ಪುತ್ತೂರು: ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯಲ್ಲಿ ಸಾಕಾರಗೊಂಡ ವಂದೇ ಭಾರತ್ ರೈಲು | ರೈಲು ಸೇವೆ ಆಧುನೀಕರಣದಲ್ಲಿ ಭಾರತದ ದಾಪುಗಾಲಿನ ಓಟ : ಸುಕೇಶ್ ಎನ್‌. ರಾವ್ ಬೈಲೂರು

ಭಾರತದ ಅಭಿವೃದ್ಧಿಯಲ್ಲಿ ಭಾರತೀಯ ರೈಲ್ವೆಯ ಸೇವೆ ಸದಾ ಮಂಚೂಣಿಯಲ್ಲಿ ಇದೆ. ಆದರೆ ಭಾರತದ ರೈಲ್ವೆಯಲ್ಲಿ ಬಹಳ ವರ್ಷಗಳಿಂದ ಹಳೆ ಮಾದರಿಯ ರೈಲುಗಳ ಓಡಾಟ, ನಿಧಾನಗತಿಯಲ್ಲಿ ಸಾಗುತ್ತಿದ್ದ  ಸುಧಾರಣೆಗಳು, ಅಭಿವೃದ್ಧಿ ಯೋಜನೆಗಳಿಂದ  ಜನರು ಬೇಸತ್ತು ಇನ್ನೂ ಹೆಚ್ಚಿನ ಸುಧಾರಣೆಯ ಅಗತ್ಯ, ಅಭಿವೃದ್ಧಿ ಆಗಬೇಕು, ಅಂತಾರಾಷ್ಟ್ರೀಯ ದರ್ಜೆಯ ರೈಲುಗಳು ನಮ್ಮಲ್ಲೂ ಬರಬೇಕು, ಜನಸಾಮನ್ಯರಿಗೆ ಉತ್ತಮ ಸೇವೆ ಸಿಗಬೇಕು, ನಿಲ್ದಾಣಗಳ ಗುಣಮಟ್ಟ, ಸುರಕ್ಷತೆ, ವಿನ್ಯಾಸ, ಎಲ್ಲವೂ ಚೆನ್ನಾಗಿರಬೇಕು ಎಂಬುದು ಹಲವಾರು ವರ್ಷಗಳಿಂದ ನಾವೆಲ್ಲರೂ ಬಯಸುತ್ತಿದ್ದೆವು.

ಅದೀಗ ಸಾಕಾರಗೊಳ್ಳುತ್ತಿದೆ. ಭಾರತದಲ್ಲಿ ರೈಲ್ವೆ ಇಲಾಖೆಯಲ್ಲಿ ಕಳೆದ ಹತ್ತು ವರ್ಷದಲ್ಲಿ ನಾವು ಬಹಳಷ್ಟು ಅಭಿವೃದ್ಧಿ ಕಾಣುತ್ತಿದ್ದೇವೆ.  ರೈಲುಗಳ ವಿನ್ಯಾಸ, ವೇಗ, ಜೊತೆಗೆ ದೇಶೀಯ ತಂತ್ರಜ್ಞಾನ ಬಳಸಿ ಮೇಕ್ ಇನ್ ಇಂಡಿಯಾ ಕಲ್ಪನೆಯಲ್ಲಿ ಹೊಸ ಹೊಸ ರೈಲುಗಳ ತಯಾರಿ ಪ್ರಾರಂಭಿಸಲಾಗಿದೆ. ಅದರಲ್ಲಿ ಮೂಡಿಬಂದು ದೇಶೀಯವಾಗಿ ತಯಾರಾಗಿ ಯಶಸ್ವಿಯಾದದ್ದು ವಂದೇ ಭಾರತ್ ರೈಲು. ಇದು ಚೀನಾದ CRH ರೈಲುಗಳಿಂದ ಪ್ರೇರಣೆ ಪಡೆದು ನಿರ್ಮಿಸಲಾದ ರೈಲು.  

