ಪುತ್ತೂರು: ಕರ್ನಾಟಕ ಸರಕಾರ ಮಾ.12, 2024ರ ಸುತ್ತೋಲೆ ಸಂಖ್ಯೆ ಆರ್‌ಡಿ07 ಎಲ್‌ಜಿಪಿ 2023 ರಂತೆ 30 ವರ್ಷಗಳ ಗೇಣಿ ಮೌಲ್ಯವನ್ನು ಏಕಗಂಟಿನಲ್ಲಿ ಸರಕಾರಕ್ಕೆ ಪಾವತಿ ಮಾಡಿ ಅನುಭವಿಸಬಹುದು ಎಂಬ ವಿಚಾರಕ್ಕೆ ಸಂಬಂಧಿಸಿರುವ ಸುತ್ತೋಲೆ ಬೆಳಕಿಗೆ ಬಂದಿದ್ದು, ಈ ಸುತ್ತೋಲೆಯಿಂದ ರೈತರು ಭಯ ಪಡುವ ಅವಶ್ಯಕತೆಯಿಲ್ಲ.ಕುಮ್ಕಿದಾರರು ದಾಖಲೆಯನ್ನು ಸರಿ ಮಾಡಿ ಇಟ್ಟುಕೊಳ್ಳಿ. ಮೂಲ ದಾಖಲೆಯನ್ನು ಅದಕ್ಕೆ ಸಂಬಂಧಿಸಿ ಇಟ್ಟುಕೊಂಡರೆ ಲೀಸ್ ಅಗತ್ಯವಿಲ್ಲ. ಲೀಸಿಗೆ ಅರ್ಜಿ ಹಾಕುವುದು ಅಕ್ರಮ ಎಂದು ಕುಮ್ಕಿ ಹಕ್ಕು ಹೋರಾಟದ ಸಂಚಾಲಕ ಯಂ.ಜಿ.ಸತ್ಯನಾರಾಯಣ ಭಟ್ ಹೇಳಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕ ಸರಕಾರ ಭೂಕಂದಾಯ ಅಧಿನಿಯಮ 1964 ಕ್ಕೆ ಕಲಂ 94(ಇ) ಎಂದು ತಿದ್ದುಪಡಿ ಸೇರ್ಪಡೆಗೊಳಿಸಿದೆ. ಪ್ಲಾಂಟೇಶನ್ ಬೆಳೆಗಳನ್ನು 2005ರ ಮೊದಲು ಸರಕಾರಿ ಜಮೀನುಗಳಲ್ಲಿ ಬೆಳೆದಿರುವವರು ಮಾತ್ರ ಈ ಸುತ್ತೋಲೆಯ ದಿನಾಂಕದಿಂದ 3 ತಿಂಗಳ ಒಳೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಈ ತಿದ್ದುಪಡಿ ವಿಚಾರ ವಿಧಾನಸಭೆಯಲ್ಲಿ ಚರ್ಚೆ ಆಗಿರುವುದಾಗಲಿ, ರಾಜ್ಯಪಾಲರ ಒಪ್ಪಿಗೆ ಪಡೆದು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾಗಿರುವ ದಾಖಲೆಗಳು ಕಂಡು ಬರುವುದಿಲ್ಲ. ಈ ಸುತ್ತೋಲೆಯೂ ರಾಜ್ಯದ ಕೆಲವು ಆಯ್ಕೆ ಮಾಡಿದ ಹೊರತು ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಲಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸರಕಾರಿ ಕಂದಾಯ ವಿಭಾಗದ ತಂತ್ರಾಂಶದಲ್ಲಿ ಈಗಲೂ ಅಳವಡಿಕೆ ಆಗಿರುವುದಿಲ್ಲ. ಹಾಗಾದರೆ ಈ ಸುತ್ತೋಲೆಯ ಉದ್ದೇಶ ಮತ್ತು ಪರಿಣಾಮ ಏನು ಎಂದು ಪ್ರಶ್ನಿಸಿದ ಅವರು ಕರ್ನಾಟಕ ಭೂಸುಧಾರಣೆ ಅಧಿನಿಯಮ 1974ಕ್ಕೆ ಕಲಂ 5 ರಂತೆ ತಾ: ಮಾ.1, 974 ರ ಬಳಿಕ ರಾಜ್ಯದಲ್ಲಿ ಯಾವುದೇ ಭೂಮಿಯನ್ನು ಗುತ್ತಿಗೆ, ಗೇಣಿಗೆ ಎಷ್ಟೆ ಸಮಯಕ್ಕೆ ಎಷ್ಟೆ ವಿಸ್ತಾರದ ಸ್ಥಳವನ್ನು ಕೊಡುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಹೇಳಿದರು.
