ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ನಿವೃತ್ತ ಪೊಲೀಸ್ ಉನ್ನತಾಧಿಕಾರಿಯ ಕೊಲೆ
ಬೆಂಗಳೂರು : ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ (68) ಹತ್ಯೆ ಪ್ರಕರಣ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದೆ. ಹತ್ಯೆ ಸಂಬಂಧ ಅವರ ಪತ್ನಿ ಹಾಗೂ ಮಗಳನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ತನಿಖಾಧಿಕಾರಿಗಳ ಎದುರು ಓಂ ಪ್ರಕಾಶ್ ಪತ್ನಿ ಪಲ್ಲವಿ ಅವರು ಅನೇಕ ಸ್ಫೋಟಕ ಅಂಶಗಳನ್ನು ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪತ್ನಿ ಪಲ್ಲವಿ ಹಾಗೂ ಮಗಳು ಕೃತಿ ಸದ್ಯ ಪೊಲೀಸರ ವಶದಲ್ಲಿದ್ದಾರೆ. ಇಂದು ಓ ಪ್ರಕಾಶ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪದೇಪದೆ ಗನ್ ತಂದು ನನಗೆ ಮತ್ತು ಮಗಳಿಗೆ ಬೆದರಿಕೆ ಹಾಕುತ್ತಿದ್ದರು. ಶೂಟ್ ಮಾಡುವುದಾಗಿ ಹೆದರಿಸುತ್ತಿದ್ದರು. ಬೆಳಗ್ಗೆಯಿಂದ ಬೇರೆಬೇರೆ ವಿಚಾರಕ್ಕೆ ಮನೆಯಲ್ಲಿ ಜಗಳವಾಗಿದೆ. ಮಧ್ಯಾಹ್ನ ಜಗಳ ವಿಕೋಪಕ್ಕೆ ಹೋಗಿ ನಮ್ಮನ್ನೇ ಕೊಲೆ ಮಾಡಲು ಓಂಪ್ರಕಾಶ್ ಯತ್ನಿಸಿದ್ದರು. ನಮ್ಮ ಜೀವ ಉಳಿಸಿಕೊಳ್ಳಲು ನಾವು ಹೋರಾಟ ಮಾಡಿದೆವು ಎಂದು ಓಂ ಪ್ರಕಾಶ್ ಪತ್ನಿ ಪಲ್ಲವಿ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ನಮ್ಮ ಜೀವ ಉಳಿಸಿಕೊಳ್ಳಲು ನಾವು ಹೋರಾಡಿದೆವು. ಖಾರದಪುಡಿ ಹಾಗೂ ಅಡುಗೆ ಎಣ್ಣೆ ಹಾಕಿದೆವು. ಕೈಕಾಲು ಕಟ್ಟಿ ಚಾಕುವಿನಿಂದ ಚುಚ್ಚಿದ್ದೆವು ಎಂದು ಓಂ ಪ್ರಕಾಶ್ ಪತ್ನಿ ಪಲ್ಲವಿ ತನಿಖಾಧಿಕಾರಿಗಳ ಬಳಿ ಹೇಳಿದ್ದಾರೆ ಎನ್ನಲಾಗಿದೆ. ತೀವ್ರ ರಕ್ತಸ್ರಾವದಿಂದ ಓಂ ಪ್ರಕಾಶ್ ಸಾವಿಗೀಡಾಗಿದ್ದಾರೆ. ಘಟನೆ ನಂತರ ಸಂಜೆ ಸ್ಥಳೀಯ ಪೊಲೀಸರಿಗೆ ಪಲ್ಲವಿ ಮಾಹಿತಿ ನೀಡಿದ್ದರು. ಘಟನೆ ಕುರಿತು ಓಂ ಪ್ರಕಾಶ್ ಪುತ್ರ ದೂರು ನೀಡಿದ್ದಾರೆ. ಸದ್ಯಕ್ಕೆ ಯಾರನ್ನೂ ಬಂಧಿಸಿಲ್ಲ. ಆದರೆ, ಅವರ ಪತ್ನಿ, ಮಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಭಾನುವಾರ ರಾತ್ರಿ ತಿಳಿಸಿದ್ದಾರೆ.
ನಡೆದದ್ದೇನು?
ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ನಿವಾಸದಲ್ಲಿ ಓಂ ಪ್ರಕಾಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ ಎಂಬ ಮಾಹಿತಿ ಮಧ್ಯಾಹ್ನದ ಹೊತ್ತಿಗೆ ಪೊಲೀಸರಿಗೆ ಸಿಕ್ಕಿತ್ತು. ಕೂಡಲೇ ಉನ್ನತ ಪೊಲೀಸ್ ಅಧಿಕಾರಿಗಳು ಮನೆಗೆ ಧಾವಿಸಿದ್ದಾರೆ. ಮನೆ ತುಂಬ ರತ್ಕ ಚೆಲ್ಲಿತ್ತು. ಓಂಪ್ರಕಾಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. 10-11 ಬಾರಿ ಚಾಕುವಿನಿಂದ ಚುಚ್ಚಿ ಅವರನ್ನು ಸಾಯಿಸಲಾಗಿತ್ತು. ಓಂ ಪ್ರಕಾಶ್ ಅವರು 1981ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದರು. 2015ರಲ್ಲಿ ರಾಜ್ಯದ 38ನೇ ಡಿಜಿ & ಐಜಿಪಿಯಾಗಿದ್ದರು.
