ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇನ್ನಿಲ್ಲ

ಬೆಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನ ನೀಡಲು ಹೋದ ವೇಳೆ ಹೃದಯಾಘಾತವಾಗಿ ನಿಧನ

ಮಂಗಳೂರು : ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಸೋಮವಾರ ಮುಂಜಾನೆ ವೇಳೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡದಲ್ಲಿ ಸೋಮವಾರದಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾನುವಾರ ಬೆಳಗ್ಗೆ ಬೆಂಗಳೂರಿನ ಆರ್.ಕೆ ಭಟ್‌ ಅವರ ಮನೆಯಲ್ಲಿ ಬಂದಿಳಿದ ತಂಡದಲ್ಲಿದ್ದ ಬಂಟ್ವಾಳ ಆಚಾರ್ಯರಿಗೆ ಇಂದು ಮುಂಜಾನೆ 4 ಗಂಟೆಗೆ ವೇಳೆಗೆ ತೀವ್ರ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಜೊತೆಗಿದ್ದ ಕಲಾವಿದರು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ. ಪಾರ್ಥಿವ ಶರೀರವನ್ನು ಆರ್.ಕೆ ಭಟ್‌ ಅವರ ಮನೆಗೆ ಅಂತಿಮ ದರ್ಶನಕ್ಕೆ ಒಯ್ದು ಆಮೇಲೆ ambulence ಮೂಲಕ ಊರಿಗೆ ಒಯ್ಯಲಾಗುವುದು ಎಂದು ತಿಳಿದುಬಂದಿದೆ.
ಸದಾ ಅಧ್ಯಯನಶೀಲರಾಗಿ, ಕಲಾಸೇವೆಯನ್ನು ಮಾಡುತ್ತಾ ಹಾಸ್ಯಗಾರರಾಗಿ ರಂಜಿಸಿದವರು ಬಂಟ್ವಾಳ ಜಯರಾಮ ಆಚಾರ್ಯರು. ಶ್ರೀ ಹನುಮಗಿರಿ ಮೇಳದ ಕಲಾವಿದರಾಗಿದ್ದರು. ಸರಳ, ಸಜ್ಜನ, ನಿಗರ್ವಿ, ವಿನಯವಂತ ಕಲಾವಿದ. ಇವರು ಜನಿಸಿದ್ದು 12-10-1957ರಂದು. ತಂದೆ ಬಂಟ್ವಾಳ ಗಣಪತಿ ಆಚಾರ್ಯ, ತಾಯಿ ಶ್ರೀಮತಿ ಭವಾನಿ ಅಮ್ಮ. ಗಣಪತಿ ಆಚಾರ್ಯರು ತನ್ನ ಕುಲವೃತ್ತಿಯಾದ ಚಿನ್ನದ ಕೆಲಸ ಮಾಡುವುದರ ಜೊತೆಗೆ ಆ ಕಾಲದ ಉತ್ತಮ ಕಲಾವಿದರಾಗಿದ್ದರು. ಹಾಸ್ಯಗಾರರಾಗಿ ಕಲಾಸೇವೆಯನ್ನು ಮಾಡುತ್ತಿದ್ದರು. ಬಳ್ಳಂಬೆಟ್ಟು, ಹೆರ್ಗ, ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಹೀಗಾಗಿ ಜಯರಾಮ ಆಚಾರ್ಯರಿಗೆ ತಂದೆಯಿಂದಲೇ ಯಕ್ಷಗಾನ ಕಲೆ ಬಳುವಳಿಯಾಗಿ ಬಂದಿತ್ತು.
ಜಯರಾಮ ಆಚಾರ್ಯರು ಕಲಿತದ್ದು ಬಂಟ್ವಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಶಾಲಾ ದಿನಗಳಲ್ಲಿ ತಂದೆಯಿಂದ ಕುಲಕಸುಬನ್ನು ಅಭ್ಯಾಸ ಮಾಡಿದ್ದರು. ಎಳವೆಯಲ್ಲೇ ಇವರಿಗೆ ಯಕ್ಷಗಾನಾಸಕ್ತಿ. ಬಂಟ್ವಾಳ ಆಸುಪಾಸಿನಲ್ಲಿ ನಡೆಯುತ್ತಿದ್ದ ಆಟ, ತಾಳಮದ್ದಳೆ ಪ್ರದರ್ಶನಗಳನ್ನು ತಪ್ಪದೆ ನೋಡುತ್ತಿದ್ದರು. ತಂದೆಯವರ ಜೊತೆಗೂ ಯಕ್ಷಗಾನ ಪ್ರದರ್ಶನಗಳಿಗೆ ಹೋಗುತ್ತಿದ್ದರು. ತಂದೆಯವರ ಜತೆಯಾಗಿಯೇ ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟವನ್ನು ನಡೆಸಿ ವೇಷವನ್ನೂ ಮಾಡಿದರು.
ಶಾಸ್ತ್ರೀಯವಾಗಿ ನಾಟ್ಯಾಭ್ಯಾಸ ಮಾಡುವ ಮೊದಲೇ ಬಂಟ್ವಾಳ ಜಯರಾಮ ಆಚಾರ್ಯರು ಅಮ್ಟಾಡಿ, ಸೊರ್ನಾಡು, ಸುಂಕದಕಟ್ಟೆ, ಕಟೀಲು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಇದು ಇವರ ಪ್ರತಿಭೆಗೆ ಸಾಕ್ಷಿ. 1974-75ನೇ ಸಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ `ಲಲಿತ ಕಲಾ ಕೇಂದ್ರ’ದಲ್ಲಿ ನಾಟ್ಯಾರ್ಜನೆಗಾಗಿ ಸೇರಿಕೊಂಡರು. ಅಲ್ಲಿ ಗುರುಗಳಾಗಿದ್ದವರು ಖ್ಯಾತ ಕಲಾವಿದ ಪಡ್ರೆ ಚಂದು. ಖ್ಯಾತ ಕಲಾವಿದರಾದ ಕರ್ಗಲ್ಲು ವಿಶ್ವೇಶ್ವರ ಭಟ್, ಸಬ್ಬಣಕೋಡಿ ಕೃಷ್ಣ ಭಟ್, ಸಬ್ಬಣಕೋಡಿ ರಾಮ ಭಟ್, ವಸಂತ ಗೌಡ ಕಾಯರ್ತಡ್ಕ, ವೇಣೂರು ಸದಾಶಿವ ಕುಲಾಲ್, ಹಳುವಳ್ಳಿ ಗಣೇಶ ಭಟ್, ಕೆ. ಎಂ. ಕೃಷ್ಣ ಮೊದಲಾದವರು ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ ಬಂಟ್ವಾಳ ಜಯರಾಮ ಆಚಾರ್ಯರ ಸಹಪಾಠಿಗಳಾಗಿದ್ದರು.

