ಸಾಹಿತ್ಯ ಸಮ್ಮೇಳನ : ಸಾಹಿತ್ಯಕ್ಕಿಂತ ಬಾಡೂಟದ ಚರ್ಚೆಯೇ ಜೋರು

ಸಮ್ಮೇಳನದಲ್ಲಿ ಮಾಂಸಾಹಾರವೂ ಇರಬೇಕೆಂಬ ಬಲವಾದ ಬೇಡಿಕೆ

ಬೆಂಗಳೂರು : ಮಂಡ್ಯದಲ್ಲಿ ಡಿ.20ರಿಂದ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಈಗ ಸಾಹಿತ್ಯಕ್ಕಿಂತ ಹೆಚ್ಚಾಗಿ ಬಾಡೂಟವೇ ಚರ್ಚೆಗೆ ಈಡಾಗಿದೆ. ಕಳೆದ ಕೆಲವು ವರ್ಷಗಳಿಂದ ಕನ್ನಡಿಗರ ಸಂಭ್ರಮದ ನುಡಿ ಜಾತ್ರೆಯಾಗಬೇಕಾಗಿದ್ದ ಸಾಹಿತ್ಯ ಸಮ್ಮೇಳನ ಬೇರೆ ಬೇರೆ ಕಾರಣಗಳಿಗೆ ವಿವಾದಗಳಿಗೆ ಗುರಿಯಾಗುತ್ತಿದೆ. ಸಮ್ಮೇಳನದ ಅಧ್ಯಕ್ಷರು, ಗೋಷ್ಠಿಗಳು, ಭಾಗವಹಿಸುವವರು, ಅವಕಾಶ ಪಡೆದವರು, ಅವಕಾಶ ವಂಚಿತರು…ಹೀಗೆ ಪ್ರತಿವರ್ಷ ಸಮ್ಮೇಳನಕ್ಕೆ ವಿವಾದ ಸುತ್ತಿಕೊಳ್ಳುತ್ತಲೇ ಇದೆ. ಅವುಗಳೆಲ್ಲ ಸಾಹಿತ್ಯಕ್ಕೆ ಸಂಬಂಧಪಟ್ಟ ವೈಚಾರಿಕ ವಿಚಾರಗಳಾದ ಕಾರಣ ಒಂದು ಹಂತದವರೆಗೆ ಸಹ್ಯವೂ ಆಗಿತ್ತು.

ಆದರೆ ಈ ಸಲ ಸಾಹಿತ್ಯ ಸಮ್ಮೇಳನದಲ್ಲಿ ಯಾವ ರೀತಿಯ ಅಡುಗೆ ತಯಾರು ಮಾಡಬೇಕು, ಯಾರು ಬಡಿಸಬೇಕೆಂಬುದೇ ಮುನ್ನೆಲೆಗೆ ಬಂದು ಚರ್ಚೆಯಾಗುತ್ತಿರುವುದು ವಿಪರ್ಯಾಸಕರ. ಪ್ರಗತಿಪರರು ಎಂದು ಹೇಳಿಕೊಂಡ ಒಂದು ಗುಂಪು ಸಾಹಿತ್ಯ ಸಮ್ಮೇಳನದಲ್ಲಿ ಶಾಖಾಹಾರವೇ ಏಕಿರಬೇಕು, ಮಾಂಸಾಹಾರ ಏಕಿರಬಾರದು ಎಂಬ ಪ್ರಶ್ನೆ ಎತ್ತುವುದರೊಂದಿಗೆ ಈ ವಿವಾದ ಶುರುವಾಗಿ ಈಗ ಮಾಧ್ಯಮಗಳು ಮತ್ತು ಸೋಷಿಯಲ್‌ ಮೀಡಿಯಾಗಳಲ್ಲಿ ಚರ್ಚೆ ನಾನಾ ಮಗ್ಗುಲುಗಳತ್ತ ಹೊರಳಿದೆ.































 
 

