ಕುತೂಹಲ ಕೆರಳಿಸಿದ ಅಕ್ಟೋಬರ್ 13ರಂದು ಕರೆದ ಔತಣ ಕೂಟ
ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ಮತ್ತೆ ಬಿರುಸಿನ ಚರ್ಚೆ ನಡೆಯುತ್ತಿದ್ದು, ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 13ರಂದು ತನ್ನ ಸಂಪುಟದ ಕೆಲವು ಸಹೋದ್ಯೋಗಿಗಳಿಗಾಗಿ ಏರ್ಪಡಿಸಿರುವ ಔತಣ ಕೂಟ ರಾಜಕೀಯ ಪಡಸಾಲೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ. ನವೆಂಬರ್ಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ತನ್ನ ಅರ್ಧ ಅವಧಿಯನ್ನು ಪೂರ್ಣಗೊಳಿಸುವತ್ತ ಸಾಗುತ್ತಿರುವಾಗ ಒಂದೆಡೆ ಸಂಪುಟ ಪುನರಾಚನೆ ಆಗಲಿದೆ ಎನ್ನುವ ಖಚಿತ ಸುದ್ದಿಗಳು ಹರಿದಾಡುತ್ತಿದ್ದರೆ ಇನ್ನೊಂದೆಡೆ ಮುಖ್ಯಮಂತ್ರಿಯೂ ಬದಲಾಗಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅಕ್ಟೋಬರ್ 13ರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಔತಣಕೂಟವನ್ನು ಈ ಎರಡೂ ಆಯಾಮಗಳಲ್ಲಿ ವಿಶ್ಲೇಷಿಲಾಗುತ್ತಿದೆ.
ಸಿದ್ದರಾಮಯ್ಯನವರು ಔತಣ ಕೂಟಕ್ಕೆ ಸಹೋದ್ಯೋಗಿಗಳನ್ನು ಆಹ್ವಾನಿಸಿರುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ನವೆಂಬರ್ ಮಧ್ಯಭಾಗದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ನಂತರ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡುವ ನಿರೀಕ್ಷೆಯಲ್ಲಿದ್ದು ಕಾಂಗ್ರೆಸ್ ವಲಯದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.
ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂಬ ವದಂತಿಗಳ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಪಾಳಯಕ್ಕೆ ಯಾವುದೇ ಬದಲಾವಣೆ ಇಲ್ಲ, ನಾನೇ ಪೂರ್ಣ 5 ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಎಂಬ ಸಂದೇಶ ಸಾರುವುದು ಕೂಡ ಸಿದ್ದರಾಮಯ್ಯನವರ ಆಲೋಚನೆಯಾಗಿದೆ ಎಂದು ಹೇಳಲಾಗುತ್ತಿದೆ.
ಗುರುವಾರ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದರು. ಸಿದ್ದರಾಮಯ್ಯ ಅವರ ನಿಷ್ಠಾವಂತರಾದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ ಬೆಂಗಳೂರಿನಲ್ಲಿರುವ ಮಾಜಿ ಎಂಎಲ್ಸಿ ಎಂ.ಸಿ ವೇಣುಗೋಪಾಲ್ ಅವರ ಅಪಾರ್ಟ್ಮೆಂಟ್ನಲ್ಲಿ ಉಪಹಾರ ಕೂಟದಲ್ಲಿ ಒಟ್ಟು ಸೇರಿದ್ದರು ಎನ್ನಲಾಗುತ್ತಿದೆ.
ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆಯ ಅಂತಿಮ ಸಾಧ್ಯತೆಯ ಬಗ್ಗೆ ಉಪಹಾರ ಕೂಟದಲ್ಲಿ ಸೇರಿದ್ದ ಈ ಮೂವರು ನಾಯಕರು ಚರ್ಚಿಸಿರಬಹುದು ಎಂದು ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುವುದರ ಜೊತೆಗೆ, ಶಕ್ತಿ ಪ್ರದರ್ಶನವಾಗಿ ಎಸ್ಸಿ/ಎಸ್ಟಿ ಸಮುದಾಯಗಳ ರ್ಯಾಲಿಯನ್ನು ಸಹ ಅವರು ಯೋಜಿಸುತ್ತಿರಬಹುದು ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಲಿಂಗಾಯತ ರ್ಯಾಲಿಯಲ್ಲಿ ಧಾರ್ಮಿಕ ಮುಖಂಡರು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದರು.
