ಶತಮಾನಗಳಿಂದ ಬೆಳಕಿನ ಪುಂಜಕ್ಕೆ ಬಂದು ಡಿಕ್ಕಿಯಾಗಿ ರೆಕ್ಕೆ ಸುಟ್ಟುಕೊಳ್ಳುವ ಹಾತೆಗಳು ನಾವಾಗಬೇಕೆ?
ಇವತ್ತೂ ಕೂಡ ಒಂದು ಪ್ರಾತಿನಿಧಿಕ ಕತೆಯಿಂದ ಲೇಖನ ಆರಂಭ ಮಾಡುತ್ತೇನೆ.
ಒಂದೂರಿನಲ್ಲಿ ಒಬ್ಬರು ಬಹಳ ದೊಡ್ಡ ಪುರೋಹಿತರು ಇದ್ದರು. ಅವರು ಜ್ಯೋತಿಷಿ ಕೂಡ ಆಗಿದ್ದರಿಂದ ಇಡೀ ಗ್ರಾಮ ಅವರನ್ನು ದೇವರ ಹಾಗೆ ಕಾಣುತ್ತಿತ್ತು. ಅವರದ್ದು ಸುಂದರವಾದ ಕುಟುಂಬ. ಒಳ್ಳೆಯ ಸಾತ್ವಿಕ ಹೆಂಡತಿ ಮತ್ತು ಒಂದೇ ಒಂದು ಗಂಡು ಮಗು. ಸಂಪಾದನೆ ಕೂಡ ಚೆನ್ನಾಗಿತ್ತು.
ಆ ಕುಟುಂಬಕ್ಕೆ ಯಾರ ಕೆಟ್ಟ ದೃಷ್ಟಿ ತಗುಲಿತೋ…
ಒಂದು ಕೆಟ್ಟ ಗಳಿಗೆಯಲ್ಲಿ ಆ ಪುರೋಹಿತರು ಕುಡಿಯುವುದನ್ನು ಕಲಿತರು. ಮೊದಲು ಗೆಳೆತನಕ್ಕಾಗಿ ಆರಂಭ ಆದ ವ್ಯಸನ ಮುಂದೆ ಬ್ಯಾಲೆನ್ಸ್ ತಪ್ಪಿತು. ಅವರು ಹಗಲು-ರಾತ್ರಿ ಕುಡಿಯಲು ತೊಡಗಿದರು. ಪರಿಣಾಮವಾಗಿ ಮಂತ್ರ ಹೇಳುವಾಗ ನಾಲಿಗೆ
ತೊದಲತೊಡಗಿತ್ತು. ನಶೆಯಲ್ಲಿ ಮುಳುಗಿದ ಅವರಿಗೆ ಮೆಮೊರಿ ಕೈಕೊಟ್ಟಿತು. ಕ್ರಮೇಣ ಅವರನ್ನು ಜನರು ಪೂಜೆಗೆ ಕರೆಯುವುದನ್ನು ಬಿಟ್ಟರು. ದೇವಸ್ಥಾನದಲ್ಲಿ ಮಾಡುತ್ತಿದ್ದ ಪೂಜೆಗೆ ಅವಕಾಶ ತಪ್ಪಿತು. ತೀವ್ರ ಹಣಕಾಸು ಮುಗ್ಗಟ್ಟು ತಲೆದೋರಿದಾಗ ಕುಟುಂಬ ಸಂತ್ರಸ್ತವಾಯಿತು.