ಹಿರಿಯ ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಅವರು 2015ರ ಮಾರ್ಚ್‌ನಲ್ಲಿ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು (ಡಿಜಿ ಮತ್ತು ಐಜಿಪಿ) ಆಗಿ ಅಧಿಕಾರ ವಹಿಸಿಕೊಂಡಿದ್ದರು. 1981ರ ಬ್ಯಾಚ್ ಐಪಿಎಸ್ ಅಧಿಕಾರಿಯಾದ ಓಂ ಪ್ರಕಾಶ್ 38ನೇ ಡಿಜಿ ಮತ್ತು ಐಜಿಪಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್, ನಾಗರಿಕ ರಕ್ಷಣಾ ನಿರ್ದೇಶಕ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಓಂ ಪ್ರಕಾಶ್ ಮೂಲತಃ ಬಿಹಾರದ ಚಂಪಾರಣ್ ಜಿಲ್ಲೆಯವರು. ಬಳ್ಳಾರಿಯ ಹರಪನಹಳ್ಳಿ ಉಪವಿಭಾಗದ ಎಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. ನಂತರ, ರಾಜ್ಯ ಜಾಗೃತ ಆಯೋಗ ಮತ್ತು ಕರ್ನಾಟಕ ಲೋಕಾಯುಕ್ತ ಎಸ್ಪಿಯಾಗಿ ಮತ್ತು ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಎಸ್ಪಿಯಾಗಿ ಬಡ್ತಿ ಪಡೆದ್ದರು.
1993 ರಲ್ಲಿ ಭಟ್ಕಳ ಕೋಮು ಗಲಭೆಗಳನ್ನು ನಿರ್ವಹಿಸಲು ಅವರನ್ನು ಆಯ್ಕೆ ಮಾಡಲಾಗಿತ್ತು. ಅವರು ಡಿಐಜಿ (ಆಡಳಿತ), ಡಿಐಜಿ-ಉತ್ತರ ವಲಯ, ಡಿಐಜಿ-ತರಬೇತಿ ಮತ್ತು ಡಿಐಜಿ ಅಗ್ನಿಶಾಮಕ ದಳದವರಾಗಿದ್ದರು. ಐಜಿಪಿಯಾಗಿ, ಅವರನ್ನು ಸಿಐಡಿಯಲ್ಲಿ ನೇಮಿಸಲಾಗಿತ್ತು ಮತ್ತು ಸಾರಿಗೆ ಆಯುಕ್ತರಾಗಿಯೂ ಕೆಲಸ ಮಾಡಿದ್ದರು. ಅವರು ಎಡಿಜಿಪಿ (ಅಪರಾಧ ಮತ್ತು ತಾಂತ್ರಿಕ ಸೇವೆಗಳು) ಮತ್ತು ಎಡಿಜಿಪಿ (ಕುಂದುಕೊರತೆಗಳು ಮತ್ತು ಮಾನವ ಹಕ್ಕುಗಳು) ಆಗಿದ್ದರು.
ಆಸ್ತಿ ವಿವಾದ ಕಾರಣ?
ಓಂ ಪ್ರಕಾಶ್ ಬರ್ಬರ ಹತ್ಯೆ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತಂಗಿಯರಿಗೆ ಆಸ್ತಿ ಕೊಟ್ಟಿದ್ದಕ್ಕೆ ಕೊಲೆ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಓಂ ಪ್ರಕಾಶ್ ಅವರಿಗೆ ಎರಡು ಮನೆ ಬೆಂಗಳೂರಿನಲ್ಲಿ ಇದೆ. ಕಾವೇರಿ ಜಂಕ್ಷನ್‌ನ ಪ್ರೆಸ್ಟೀಜ್ ಅಪಾರ್ಟ್ಮೆಂಟ್‌ನಲ್ಲಿ ಫ್ಲಾಟ್ ಇದೆ. ಎಚ್‌ಎಸ್‌ಆರ್ ಲೇಔಟ್‌ನ ಐಪಿಎಸ್ ಕ್ವಾಟ್ರಸ್‌ನಲ್ಲಿ ಮನೆ ಇವೆ. ಮನೆಯಲ್ಲಿ ಗಲಾಟೆ ಆದಾಗ ಪ್ರೆಸ್ಟೀಜ್ ಅಪಾರ್ಟ್ಮೆಂಟ್‌ನಲ್ಲಿ ಓಂ ಪ್ರಕಾಶ್ ಇರುತ್ತಿದ್ದರು.
ಉತ್ತರ ಕನ್ನಡದ ದಾಂಡೇಲಿಯಲ್ಲೂ ಸಾಕಷ್ಟು ಆಸ್ತಿ ಇದೆ. ಈ ಆಸ್ತಿ ವಿಚಾರಕ್ಕೆ ಐಪಿಎಸ್ ಅಧಿಕಾರಿಯ ಹತ್ಯೆ ಆಗಿದೆಯಾ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ. ಕೆಲವು ಆಸ್ತಿಯನ್ನು ತಂಗಿಯರ ಹೆಸರಿಗೆ ಬರೆದಿದ್ದರು ಎನ್ನಲಾಗಿದೆ. ಈ ವಿಚಾರಕ್ಕೆ ಹಲವು ದಿನಗಳಿಂದ ಗಲಾಟೆ ನಡೆದಿತ್ತು ಎನ್ನಲಾಗಿದೆ. ತಂಗಿಯರ ವಿಚಾರ ಮಾತಾಡಬೇಡ ಎಂದು ಈ ಹಿಂದೆ ಪತ್ನಿಗೆ ಎಚ್ಚರಿಕೆ ಕೊಟ್ಟಿದ್ದರು ಎನ್ನಲಾಗಿದೆ.