ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಲಾದ ಸೋಂಕು
ಮಂಗಳೂರು: ದುಬೈಯಿಂದ ಬಂದಿದ್ದ ಕಾರ್ಕಳ ಮೂಲದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ 40 ವರ್ಷದ ಈ ವ್ಯಕ್ತಿಯ ಮಾದರಿಯನ್ನು ಪರೀಕ್ಷೆ ಮಾಡಿ ಮಂಕಿಪಾಕ್ಸ್ (MPox) ಪ್ರಕರಣ ದೃಢಪಡಿಸಿದೆ.
ಕಳೆದ 19 ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿರುವ ಈ ವ್ಯಕ್ತಿ ಜನವರಿ 17ರಂದು ಊರಿಗೆ ಆಗಮಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ದದ್ದುಗಳ ಲಕ್ಷಣಗಳು ಕಂಡುಬಂದವು ಮತ್ತು ಜ್ವರ ಕಾಣಿಸಿಕೊಂಡಿತ್ತು. ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಬೆಡ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಯಿತು. ಅವರ ಎಂಪೋಕ್ಸ್ ಮಾದರಿಗಳನ್ನು ಬೆಂಗಳೂರು ವೈದ್ಯಕೀಯ ಕಾಲೇಜಿಗೆ (BMC) ಮತ್ತು ನಂತರ ಪುಣೆಗೆ ರವಾನಿಸಲಾಯಿತು. ಪುಣೆಯ ಪರೀಕ್ಷೆಯಲ್ಲಿ ಮಂಕಿಪಾಕ್ಸ್ ಇರುವುದು ದೃಢಪಟ್ಟಿದೆ. ಈಗ ಈ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ ಮತ್ತು ಯಾವುದೇ ಗಂಭೀರ ತೊಂದರೆಗಳಿಲ್ಲ. ಅವರು ಶೀಘ್ರದಲ್ಲೇ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಹೇಳಿದ್ದಾರೆ. ರೋಗಿಯ 36 ವರ್ಷದ ಪತ್ನಿಯನ್ನು ಪ್ರಾಥಮಿಕ ಸಂಪರ್ಕಿತ ವ್ಯಕ್ತಿ ಎಂದು ಗುರುತಿಸಿ ಅವರ ಮೇಲೆ ನಿಗಾ ಇಡಲಾಗಿದೆ. ಕೆಲವು ದಿನಗಳವರೆಗೆ ಅವರಿಗೆ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ. ಮಂಕಿಪಾಕ್ಸ್ ಪ್ರಕರಣಕ್ಕೆ ಸಾರ್ವಜನಿಕರು ಭಯಭೀತರಾಗಬಾರದು ಎಂದು ಸೂಚಿಸಲಾಗಿದೆ. ಈ ಪ್ರಕರಣ ಸೌಮ್ಯ ಸ್ವರೂಪದ್ದಾಗಿದ್ದು, ಸೋಂಕು ಹರಡುವ ಪ್ರಮಾಣ ಕಡಿಮೆಯಿದೆ. ಆದರೆ ಜ್ವರ, ತಲೆನೋವು, ಸ್ನಾಯು ನೋವು, ಶೀತ, ಬೆವರುವುದು, ಗಂಟಲು ನೋವು ಮತ್ತು ಕೆಮ್ಮಿನಂತಹ ಚರ್ಮದ ದದ್ದುಗಳಂತಹ ಸಾಮಾನ್ಯ ಲಕ್ಷಣಗಳನ್ನು ಗಮನಿಸಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ. ಈ ವೈರಸ್‌ನ ಹಾವಳಿ ಹೆಚ್ಚಿರುವ ದೇಶಗಳಿಗೆ ಪ್ರಯಾಣಿಸಿದ ಇತಿಹಾಸವಿದ್ದರೆ ಅಥವಾ ಎಂಪಾಕ್ಸ್ ಪೀಡಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದರೆ ಈ ರೋಗಕ್ಕೆ ಸಂಬಂಧಿಸಿದ ಸಾಮಾನ್ಯ ಲಕ್ಷಣಗಳನ್ನು ಗಮನಿಸುವುದು ಒಳ್ಳೆಯದು ಎಂದು ಸೂಚಿಸಲಾಗಿದೆ.
ದೇಶದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವರದಿಯಾಗಿತ್ತು. ಕಳೆದ ತಿಂಗಳು, ಕೇರಳದಲ್ಲಿ ಎರಡು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದವು. ಕಳೆದ ವರ್ಷ ಕೆಲವು ಆಫ್ರಿಕನ್ ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗಿದ್ದವು. ನಂತರ ಪಾಕಿಸ್ಥಾನ ಮತ್ತು ಥಾಯ್ಲೆಂಡ್ ಸೇರಿದಂತೆ ಇತರ ದೇಶಗಳಲ್ಲಿ ಪ್ರಕರಣಗಳು ವರದಿಯಾಗಲು ಪ್ರಾರಂಭಿಸಿದಾಗ ಮಂಕಿಪಾಕ್ಸ್ ಬಗ್ಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಆತಂಕ ಸೃಷ್ಟಿಯಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸನ್ನು ಕಳೆದ ವರ್ಷ ‘ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಘೋಷಿಸಿತ್ತು.
ಮಂಕಿಪಾಕ್ಸ್ ಲಕ್ಷಣ
ಆರ್ಥೋಪಾಕ್ಸ್ ವೈರಸ್ ಕುಲದ ಮಂಕಿಪಾಕ್ಸ್ ವೈರಸ್‌ನಿಂದ ಉಂಟಾಗುವ ವೈರಲ್ ಸೋಂಕು ಮಂಕಿಪಾಕ್ಸ್. ಇದನ್ನು ಈಗ ಎಂಪಾಕ್ಸ್ ಎಂದು ಕರೆಯಲಾಗುತ್ತದೆ. ಸೋಂಕಿತ ರೋಗಿಯ ಲಾಲಾರಸ, ಬೆವರು ಮತ್ತು ಸೋಂಕಿತ ವಸ್ತುಗಳ ಮೂಲಕ ವೈರಸ್ ಆರೋಗ್ಯವಂತ ವ್ಯಕ್ತಿಗೆ ಹರಡುತ್ತದೆ. ಇಲ್ಲಿಯವರೆಗೆ ಈ ರೋಗಕ್ಕೆ ಯಾವುದೇ ಲಸಿಕೆ ಅಥವಾ ಔಷಧಿ ಕಂಡುಹಿಡಿದಿಲ್ಲ. ಊದಿಕೊಂಡ ದುಗ್ಧರಸ ಗ್ರಂಥಿಗಳು, ಜ್ವರ, ಚಳಿಯ ಅನುಭವ, ಸ್ನಾಯು ನೋವು, ತಲೆನೋವು, ಸುಸ್ತು ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ. ರೋಗಲಕ್ಷಣಗಳ ಆಧಾರದ ಮೇಲೆ ರೋಗಿಗೆ ಚಿಕಿತ್ಸೆ ನೀಡಲಾಗುತ್ತದೆ.