ರೈತ ವರ್ಗದವರು ಲೀಸ್‌ಗೆ ಅರ್ಜಿ ಸಲ್ಲಿಸುವಾಗ ಉಪ ನಿಯಮ (6)ರಂತೆ ಸರಕಾರಿ ಜಮೀನುಗಳನ್ನು ಸರಕಾರಕ್ಕೆ ಬಿಟ್ಟು ಕೊಡಬೇಕು. ಸರಕಾರದವರು ಅಗತ್ಯವಾದರೆ ಲೀಸ್‌ಗೆ ಕೊಟ್ಟಿರುವ ಭೂಮಿ ಯಾವತ್ತೂ ಹಿಂದಕ್ಕೆ ಪಡೆಯುವ ಹಕ್ಕು ಇದೆ. 2011ರಲ್ಲೂ ದ.ಕ.ಜಿಲ್ಲಾಧಿಕಾರಿಯವರ ಕಛೇರಿಯಿಂದ ನಮಗೆ ಒದಗಿಸಿರುವ ದಾಖಲೆ ಪ್ರಕಾರ ಹೆಚ್ಚಿನ ಸರಕಾರಿ ಭೂಮಿ ಅಕ್ರಮ ಸಕ್ರಮದಲ್ಲಿ ಹಂಚಲಾಗಿದೆ. ಇನ್ನು ಸರಕಾರಿ ಎಂದು ಕಂದಾಯ ವಿಭಾಗದಲ್ಲಿ ಅಕ್ರಮವಾಗಿ ಬರೆದು ಕೊಂಡು ಉಳಿದಿರುವ ಕುಮ್ಮಿ ಭೂಮಿ ಮಾತ್ರವಾಗಿದೆ. ಸುತ್ತೋಲೆಯ 3ನೇ ಶರ್ತದಂತೆ ಅರ್ಜಿ ಸಲ್ಲಿಸುವ ಮೊದಲು ಸರಕಾರಿ ಜಮೀನು ನಿಶರ್ತವಾಗಿ ಸರಕಾರಕ್ಕೆ ಒಪ್ಪಿಸಬೇಕು. ಅಂದರೆ ಈಗ ರೈತ ವಿಶೇಷ ಹಕ್ಕಿನಲ್ಲಿ ಅನುಭವಿಸಿಕೊಂಡು ಬರುತ್ತಿರುವ ಕುಮ್ಕಿ ಭೂ ಹಿಡುವಳಿಯನ್ನೂ ಬಿಟ್ಟುಕೊಡಬೇಕಾದಿತು. ಲ್ಯಾಂಡ್ ರೆವೆನ್ಯೂ ಆಕ್ಟ್ ಪ್ರಕಾರ ಕುಮ್ಕಿಯಲ್ಲಿ ನಮಗೆ ವಿಶೇಷ ಅಧಿಕಾರವಿದೆ. ವಿಶೇಷ ಅಧಿಕಾರವುಳ್ಳ ಜಮೀನಿಗೆ ನಾನು ಸಹಿ ಹಾಕಿ ಕೊಟ್ಟರೆ ಉಳಿದ ಜಾಗ ಸರಕಾರವೆಂದು ಬರೆದುಕೊಟ್ಟಂತೆ. ಮತ್ತೆ ಸರಕಾರ ಇನ್ನೊಬ್ಬರಿಗೆ ಮಂಜೂರು ಮಾಡುತ್ತದೆ. ಹಾಗಾಗಿ ರೈತರು ತಮ್ಮ ಕುಮ್ಕಿ ಹಕ್ಕಿನ ದಾಖಲೆ ಸರಿ ಮಾಡಿ ಇಟ್ಟುಕೊಳ್ಳಿ. ಆಗ ಕುಮ್ಕಿ ಕಳೆದು ಹೋಗುವುದಿಲ್ಲ. ನಾವು ಲೀಸ್‌ಗೆ ತೆಗೆದು ಕೊಳ್ಳುವುದು ಸರಿಯಲ್ಲ. ಲೀಸ್‌ಗೆ ಒಮ್ಮೆ ಅರ್ಜಿ ಹಾಕಿದರೆ ಅವನ ಕುಮ್ಮಿ ಹಕ್ಕು ಹೋದಂತೆ. ಮತ್ತೆ ಅದನ್ನು ಕೋರ್ಟ್ ಮೂಲಕವೂ ಪಡೆಯಲಾಗುವುದಿಲ್ಲ ಎಂದು ಅವರು ತಿಳಿಸಿದರು.
ಕುಮ್ಮಿ ಹಕ್ಕನ್ನು ರೈತರಿಗೆ ನೀಡಿದರೆ ರಾಜ್ಯದಲ್ಲಿ.14 ಸಾವಿರ ಕೋಟಿಯಷ್ಟು ಸರಕಾರಕ್ಕೆ ಆದಾಯ ಬರುತ್ತದೆ. ಅದು ಕೂಡಾ ಖಾಯಂ ಆದಾಯ. ಎಷ್ಟೇ ಕುಮ್ಕಿ ಇದ್ದರೂ ಉಪಯೋಗಕ್ಕೆ 5 ಅಥವಾ 10 ಎಕ್ರೆ ಮಾತ್ರ. ಅದಕ್ಕಿಂತ ಜಾಸ್ತಿ ಇದ್ದ ಭೂಮಿ ಸರಕಾರಕ್ಕೆ ಸಿಗುತ್ತದೆ. ಅದನ್ನು ಲೆಕ್ಕ ಹಾಕಿದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಎಕ್ರೆ ಉಳಿಯುತ್ತದೆ. ರೇಶನ್ ಕಾರ್ಡ್‌ನಲ್ಲಿರುವ ಕುಟುಂಬದ ಆಧಾರದಲ್ಲಿ 5 ಎಕ್ರೆ ನೇರವಾಗಿ ಮಂಜೂರು ಮಾಡಬಹುದು. 10 ಎಕ್ರೆಕ್ಕಿಂತ ಹೆಚ್ಚು ಕುಮ್ಕಿ ಜಾಗ ಅನುಭವಿಸಲು ಹೊಸ ಕಾನೂನು ಪ್ರಕಾರ ಆಗುವುದಿಲ್ಲ ಎಂದು ಯಂ.ಜಿ.ಸತ್ಯನಾರಾಯಣ ಭಟ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕುಮ್ಮಿ ಹಕ್ಕು ಹೋರಾಟದ ಪ್ರಮುಖ ರಾಮಚಂದ್ರ ನೆಕ್ಕಿಲು, ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ, ಪ್ರಾಂತ ಪ್ರತಿನಿಧಿ ಸುಬ್ರಾಯ ಬಿ.ಎಸ್ ಉಪಸ್ಥಿತರಿದ್ದರು.