ಸಮ್ಮೇಳನದಲ್ಲಿ ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳನ್ನು ಕಾಯ್ದಿರಿಸಿದವರಿಗೆ ಮಾಂಸಾಹಾರ, ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ ಎಂಬ ಪರಿಷತ್ತಿನ ನಿಯಮ ಇದೆ ಎಂಬ ವಿಚಾರ ಬಯಲಾದ ಬಳಿಕ ಸಾಹಿತ್ಯ ಸಮ್ಮೇಳನದಲ್ಲಿ ಬಡಿಸುವ ಆಹಾರದ ಬಗ್ಗೆ ದೊಡ್ಡ ಕೂಗು ಕೇಳಿ ಬರುತ್ತಿದೆ. ಬಾಡೂಟದ ಬಳಗ ಎಂಬ ವಾಟ್ಸಾಪ್‌ ಗ್ರೂಪ್‌ ಮಾಡಿ ಅದರಲ್ಲಿ ಬಾಡೂಟ, ಸಸ್ಯಾಹಾರದ ಊಟದ ಬಗ್ಗೆ ಹೆಚ್ಚು ಚರ್ಚೆ ನಡೆಸಲಾಗುತ್ತಿದೆ. ಸಾಹಿತ್ಯ ಸಮ್ಮೇಳನದಲ್ಲಿ ಅಧಿಕೃತವಾಗಿ ಮಾಂಸಾಹಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಮಾಂಸಾಹಾರವನ್ನು ಮದ್ಯ, ತಂಬಾಕಿಗೆ ಹೋಲಿಸಿದ್ದಾರೆ. ಇದು ಬಹುಸಂಖ್ಯಾತ ಶೂದ್ರ ಸಮುದಾಯಗಳಿಗೆ ಮಾಡುತ್ತಿರುವ ಅಪಮಾನ. ಈ ಶ್ರೇಷ್ಠತೆಯ ವ್ಯಸನ 86 ವರ್ಷಗಳಿಂದ ನಡೆಯುತ್ತಾ ಬರುತ್ತಿದೆ. ನಮ್ಮ ಮಕ್ಕಳ ಕಾಲಕ್ಕೂ ಈ ಪರಂಪರೆ ಮುಂದುವರಿಯುವುದು ಬೇಡ ಎಂದು ಬಾಡೂಟಕ್ಕಾಗಿ ಒಂದು ವರ್ಗ ಒತ್ತಾಯಿಸಿದೆ.

ಒಂದೆಡೆ ಆಹಾರದ ಹಕ್ಕು, ಬ್ರಾಹ್ಮಣರ ಆಹಾರ, ಶೂದ್ರರ ಆಹಾರ ಎಂಬಿತ್ಯಾದಿ ತಾರತಮ್ಯದ ಚರ್ಚೆಯಾಗುತ್ತಿದ್ದರೆ ಇನ್ನೊಂದೆಡೆ ಸಮ್ಮೇಳನದಲ್ಲಿ ಎಲ್ಲ ಕನ್ನಡಿಗರೂ ಭಾಗವಹಿಸುವುದರಿಂದ ೆಲ್ಲರಿಗೂ ಇಷ್ಟವಾಗುವ ಆಹಾರ ಇರಲಿ. ಸಸ್ಯಾಹಾರ ಬಯಸುವವರಿಗೆ ಸಸ್ಯಾಹಾರ, ಮಾಂಸಾಹಾರ ಬಯಸುವವರಿಗೆ ಮಾಂಸಾಹಾರ ಇರಲಿ ಎಂಬ ಅಪ್ಪಟ ವ್ಯಾವಹಾರಿಕೆ ಚರ್ಚೆ ನಡೆಯುತ್ತಿದೆ. ಸಾಹಿತ್ಯ ಸಮ್ಮೇಳನದಲ್ಲಿ ಬರೀ ಸಸ್ಯಾಹಾರವನ್ನೇ ಮಾಡುವುದು ಬ್ರಾಹ್ಮಣರ ದಬ್ಬಾಳಿಕೆಯಾಗುತ್ತದೆ. ಅನಾದಿ ಕಾಲದಿಂದಲೂ ಅವರೇ ಎಲ್ಲವನ್ನೂ ನಿರ್ಧರಿಸಿಕೊಂಡು ಬರುತ್ತಿದ್ದಾರೆ. ಸಮ್ಮೇಳನದಲ್ಲಿ ಶೂದ್ರರ ಧ್ವನಿಗೆ ಬೆಲೆ ಇಲ್ಲ ಎಂಬ ಜಾತಿ ನೆಲೆಯ ವಾದಗಳು ಕೂಡ ಬಿರುಸು ಪಡೆದುಕೊಂಡಿವೆ.

ಇದು ಮಡಿ ಸಾಹಿತ್ಯ ಸಮ್ಮೇಳನ. ಆಹಾರ ಸಮಾನತೆಗಾಗಿ ಪ್ರಜ್ಞಾವಂತರ ಸಾಮೂಹಿಕ ಹೋರಾಟ ನಡೆಸೋಣ. ಕುವೆಂಪು, ನಾಲ್ವಡಿ ಮಹಾರಾಜರು ಅತಿ ಹೆಚ್ಚು ಪ್ರೀತಿಸಿದ ನಮ್ಮ ಮಂಡ್ಯದ ನೆಲದಲ್ಲಿ ಬ್ರಾಹ್ಮಣ್ಯ ಮೇಲುಗೈ ಸಾಧಿಸಲು ಬಿಡಬಾರದು ಎಂದು ಜಾಲತಾಣದಲ್ಲಿ ಕರೆ ನೀಡಲಾಗುತ್ತಿದೆ. ಮಂಡ್ಯ ಜಿಲ್ಲೆ ಮಾಂಸಾಹಾರ, ರಾಗಿಮುದ್ದೆ ಊಟ ಮತ್ತು ಆತಿಥ್ಯಕ್ಕೆ ಹೆಸರಾಗಿದೆ. ಇದಕ್ಕೆ ಚ್ಯುತಿ ತರುವುದು ಬೇಡ. ಕನ್ನಡ ಬಾವುಟ ಇರಲಿ-ಬಾಡೂಟವೂ ಇರಲಿ, ಸಸ್ಯಾಹಾರದೊಂದಿಗೆ ಮಾಂಸಾಹಾರವೂ ಇರಲಿ. ಬಾಡೂಟ ನಮ್ಮ ಹಕ್ಕು ಎಂದು ಆಗ್ರಹಿಸಲಾಗಿದೆ.
ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ-ಬಾಡಿಲ್ಲದೂಟ ಎರಡೂ ಇರಲಿ. ಊಟದ ವಿಚಾರದಲ್ಲಿ ತಾರತಮ್ಯ ಬೇಡ. ಸಮ್ಮೇಳನದಲ್ಲಿ ಬಾಡೂಟ ಯಾಕಿಲ್ಲ ಸ್ವಾಮಿ? ಎಂಬಿತ್ಯಾದಿ ಬರಹಗಳೊಂದಿಗೆ ಫೋಟೋಗಳನ್ನು ಸಿದ್ಧಪಡಿಸಿ ಅವುಗಳನ್ನು ಜಾಲತಾಣದಲ್ಲಿ ಹರಿಬಿಡಲಾಗಿದೆ.