ಚೀನಾದ ಆಧುನಿಕ ರೈಲುಗಳು































 
 

ಇಂದಿಗೆ ಸುಮಾರು 18 ವರ್ಷಗಳ ಹಿಂದೆ ಅಂದರೆ 2006ರಲ್ಲಿ ನಾನು ಉದ್ಯೋಗ ಮಾಡುತ್ತಿದ್ದ ಕಂಪನಿ ನನ್ನನ್ನು ಚೀನಕ್ಕೆ ವರ್ಗಾಯಿಸಿತು. 15 ವರ್ಷ ಅಲ್ಲೇ ಇರುವಾಗ ಚೀನದ ಹಲವಾರು ಪ್ರಾಂತ್ಯಗಳು, ಪ್ರದೇಶಗಳನ್ನು ಸುತ್ತಿದ್ದೆ. ಅದಾಗಲೇ ಅವರು  ತಂತ್ರಜ್ಞಾನದಲ್ಲಿ ಬಹಳ ಮುಂದೆ ಹೋಗಿದ್ದರು. 2006-2008ರ ತನಕ ಚೀನದಲ್ಲೂ ನಮ್ಮಲ್ಲಿ ಇದ್ದಂತೆ ಹಳೆ ಮಾದರಿಯ ರೈಲುಗಳು ಓಡುತ್ತಿದ್ದವು. ಅಲ್ಲಿ ರೈಲ್ವೆ ಕ್ರಾಂತಿಯಾಗಿದ್ದು 2008ರ ನಂತರ. ಆದರೆ ಅಲ್ಲಿನ ಸರಕಾರ ರೈಲ್ವೆ ಇನ್‌ಫ್ರಾಸ್ಟ್ರಕ್ಚರ್ ತಯಾರಿ ಮಾಡುವುದಕ್ಕೆ ಎಲ್ಲ ಪ್ರಕ್ರಿಯೆಗಳನ್ನು ಕೈಗೊಂಡಿತ್ತು. ಭಾರತದಂತೆ ನಮಗೆ ಮೀಡಿಯಾ, ಸೋಶಿಯಲ್ ಮೀಡಿಯಾ ಮೂಲಕ ಅಲ್ಲಿನ ಸರಕಾರ ಕೈಗೆತ್ತಿಕೊಂಡ ಪ್ರಾಜೆಕ್ಟ್‌ಗಳ ಬಗ್ಗೆ ಸುಲಭದಲ್ಲಿ ತಿಳಿಯುತ್ತಿರಲಿಲ್ಲ.

ಅಲ್ಲಿನ ಹೈಸ್ಪೀಡ್ ರೈಲ್ವೆ ಜಾಲ ಯಾವ ರೀತಿ ವಿಸ್ತರಿಸಿತು ಅಭಿವೃದ್ಧಿಗೆ ಹೇಗೆ ಫಲಕಾರಿಯಾಗುತ್ತದೆ ಜತೆಗೆ ನಮ್ಮ ಭಾರತದಲ್ಲಿ ಕೂಡ ನಡೆಯುತ್ತಿರುವ ರೈಲ್ವೆ ಅಭಿವೃದ್ಧಿ ಮುಂದೆ ಹೇಗೆ ಸಹಕಾರಿಯಾಗುತ್ತದೆ ಎಂದು ತಿಳಿಸುವ ಸಣ್ಣ ಪ್ರಯತ್ನವಿದು.  