ಹೆಂಡತಿ ಅವರ ಕುಡಿತ ಬಿಡಿಸಲು ಯಾವ್ಯಾವ ರೀತಿ ಪ್ರಯತ್ನ ಮಾಡಿದರೂ ಭಟ್ಟರು ವ್ಯಸನದಿಂದ ಹೊರಬರಲಿಲ್ಲ. ಕುಟುಂಬ ವರ್ಗದವರು ಬುದ್ಧಿ ಹೇಳಿ ಸೋತರು. ಕೊನೆಗೆ ಅವರು ಮನೆಗೆ ಬರುವುದನ್ನೇ ಬಿಟ್ಟರು. ಇಡೀ ಊರಿಗೆ ದೇವರ ಹಾಗೆ ಇದ್ದ ಭಟ್ಟರು ಬೆಳಗ್ಗೆ, ಸಂಜೆ ಪೇಟೆಯಲ್ಲಿ ಸಿಕ್ಕಿಸಿಕ್ಕವರ ಬಳಿ ದುಡ್ಡಿಗೆ ಕೈ ಚಾಚುವ ದೈನೇಸಿ ಸ್ಥಿತಿಗೆ ತಲುಪಿದರು. ಹೆಂಡತಿ ಅವರ ಕುಡಿತವನ್ನು ಬಿಡಿಸಲು ಆಣೆ, ಪ್ರಮಾಣ, ಹರಕೆ, ತಾಯಿತ ಏನೆಲ್ಲಾ ಪ್ರಯೋಗ ಮಾಡಿದರೂ ಭಟ್ಟರು ಚಟ ಬಿಡಲಿಲ್ಲ. ಮಹಾರಾಣಿಯ ಹಾಗೆ ಬದುಕಬೇಕಿದ್ದ ಆ ಸಾಧ್ವಿಯು ಅಕ್ಕಪಕ್ಕದ ಮನೆಯಲ್ಲಿ ಮುಸುರೆ ತೊಳೆದು, ಬಿಡುವಿನ ಹೊತ್ತಿನಲ್ಲಿ ಬೀಡಿ ಕಟ್ಟಿ ಬದುಕಬೇಕಾದ ಪ್ರಸಂಗ ಬಂದಿತ್ತು.
ಒಮ್ಮೆ ಏನಾಯಿತು ಅಂದರೆ…
ಕುಟುಂಬದ ಭರವಸೆಯಾಗಿದ್ದ ಆ ಮಗುವಿಗೆ ತೀವ್ರ ಜ್ವರ ಬಂದಿತ್ತು. ಹೆಂಡತಿ ಏನೆಲ್ಲ ಕಷಾಯ, ಔಷಧಿ ಮಾಡಿದರೂ ಜ್ವರದ ತಾಪ ಕಡಿಮೆಯಾಗಲಿಲ್ಲ. ರಾತ್ರಿ ಇಡೀ ಜ್ವರದಲ್ಲಿ ಮಗು ಅಳುವಾಗ ತಾಯಿ ಮಲಗುವುದು ಹೇಗೆ? ಆಗಲೂ ಈ ಗಂಡನು ಗೊರಕೆ ಹೊಡೆದು ಮಲಗುವಾಗ ಹೆಂಡತಿ ಅಳುವುದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯ?
ಬೆಳಗ್ಗೆ ಆಗುವಾಗ ಜ್ವರದ ತಾಪದಲ್ಲಿ ಮಗು ಅರೆಪ್ರಜ್ಞಾವಸ್ಥೆ ತಲುಪಿತು. ಮೂರು ದಿನಗಳಿಂದ ಒಂದು ತೊಟ್ಟೂ ನೀರು ಕುಡಿಯದ ಮಗು ನಿಶ್ಯಕ್ತಿಯಿಂದ ಕಣ್ಣು ಮುಚ್ಚಿ ಮಲಗಿತ್ತು. ಉಸಿರಾಟ ವೇಗವಾದಾಗ, ನಾಡಿಯು ನಿಯಂತ್ರಣ ತಪ್ಪಿದಾಗ ಆಕೆ ಏನು ಮಾಡಬೇಕು? ಕೊನೆಗೆ ಬೇರೆ ದಾರಿ ಇಲ್ಲದೆ ಮಲಗಿದ್ದ ಗಂಡನನ್ನು ಎಬ್ಬಿಸಿ ಪೇಟೆಗೆ ಹೋಗಿ ವೈದ್ಯರನ್ನು ಕರೆದುಕೊಂಡು ಬರಲು ಆಕೆ ಹೇಳಿದರು. ಗಂಡ ದುಡ್ಡಿಲ್ಲ ಎಂದಾಗ ದೇವರ ಫೋಟೋದ ಮುಂದೆ ಇದ್ದ ದೇವರ ಡಬ್ಬಿಯನ್ನು ಒಡೆದು ಇದ್ದ ಎಲ್ಲ ದುಡ್ಡನ್ನು ಗಂಡನ ಕೈಗೆ ಸುರಿದು ದಮ್ಮಯ್ಯ, ವೈದ್ಯರನ್ನು ಕರೆದುಕೊಂಡು ಬನ್ನಿ ಎಂದು ಪೇಟೆಗೆ ಕಳುಹಿಸಿದರು.
