ಮಕ್ಕಳು ಮುಂದಿನ ಭವಿಷ್ಯದ ಆಸ್ತಿ. ಹಾಗಾಗಿ ಮಕ್ಕಳ ಸಮಗ್ರ ಬೆಳವಣಿಗೆಯನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುವುದು ಪೋಷಕರ ಕರ್ತವ್ಯ. ಹಿಂದಿನ ಕಾಲದಲ್ಲಿ ಮಕ್ಕಳಿಗೆ ಬೇಸಿಗೆ ಬಂತೆಂದರೆ ಹಬ್ಬ!ಬಂಧು ಮಿತ್ರರ ಜೊತೆಗೂಡಿಕೊಂಡು ಆಟೋಟಗಳ ಜೊತೆಗೆ ಹರಟೆ, ಪುರಾಣ, ಕಥೆ, ಕವಿತೆ ಮುಂತಾದವುಗಳನ್ನು ಸ್ವಾಭಾವಿಕವಾಗಿ ಕಲಿಯುತ್ತಿದ್ದರು. ಇದ್ದರಿಂದ ಅವರಲ್ಲಿ ದೈಹಿಕ ಮತ್ತು ಭೌದ್ಧಿಕ ಚುರುಕುತನ ಬೆಳೆಯುತ್ತಿತ್ತು. ಆದರೆ ಇತ್ತೀಚಿನ ಮಕ್ಕಳು ಇಂತಹ ಸಂದರ್ಭಗಳಿಂದ ವಂಚಿತರಾಗಿದ್ದಾರೆ.
ಇಂದಿನ ಮಕ್ಕಳು ಬೇಸಿಗೆ ರಜೆಯ ಸಮಯದಲ್ಲಿ ಆ ಕ್ಲಾಸ್ ಈ ಕ್ಲಾಸ್ ಎಂದುಕೊಂಡು ಬಂಧು ಮಿತ್ರರಿಂದ ದೂರ ಉಳಿಯುತ್ತಾರೆ. ಕೇವಲ ನಾಲ್ಕು ಗೋಡೆಗಳ ಮಧ್ಯೆ ಮಕ್ಕಳು ಸಮಯ ಕಳೆದರೆ ಬೌದ್ಧಿಕ ಮಟ್ಟ ಬೆಳೆಯುವುದಿಲ್ಲ. ಹಾಗೆಯೇ, ಇದರಿಂದ ಮಕ್ಕಳಿಗೆ ಮಾನವೀಯ ಸಂಬಂಧಗಳ ಬಗ್ಗೆ ಅರಿವುಂಟಾಗುವುದಿಲ್ಲ.
ನನಗೆ ರಜೆ ಸಿಕ್ಕ ಮರುದಿನವೇ ಅಜ್ಜಿ ಮನೆಗೆ ಹೋಗುತ್ತಿದೆ. ಅಲ್ಲಿ ಅಣ್ಣ ಅಕ್ಕ ತಂಗಿ ತಮ್ಮಂದಿರ ಜೊತೆ ಸೇರಿಕೊಂಡು ದಿನ ಕಳೆಯುವುದು ಗೊತ್ತೇ ಆಗುತ್ತಿರಲಿಲ್ಲ. ಶಾಲೆ ಆರಂಭವಾಗಿ ಎರಡು ಮೂರು ದಿನ ಕಳೆದು ಮತ್ತೆ ಬರುತ್ತಿದ್ದೆ. ಅದೊಂದು ತರಾ ಸಿಹಿಯ ಅನುಭವ! ಮರಳಿ ಎಂದೂ ಬರಲಾರದ ಮಧುರ ಕ್ಷಣಗಳು.
ಅಂದಿನ ಕಾಲದಲ್ಲಿ ಕಥೆ ಪುಸ್ತಕ ಓದುತ್ತಾ ಅದರಲ್ಲಿ ನಾವೇ ಕಥೆಯನ್ನು ಅರ್ಥಮಾಡಿಕೊಂಡು ಚಿತ್ರಗಳನ್ನು ಕಲ್ಪನೆ ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ ಮಕ್ಕಳು ಹುಟ್ಟಿದಾಗದಿಂದಲೇ ಮೊಬೈಲ್ ಕೊಡುತ್ತೇವೆ. ಹಿಂದೆ ಚಂದ್ರ ನನ್ನು ತೋರಿಸಿ ಊಟ ಮಾಡಿಸುತ್ತಿದ್ದರು ಆದರೆ ಈಗ ಮೊಬೈಲ್ ನಲ್ಲಿ ತೋರಿಸಿ ಊಟ ಮಾಡಿಸುತ್ತಾರೆ. ಎಂಥ ವಿಪರ್ಯಾಸ! ಇದರಿಂದ ಮಕ್ಕಳಿಗೆ ಕಲ್ಪನಾ ಶಕ್ತಿ ಬೆಳೆಯುವುದಿಲ್ಲ. ಸ್ನೇಹ ಬೆಳೆಸಬೇಕು ಎಂಬ ಮನಸ್ಥಿತಿಯೇ ಮಾಯವಾಗಿದೆ. ಈಗಿನ ಮಕ್ಕಳಿಗೆ ಮೊಬೈಲ್, ಕಂಪ್ಯೂಟರ್ ಇಂಟರ್ನೆಟ್ ಈ ರೀತಿ ಎಲ್ಲಾ ಸೌಲಭ್ಯಗಳು ದೊರೆತಿದೆ. ಪರಿಣಾಮವಾಗಿ ಈ ಮಕ್ಕಳು ಪ್ರಕೃತಿಯ ಮಡಿಲಿನಿಂದ ದೂರವಾಗಿದ್ದಾರೆ. ಹೊಲ ಗದ್ದೆ ಎಂದು ತಿರುಗುವ ಸುಂದರ ಅನುಭವಗಳನ್ನು ಇಂದಿನ ಮಕ್ಕಳು ಬಾಲ್ಯದಿಂದ ಮಾಸುತ್ತಿದೆ.
ಜಯಶ್ರೀ.ಸಂಪ, ಪಂಜ