ಪುತ್ತೂರು: ಆಧುನಿಕ ತಂತ್ರಜ್ಞಾನ, 3ಡಿ ಪ್ರಿಂಟಿಂಗ್ ವ್ಯವಸ್ಥೆ ಇಂದಿನ ಅವಶ್ಯಕತೆ. ಇದರ ಬದಲಿಗೆ ಇಂಟೆಲಿಜೆನ್ಸ್ ತಂತ್ರಜ್ಞಾನ ಸಿವಿಲ್ ಇಂಜಿಇಯರ್ಸ್ ಜಾಗವನ್ನು ತುಂಬಲು ಮುಂದೆ ಬಂದರೆ, ಸಿವಿಲ್ ಇಂಜಿನಿಯರ್ಸ್ ಕ್ಷೇತ್ರಕ್ಕೆ ಕುತ್ತು ಉಂಟಾಗಬಹುದು. ಇದರಿಂದ ಜಾಗೃತವಾಗಬೇಕು ಎಂದು ಅಸೋಸಿಯೇಶನ್ ಆಫ್ ಕನ್ಸಲ್ಟಿಂಘ್ ಸಿವಿಲ್ ಇಂಜಿನಿಯರ್ಸ್’ನ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಕಲ್ಬಾವಿ ರಾವ್ ಹೇಳಿದರು.
ಪಡೀಲು ಟ್ರಿನಿಟಿ ಸಭಾಂಗಣದಲ್ಲಿ ಸೆ. 17ರಂದು ರಾತ್ರಿ ನಡೆದ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಕೇಂದ್ರದ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿ, ಪುತ್ತೂರು ಘಟಕದ ನೂತನ ಲೋಗೋ ಅನಾವರಣ ಮಾಡಿ ಮಾತನಾಡಿದರು.
ಹೊಸ ಕಟ್ಟಡ ನಿರ್ಮಾಣ ಮಾಡಲು ಹಳೆ ಕಟ್ಟಡವನ್ನು ಕೆಡವಲೇ ಬೇಕು ಎನ್ನುವ ಸಿದ್ಧಾಂತ ಬದಲಾಗಿದೆ. ಹಳೆ ಕಟ್ಟಡಕ್ಕೆ ಮರು ಜೀವ ನೀಡುವ ತಂತ್ರಜ್ಞಾನವೂ ನಮ್ಮ ಜೊತೆ ಇದೆ. ಈ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್ ಕಾಲೇಜಿನ ಕೋರ್ಸ್ ರೀ ಮ್ಯಾಪ್ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ. ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥೀಗಳಿಗೆ ಹೆಚ್ಚು ಜ್ಞಾನ ಒದಗಿಸುವ ನಿಟ್ಟಿನಲ್ಲಿ ಪ್ರಾಕ್ಟೀಕಲ್ ಕೆಲಸವನ್ನು ಕೊಡುವ ಕೆಲಸವೂ ಆಗಬೇಕಾಗಿದೆ ಎಂದರು.
ಪುತ್ತೂರು ಘಟಕ ನಮ್ಮ ಅಸೋಸಿಯೇಶನಿಗೆ ಇನ್ನೊಂದು ಕೈ. ಈಗಾಗಲೇ ಸಂಸ್ಥೆಯಲ್ಲಿ ಸದಸ್ಯರ ಸಂಖ್ಯೆ ಏರುತ್ತಿದೆ. ನೂರು ದಾಟಿದ ತಕ್ಷಣ ಅಧ‍್ಯಕ್ಷರಿಗೆ ಜನರಲ್ ಕೌನ್ಸಿಲ್ ಸದಸ್ಯರಾಗುವ ಅವಕಾಶವಿದೆ. ಮುಂದೆ ಅವರು ರಾಷ್ಟ್ರೀಯ ಕೌನ್ಸಿಲ್ ಅನ್ನು ನಿರ್ವಹಿಸಬಹುದು. ಇದಕ್ಕೆಲ್ಲಾ ನಮ್ಮಲ್ಲಿ ಬೈಲಾ ಇದೆ ಎಂದರು.