ಕಟೀಲು ಮೇಳಕ್ಕೆ ಕಲಾವಿದನಾಗಿ ಸೇರಿಕೊಂಡ ಜಯರಾಮ ಆಚಾರ್ಯ 4 ವರ್ಷಗಳ ಕಾಲ ತಿರುಗಾಟ ನಡೆಸಿದರು. ಕೋಡಂಗಿ, ಬಾಲ ಗೋಪಾಲರ ವೇಷಗಳನ್ನು ಪೂರ್ವರಂಗದಲ್ಲಿ ನಿರ್ವಹಿಸುತ್ತಾ, ಪ್ರಸಂಗದಲ್ಲೂ ಸಣ್ಣಪುಟ್ಟ ವೇಷಗಳನ್ನು ಮಾಡುತ್ತಾ, ಪ್ರದರ್ಶನಗಳನ್ನು ನೋಡುತ್ತಾ ಹಂತ ಹಂತವಾಗಿ ಬೆಳೆದು ಉತ್ತಮ ಹಾಸ್ಯಗಾರರಾಗಿ ಹೆಸರು ಗಳಿಸಿದರು. ಕಟೀಲು ಮೇಳದಲ್ಲಿ 4 ವರ್ಷ ತಿರುಗಾಟ ನಡೆಸಿದ ನಂತರ ಪುತ್ತೂರು ಮೇಳ, ಸುಂಕದಕಟ್ಟೆ ಮೇಳ, ಕದ್ರಿ ಮೇಳ, ಕುಂಬಳೆ ಮೇಳ, ಸುರತ್ಕಲ್‌ ಮೇಳ, ಎಡನೀರು ಮೇಳ, ಹೊಸನಗರ ಮೇಳ, ನಂತರ ಹನುಮಗಿರಿ ಮೇಳ ಸೇರಿದಂತೆ ಬಹುತೇಕ ಪ್ರಸಿದ್ಧ ಮೇಳಗಳಲ್ಲಿ ಕಲಾಸೇವೆ ಮಾಡಿದ್ದರು.



































 
 

ಹಾಸ್ಯ ಪಾತ್ರಗಳಿಗೆ ಅದರದ್ದೇ ಆದ ಜೀವಂತಿಕೆ ತುಂಬುವ ಪ್ರತಿಭೆ ಹೊಂದಿದ್ದ ಜಯರಾಮ ಆಚಾರ್ಯರು ಪೋಷಕ ಪಾತ್ರಗಳನ್ನೂ ನಿರ್ವಹಿಸಬಲ್ಲವರಾಗಿದ್ದರು. ಪೌರಾಣಿಕ ಕಥಾನಕಗಳ ಸಾಂಪ್ರದಾಯಿಕ ಹಾಸ್ಯ ಪಾತ್ರಗಳಿಂದ ತೊಡಗಿ ಟೆಂಟ್‌ ಆಟಗಳ ತುಳು ಹಾಸ್ಯದವರೆಗೆ ಅವರು ಎಲ್ಲ ಸ್ತರದ ಹಾಸ್ಯಪ್ರಿಯರಿಗೆ ಪ್ರಿಯರಾದವರು. ಬಂಟ್ವಾಳ ಜಯರಾಮ ಆಚಾರ್ಯ ಯಕ್ಷಗಾನದ ಸರ್ವ ಅಂಗಗಳಲ್ಲಿ ಪರಿಶ್ರಮ ಉಳ್ಳ ಕಲಾವಿದರಾಗಿದ್ದರು. ಭಾಗವತಿಕೆ, ಚೆಂಡೆ, ಮದ್ದಲೆಯಲ್ಲಿಯೂ ಪರಿಣತರಾಗಿದ್ದರು. ಪತ್ನಿ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top