ಚೀನದ ಹೈಸ್ಪೀಡ್ ರೈಲ್ವೆ ಜಾಲ

CRH (ಚೀನಾ ರೈಲ್ವೆ ಹೈಸ್ಪೀಡ್) ಎಂಬುದು ಚೀನ ರೈಲ್ವೆಯಿಂದ ನಿರ್ವಹಿಸುವ ಹೈಸ್ಪೀಡ್ ರೈಲುಗಳ ಸರಣಿಯಾಗಿದೆ. CRH ಸರಣಿಯನ್ನು ಏಪ್ರಿಲ್ 18, 2007ರಂದು ಆರನೇ ರಾಷ್ಟ್ರೀಯ ರೈಲ್ವೆ ವೇಗದ ಭಾಗವಾಗಿ ಪರಿಚಯಿಸಲಾಯಿತು. CRH ರೈಲುಗಳು ಆಧುನಿಕ ಮತ್ತು ಸುರಕ್ಷಿತವಾಗಿರುತ್ತವೆ. 350 km/h (217 mph) ವೇಗವನ್ನು ತಲುಪಬಹುದು. ರೈಲುಗಳು ವಿವಿಧ ಸೌಕರ್ಯಗಳನ್ನು ಒದಗಿಸುತ್ತವೆ. ಅವುಗಳೆಂದರೆ, ಆರಾಮದಾಯಕ ಆಸನಗಳು, ಸಾಕಷ್ಟು ಲಗೇಜ್ ಸ್ಪೇಸ್‌,  ಆನ್‌ಬೋರ್ಡ್ WCs ಎಲೆಕ್ಟ್ರಿಕ್ ಸಾಕೆಟ್‌ಗಳು, ಆಡಿಯೋ ಮತ್ತು ವಿಡಿಯೋ ಸೌಲಭ್ಯ, ಬಿಸಿನೀರಿನ ಸೌಲಭ್ಯ, ಊಟದ ಪ್ಯಾಂಟ್ರಿ ಇತ್ಯಾದಿ. CRH380AL ರೈಲು ಡಿಸೆಂಬರ್ 3, 2010ರಂದು 486.1 km/h (302.0 mph) ವೇಗವನ್ನು ಸ್ಥಾಪಿಸಿತು. ಆದರೆ ಜನವರಿ 9, 2011ರಂದು ಆ ದಾಖಲೆಯನ್ನು ಮುರಿದಿದೆ. CRH380A ಅನ್ನು ವಾಣಿಜ್ಯ ಸೇವೆಯಲ್ಲಿ 350 km/h (217 mph) ಮತ್ತು ಗರಿಷ್ಠ 380 km/h (236 mph) ವೇಗದಲ್ಲಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಬುಲೆಟ್ ಟ್ರೈನ್ ಎಂದೂ ಕರೆಯಲ್ಪಡುವ ಚೀನದ ಹೈ-ಸ್ಪೀಡ್ ರೈಲು ಜಾಲ ದೇಶದ 550 ನಗರಗಳನ್ನು ಸಂಪರ್ಕಿಸುತ್ತದೆ.  2024ರ ಮಧ್ಯಭಾಗದಲ್ಲಿ ಚೀನದ ಹೈ-ಸ್ಪೀಡ್ ರೈಲು (HSR) ನೆಟ್‌ವರ್ಕ್ ಪ್ರಪಂಚದಲ್ಲೇ ಅತಿ ಉದ್ದವಾಗಿದೆ ಮತ್ತು 46,000 ಕಿಲೋಮೀಟರ್‌ಗಳನ್ನು ವ್ಯಾಪಿಸಿದೆ.

ರೈಲ್ವೆಜಾಲ ವಿಸ್ತರಣೆಯ ಜೊತೆಗೆ ಜನರ ಅನುಕೂಲಕ್ಕೆ ತಕ್ಕಂತೆ ರೈಲು ನಿಲ್ದಾಣಗಳನ್ನು ಅತ್ಯಾಕರ್ಷಕ, ಆಧುನಿಕ ಸೌಲಭ್ಯವುಳ್ಳ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಮಾಡಿದ್ದಾರೆ.

ಭಾರತೀಯ ರೈಲ್ವೆಗೆ ಆಧುನಿಕ ಸ್ಪರ್ಶ

ಇತ್ತೀಚಿನ ದಿನಗಳಲ್ಲಿ ನಾವು ಮುಖ್ಯವಾಗಿ ಕಾಣುವುದು ವಂದೇ ಭಾರತ್ ರೈಲುಗಳ ಓಡಾಟ. ವಂದೇ ಭಾರತ್ ಎಕ್ಸ್‌ಪ್ರೆಸ್ ಮಧ್ಯಮ ದೂರದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೇವೆಯಾಗಿದ್ದು, ಹಳೆಯ ರೈಲುಗಳು 60-80km/h ಹಾಗೂ ರಾಜಧಾನಿ ರೈಲುಗಳು 100-120Km/h ವೇಗದಲ್ಲಿ ಓಡುತ್ತಿದ್ದ ಸಮಯದಲ್ಲಿ ಆಧುನಿಕತೆ ತಂತ್ರಜ್ಞಾನದೊಂದಿಗೆ ವಂದೇ ಭಾರತ್ ರೈಲುಗಳು    130-160km/h ವೇಗಕ್ಕೆ ಸಿದ್ಧಗೊಂಡಿತು.

