೆ ಹಾರಿತು. ಈಗ ಆದಿತ್ಯ ಎಲ್ 1 ಮಿಷನ್ ಸೂರ್ಯನ ಮೇಲ್ಮೈ ಅಧ್ಯಯನದಲ್ಲಿ ತೊಡಗಿದೆ.