ಪ್ರೊ.ವಿ.ಬಿ.ಅರ್ತಿಕಜೆ ಯವರಿಗೆ ನಿರಂಜನ ಪ್ರಶಸ್ತಿ | ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನಕ್ಕೆ ಶಂಕರ ಸಾಹಿತ್ಯ ಪ್ರಶಸ್ತಿ |ಮೇ 9 ರಂದು ಪ್ರಶಸ್ತಿ ಪ್ರದಾನ

ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಶಿವರಾಮ ಕಾರಂತ ಅಧ್ಯಯನ ಕೇಂದ್ರದಿಂದ ನೀಡುವ ನಿರಂಜನ ಪ್ರಶಸ್ತಿಯನ್ನು ಈ ವರ್ಷ ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಪ್ರೊ. ವಿ. ಬಿ. ಅರ್ತಿಕಜೆ ಅವರಿಗೆ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿಯನ್ನು ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನಕ್ಕೆ ಶಂಕರ ಸಾಹಿತ್ಯ ಪ್ರಶಸ್ತಿ ನೀಡಲಾಗುವುದು.

ಪ್ರಶಸ್ತಿ ಪ್ರದಾನ ಸಮಾರಂಭ ಮೇ.9 ರಂದು ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ.

ನಿರಂಜನ ಸಾಹಿತ್ಯ ಪ್ರಶಸ್ತಿ:





























 
 

ಪ್ರೊ. ವಿ. ಬಿ. ಅರ್ತಿಕಜೆ ಅವರು ಪುತ್ತೂರು ಬಳಿಯ ಈಶ್ವರಮಂಗಲದ ಅರ್ತಿಕಜೆ ಶ್ಯಾಮ ಭಟ್ಟ ಹಾಗೂ ಸಾವಿತ್ರಿ ದಂಪತಿಯ ಪುತ್ರರಾಗಿ 1943 ರಲ್ಲಿ ಜನಿಸಿದರು. ಅಧ್ಯಾಪನ, ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರದಲ್ಲಿ ಒಲವು ಹೊಂದಿರುವ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ 33 ವರ್ಷಗಳ ಕಾಲ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ ಇವರು ಪ್ರೌಢಶಾಲಾ ದಿನಗಳಲ್ಲಿ ನವೋದಯ, ಸುಪ್ರಭಾತ ಮತ್ತು ನವರಸ ಹಸ್ತಪತ್ರಿಕೆಗಳನ್ನು ಆರಂಭಿಸಿದವರು. ತನ್ನ ಆಡುಭಾಷೆ ಹವ್ಯಕವನ್ನು ಅಂಕಣದಲ್ಲಿ ಉಪಯೋಗಿಸಿದ, ಆ ಭಾಷೆಯಲ್ಲೇ ಸಾಹಿತ್ಯ ಸೃಷ್ಟಿಸಿದ ಹಿರಿಮೆ ಇವರದು.

ವರದಿಗಾರಿಕೆ ಹಾಗೂ ವಿಪುಲ ಅಂಕಣ ಬರಹಗಳ ಮೂಲಕ ಚಿರಪರಿಚಿತರಾಗಿ. ಪುತ್ತೂರಿನ ಸಾಹಿತ್ಯಕ, ಸಾಂಸ್ಕೃತಿಕ ಸಂಸ್ಥೆಗಳಲ್ಲೂ ಸಕ್ರಿಯರಾಗಿ ಸಂಘಟನ ಕೌಶಲವನ್ನು ಸಾಬೀತುಪಡಿಸಿರುವ ಇವರು ಅನೇಕ ಪ್ರತಿಭಾಶಾಲಿಗಳಿಗೆ ಪ್ರೋತ್ಸಾಹಿಸಿದವರು. ಅವರು ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮವನ್ನು ಪ್ರಾರಂಭಿಸಿದ ಹೆಗ್ಗಳಿಕೆಯೂ ಇವರದು. ನಾದಪೂಜೆ, ಅಪರೂಪ, ಅನನ್ಯ ಸಾಧಕ, ಜೇನಹನಿ, ಪುಸ್ತಕ ಪ್ರೀತಿಗೆ ರೂಪಕ, ಬೋಳಂತಕೋಡಿ ಈಶ್ವರ ಭಟ್ಟ, ಹಾಸ್ಯೋಲ್ಲಾಸ, ನಗೆಮಿಂಚು, ಪತ್ರಿಕಾ ರಂಗ ಪ್ರವೇಶ ಮೊದಲಾದ ಪ್ರಮುಖ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ’ನೂರೆಂಟು ನೆನಪು’ ಆತ್ಮಕಥನ ಉದಾರ ವ್ಯಕ್ತಿತ್ವದ ಪ್ರತಿಕೃತಿಯಾಗಿದೆ.

ಶಂಕರ ಸಾಹಿತ್ಯ ಪ್ರಶಸ್ತಿ :

ಪುತ್ತೂರು ಸೀಮೆಯ ಹಿರಿಯ ವೈದಿಕ ವಿದ್ವಾಂಸರೂ ಪುರೋಹಿತರೂ ಆದ ದಿವಂಗತ ಮಿತ್ತೂರು ತಿಮ್ಮಯ್ಯ ಭಟ್ಟರ ಹೆಸರಿನಲ್ಲಿ ಅವರ ಮರಣಾ ನಂತರ ಅವರ ಶಿಷ್ಯ ವರ್ಗದವರೂ ಬಂಧುಗಳೂ ಸೇರಿ 1993 ರಲ್ಲಿ ಸ್ಥಾಪಿಸಿದ ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನವೆಂಬ ನೋಂದಾಯಿತ ಸಂಸ್ಥೆಗೆ ಈಗ ಮೂವತ್ತನೆಯ ವರ್ಷ. ಸಂಸ್ಕೃತ ಭಾಷ, ವೈದಿಕ ವಿಷಯಗಳು ನಮ್ಮ ಸಂಸ್ಕೃತಿ-ಪರಂಪರೆ-ಇವುಗಳ ಅಧ್ಯಯನ ಮತ್ತು ಪ್ರಸಾರದೊಂದಿಗೆ ಸಾಮಾಜಿಕ ಸಮುನ್ನತಿಯ ಧ್ಯೇಯಗಳನ್ನೂ ಹೊಂದಿರುವ ಸಂಸ್ಥೆಯು ಕಳೆದ ಮೂವತ್ತು ವರ್ಷಗಳಿಂದ ಪರಿಸರದ ಶಾಲಾ ಕಾಲೇಜುಗಳಲ್ಲಿ ಸಂಸ್ಕೃತಾಧ್ಯಯನದಲ್ಲಿ ತರಗತಿಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಪ್ರೋತ್ಸಾಹಧನ ಪ್ರದಾನದೊಂದಿಗೆ ನಡೆಸುತ್ತಿದೆ.

ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್ ವಹಿಸಲಿದ್ದು, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ಹಾಗೂ ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ.ಎನ್ ಭಾಗವಹಿಸಲಿದ್ದಾರೆ ಎಂದು ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದೆ.       

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top