ಡಿಸಿಎಂ ಡಿ.ಕೆ ಶಿವಕುಮಾರ್ ಪಾಳಯ ಕೂಡ ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿದ್ದು, ಬಿಹಾರ ಚುನಾವಣೆಯ ನಂತರ ಸಿಎಂ ಹುದ್ದೆಗೆ ಬೇಡಿಕೆ ಇಟ್ಟರೆ, ಶಿವಕುಮಾರ್ ಅವರನ್ನು ಎದುರಿಸಲು ಸಿದ್ದರಾಮಯ್ಯ ದಲಿತ ಸಿಎಂ ಕಾರ್ಡ್ ಬಳಸಬಹುದು ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಯವರ ಔತಣ ಕೂಟದಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಮತ್ತು ಗುತ್ತಿಗೆದಾರರ ಭ್ರಷ್ಟಾಚಾರದ ಆರೋಪಗಳ ಸುತ್ತ ವಿಷಯಗಳ ಕುರಿತು ಕೇವಲ ಸಾಂದರ್ಭಿಕ ಚರ್ಚೆ ಮಾತ್ರ ಇರಬಹುದು. ರಾಜಕೀಯ ವಿಶ್ಲೇಷಕರ ಪ್ರಕಾರ, ಪ್ರತ್ಯೇಕ ಲಿಂಗಾಯತ ಧರ್ಮದ ಸ್ಥಾನಮಾನದ ವಿಷಯದ ಕುರಿತು ಎಂ.ಬಿ. ಪಾಟೀಲ್, ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಡುವಿನ ಭಿನ್ನಾಭಿಪ್ರಾಯಗಳನ್ನು ಸಿಎಂ ಅವರ ಹಸ್ತಕ್ಷೇಪವು ಕಡಿಮೆ ಮಾಡಲಿದೆ.
ಮುಖ್ಯಮಂತ್ರಿಗಳು ಸಹೋದ್ಯೋಗಿಗಳನ್ನು ಡಿನ್ನರ್ ಮೀಟ್ಗೆ ಕರೆದಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ ಡಿ.ಕೆ ಶಿವಕುಮಾರ್, ಔತಣಕೂಟದಲ್ಲಿ ಏನು ತಪ್ಪಾಗಿದೆ, ಪಕ್ಷದ ನಾಯಕರು ಒಟ್ಟಿಗೆ ಸೇರಿ, ಊಟ ಮಾಡಿ, ವಿಷಯಗಳ ಬಗ್ಗೆ ಚರ್ಚಿಸುವುದು ಸಹಜ ಎಂದು ಹೇಳಿದರು. ಯಾವುದೇ ಸಚಿವ ಸಂಪುಟ ಪುನಾರಚನೆ ಬಗ್ಗೆ ಗೊತ್ತಿಲ್ಲ, ಅದು ಮುಖ್ಯಮಂತ್ರಿಯವರ ವಿಶೇಷ ಹಕ್ಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ನನ್ನೊಂದಿಗೆ ಚರ್ಚಿಸಿದರೆ ನಾನು ನನ್ನ ಸಲಹೆಯನ್ನು ನೀಡುತ್ತೇನೆ. ಅನಗತ್ಯ ಗೊಂದಲ ಸೃಷ್ಟಿಸದಂತೆ ಮಾಧ್ಯಮಗಳಿಗೆ ನಾನು ಮನವಿ ಮಾಡುತ್ತೇನೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ನಡುವೆ ಬಿಜೆಪಿ ಸಿದ್ದರಾಮಯ್ಯ ಅವರ ಡಿನ್ನರ್ ಮೀಟ್ ವಿದಾಯಕೂಟ ಎಂದು ವ್ಯಾಖ್ಯಾನಿಸಿದೆ. ಈ ಕುರಿತು ಮಾತನಾಡಿರುವ ಬಿಜೆಪಿ ನಾಯಕ ಚಲವಾದಿ ನಾರಾಯಣ ಸ್ವಾಮಿ, ನವೆಂಬರ್ ಬಳಿಕ ರಾಜ್ಯದಲ್ಲಿ ಕ್ರಾಂತಿಯಾಗುವುದು ಖಚಿತ. ಕಾಂಗ್ರೆಸ್ನ ಒಳಗೆ ಏನೇನೋ ನಡೆಯುತ್ತಿದೆ. ಅವರು ಬಿಹಾರ ಚುನಾವಣೆ ಮುಗಿಯುವುದನ್ನೇ ಕಾಯುತ್ತಿದ್ದಾರೆ. ನಂತರ ಸಿದ್ದರಾಮಯ್ಯ ಅಧಿಅಕರದಿಂದ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಮುಂಚಿತವಾಗಿಯೇ ಸಿದ್ದರಾಮಯ್ಯ ಔತಣಕೂಟ ಏರ್ಪಡಿಸಿದ್ದಾರೆ ಎಂದಿದ್ದಾರೆ.
























