ಸುಬ್ರಹ್ಮಣ್ಯ: ಜಾನಪದ ಕ್ರೀಡೆ ಕಂಬಳವನ್ನು ಗ್ರಾಮೀಣ ಭಾಗದಲ್ಲೂ ಆಯೋಜಿಸುವ ಮೂಲಕ ಕಂಬಳವನ್ನು ಪ್ರೋತ್ಸಾಹಿಸುತ್ತಿರುವುದು ಅಭಿನಂದನಾರ್ಹ ಎಂದು ಪುತ್ತೂರು ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರು ಹೇಳಿದರು.
ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಸಾಕೋಟೆಜಾಲು ದಿ| ಆರ್.ಸಾಂತಪ್ಪ ಗೌಡ ಅವರ ಗದ್ದೆಯಲ್ಲಿ ನಡೆದ ನೂಜಿಬಾಳ್ತಿಲ- ರೆಂಜಿಲಾಡಿ ಗ್ರಾಮಸ್ಥರ ಸಹಕಾರದಲ್ಲಿ ನೂಜಿಬೈಲ್ ತುಳುನಾಡ ತುಡರ್ ಯುವಕ ಮಂಡಲದ ವತಿಯಿಂದ ಯುವಕ ಮಂಡಲದ ಮೂರನೇ ವರ್ಷದ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ನಡೆದ ಸಬ್ ಜೂನಿಯರ್ ವಿಭಾಗದ ನೇಗಿಲು ಕಿರಿಯ ಮತ್ತು ಜೂನಿಯರ್ ವಿಭಾಗದ ಹಗ್ಗ ಕಿರಿಯ ಮಟ್ಟದ ಕೆಸರು ಗದ್ದೆಯಲ್ಲಿ ಸೂರ್ಯ-ಚಂದ್ರ ಜೋಡುಕರೆ ಕಂಬಳ ಸ್ನೇಹ ಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಂಬಳ ಆಯೋಜನೆ ಸುಲಭದ ಕೆಲಸವಲ್ಲ, ನಗರ ಪ್ರದೇಶದಲ್ಲೇ ಕಂಬಳ ಆಯೋಜನೆಗೆ ಯಾವ ರೀತಿಯಲ್ಲಿ ಶ್ರಮ ವಹಿಸಬೇಕೆಂದು ನಮಗೆ ತಿಳಿದಿದೆ. ಅದರಲ್ಲೂ ತುಳುನಾಡ ತುಡರ್ ಯುವಕ ಮಂಡಲ ವತಿಯಿಂದ ಗ್ರಾಮೀಣ ಭಾಗದಲ್ಲಿ ಜೋಡುಕರೆ ಕಂಬಳ ಆಯೋಜಿಸುತ್ತಿರುವುದು ಗ್ರಾಮೀಣ ಭಾಗದಲ್ಲೂ ಕಂಬಳ ಕ್ರೀಡೆಗೆ ಇಲ್ಲಿನ ಜನರು ನೀಡುತ್ತಿರು ಪ್ರೋತ್ಸಾಹ ಎಷ್ಟಿದೆ ಎಂದು ತಿಳಿಯಬಹುದಾಗಿದೆ ಎಂದು ಹೇಳಿದರು.
ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ಅವರು ಕಂಬಳದ ಕರೆ ಉದ್ಘಾಟಿಸಿ ಮಾತನಾಡಿ, ತುಳುನಾಡಿನ ಸಂಸ್ಕೃತಿಯ ಪ್ರತೀಕದಂತೆ ಕಂಬಳ ಕ್ರೀಡೆಗೆ ಪ್ರೋತ್ಸಾಹಿಸಿ ಗ್ರಾಮೀಣ ಭಾಗದ ಇಲ್ಲಿನ ಜನರಿಗೂ ಕಂಬಳ ವೀಕ್ಷಣೆಗೆ ಅವಕಾಶ ನೀಡಿರುವುದು ಶ್ಲಾಘನೀಯ ಎಂದರು.
ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೇವಸ್ಥಾನದ ಅರ್ಚಕ ಕೃಷ್ಣ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿದರು. ಯುವಕ ಮಂಡಲದ ಗೌರವ ಸಲಹೆಗಾರರಾದ ಮೃತ್ಯುಂಜಯ ಭಿಡೆ ಕೆರೆತೋಟ, ಉಮೇಶ್ ಶೆಟ್ಟಿ ಸಾಯಿರಾಮ್, ಮಾತೃಶಕ್ತಿ ದುರ್ಗಾವಾಹಿನಿ ರೆಂಜಿಲಾಡಿ ಘಟಕದ ರಜಿತಾ ಪದ್ಮನಾಭ ಕೇಪುಂಜ, ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ರವೀಂದ್ರ ನಿಡ್ಡೋ, ನೂಜಿಬೈಲ್ ತೆಗ್ ರ್ ತುಳುಕೂಟ ಅಧ್ಯಕ್ಷ ವಾಸುದೆವಾ ಗೌಡ ಕೇಪುಂಜ, ನೂಜಿಬೈಲ್ ದೈವಸ್ಥಾನದ ಪರಿಚಾರಕ ವಿಜಯ ಕುಮಾರ್ ಕೇಪುಂಜ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಭಾಸ್ಕರ ಗೌಡ ಎಳುವಾಳೆ, ನೂಜಿಬಾಳ್ತಿಲ ಶ್ರೀಕೃಷ್ಣ ಜನ್ಮಾಷ್ಠಮಿ ಸಮಿತಿ ಅಧ್ಯಕ್ಷ ಜಯಂತ ಬರೆಮೇಲು, ಜಾಗದ ಯಾಜಮಾನಿ ಚಂದ್ರಾವತಿ ಸಾಕೋಟೆಜಾಲು, ಹಿರಿಯ ಕೃಷಿಕ ಗಿರಿಯಪ್ಪ ಗೌಡ ಬಿರ್ನರಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು. ವಿಶ್ವನಾಥ ಹೇರ ಸ್ವಾಗತಿಸಿದರು. ಧನರಾಜ್ ಕಲ್ಲುಗುಡ್ಡೆ ವಂದಿಸಿದರು. ದಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದೇಶ್ ಮೀನಾಡಿ ಕಾರ್ಯಕ್ರಮ ನಿರೂಪಿಸಿದರು.