ಇದರ ಜತೆಗೆ ಮಾಂಸಾಹಾರ ಮಾಡಿದರೆ ಏನೆಲ್ಲ ಐಟಂ ಇರಬೇಕು ಎಂದು ಕೆಲವರು ಚರ್ಚೆ ಶುರುವಿಟ್ಟುಕೊಂಡಿದ್ದಾರೆ. ನಾಟಿಕೋಳಿ ಸಾರು ಮುದ್ದೆ ಇಲ್ಲದೆ ಮಂಡ್ಯದ ಸಾಹಿತ್ಯ ಸಮ್ಮೇಳನ ಪರಿಪೂರ್ಣ ಆಗುವುದಿಲ್ಲ ಎಂದು ಕೆಲವು ಮಾಂಸಪ್ರಿಯರು ಬಲವಾದ ವಾದ ಮಾಡತೊಡಗಿದ್ದಾರೆ. ಅಂತೆಯೇ ಕುರಿ ಮಾಂಸ, ಕೋಳಿ ಕಬಾಬ್‌, ಮೀನು ಫ್ರೈ ಇತ್ಯಾದಿ ಐಟಂಗಳ ಪರವಾಗಿರುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಮಂಡ್ಯ ನಗರದಲ್ಲಿ ಭಾನುವಾರ ಮಧ್ಯಾಹ್ನ ಬಾಡೂಟದ ಪರವಾಗಿರುವ ಒಂದಷ್ಟು ಸಮಾನ ಮನಸ್ಕರು ಸಭೆ ಸೇರಿ ಬಾಡೂಟದ ಬಗ್ಗೆ ಚರ್ಚೆಯನ್ನೂ ನಡೆಸಿದರು. ಬಾಡೂಟದ ಬಳಗ ಹೆಸರಿನಲ್ಲೇ ಕೂಟ ರಚಿಸಿಕೊಂಡು ʼಆಹಾರ ಸಮಾನತೆಗಾಗಿ ನಾವುʼ ಎಂಬ ಘೋಷಣೆಯೊಂದಿಗೆ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧ ಏಕೆ ಎಂದು ಪ್ರಶ್ನಿಸಿ, ಬಾಡೂಟಕ್ಕಾಗಿ ಹಕ್ಕೊತ್ತಾಯ ಮಂಡಿಸಿದರು. ಮಂಡ್ಯ ಭಾಗದ ಮುದ್ದೆ ಮತ್ತು ನಾಟಿಕೋಳಿ ಸಾರಿಗೆ ವಿಶೇಷ ಮಾನ್ಯತೆ ಇದ್ದು, ಈ ಆಹಾರ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಸಮ್ಮೇಳನದಲ್ಲಿ ಮಾಂಸಾಹಾರ ಕಡ್ಡಾಯಗೊಳಿಸಿ ಎಂದು ಆಗ್ರಹಿಸಿದರು.

ಈ ವಿವಾದ ಈಗ ಸರಕಾರದ ತನಕ ತಲುಪಿದ್ದು, 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಇರಬೇಕೆಂದು ಬೇಡಿಕೆ ಇಟ್ಟಿರುವ ಪ್ರಗತಿಪರ ಸಂಘಟನೆಗಳ ಜತೆ ಸೋಮವಾರ(ಡಿ.16) ಮಾತುಕತೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ. ಮಾಂಸಾಹಾರ ಬೇಡಿಕೆ ಇಟ್ಟಿರುವ ಸಂಘಟನೆಗಳ ಮುಖಂಡರು ಭೇಟಿಗೆ ಮನವಿ ಮಾಡಿದ್ದು, ಸೋಮವಾರ ಅವರ ಜತೆ ಈ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top