ಎಸಿಸಿಇ(ಐ)ಯು ದೊಡ್ಡ ಜ್ಞಾನದ ಭಂಡಾರ
ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್’ನ ಪುತ್ತೂರು ಸೆಂಟರ್ ಅಧ್ಯಕ್ಷ ಪ್ರಮೋದ್ ಕುಮಾರ್ ಕೆ.ಕೆ. ಮಾತನಾಡಿ, ಎಸಿಸಿಇ(ಐ)ಯು ದೊಡ್ಡ ಜ್ಞಾನದ ಭಂಡಾರ. ಇದರಿಂದ ಕಾರ್ಮಿಕರ ಜ್ಞಾನದ ಕೊರತೆಯನ್ನು ಸರಿಪಡಿಸಿ ಮುಂದುವರಿಯಲು ಸಾಧ್ಯ. ಇಂದು ಗುಣಮಟ್ಟ ಮತ್ತು ತಂತ್ರಜ್ಞಾನ ಬಹಳ ಅಗತ್ಯ. ಇದಕ್ಕೆ ಬೇಕಾದ ಮಾಹಿತಿಯನ್ನು ಎಸಿಸಿಇ(ಐ) ಸೆಂಟರಿನಲ್ಲಿ ಪಡೆದುಕೊಂಡು, ಮುಂದುವರಿಯಬಹುದು. ಮುಂದಿನ ದಿನಗಳಲ್ಲಿ ಇಂಜಿನಿಯರ್ಸ್ ಮತ್ತು ಗುತ್ತಿಗೆದಾರರಿಗೆ ತರಬೇತಿ ಶಿಬಿರ, ಸ್ಕಿಲ್ ಡೆವಲಪ್’ಮೆಂಟ್ ಸಹಿತ ಹಲವಾರು ಕಾರ್ಯಕ್ರಮದ ಯೋಜನೆ ಇಟ್ಟುಕೊಂಡಿದ್ದೇವೆ ಎಂದರು.ಸಾಮಾಜಿಕ ಜವಾಬ್ದಾರಿಯ ಜೊತೆಗೆ ಹೊಸ ತಂತ್ರಜ್ಞಾನ, ಮಾನದಂಡ ಪರಿಚಯಿಸುವುದೇ ಈ ಸಂಸ್ಥೆಯ ಪ್ರಮುಖ ಉದ್ದೇಶ. ಬಿಇ ಇಂಜಿನಿಯರ್ ಆದವರು ನೇರವಾಗಿ ಇಲ್ಲಿನ ಸದಸ್ಯತ್ವ ಪಡೆಯಬಹುದು. ಡಿಪ್ಲೋಮಾ ಆದವರು ಮೂರು ವರ್ಷದ ಸೇವಾನುಭವ ಹೊಂದಿರಬೇಕು. ಅಜೀವ ಸದಸ್ಯತ್ವ ಪಡೆಯಲು ಬಿಇ ಇಂಜಿನಿಯರಿಂಗ್ ಆದವರಿಗೆ 5 ವರ್ಷ ಹಾಗೂ ಡಿಪ್ಲೋಮಾ ಆದವರಿಗೆ 10 ವರ್ಷದ ಸೇವಾನುಭವ ಹೊಂದಿರಬೇಕು. ವಿದ್ಯಾರ್ಥಿಗಳಿಗೂ ಸದಸ್ಯತ್ವ ಪಡೆಯಲು ಅವಕಾಶವಿದ್ದು, ಶಿಕ್ಷಕ ಸಂಸ್ಥೆಗಳು ತಿಳಿಸಿದಲ್ಲಿ ವಿದ್ಯಾರ್ಥೀಗಳಿಗೂ ಶುಲ್ಕ ರಹಿತ ಸದಸ್ಯತ್ವ ನೀಡಬಹುದು. ಆನ್ಲೈನ್ ಮೂಲಕ ವೃತ್ತಿ ನೀತಿ, ನಿಯಮಗಳ ಪಾಲನೆ, ಗುಣಮಟ್ಟದ ವೃದ್ಧಿಗೆ ಹೊಸ ತಂತ್ರಜ್ಞಾನಗಳ ಪರಿಚಯ, ಅಧ್ಯಯನ ಪ್ರವಾಸಗಳು ಹಾಗೂ ವಿದ್ಯಾರ್ಥಿಗಳಿಗೆ ವೃತ್ತಿಯ ನಿರ್ದೇಶನಗಳನ್ನು ನೀಡಲಾಗುವುದು ಎಂದ ಅವರು, ಪುತ್ತೂರು ಸೆಂಟರಿನ ಕಚೇರಿ ಸೈನಿಕ ಭವನ ರಸ್ತೆಯ ಸಾರಥಿ ಭವನದಲ್ಲಿ ಕಾರ್ಯನಿರ್ವಹಿಸಲಿದೆ ಎಂದರು.
ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್’ನ ರಾಷ್ಟ್ರೀಯ ಕೋಶಾಧಿಕಾರಿ ಆರ್. ಶ್ರೀನಿವಾಸನ್ ಮಾತನಾಡಿ, ದೇಶದಲ್ಲಿ ಎಸಿಸಿಇ(ಐ)ನ 42 ಸೆಂಟರ್ ಇದೆ. ಒಟ್ಟು 7 ಸಾವಿರ ಇಂಜಿನಿಯರ್ಸ್ ಸದಸ್ಯರಿದ್ದು, ಮುಂದೆ ಆದಷ್ಟು ಇಂಜಿನಿಯರ್ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು ಎಂದರು.
ಮಾಸ್ಟರ್ ಪ್ಲಾನರಿಯ ಆನಂದ್ ಎಸ್.ಕೆ. ಅವರಿಗೆ ಸನ್ಮಾನ
ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದ ಸಾಧನೆಗಾಗಿ ಮಾಸ್ಟರ್ ಪ್ಲಾನರಿಯ ಆನಂದ್ ಎಸ್.ಕೆ. ಹಾಗೂ ರೇಖಾ ಎಸ್.ಕೆ. ದಂಪತಿಯನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಆನಂದ್ ಎಸ್.ಕೆ., ನಾಗರಿಕತೆ ಬೆಳೆಯಲು ಸಿವಿಲ್ ಇಂಜಿನಿಯರಿಂಗ್ ಅಡಿಪಾಯ. ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರ ಬೆಳೆದಂತೆ ನಾಗರಿಕತೆ ಬೆಳೆಯುತ್ತಾ ಬಂದಿತು. ಇಂದು ಕೂಡ ಸಿವಿಲ್ ಇಂಜಿನಿಯರಿಂಗಿನಲ್ಲಿ ಸಾಕಷ್ಟು ಅವಕಾಶಗಳಿವೆ. ಸರ್ ಎಂ.ವಿ. ವಿಶ್ವೇಶ್ವರಯ್ಯ ಈ ಕ್ಷೇತ್ರದ ಮೇರುಪರ್ವತ ಎಂದರು.
ಲೋಕೋಪಯೋಗಿ ಇಲಾಖೆಯ ಮಂಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್, ದಕ್ಷಿಣ ಕನ್ನಡ – ಕೊಡಗು ಜಿಲ್ಲಾ ಇಂಜಿನಿಯರ್ಸ್ ಅಸೋಸಿಯೇಶನ್ ಅಧ್ಯಕ್ಷ ಗೋಕುಲ್’ದಾಸ್, ಎಸಿಸಿಇ(ಐ) ಮಾಜಿ ಸೆಕ್ರೆಟರಿ ಜನರಲ್ ವಿಜಯವಿಷ್ಣು ಮಯ್ಯ ಶುಭಹಾರೈಸಿದರು. ಎಸಿಸಿಇ(ಐ) ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಚೇತನ್ ಎಸ್., ಖಜಾಂಚಿ ಕೇಶವ್ ಉಪಸ್ಥಿತರಿದ್ದರು.
ಬೆಳ್ತಂಗಡಿಯ ಎಸಿಸಿಇ(ಐ) ಅಧ್ಯಕ್ಷ ಜಗದೀಶ್ ಪ್ರಸಾದ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನೋದ್ ಕುಮಾರ್ ವಂದಿಸಿದರು. ಸುರೇಖ, ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.
ಸರ್ ಎಂ.ವಿ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸಭೆಯ ಆರಂಭದಲ್ಲಿ ಹಾಗೂ ನಂತರ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಿತು.