ಹೊಸದಿಲ್ಲಿ: ಕೇಂದ್ರದ ಬಜೆಟ್ ಅಧಿವೇಶನ ಶುಕ್ರವಾರ ಶುರುವಾಗಿದ್ದು, ಮೊದಲ ದಿನ ರಾಷ್ಟ್ರಪತಿ ದ್ರೌಪತಿ ಮುರ್ಮು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಇದಾದ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಭಯ ಸದನದಲ್ಲೂ ಆರ್ಥಿಕ ಸಮೀಕ್ಷಾ ವರದಿ ಮಂಡಿಸಿದ್ದು,. 2024-25 ರ ಆರ್ಥಿಕ ಸಮೀಕ್ಷೆಯ ಪ್ರಕಾರ 2025-26 ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.6.3% ಮತ್ತು ಶೇ.6.8ರ ನಡುವೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮುಂಬರುವ ವರ್ಷದಲ್ಲಿ ಆರ್ಥಿಕ ಬೆಳವಣಿಗೆ ನಿಧಾನವಾಗಬಹುದು ಎಂದು ಆರ್ಥಿಕ ಸಮೀಕ್ಷೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮಧ್ಯಮ ವರ್ಗ ಮತ್ತು ನೌಕರ ವರ್ಗದವರು ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿ ಏರಿಕೆಯೂ ಸೇರಿದಂತೆ ಹಲವು ಕೊಡುಗೆಗಳನ್ನು ನಿರೀಕ್ಷಿಸುತ್ತಿದ್ದಾರೆ.
ಜಿಡಿಪಿ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆಯಿರುವುದರಿಂದ ಹಣದುಬ್ಬರ ಸಹಜವಾಗಿಯೇ ಏರಿಕೆಯಾಗುವ ಸಾಧ್ಯತೆಯಿದೆ. ಹಣದುಬ್ಬರ ಏರಿಕೆಯಾದರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನಸಮಾನ್ಯರು, ವೇತನದಾರರು, ಸ್ತ್ರೀ ಸಮುದಾಯ, ಮಧ್ಯಮವರ್ಗದವರು ಬಹಳ ತೊಂದರೆಗೊಳಗಾಗುತ್ತಾರೆ. ಇವರಿಗೆ ನಿರ್ಮಲಾ ಸೀತಾರಾಮನ್ ಇಂದಿನ ಬಜೆಟ್‌ನಲ್ಲಿ ಯಾವ ಪರಿಹಾರ ನೀಡುತ್ತಾರೆ ಎಂಬ ಕುತೂಹಲ ಇದೆ. ಇಂದು ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವುದು ಮೋದಿ ಸರ್ಕಾರದ ಮೂರನೇ ಅವಧಿಯ ಪೂರ್ಣ ಪ್ರಮಾಣದ ಮೊದಲ ಬಜೆಟ್. ಬಡ ಮತ್ತು ಮಧ್ಯಮವರ್ಗ ರೈತರು, ವ್ಯಾಪಾರಿಗಳಿಗೆ, ವೇತನದಾರರಿಗೆ ಮೋದಿ ಭರ್ಜರಿ ಕೊಡುಗೆ ಕೊಡುತ್ತಾರೆಂಬ ನಿರೀಕ್ಷೆ ಇದೆ. ಈ ಬಗ್ಗೆ ಸುಳಿವು ನೀಡಿರುವ ಮೋದಿ, ಐತಿಹಾಸಿಕ ಬಜೆಟ್ ಮಂಡಿಸುತ್ತೇವೆ ಎಂದಿದ್ದಾರೆ.
ಮುಖ್ಯವಾಗಿ ವೇತನದಾರರ ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಾಗಬಹುದಂಬ ನಿರೀಕ್ಷೆ ಇದೆ. 80ಸಿ ಅಡಿಯಲ್ಲಿ ಇರುವ ತೆರಿಗೆ ವಿನಾಯಿತಿಯನ್ನು ಒಂದೂವರೆ ಲಕ್ಷದಿಂದ ಎರಡು ಲಕ್ಷಕ್ಕೆ ಏರಿಸುವ ಸಾಧ್ಯತೆ ಇದೆ. ಹಾಗೆಯೇ ಸದ್ಯ 15 ಲಕ್ಷಕ್ಕಿಂತ ಹೆಚ್ಚು ವೇತನ ಪಡೆಯುವವರು 30ರಷ್ಟು ಆದಾಯ ಪಾವತಿಸುತ್ತಿದ್ದಾರೆ. ಈ ಮಿತಿಯನ್ನು 20ಲಕ್ಷಕ್ಕೆ ಏರಿಕೆ ಮಾಡಿ, 15ರಿಂದ 20 ಲಕ್ಷಕ್ಕೆ ಮತ್ತೊಂದು ಸ್ಲ್ಯಾಬ್ ನೀಡಬಹುದು ಎನ್ನಲಾಗುತ್ತಿದೆ. ಇನ್ನೂ ಹೊಸ ತೆರಿಗೆ ಪದ್ಧತಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ 75 ಸಾವಿರ ರೂ. ಇದ್ದು, ಇದನ್ನ 1 ಲಕ್ಷಕ್ಕೆ ಏರಿಕೆ ಮಾಡುವ ನಿರೀಕ್ಷೆ ಇದೆ. ಸದ್ಯ 7 ಲಕ್ಷ ದಾಟಿದ್ರೆ 3 ಲಕ್ಷದಿಂದಲೂ ತೆರಿಗೆ ಪಾವತಿಸುವ ಪದ್ಧತಿಯಿದೆ. ಈ ಮೀತಿಯನ್ನ 5 ಲಕ್ಷಕ್ಕೆ ಹೆಚ್ಚಿಸಬಹುದು. ಈ ಮೂಲಕ ಹಳೇ ತೆರಿಗೆ ಪದ್ಧತಿಗೆ ನಿಧಾನವಾಗಿ ತಿಲಾಂಜಲಿ ಹಾಡಿ ಹೊಸ ತೆರಿಗೆ ಪದ್ಧತಿಗೆ ಉತ್ತೇಜನ ನೀಡಲು 7 ಲಕ್ಷದವರೆಗೂ ಇರುವ ತೆರಿಗೆ ವಿನಾಯಿತಿಯನ್ನ 10 ಲಕ್ಷಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ.