ಪುತ್ತೂರು: ಬದುಕನ್ನು ಸದೃಢವಾಗಿ ರೂಪಿಸಿಕೊಳ್ಳುವಲ್ಲಿ ಎನ್ಎಸ್ಎಸ್ ನ ಪಾತ್ರ ಸ್ಮರಣಿಯವಾದುದು. ಹಲವಾರು ಮಂದಿ ಹಲವು ರೀತಿಯಲ್ಲಿ ಬದುಕನ್ನು ವ್ಯಾಖ್ಯಾನಿಸಿದರೆ ಎನ್ ಎಸ್ ಎಸ್ ಸ್ವಯಂ ಸೇವಕರು ಸೇವೆಯೇ ಬದುಕು ಎಂದು ವ್ಯಾಖ್ಯಾನಿಸುತ್ತಾರೆ ಎಂದು ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ ಹೇಳಿದರು.
ಅವರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಮಂಗಳವಾರ ನಡೆದ ಎನ್ ಎಸ್ ಎಸ್ ಘಟಕದ ವಾರ್ಷಿಕ ಕಾರ್ಯಚಟುವಟಿಕೆಗಳ ಉದ್ಘಾಟನೆ ಮತ್ತು ಎನ್ಎಸ್ಎಸ್ ದಿನಾಚರಣೆಯ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ, ಕಾಲೇಜಿನ ಸಂಚಾಲಕ ಅತಿ ವಂ. ಫಾ. ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಪ್ರತಿಯೊಬ್ಬರೂ ಪರರ ಕಷ್ಟಕ್ಕೆ ಪ್ರತಿ ಸ್ಪಂದಿಸುವ ಹೃದಯವನ್ನು ಹೊಂದಿರಬೇಕು. ಪರರ ಕಷ್ಟವನ್ನರಿತು ಅವರಿಗೆ ನೆರವಾಗುವುದು ಕೂಡಾ ಸೇವೆಯೇ. ಫಲವನ್ನು ನೀಡುವ ಮರವು ತನ್ನ ಫಲವನ್ನು ತಾನು ಸೇವಿಸದೆ ಪರರ ಹಸಿವ ನೀಗಿಸುವಂತೆ ನಾವು ಬದುಕಬೇಕು ಎಂದು ಹೇಳಿದರು.
ಪ್ರಾಂಶುಪಾಲ ರೆ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಕಾರ್ಯಕ್ರಮ ಉದ್ಘಾಟಿಸಿ, ಸುಂದರತೆಯನ್ನು ರೂಪದಲ್ಲಿ ಕಾಣುವ ಬದಲು ಸೇವೆಯಲ್ಲಿ ಕಾಣಬೇಕು. ಸೇವೆಯು ಬದುಕಿಗೆ ಪರಿಪೂರ್ಣತೆಯನ್ನು ನೀಡುವುದು ಎಂದು ಹೇಳಿದರು.
ಎನ್ ಎಸ್ ಎಸ್ ಅಧಿಕಾರಿಗಳಾದ ಡಾ. ಚಂದ್ರಶೇಖರ ಕೆ. ಸ್ವಾಗತಿಸಿ, ಪುಷ್ಪ ಎನ್. ವಂದಿಸಿದರು. ವಿದ್ಯಾರ್ಥಿನಿ ಉಮಾ ಆಳ್ವ ನಿರೂಪಿಸಿದರು. ಉಪಪ್ರಾಂಶುಪಾಲ ಡಾ.ವಿಜಯಕುಮಾರ ಎಂ. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.