ಧಾರ್ಮಿಕತೆ, ಸಾಂಸ್ಕೃತಿಕತೆ ಹಿರಿಯರ ಉಸಿರಾಗಿತ್ತು: ಕೆ.ಕೆ ಪೇಜಾವರ | ಅಕ್ಷಯ ಕಾಲೇಜಿನಲ್ಲಿ ಸಂಭ್ರಮದ ಆಟಿ ಕೂಟ

ಪುತ್ತೂರು: ವರ್ಷದ ಹನ್ನೆರಡು ತಿಂಗಳುಗಳ ವೈಶಿಷ್ಟ್ಯ ಹಾಗೂ ಕಲ್ಪನೆಯನ್ನು ಹಿಂದಿನ ಕಾಲದ ಹಿರಿಯರು ಅಕ್ಷರಾಭ್ಯಾಸವಿಲ್ಲದಿದ್ದರೂ ತುಳು ಬದುಕನ್ನು ಉಳಿಸಿಕೊಂಡು ಬಂದಿರುತ್ತಾರೆ. ತುಳುನಾಡಿನಲ್ಲಿ ಸಾಕಷ್ಟು ಆಚಾರ ವಿಚಾರಗಳಿವೆ ಅಲ್ಲದೆ ಧಾರ್ಮಿಕತೆ ಮತ್ತು ಸಾಂಸ್ಕೃತಿಕತೆ ನಮ್ಮ ಹಿರಿಯರ ಉಸಿರಾಗಿತ್ತು ಎಂದು ತುಳು ವಿದ್ವಾಂಸಕರಾದ ಕೆ.ಕೆ ಪೇಜಾವರರವರು ಹೇಳಿದರು.

ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜ್ ವತಿಯಿಂದ ಹಮ್ಮಿಕೊಂಡ ‘ಆಟಿ ಕೂಟ’ವನ್ನು ಉದ್ಘಾಟಿಸಿ ಮಾತನಾಡಿದರು.

ಆಟಿ ಕಾಲದಲ್ಲಿ ಊರಿನ ಮಾರಿ ಓಡಿಸಲು ಆಟಿ ಕಳೆಂಜ ಬರುವುದಾಗಿತ್ತು. ಹಿಂದಿನ ಬಡತನದ ಕಾಲದಲ್ಲಿ ನೆಮ್ಮದಿಯಿತ್ತು ಆದರೆ ಇಂದಿನ ಸಿರಿತನದ ಕಾಲದಲ್ಲಿ ನೆಮ್ಮದಿ ಎಂಬುದೇ ಇಲ್ಲ. ಏನೇ ಆಗಲಿ ಮಾನವ ಪ್ರಕೃತಿಗೆ ವಿರುದ್ಧವಾಗಿ ಹೋಗುವುದನ್ನು ತಡೆಯಬೇಕು, ಪ್ರಕೃತಿಯ ಓಳಿತಿಗಾಗಿ ಸದಾ ಮುನ್ನೆಡೆಯುವಂತಾಗಲಿ ಎಂದು ಅವರು ಹೇಳಿದರು. 



































 
 

ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲುಮಾತನಾಡಿ, ಆಟಿಕೂಟ ಎಂಬುದು ತುಳುನಾಡಿನ ವೈಶಿಷ್ಟ್ಯತೆಗಳಲ್ಲೊಂದಾಗಿದೆ. ಹಿಂದಿನ ಪೂರ್ವಜರು, ಗುರು-ಹಿರಿಯರು ಪಟ್ಟ ವೇದನೆ, ಕಷ್ಟದ ಅರಿವು ಗೊತ್ತಾಗಬೇಕಿದೆ. ಹಿಂದಿನ ಹಿರಿಯರು ಸಮಾಜದಲ್ಲಿ ಎಷ್ಟು ವರ್ಷ ಬದುಕಿದ್ದಾರೆ, ಅವರ ಬದುಕಿನ ಹಿಂದೆ ಆಹಾರ ಪದ್ಧತಿ, ದಿನನಿತ್ಯದ ಕೆಲಸ ಹಾಗೂ ವ್ಯಾಯಾಮ ಎಷ್ಟರಮಟ್ಟಿಗೆ ಪರಿಣಾಮ ಬೀರಿದೆ ಎಂಬುದನ್ನು ಅರಿಯಬೇಕಾಗಿದೆ ಎಂದರು.