ಗಂಡ ಪೇಟೆಗೆ ಬಂದು…
ವೈದ್ಯರ ಕ್ಲಿನಿಕ್ ಮುಂದೆ ನಿಂತರು. ಅಲ್ಲಿ ತುಂಬಾ ಜನರು ಸರದಿಯನ್ನು ಕಾದು ಕೂತಿದ್ದರು. ಅವರಲ್ಲಿ ಕೆಲವರು ಈ ಭಟ್ಟರಿಗೆ ಸಾಲ ಕೊಟ್ಟವರೂ ಇದ್ದರು. ಭಟ್ಟರಿಗೆ ಒಳಗೆ ಹೋಗಲು ಧೈರ್ಯ ಬರಲಿಲ್ಲ. ವೈದ್ಯರ ಕ್ಲಿನಿಕ್ ಪಕ್ಕದಲ್ಲಿ ಒಂದು ವೈನ್‌ಶಾಪ್ ಇತ್ತು. ಇವರ ಕಿಸೆಯಲ್ಲಿ ಹೆಂಡತಿಯು ಕೊಟ್ಟ ದುಡ್ಡು ನಗುತ್ತಿತ್ತು. ಅದು ಸೂಜಿಗಲ್ಲಿನ ಹಾಗೆ ವೈನ್‌ಶಾಪ್ ಕಡೆಗೆ ಅವರನ್ನು ಎಳೆದುಕೊಂಡು ಹೋಯಿತು. ಒಂದು ಗಂಟೆಯ ಒಳಗೆ ಆ ದುಡ್ಡು ಖಾಲಿಯಾಗಿ ಬಿಸಿ ಮದ್ಯವು ಭಟ್ಟರ ಕರುಳಿಗೆ ಇಳಿದಿತ್ತು. ಅಲ್ಲಿಯೇ ನಿಂತು ಮಧ್ಯಾಹ್ನದವರೆಗೆ ಕುಡಿದರು. ಒಂದಿಷ್ಟು ವಾಂತಿ ಮಾಡಿದರು. ಅದರಲ್ಲಿಯೇ ಹೊರಳಾಡಿ ನಿಧಾನವಾಗಿ ಮನೆಯ ಕಡೆಗೆ ಹೆಜ್ಜೆ ಹಾಕಿದರು.
‘ವೈದ್ಯರ ಕ್ಲಿನಿಕ್ ಬಂದ್ ಇತ್ತು. ತುಂಬ ಹೊತ್ತು ಕಾದು ಕೂತೆ. ಅವರು ಬರಲೇ ಇಲ್ಲ’ ಎಂದು ಸುಳ್ಳು ಹೇಳಲು ಮಾನಸಿಕವಾಗಿ ಸಿದ್ಧರಾಗಿ ಭಟ್ಟರು ಮನೆಯ ಅಂಗಳಕ್ಕೆ ಬಂದಾಗ ಹೆಂಡತಿಯ ಜೋರಾದ ಬೊಬ್ಬೆ ಕೇಳಲು ಆರಂಭ ಆಗಿತ್ತು. ಅಂಗಳದ ತುಂಬ ಜನರು ಸೇರಿದ್ದರು. ಭಟ್ಟರಿಗೆ ಒಮ್ಮೆ ಏನಾಯಿತು ಎಂದು ಗೊತ್ತಾಗಲಿಲ್ಲ.
