ಧರ್ಮಸ್ಥಳ ಪ್ರಕರಣ : ಹೊಸ ಸ್ಥಳದಲ್ಲೂ ಸಿಗದ ಮೃತದೇಹದ ಅವಶೇಷ

ಮೃತದೇಹ ಹೂತಿರುವುದನ್ನು ನೋಡಿದ್ದೇವೆ ಎಂದು ಇನ್ನಿಬ್ಬರಿಂದ ದೂರು

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ಸಾಕ್ಷಿ ದೂರುದಾರ ತೋರಿಸಿದ ಬೊಳಿಯಾರು ಸಮೀಪದ ಅರಣ್ಯದಲ್ಲಿ ಎಸ್‌ಐಟಿ ತಂಡ ಶುಕ್ರವಾರ ಕಾರ್ಯಾಚರಣೆ ನಡೆಸಿದ್ದು, ಆದರೆ ಅಲ್ಲಿ ಕೂಡ ಏನೂ ಸಿಕ್ಕಿಲ್ಲ. ಮುಸುಕುಧಾರಿ ದೂರುದಾರ ಈ ಹಿಂದೆ 13 ಸ್ಥಳಗಳಲ್ಲಿ ತೋರಿಸಿದ್ದ ಜಾಗಗಳ ಹೊರತಾಗಿ ಇನ್ನೂ ಕೆಲವು ಜಾಗಗಳನ್ನು ತೋರಿಸಿದ್ದು, ಅಲ್ಲೂ ಗುರುತು ಮಾಡಿ ಅಗೆಯಲು ತೊಡಗಿದ್ದಾರೆ.

ಶುಕ್ರವಾರ ಮಧ್ಯಾಹ್ನದ ವೇಳೆ ಎಸ್‌ಐಟಿ ಸಾಕ್ಷಿ ದೂರುದಾರನೊಂದಿಗೆ ಬೊಳಿಯಾರು ಸಮೀಪದ ಅರಣ್ಯಕ್ಕೆ ಅಗಮಿಸಿ ಕಾರ್ಯಾಚರಣೆ ಆರಂಭಿಸಿತ್ತು. ಸಾಕ್ಷಿ ದೂರುದಾರ ಈ ಪ್ರದೇಶದ ಅರಣ್ಯದಲ್ಲಿ ತಾನು ಮೃತದೇಹ ಹೂತು ಹಾಕಿರುವುದಾಗಿ ಒಂದು ಸ್ಥಳವನ್ನು ಗುರುತಿಸಿದ್ದಾನೆ. ಆತ ಗುರುತಿಸಿದ ಸ್ಥಳದಲ್ಲಿ ಹಿಟಾಚಿಯನ್ನು ಬಳಸಿಕೊಂಡು ಕಾರ್ಮಿಕರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು. ಆದರೆ ಆತ ತೋರಿಸಿದ ಹೊಸ ಜಾಗದಲ್ಲಿಯು ಯಾವುದೇ ಮೃತದೇಹದ ಅವಶೇಷ ಪತ್ತೆಯಾಗಿಲ್ಲ. ಸಂಜೆ 5.30ರ ಸುಮಾರಿಗೆ ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿ ಹಿಂದಿರುಗಿದ್ದಾರೆ.





















































 
 

ಇನ್ನಿಬ್ಬರಿಂದ ದೂರು

ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ಸಾಕ್ಷಿ ದೂರುದಾರನನ್ನು ತಾವು ಗುರುತಿಸಿದ್ದು, ಆತ ಹೆಣಗಳನ್ನು ಹೂತು ಹಾಕಿರುವುದನ್ನು ನಾವು ಗಮನಿಸಿದ್ದೇವೆ ಎಂದು ಹೇಳಿಕೊಂಡು ಮತ್ತಿಬ್ಬರು ವ್ಯಕ್ತಿಗಳು ಎಸ್‌ಐಟಿ ಮುಂದೆ ಬಂದಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.

ಈ ದೂರನ್ನು ಸ್ವೀಕರಿಸಿರುವ ಪೊಲೀಸರು ಅದನ್ನು ಎಸ್‌ಐಟಿಗೆ ಹಸ್ತಾಂತರಿಸಿದ್ದಾರೆ. ಸಾಕ್ಷಿ ದೂರುದಾರ ನೀಡಿರುವ ಹೇಳಿಕೆಯ ವಿಚಾರದಿಂದ ಹಾಗೂ ಮಾಧ್ಯಮದಲ್ಲಿ ನೋಡಿ ಆತನನ್ನು ಗುರುತಿಸಿದ್ದು, ಆತ ಈ ಹಿಂದೆ ರಹಸ್ಯವಾಗಿ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿದ್ದರು. ಗ್ರಾಮದಲ್ಲಿ ಇದೆಲ್ಲ ನಡೆಯುವಾಗ ರಹಸ್ಯವಾಗಿ ಉಳಿಯುವುದಿಲ್ಲ, ಈತ ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ನಮಗೂ ಮಾಹಿತಿಯಿದೆ. ಈ ಬಗ್ಗೆ ಸ್ವತಂತ್ರವಾಗಿ ಮೃತದೆಹಗಳನ್ನು ಹೂತು ಹಾಕಿರುವ ಜಾಗಗಳನ್ನು ಗುರುತಿಸಲು ಅವಕಾಶ ನೀಡಬೇಕು ಎಂದು ದೂರಿನಲ್ಲಿ ವಿನಂತಿಸಿದ್ದಾರೆ.

ಈ ನಡುವೆ ಎಸ್‌ಐಟಿಗೆ ದೂರು ನೀಡಿದ್ದ ಹೋರಾಟಗಾರ ಜಯಂತ್ ಟಿ. ಶುಕ್ರವಾರ ಎಸ್‌ಐಟಿ ಕಚೇರಿಗೆ ಆಗಮಿಸಿದ್ದು, ಈ ಸಂದರ್ಭ ಅಧಿಕಾರಿಗಳು ಅವರಿಂದ ಮಾಹಿತಿಗಳನ್ನು ಕಲೆಹಾಕಿರುವುದಾಗಿ ತಿಳಿದು ಬಂದಿದೆ. ಜಯಂತ್ ತಾನು ಮೃತದೇಹವೊಂದನ್ನು ಹೂತು ಹಾಕುವುದನ್ನು ನೋಡಿದ್ದೇನೆ ಆ ಸ್ಥಳವನ್ನು ಗುರುತಿಸುತ್ತೇನೆ ಎಂದು ಎಸ್‌ಐಟಿ ಮುಂದೆ ಹೇಳಿಕೆ ನೀಡಿದ್ದರು.

error: Content is protected !!
Scroll to Top