ಮುಖ್ಯ ಅತಿಥಿ ಕಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ತುಳು ಸಾಹಿತಿ ರೇಣುಕಾ ಕಣಿಯೂರು ಮಾತನಾಡಿ, ಆಟಿ ತಿಂಗಳಿನಲ್ಲಿ ಭಾರೀ ಮಳೆ ಹಾಗೂ ಬಿಸಿಲಿನ ಸಮ್ಮಿಶ್ರತೆ ಇದ್ದಿದ್ದರಿಂದ ಮನುಷ್ಯನಿಗೆ ರೋಗ ಎಂಬುದು ಜಾಸ್ತಿ ಆಗುತ್ತಿದ್ದವು. ಅಂದಿನ ಹಿರಿಯರು ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಓದಿದವರಲ್ಲ. ಆದರೆ ಪ್ರಕೃತಿದತ್ತವಾದ ವೈಜ್ಞಾನಿಕ ತಿನಸುಗಳನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಆದ್ದರಿಂದ ಇಂದಿನ ಈ ಕಾಲಘಟ್ಟದಲ್ಲಿ ನಾವೂ ಕೂಡ ಪ್ರಕೃತಿದತ್ತವಾದ ತಿನಸುಗಳನ್ನು ತಿಂದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ಇದನ್ನು ಮುಂದಿನ ಪೀಳಿಗೆಗೆ ಪ್ರಚುರಪಡಿಸುವಂತಾಗಬೇಕು ಎಂದರು.

ಅಕ್ಷಯ ಕಾಲೇಜಿನ ನಿರ್ದೇಶಕಿ ಕಲಾವತಿ ಜಯಂತ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಕಿಶೋರ್ ಕುಮಾರ್ ರೈ, ಐಕ್ಯೂಎಸಿ ಸಂಯೋಜಕ ರಾಕೇಶ್ ಕುಳದಪಾರೆ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಕೃತಿ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ ಸ್ವಾಗತಿಸಿ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ ವಂದಿಸಿದರು. ಉಪನ್ಯಾಸಕಿ ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

ಘಮಘಮಿಸಿದ 100 ಕ್ಕೂ ಹೆಚ್ಚಿನ ಖಾದ್ಯಗಳು :

ಉಪ್ಪಿನಕಾಯಿ, ತಿಮರೆ ಚಟ್ನಿ, ಹೆಸರುಕಾಳು ಚಟ್ನಿ, ಬೇವಿನ ಸೊಪ್ಪು ಚಟ್ನಿ, ಕೆಸದ ಎಲೆಯ ಚಟ್ನಿ, ಪುದಿನ ಮತ್ತು ಪಾಲಕ್ ಚಟ್ನಿ,ಬಾಳೆ ಹೂ ಚಟ್ನಿ, ಹುರುಳಿ ಚಟ್ನಿ, ಒಣ ಮೀನು ಚಟ್ನಿ, ಉಪ್ಪಡ್ ಪಚ್ಚಿಲ್, ಬಾಳೆದಿಂಡು ಪಲ್ಯ, ತಜಂಕ್ ಪಲ್ಯ, ಕಣಿಲೆ ಗಸಿ, ಪೂಂಬೆ ಗಸಿ, ಬಾಳೆದಿಂಡು ಸಾರು, ಕೆಸದ ದಂಡಿನ ಗಸಿ, ಅಣಬೆ ಗಸಿ, ಕೆಸುವಿನ ಬಳ್ಳಿಯ ಪುಳಿಮುಂಚಿ, ಬಾಳೆ ಹೂವಿನ ಗಸಿ, ಮಾವಿನಕಾಯಿ ಪುಳಿಮುಂಚಿ, ಪತ್ರೋಡೆ ಗಸಿ, ಸಿಹಿ ಪತ್ರೋಡೆ, ಅರಶಿನ ಗಟ್ಟಿ, ಕಣಿಲೆ ಗಸಿ, ರಾಗಿ ಮಣ್ಣಿ, ಮೆಂತೆ ಮಣ್ಣಿ, ಮೆಂತೆ ಗಸಿ, ಮೆಂತೆ ಗಂಜಿ, ವಿಟಮಿನ್ ಸೊಪ್ಪಿನ ತಿಂಡಿ, ಮಂಡಿ ಚಿಕನ್, ಸ್ಪೈಸಿ ರೋಸ್ಟೆಡ್ ಚಿಕನ್ ಹೀಗೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದ ತಯಾರಿಸಲ್ಪಟ್ಟ ೧೦೦ ಕ್ಕೂ ಹೆಚ್ಚಿನ ಬಗೆಯ ಖಾದ್ಯಗಳು ಘಮಘಮಿಸುವಂತಾಗಿತ್ತು.