ಮನೆಯ ಒಳಗೆ ಹೋಗಿ ನೋಡಿದಾಗ ಮಗುವಿನ ಪ್ರಾಣ ಹೋಗಿ ತುಂಬಾ ಹೊತ್ತಾಗಿತ್ತು. ಮಗುವಿನ ಶವದ ಮೇಲೆ ಬಿಳಿಯ ಬಟ್ಟೆ ಹಾಸಿತ್ತು. ಹೆಂಡತಿ ಎದೆ ಬಡಿದುಕೊಂಡು ಗಂಡನಿಗೆ ಶಾಪ ಕೊಟ್ಟಾಗ ಭಟ್ಟರು ಕುಸಿದು ಹೋದರು. ಕುಡಿದ ನಶೆಯು ಥಟ್ಟನೆ ಇಳಿದು ಭಟ್ಟರು ವಾಸ್ತವಕ್ಕೆ ಬಂದಿದ್ದರು. ಆದರೆ ಆಗಲೇ ಕಾಲ ಮಿಂಚಿ ಹೋಗಿತ್ತು.
ಈಗ ಏನಾಗಿದೆ ಅಂದರೆ…
ಆ ಘಟನೆ ನಡೆದು ಮೂರು ತಿಂಗಳಾಗಿದೆ. ಹೆಂಡತಿ ಗಂಡನನ್ನು ಬಿಟ್ಟು ತವರು ಮನೆಗೆ ಹೋಗಿದ್ದಾರೆ. ಪುರೋಹಿತರು ಬಾಡಿಗೆ ಕಟ್ಟಲು ದುಡ್ಡಿಲ್ಲದ ಕಾರಣ ಆ ಮನೆಯಿಂದ ಹೊರಬಿದ್ದಿದ್ದಾರೆ. ಪೇಟೆಯಲ್ಲಿ ಯಾರ್ಯಾರ ಮುಂದೆ ಕೈಚಾಚಿ ಬೇಡುತ್ತಾ, ಸಿಕ್ಕ ದುಡ್ಡಿನಲ್ಲಿ ಕುಡಿದು ರಸ್ತೆಯ ಬದಿಯಲ್ಲಿ ಬೀಳುತ್ತಿದ್ದಾರೆ. ಜನರು ಈಗ ಅವರ ಬಗ್ಗೆ ಕಾಳಜಿ, ಅನುಕಂಪ ಪಡುವುದನ್ನು ಬಿಟ್ಟಿದ್ದಾರೆ.
ಭರತವಾಕ್ಯ
ಇದೊಂದು ಪ್ರಾತಿನಿಧಿಕ ಕಥೆ. ಯಾವ ಊರಿಗೆ ಹೋದರೂ ಇಂತಹ ಕಥೆಗಳು ನಿತ್ಯವೂ ದೊರೆಯುತ್ತವೆ. ವ್ಯಸನಗಳ ಹಿಂದೆ ಓಡುವವರು ಇದರಿಂದ ಪಾಠ ಕಲಿಯದೆ ಹೋದರೆ ನಮ್ಮನ್ನು ದೇವರೂ ಕಾಪಾಡಲಾರ. ಅಲ್ಲವೇ?
ಶತ ಶತಮಾನಗಳಿಂದ ಹಾತೆಗಳು ಬೆಳಕಿನ ದೀಪದ ಬಳಿ ಬಂದು ರೆಕ್ಕೆ ಸುಟ್ಟುಕೊಂಡು ಉದುರಿ ಬೀಳುವುದನ್ನು ನೋಡಿದ್ದೇವೆ. ಇದರಿಂದ ಹಾತೆಗಳು ಪಾಠ ಕಲಿತ ಹಾಗೆ ನಿಮಗೆ ಅನಿಸುತ್ತಿದೆಯಾ?
ರಾಜೇಂದ್ರ ಭಟ್ ಕೆ.