ವಂದೇ ಭಾರತ್ ಎಕ್ಸ್‌ಪ್ರೆಸ್ ಮಧ್ಯಮ ದೂರದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೇವೆಯಾಗಿದ್ದು, ಇದನ್ನು ಭಾರತೀಯ ರೈಲ್ವೆ  ನಿರ್ವಹಿಸುತ್ತವೆ. ಇದು ಕಾಯ್ದಿರಿಸಿದ, ಹವಾನಿಯಂತ್ರಿತ ಚೇರ್‌ಕಾರ್ ಸೇವೆಯಾಗಿದ್ದು, 800km ಗಿಂತ ಕಡಿಮೆ ಅಂತರದಲ್ಲಿರುವ ಅಥವಾ ಅಸ್ತಿತ್ವದಲ್ಲಿರುವ ಸೇವೆಗಳೊಂದಿಗೆ ಪ್ರಯಾಣಿಸಲು ಹತ್ತು ಗಂಟೆಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುವ ನಗರಗಳನ್ನು ಸಂಪರ್ಕಿಸುತ್ತದೆ.

ವಂದೇ ಭಾರತ್  ಪರಿಚಯ

ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ವಾರಣಾಸಿಗೆ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಉದ್ಘಾಟನೆ 15 ಫೆಬ್ರವರಿ 2019ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾಡಿದರು. ಅಕ್ಟೋಬರ್ 2019ರಲ್ಲಿ ಎರಡನೇ ಸೇವೆಯನ್ನು ಹೊಸದಿಲ್ಲಿ ಮತ್ತು ಕತ್ರಾ ನಡುವೆ ಪ್ರಾರಂಭಿಸಲಾಯಿತು.

ವಂದೇ ಭಾರತ್ ರೈಲುಗಳು ಎಂಟು ಅಥವಾ ಹದಿನಾರು ಕೋಚ್‌ಗಳೊಂದಿಗೆ ಸ್ವಯಂಚಾಲಿತ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್‌ಗಳು (EMU)ಗಳಾಗಿವೆ. ಈ ಟ್ರೈನ್‌ಗಳನ್ನು ರಿಸರ್ಚ್ ಡಿಸೈನ್ ಮತ್ತು ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ವಿನ್ಯಾಸಗೊಳಿಸಿದೆ ಮತ್ತು ಇದನ್ನು ಚೆನ್ನೈನ ಇಂಟೆಗ್ರಲ್ ಕೋಚ್ (ICH) ಫ್ಯಾಕ್ಟರಿ ತಯಾರಿಸಿದೆ. 2018ರಲ್ಲಿ ಟ್ರೈನ್‌ಗಳು ಪ್ರಯೋಗಗಳಲ್ಲಿ 183 km/h (114 mph) ವೇಗವನ್ನು ಸಾಧಿಸಿವೆ. ಆದರೆ ಟ್ರ್ಯಾಕ್ ನಿರ್ಬಂಧಗಳು, ನಿಲುಗಡೆಗಳು ಮತ್ತು ಸಂಚಾರ ದಟ್ಟಣೆಯಿಂದಾಗಿ ಕಾರ್ಯಾಚರಣೆಯ ವೇಗ ಇಷ್ಟು ತಲುಪುವುದು ಸಾಧ್ಯವಾಗುತ್ತಿಲ್ಲ.

ಫೆಬ್ರವರಿ 2019ರಲ್ಲಿ ಪರಿಚಯಿಸಲಾದ ಪ್ರಥಮ ವಂದೇ ಭಾರತ್ ರೈಲು ಸೇವೆ ಕಳೆದ ಸೆಪ್ಟೆಂಬರ್‌ಗಾಗುವಾಗ 66 ಕ್ಕೆ ತಲುಪಿದೆ.   ಇತ್ತೀಚಿಗೆ ಹೊಸ ಮಾದರಿಯ 20 ಬೋಗಿಗಳ ವಂದೇ ಭಾರತ್ ರೈಲುಗಳನ್ನುಪರಿಚಯಿಸಲಾಗಿದೆ. ಕಾಲಕಾಲಕ್ಕೆ ಬದಲಾವಣೆಗಳನ್ನು ಮಾಡುತ್ತಾ ಆಧುನಿಕತೆ ಹಾಗೂ ತಂತ್ರಜ್ಞಾನದ ಸ್ಪರ್ಶದೊಂದಿದೆ ಹೊಸ ಹೊಸ ಮಾದರಿಯ ರೈಲುಗಳನ್ನು ಜನರ ಸೇವೆಗೆ ಪರಿಚಯಿಸುತ್ತಿದೆ. ಸರ್ಕಾರ 2047ರ ವೇಳೆಗೆ 4,500 ವಂದೇ ಭಾರತ್ ರೈಲುಗಳನ್ನು ಹೊಂದುವ ಗುರಿಯನ್ನು ಘೋಷಿಸಿದೆ.

ಸ್ಥಳೀಯವಾಗಿ  ತಯಾರಿ

ವೇಗದ ರೈಲುಗಳನ್ನು ಪರಿಚಯಿಸುವ ವಿದೇಶಿ ಪ್ರಸ್ತಾಪಗಳು ವಿಫಲವಾದ ನಂತರ ಮೇಕ್ ಇನ್ ಇಂಡಿಯಾ ಅಭಿಯಾನ ಮುಂದಿನ ಪೀಳಿಗೆಯ EMU ಅರೆ ಹೈ-ಸ್ಪೀಡ್‌ ರೈಲುಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸುವುದನ್ನು ಉತ್ತೇಜಿಸಿತು. ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಿಸಲಾದ ಸ್ಥಳೀಯ ವಿನ್ಯಾಸದ ಮೇಲೆ ICF ಇದನ್ನು ಮಾಡಿದೆ. ಆರಂಭದಲ್ಲಿ ಟ್ರೈನ್ 18 ಎಂದು ಕರೆಯಲ್ಪಡುವ ಈ ರೈಲುಗಳನ್ನು 2018 ರಲ್ಲಿ ಪರಿಚಯಿಸಲಾಯಿತು. ಪ್ರಯೋಗಗಳಲ್ಲಿ 183 km/h (114 mph) ವೇಗವನ್ನು ತಲುಪಿತು.  ಈ ರೈಲುಗಳನ್ನು ನಂತರ ವಂದೇ ಭಾರತ್ ಎಂದು ಮರುನಾಮಕರಣ ಮಾಡಲಾಯಿತು.

MAKE IN INDIA ಕಲ್ಪನೆಯಲ್ಲಿ ನಮ್ಮ ಭಾರತೀಯ ರೈಲ್ವೆ ಸಾಕಷ್ಟು ಸುಧಾರಣೆಗಳನ್ನು ಮಾಡುತ್ತಿದ್ದು, ಮುಖ್ಯವಾಗಿ ವಂದೇ ಭಾರತ್ ರೈಲು ಆಧುನಿಕ ಸೌಲಭ್ಯಗಳನ್ನು ಹೊಂದಿದ, ಕೈಗೆಟಕುವ ದರದಲ್ಲಿ ಜನಸಾಮಾನ್ಯರ ಪ್ರಯಾಣಕ್ಕೆ ಅನುಕೂಲವಾಗುವಂತಹ, ಉತ್ತಮ ಗುಣಮಟ್ಟದ ಹಾಗೂ ಸುರಕ್ಷಿತ ರೈಲು ಎಂದು ಜನರಿಂದ ಪ್ರಶಂಶೆಗೊಳಪಟ್ಟಿದೆ. ಸಮಯ ಪಾಲನೆ, ರೈಲಿನ ಒಳಗಡೆ ಸ್ವಚ್ಛತೆಗೆ ಮಹತ್ವ, ವಿಮಾನ ಮಾದರಿಯ ಪರಿಚಾರಕರು, ಉತ್ತಮ ಊಟ-ಉಪಾಹಾರ, ನೀರು ಇತ್ಯಾದಿ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಿರುವುದು, ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗಿದೆ.

ಚೀನದ CRH ರೈಲಿಗೆ ಹೋಲಿಕೆ ಮಾಡಿದಾಗ ನಮ್ಮ ವಂದೇ ಭಾರತ್ ರೈಲು, ವೇಗವನ್ನು ಹೊರತುಪಡಿಸಿ ಯಾವ ವಿಚಾರದಲ್ಲೂ ವ್ಯತ್ಯಾಸ ಕಂಡು ಬರುವುದಿಲ್ಲ.  ವಂದೇ ಭಾರತ್ ಇನ್ನೂ CRHನ (350Km/h) ವೇಗ ತಲುಪಿಲ್ಲ, ಅದರ ಪ್ರಯತ್ನ ನಡೆಯುತ್ತಿದೆ. ರೈಲ್ವೆ ಸ್ಟೇಷನ್‌ಗಳನ್ನು ಕೂಡ ಆಧುನಿಕ ವ್ಯವಸ್ಥೆ, ತಂತ್ರಜ್ಞಾನದೊಂದಿಗೆ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಈಗಾಗಲೇ ನಮ್ಮ ಹೆಮ್ಮೆಯ ವಂದೇ ಭಾರತ್ ರೈಲು ಯಶಸ್ಸು ಕಂಡಿದ್ದು, ದೇಶದ ಬೇರೆ ಬೇರೆ ಮಾರ್ಗಗಳಿಗೆ ವಂದೇ ಭಾರತ್ ರೈಲುಗಳ ಬೇಡಿಕೆ  ಹೆಚ್ಚುತ್ತಿದೆ. ಆದಷ್ಟು ಬೇಗ ದೇಶದ ಮೂಲೆ ಮೂಲೆಗೂ ತಲುಪುವಂತಾಗಲಿ, ಸಾಮಾನ್ಯ ಜನರೂ ನಿರಾಯಾಸವಾಗಿ ಪ್ರಯಾಣಿಸುವಂತಾಗಲಿ.

ವಂದೆ ಭಾರತ್‌ ಸ್ಲೀಪರ್‌ ಕೋಚ್‌ಗಳು

ICF ಸ್ಲೀಪರ್ ಕಾರುಗಳೊಂದಿಗೆ ರೈಲು ದೀರ್ಘ ಪ್ರಯಾಣಕ್ಕಾಗಿ ವಂದೇ ಭಾರತ್ ಸ್ಲೀಪರ್ ರೈಲುಗಳು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಿದ್ಧಗೊಂಡು ಪರೀಕ್ಷಾರ್ಥ ಓಡಾಟ ನಡೆಸುತ್ತಿದೆ. ಸದ್ಯದಲ್ಲಿ ಜನ ಸೇವೆಗೆ ದೊರಕಲಿರುವುದು. ಅಂತಾರಾಷ್ಟ್ರೀಯ ದರ್ಜೆಯ ಸವಲತ್ತುಗಳು ಜನಸಾಮಾನ್ಯರಿಗೂ ಸಿಗುವಂತಾಗಲಿ.

ಇತ್ತೀಚೆಗೆ ನಾನು ಕೂಡ ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಮಾಡಿ, ಪ್ರಯಾಣದ ಹಿತಾನುಭವಗಳನ್ನು, ಖುಷಿಯಿಂದ ಎಲ್ಲರೊಂದಿಗೆ ಹಂಚಿಕೊಡಿರುವೆ. ಆದರೆ ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದು ಹಾನಿಗೊಳಿಸಿದ್ದು, ಹಳಿಗಳನ್ನು ಕೆಡವಿ ಅಪಘಾತವಾಗುವಂತೆ ಕೆಲ ವಿಕೃತ ಮನಸ್ಸಿನ ಕಿಡಿಗೇಡಿಗಳಿಂದ ನಡೆದಿದ್ದು, ಇಂತಹ ವಿಚಾರಗಳನ್ನು ನೋಡುವಾಗ ಬೇಸರವಾಗುತ್ತದೆ. ರೈಲ್ವೆ ಇಲಾಖೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಭಾರತೀಯ ರೈಲು ದೇಶದ ಸ್ವತ್ತು, ನಮ್ಮ ಹೆಮ್ಮೆ. ನಾವು ಅದನ್ನು ಸರಿಯಾಗಿ ಬಳಸಿ ಯಾವುದೇ ರೀತಿಯಿಂದ ಹಾನಿಯಾಗದಂತೆ ಕಾಪಾಡುವುದು ಕೂಡ ನಮ್ಮ ಕರ್ತವ್ಯ ಆಗಿದೆ. ಅಂತಾರಾಷ್ಟ್ರೀಯ ದರ್ಜೆಯ ಸವಲತ್ತುಗಳು ಜನಸಾಮಾನ್ಯರಿಗೂ ಸಿಗುವಂತಾಗಲಿ.

ರೈಲು ಬೋಗಿ ರಫ್ತು

ಇದೆಲ್ಲದರ ಜೊತೆಗೆ, ಆಧುನಿಕ ಮಾದರಿಯ ರೈಲುಗಳ ಬೋಗಿ, ಮೆಟ್ರೊ ರೈಲುಗಳ ಬೋಗಿಗಳನ್ನು ತಯಾರಿಸಿ ವಿದೇಶಗಳಿಗೆ ರಫ್ತು  ಕೂಡ ಮಾಡುತ್ತಿದ್ದು, ಇನ್ನಷ್ಟು ಬೇಡಿಕೆಗಳು ಬರುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ ಬುಲೆಟ್ ಟ್ರೈನ್ ಕೂಡ ವಿದೇಶಿ ತಂತ್ರಜ್ಞಾನ ಹಾಗೂ ಸಹಕಾರದೊಂದಿಗೆ ಭಾರತದಲ್ಲಿಯೇ ಉತ್ಪಾದನೆ ಮಾಡಲು ಎಲ್ಲ ತಯಾರಿಗಳು ನಡೆಯುತ್ತಿದೆ ಎಂಬುದು ಖುಷಿಯ ವಿಚಾರ.

MAKE IN INDIA ಅಭಿಯಾನ

ಇಂದಿಗೆ MAKE IN INDIA ಉಪಕ್ರಮಗಳು ಆರಂಭಗೊಂಡು 10 ವರ್ಷಗಳಾಗಿವೆ. ಇದರಿಂದ ಸಾಕಷ್ಟು ಉತ್ಪಾದನಾ ಉದ್ಯಮಗಳಿಗೆ ಸಹಕಾರಿಯಾಗಿದೆ. ನಮ್ಮ ಸಾಕಷ್ಟು ಉದ್ಯಮಗಳು, ವಿದೇಶಿ ಹೂಡಿಕೆ, ಹೊಸ ಹೊಸ ಕಂಪನಿಗಳು ಭಾರತದಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ನಿರ್ಮಿಸಿ, ರಫ್ತು ವಹಿವಾಟು ಹೆಚ್ಚಾಗುವಂತಾಗಿದೆ, ಯುವಕರಿಗೆ ಉದ್ಯೋಗ ಲಭಿಸುತ್ತಿದೆ.

ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ಬಹಳಷ್ಟು ಸುಧಾರಣೆಗಳು ನಡೆಯಲಿ, ಭಾರತದ ಅಭಿವೃದ್ಧಿಗೆ ಇನ್ನಷ್ಟು ಸಹಕಾರವಾಗಲಿ,  ಎಂಬುದು ಪ್ರತಿ ಭಾರತೀಯರ ಹಾರೈಕೆ.

1 thought on “ಪುತ್ತೂರು: ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯಲ್ಲಿ ಸಾಕಾರಗೊಂಡ ವಂದೇ ಭಾರತ್ ರೈಲು | ರೈಲು ಸೇವೆ ಆಧುನೀಕರಣದಲ್ಲಿ ಭಾರತದ ದಾಪುಗಾಲಿನ ಓಟ : ಸುಕೇಶ್ ಎನ್‌. ರಾವ್ ಬೈಲೂರು”

  1. ವಸಂತ್ ಶಂಕರ್

    ನಮ್ಮ ಭಾರತದಲ್ಲಿ ಉಚಿತವಾಗಿ ಸಂಚರಿಸಲು ಮೂತ್ರ ಸಿಂಪಡಿಸಿಕೊಂಡು ನಾರುವ ರೈಲುಗಳ ಅಗತ್ಯತೆ ನಿರಂತರವಾದ ಎಂದು ಭಾವಿಸುವ ವರ್ಗವೊಂದು ಇದೆ. ಅದಕ್ಕೆ 2014ರ ನಂತರದ ಸಾಧನೆಗಳು ಎಲ್ಲವೂ ಅಪಥ್ಯ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top