ಸಂಸ್ಕೃತಿಯ ಅನಾವರಣ.:

ಹಿಂದಿನ ತುಳು ಸಾಂಪ್ರದಾಯಿಕ ಪರಿಕರಗಳಾದ ತಡ್ಪೆ, ಕುಡುಪು, ಉಪ್ಪಿನಕಾಯಿ ಭರಣಿ, ನೊಗ, ನಾಯರ್, ಕೊಪ್ಪರಿಗೆ, ಗೆರಟೆ ಸೌಟು ಮುಂತಾದುವುಗಳನ್ನು ವೇದಿಕೆ ಕೆಳಗೆ ಸಾಲುಸಾಲಾಗಿ ಜೋಡಿಸಿಡಲಾಗಿತ್ತು. ತೆಂಗಿನಮರದ ತಾಳೆಗರಿ, ಮಾವಿನ ಎಲೆಗಳು, ಮುಟ್ಟಾಳೆ, ಭತ್ತದ ತೆನೆಗಳಿಂದ ವೇದಿಕೆಯನ್ನು ಸಿಂಗರಿಸಲಾಗಿತ್ತು. ಆಟಿ ಕಳಂಜೆ ಆಗಮನ, ಸುಗ್ಗಿ ನಲಿಕೆ, ಪಾಡ್ದನ, ಹುಲಿವೇಷ, ತುಳು ಆಟಗಳು, ಪದ್ಯ, ಡ್ಯಾನ್ಸ್ ಗಮನಸೆಳೆಯಿತು. ಕಾರ್ಯಕ್ರಮದಲ್ಲಿ ಹಮ್ಮಿಕೊಂಡ ಜನಪದ ಕ್ರೀಡೆಗಳ ವಿಜೇತರಾದ ಕುಂಟೆಬಿಲ್ಲೆಯಲ್ಲಿ ದೇವಿಕಾ ಇ(ಪ್ರ), ಅನೀಷ(ದ್ವಿ), ಚಿಂಕ್ರಾಟದಲ್ಲಿ ಮೇಘ ಐ(ಪ್ರ), ತುಷಾರ್(ದ್ವಿ), ಚೆನ್ನಮಣೆಯಲ್ಲಿ ಶ್ರುತಿ ಡಿ.ಟಿ(ಪ್ರ), ವರ್ಷಿಣಿ(ದ್ವಿ), ಕಲ್ಲಾಟದಲ್ಲಿ ಭಾಗ್ಯಲಕ್ಷ್ಮೀ ಕೆ.ಎಂ(ಪ್ರ), ಮೋಕ್ಷಾ ಎ(ದ್ವಿ)ರವರನ್ನು ಅಭಿನಂದಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top