ಅಭಿವೃದ್ಧಿ ಹಾಗೂ ಹಿಂದುತ್ವವೇ ಕ್ಯಾ.ಬ್ರಿಜೇಶ್ ಚೌಟ ಮೂಲಮಂತ್ರ

ಹಿಂದುತ್ವಕ್ಕೆ ಬದ್ದತೆ ಅಭಿವೃದ್ಧಿಗೆ ಆದ್ಯತೆ ಎಂಬ ವಿಚಾರಧಾರೆಯಡಿಯಲ್ಲಿ ದ.ಕ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಈ ಬಾರಿ ಚುನಾವಣಾ ಅಖಾಡಕ್ಕೆ ಸಜ್ಜುಗೊಂಡಿದ್ದಾರೆ. ಪಕ್ಷ, ಸಂಘಟನೆ, ಜಾನಪದ ಕ್ರೀಡೆ, ರಾಷ್ಟ್ರೀಯತೆ, ಸಾಹಿತ್ಯ ಕ್ಷೇತ್ರದ ಸಂಘಟನೆಗಳ ಮೂಲಕ ಇಷ್ಟು ವರ್ಷಗಳ ಕಾಲ ಗುರುತಿಸಿಕೊಂಡಿದ್ದ ಇವರು ದ.ಕ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಬಹುದೊಡ್ಡ ಕನಸು, ದೂರದೃಷ್ಟಿತ್ವದ ಕನಸುಗಳನ್ನು ಹೊತ್ತವರು ಕೂಡ. ಸುಶಿಕ್ಷಿತ ಜಿಲ್ಲೆಗೆ ಉತ್ತಮ ಜ್ಞಾನವುಳ್ಳ ಒಳ್ಳೆಯ ಸುಶಿಕ್ಷಿತ ಅಭ್ಯರ್ಥಿಯ ಕೂಗು ಇಂದು ನಿನ್ನೆಯದಲ್ಲ.ಈ ಕಾರಣಕ್ಕಾಗಿ ಭಾಜಾಪ ಈ ಬಾರಿ ಅಳೆದು ತೂಗಿ ಎಂಬಿಎ ಪದವೀಧರ, ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ,ಪಕ್ಷದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ,ಅವಿವಾಹಿತ ಕ್ಯಾಪ್ಟನ್. ಬ್ರಿಜೇಶ್ ಚೌಟರನ್ನು ಭಾರತದ ಅತಿ ದೊಡ್ಡ ಪ್ರಜಾಪ್ರಭುತ್ವ ಉತ್ಸವವಾದ ದ.ಕ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ದೇಶದ ನರೇಂದ್ರ ಮೋದಿಯವರ 2024ರ ತಂಡದಲ್ಲಿ ತುಳುನಾಡಿನ ಯುವದ್ವನಿಯಾಗಿ ಕ್ಯಾಪ್ಟನ್ ಚೌಟರವರು ಸಂಸತ್ ಪ್ರವೇಶಿಸುವ ಮೂಲಕ ಮೋದಿ ಸರಕಾರಕ್ಕೆ ಶಕ್ತಿ ತುಂಬುವ ಕಾರ್ಯಗಳಾಗಬೇಕಿದೆ. ದ.ಕ ಲೋಕಸಭಾ ಕ್ಷೇತ್ರವೆಂದರೆ ಇಲ್ಲಿ ಕಾಂಗ್ರೆಸ್ ಬಿ.ಜೆ.ಪಿ ಮಧ್ಯೆ ನೇರ ಹಣಾಹಣಿ ಇರುವಂತಹ ಕ್ಷೇತ್ರ.

ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಅಭಿವೃದ್ಧಿಯ ಪರಿಕಲ್ಪನೆಯನ್ನು ಹೊಂದಿರುವಂತೆಯೇ ವಿಕಸಿತ ದ.ಕ ನನ್ನ ಆದ್ಯತೆ ಎಂದಿರುವ ಚೌಟರವರು ಜಿಲ್ಲೆಯಲ್ಲಿ ಯುವ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು, ಕೈಗಾರಿಕೆಗಳ ಅಭಿವೃದ್ಧಿ, ಬಂದರು, ಕೃಷಿ, ಉದ್ಯೋಗ, ಪ್ರವಾಸೋದ್ಯಮ, ಸಮಗ್ರ ಅಭಿವೃದ್ಧಿಯ ಜೊತೆಗೆ ಜಿಲ್ಲೆಯನ್ನು ಆರ್ಥಿಕ ಶಕ್ತಿ ಕೇಂದ್ರವಾಗಿಸುವ ಕನಸನ್ನು ಹೊಂದಿದ್ದಾರೆ. ಈ ಹಿಂದಿನ ಸ್ಮಾರ್ಟ್ ಸಿಟಿ ಕಾಮಗಾರಿ ಯೋಜನೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಪ್ಲಾಸ್ಟಿಕ್ ಪಾರ್ಕ್, ಕೋಸ್ಟ್ ಗಾರ್ಡ್ ಯೋಜನೆಗಳು ವೇಗವನ್ನು ಪಡೆಯಲು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಬ್ರಿಜೇಶ್ ಚೌಟ ಉತ್ಸುಕರಾಗಿದ್ದಾರೆ. ಮಂಗಳೂರು ಕ್ಷೇತ್ರದಲ್ಲಿ ವಿಶೇಷವಾಗಿ ಹಿಂದುತ್ವ ಹಾಗೂ ರಾಷ್ಟ್ರೀಯತೆ ಹಾಗೂ ಅಭಿವೃದ್ಧಿಯ ಪರವಾದ ಅಲೆಯನ್ನು ಹೊಂದಿರುವ ಕ್ಷೇತ್ರ. ಇಲ್ಲಿ ಸಂಘಟನೆಯ ಹಾಗೂ ಪಕ್ಷದ ಹಲವಾರು ಹಿರಿಯ ಕಿರಿಯ ನಾಯಕರ ಪರಿಶ್ರಮ, ಬಲಿದಾನ, ತ್ಯಾಗದ ಫಲವಾಗಿ ಪಕ್ಷ ಹಾಗೂ ಸಂಘಟನೆ ಹೆಮ್ಮರವಾಗಿ ಬೆಳೆದು ನಿಂತಿದೆ. ಇಂತಹ ಫಲವತ್ತಾದ ಸಂಘಟನೆಯೆಂಬ ವಟವೃಕ್ಷಕ್ಕೆ ಸದಾ ನೀರೆರೆದು ಪೋಷಿಸುವ ಕಾರ್ಯ ಹಾಗೂ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ.





























ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಕರಾವಳಿಯ ಜನತೆ ಯಾವುದೇ ಬಿಟ್ಟಿ ಭಾಗ್ಯ, ಆಸೆ ಆಮಿಷಗಳಿಗೆ ಬಲಿ ಬೀಳುವ ಜಾಯಮಾನದವರಲ್ಲ. ಮಂಗಳೂರು, ಉಡುಪಿ ಲೋಕಸಭಾ ಕ್ಷೇತ್ರವೆಂದರೆ ವಿಶೇಷವಾಗಿ ಸಂಘಟನಾತ್ಮಕವಾಗಿ ಪಕ್ಷ ತಳವೂರಿದೆ. ಇಲ್ಲಿ ಏನಿದ್ದರೂ ರಾಷ್ಟ್ರೀಯತೆ, ದೇಶ, ಹಿಂದುತ್ವ, ಅಭಿವೃದ್ಧಿ ಆಧಾರದಲ್ಲಿ ಬಾಜಾಪವನ್ನು ಕೈ ಹಿಡಿದು ಮುನ್ನಡೆಸುತ್ತಾ ಬಂದ ಕ್ಷೇತ್ರ. ಬ್ರಿಜೇಶ್ ಚೌಟ ಗೆಲುವಿಗಾಗಿ ಈಗಾಗಲೇ ಪಕ್ಷದ ಚಟುವಟಿಕೆಗಳು ಬೂತ್ ಮಟ್ಟದಲ್ಲಿ ಗರಿಗೆದರಿದೆ. ಇಲ್ಲಿನ ಪ್ರತಿ ಮನೆ ಮನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ, ರಾಷ್ಟ್ರೀಯ ಚಿಂತನೆಯ ಕಾರ್ಯಗಳೇ ಅಚ್ಚೊತ್ತಿ ನಿಂತಿದೆಯೆಂದರೆ ತಪ್ಪಾಗಲಾರದು. ತುಳುನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಸತ್ ನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಓರ್ವ ಯುವ ನಾಯಕನ ಅವಶ್ಯಕತೆ ಇದೆ. ಇಲ್ಲಿನ ಸಮಸ್ಯೆಗಳನ್ನು ಕೇಂದ್ರದ ಸಚಿವರಿಗೆ ಮನವರಿಕೆ ಮಾಡಿ ಜಿಲ್ಲೆಯನ್ನು ಒಂದು ಆರ್ಥಿಕ ಶಕ್ತಿಯನ್ನಾಗಿ ಮಾಡುವ ಕನಸುಗಾರನ ಅವಶ್ಯಕತೆಯಿದ್ದು,ಇದಕ್ಕೆ ಪೂರಕವಾಗಿ ಬೃಜೇಶ್ ಚೌಟರಂತಹ ನಾಯಕರು ಸಂಸತ್ ಗೆ ಅನಿವಾರ್ಯತೆಯಿದೆ.

 
 

ಸಂಘಟನೆ ಹಾಗೂ ಪಕ್ಷದ ಹಿನ್ನೆಲೆಯಲ್ಲಿ ಚೌಟರನ್ನು ಗಮನಿಸುವುದಾದರೆ ಅವಿವಾಹಿತರಾಗಿರುವ ಇವರು ಕ್ಲೀನ್ ಇಮೇಜ್, ಸಚ್ಚಾರಿತ್ರ್ಯದ ಬದುಕು, ಸುಸಂಸ್ಕೃತ ಕುಟುಂಬದ ಹಿನ್ನೆಲೆಯಲ್ಲಿ ಬೆಳೆದು ಬಂದವರು. ಸಂಘಟನಾತ್ಮಕ ಹಿನ್ನೆಲೆಯಲ್ಲಿ ಗಮನಿಸುವುದಾದರೂ ಪಕ್ಷ ಹಾಗೂ ಸಂಘಟನೆ ಕೊಟ್ಟ ಕಾರ್ಯವನ್ನು ಶಿಸ್ತಿನ ಸಿಪಾಯಿಯಂತೆ ಯಶಸ್ವಿಯಾಗಿ ನಿಭಾಯಿಸಿ, ಚುನಾವಣಾ ಉಸ್ತುವಾರಿಯಾಗಿ ಕೂಡ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವರು. ಈಗಾಗಲೇ ಕ್ಷೇತ್ರವಾರು ಪ್ರವಾಸ ನಡೆಸಿ ಪಕ್ಷದ ನಾಯಕರು ಹಾಗೂ ಸಂಘಪರಿವಾರದ ಪ್ರಮುಖರನ್ನು ಭೇಟಿಯಾಗಿ ಆಶೀರ್ವಾದ ಪಡೆಯುವ ಮೂಲಕ ತನ್ನ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದು, ಗೆಲುವಿನ ಅಂತರ ಕಳೆದ ಮೂರು ಅವಧಿಯ ಲೋಕಸಭಾ ಚುನಾವಣಾ ಫಲಿತಾಂಶಕ್ಕಿಂತಲೂ ಭಿನ್ನವಾಗಿ 4 ಲಕ್ಷವನ್ನು ದಾಟುವುದರಲ್ಲಿ ಯಾವುದೇ ಅನುಮಾನವಿಲ್ಲ.

———————————————–

✍🏻ಆದರ್ಶ್ ಶೆಟ್ಟಿ ಉಪ್ಪಿನಂಗಡಿ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top