ತ್ಯಾಜ್ಯದ ಲಾರಿಯಲ್ಲಿ ಶವ ಎಸೆದು ಹೋಗಿದ್ದ ಕೊಲೆ ಪಾತಕಿ
ಬೆಂಗಳೂರು : ಬೆಂಗಳೂರಿನ ಚನ್ನಮ್ಮನಕೆರೆ ಠಾಣಾ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ನಡೆದಿದ್ದ ಕೊಲೆ ರಹಸ್ಯವನ್ನು ಪೊಲೀಸರು ಕೊನೆಗೂ ಬಯಲಿಗೆಳೆದು ಆರೋಪಿಯನ್ನು ಬಂಧಿಸಿದ್ದಾರೆ. ಇಬ್ಬರು ಮಕ್ಕಳ ತಾಯಿಯ ಜೊತೆ ವಿವಾಹಿತನ ಲಿವಿಂಗ್ ಟುಗೆದರ್ ಕೊಲೆಯ ಹಿಂದಿನ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸಂಶುದ್ದೀನ್ ಎಂಬಾತನನ್ನು ಭಾನುವಾರ ರಾತ್ರಿ ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯ ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಕೊಲೆ ರಹಸ್ಯವನ್ನು ಬಯಲು ಮಾಡಿದ್ದಾರೆ. ಮೃತ ಮಹಿಳೆಯನ್ನು ಆಶಾ ಎಂದು ಗುರುತಿಸಲಾಗಿದೆ.
ಆರೋಪಿ ಸಂಶುದ್ದೀನ್ ಅಸ್ಸಾಂ ಮೂಲದವ. ಆತನಿಗೆ ಅಸ್ಸಾಂನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಸಂಶುದ್ದೀನ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಆಶಾ ಪರಿಚಯವಾಗಿದೆ. ಆಶಾಳ ಗಂಡ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಇದ್ದಾರೆ. ಇಬ್ಬರಲ್ಲೂ ಪ್ರಮಾಂಕುರವಾಗಿದ್ದು, ಹುಳಿಮಾವಿನಲ್ಲಿ ಮನೆ ಮಾಡಿಕೊಂಡು ಲಿವಿಂಗ್ ಟುಗೆದರ್ನಲ್ಲಿದ್ದರು.
ಸಂಶುದ್ದೀನ್ ಹಾಗೂ ಆಶಾ ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ನಂತರ ಆಶಾ ಪದೇ ಪದೇ ಜಗಳ ಮಾಡಲು ಆರಂಭಿಸಿದ್ದರು ಎನ್ನಲಾಗಿದೆ. ಶನಿವಾರ ಜಗಳ ಅತಿರೇಕಕ್ಕೆ ತಿರುಗಿದ್ದು, ಆಶಾಳ ಕತ್ತು ಹಿಸುಕಿ ಸಂಶುದ್ದೀನ್ ಕೊಲೆ ಮಾಡಿದ್ದಾನೆ.
ನಂತರ ಮೃತದೇಹವನ್ನು ಬೈಕ್ನಲ್ಲಿ ತಂದು ಚನ್ನಮ್ಮನಕೆರೆ ಠಾಣಾ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ಕಸದ ಲಾರಿಯಲ್ಲಿ ಎಸೆದು ಪರಾರಿಯಾಗಿದ್ದ.
ಶನಿವಾರ ರಾತ್ರಿ ಸ್ಥಳೀಯ ವ್ಯಕ್ತಿಯೊಬ್ಬರು ಕಸ ಹಾಕಲು ಬಂದಿದ್ದಾಗ ಕಸದ ಲಾರಿಯಲ್ಲಿ ಯುವತಿಯ ತಲೆ ಕೂದಲು ಕಾಣಿಸಿತ್ತು. ಅವರು ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಶವವೊಂದು ಮೂಟೆಕಟ್ಟಿ ಎಸೆದ ಸ್ಥಿತಿಯಲ್ಲಿರುವುದನ್ನು ಕಂಡಿದ್ದಾರೆ. ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು, ಹಂತಕನಿಗೆ ಶೋಧ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರ ಕೈಗೆ ಹಂತಕ ಸಿಕ್ಕಿಬಿದ್ದಿದ್ದು, ಕೊಲೆ ರಹಸ್ಯ ಬಯಲಾಗಿದೆ.
























