ಚಿನ್ನ 10 ಗ್ರಾಂಗೆ 1.24 ಲ.ರೂ; ಬೆಳ್ಳಿ ಕೆಜಿಗೆ 1.60 ಲಕ್ಷ ರೂ.
ಬೆಂಗಳೂರು: ಚಿನ್ನ ಮತ್ತು ಬೆಳ್ಳಿಯ ಬೆಲೆ ಮತ್ತೆ ಗಗನಮುಖಿಯಾಗಿದೆ. ಹಬ್ಬಗಳು, ಮದುವೆ ಸೀಸನ್ ಶುರುವಾಗಲೇ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಯಾಗುತ್ತಿರುವುದು ಜನರ ಚಿಂತೆಗೆ ಕಾರಣವಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಂಗಾರ ಮತ್ತು ಬೆಳ್ಳಿ ಎರಡೂ ಮಧ್ಯಮ ಮತ್ತು ಬಡ ವರ್ಗದವರಿಗೆ ಕೈಗೆಟುಕದಂತಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,24,000 ರೂ. ಮತ್ತು ಬೆಳ್ಳಿ ಕೆ.ಜಿಗೆ 1,60,000 ರೂ. ಆಗಿದೆ. ಪ್ರಮುಖವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೇಡಿಕೆ ಹೆಚ್ಚುತ್ತಿರುವುದು, ವಿವಿಧ ದೇಶದ ಬ್ಯಾಂಕ್ಗಳು ಚಿನ್ನ ಖರೀದಿಸುತ್ತಿರುವುದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಶುಲ್ಕ ನೀತಿ ಮೊದಲಾದ ಕಾರಣಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಯಾಗುತ್ತಿದೆ ಎಂದು ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.
ಬಂಗಾರದ ಬೆಲೆ ಏರಿಕೆಯಲ್ಲಿ ಪ್ರತಿದಿನ ಎಂಬಂತೆ ಸಾರ್ವಕಾಲಿಕ ದಾಖಲೆ ನಿರ್ಮಾಣವಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ 65% ರಷ್ಟು ದರ ಏರಿಕೆ ಆಗಿದ್ದರೂ ಸಹ ಚಿನ್ನದ ಮೇಲೆ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಬೆಳ್ಳಿ ಒಂದು ವರ್ಷದಲ್ಲಿ 75% ಏರಿಕೆಯಾಗಿದೆ. ಹಿಂದಿನ ಯಾವ ವರ್ಷಗಳಲ್ಲೂ ಆಗದ ಬೆಲೆ ಏರಿಕೆ ಈ ವರ್ಷ ಅಕ್ಟೋಬರ್ನಲ್ಲಿ ಆಗಿದೆ.
ಇನ್ನೂ 2-3 ತಿಂಗಳು ಇದೇ ದರ ಇರಲಿದ್ದು, 10 ಗ್ರಾಂ ಚಿನ್ನದ ಬೆಲೆ 1,35,000 ರೂ. ಹಾಗೂ ಬೆಳ್ಳಿ ಕೆ.ಜಿಗೆ 1,75,000 ರೂ.ವರೆಗೆ ಹೆಚ್ಚಳವಾಗುವ ಸಾಧ್ಯತೆಯಿದೆ. ಇನ್ನೂ ಒಂದೆರಡು ತಿಂಗಳಲ್ಲಿ ಕೇವಲ 10ರಿಂದ 15% ಮಾತ್ರ ಇಳಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಶಾಸ್ತ್ರಕ್ಕಾಗಿ ಚಿನ್ನ ಖರೀದಿಸಿ, ಯಾವುದೇ ಕಾರಣಕ್ಕೂ ಚಿನ್ನದ ಮೇಲೆ ಹೂಡಿಕೆ ಮಾಡಬೇಡಿ ಎಂದು ಹಣಕಾಸು ತಜ್ಞರು ಹೇಳುತ್ತಿದ್ದಾರೆ.
























